ಶನಿವಾರ, ಡಿಸೆಂಬರ್ 7, 2019
18 °C
ತೀರದ ಬವಣೆ l ದೇಣಿಗೆಯಲ್ಲೂ ಲೂಟಿ

ಸಂತ್ರಸ್ತರಿಗೆ ಸಿಗದ ‘ಆಸರೆ’; ಬೀದಿಗೆ ಬಿದ್ದು ಹತ್ತು ವರ್ಷ

Published:
Updated:
Prajavani

ಬಾಗಲಕೋಟೆ: ಈ ಬಾರಿಯ ಮಹಾಪೂರದಲ್ಲಿ ಉತ್ತರ ಕರ್ನಾಟಕದ ಜನಜೀವನ ಅತಿ ಹೆಚ್ಚು ಬಾಧಿತಗೊಳ್ಳುವಲ್ಲಿ ಹೆಚ್ಚುಕಮ್ಮಿ ದಶಕದ ಹಿಂದೆ ರಾಜ್ಯ ಸರ್ಕಾರ ರೂಪಿಸಿದ್ದ ‘ಆಸರೆ’ ಯೋಜನೆಯ ವೈಫಲ್ಯ ಎದ್ದು ಕಾಣುತ್ತಿದೆ.

2009ರಲ್ಲಿ ಸುರಿದ ಮಹಾಮಳೆಯಿಂದ ಸಂತ್ರಸ್ತರಾದವರಿಗೆ ದಾನಿಗಳ ನೆರವಿನಿಂದ ಮನೆ ಕಟ್ಟಿಕೊಡಲು ಸರ್ಕಾರ ಆಗ ಆಸರೆ ಯೋಜನೆ ರೂಪಿಸಿತ್ತು. ಕಾಕತಾಳೀಯವೆಂದರೆ ಆಗಲೂ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದರು. ಆದರೆ ಸರ್ಕಾರದ ಈ ನಡೆ ಅನುಷ್ಠಾನ ಹಂತದಲ್ಲೇ ವಿಫಲವಾಯಿತು!

ಅಂದು ದಾನಕೊಡುವವರ ಎದುರು ಸರ್ಕಾರ ಪ್ರದರ್ಶಿಸಿದ ದಾಕ್ಷಿಣ್ಯಭಾವ, ಗುತ್ತಿಗೆದಾರರು, ಅಧಿಕಾರ ಶಾಹಿಯ ಹಣ ಮಾಡುವ ಹಪಾಹಪಿ, ಜನಪ್ರತಿನಿಧಿಗಳ ಸ್ವಾರ್ಥ, ಅವೈಜ್ಞಾನಿಕತೆ, ಫಲಾನುಭವಿಗಳ ಆಸೆಬುರಕತನಗಳಿಂದಾಗಿ ಅತ್ಯುತ್ತಮ ಯೋಜನೆಯೊಂದು ಸರ್ಕಾರಿ ಕೃಪಾಪೋಷಿತ ಬಹುದೊಡ್ಡ ವಸತಿ ಹಗರಣವಾಗಿ ಬದಲಾಗಿದೆ. ದೇಣಿಗೆ ರೂಪದ ನೆರವು ಸಂತ್ರಸ್ತರ ಬದಲು ಗುತ್ತಿಗೆದಾರರು, ರಾಜಕಾರಣಿಗಳು ಮತ್ತು ದಲ್ಲಾಳಿಗಳ ಬದುಕನ್ನು ಹಸನು ಮಾಡಿತು.

ಕಳಪೆ ಗುಣಮಟ್ಟ, ರಸ್ತೆ, ಚರಂಡಿ, ವಿದ್ಯುತ್, ಸಾರಿಗೆ ಸಂಪರ್ಕವಿಲ್ಲದ ಕಾರಣ ಸಂತ್ರಸ್ತರಿಂದ ದೂರ ವಾಗಿ ಬಹುತೇಕ ಆಸರೆ ಮನೆಗಳು ಇಂದು ವಾಸಕ್ಕೆ ಯೋಗ್ಯವಾಗಿಲ್ಲ. ಕಿಟಕಿ– ಬಾಗಿಲು ಕಳ್ಳರ ಪಾಲಾಗಿ, ಸುತ್ತಲೂ ಮುಳ್ಳು– ಕಂಟಿಗಳು ಬೆಳೆದು ಹಾಳು ಕೊಂಪೆ ಗಳಾಗಿವೆ. ಕೆಲವೆಡೆ ದಾನಿಗಳು ತಾವೇ ಮುಂದೆ ನಿಂತು ಗುಣಮಟ್ಟದ ಮನೆ ಕಟ್ಟಿಕೊಟ್ಟರು. ಅಲ್ಲಿ ಈಗಲೂ ಹಲವು ಕುಟುಂಬಗಳು ನೆಮ್ಮದಿಯಾಗಿವೆ. ಇನ್ನೂ ಕೆಲವರು ಮನೆಗಳ ಸಂಖ್ಯೆ ಹೆಚ್ಚಳಕ್ಕೆ ಆದ್ಯತೆ ಕೊಟ್ಟರೇ ಹೊರತು ಗುಣಮಟ್ಟಕ್ಕೆ ಮನ್ನಣೆ ನೀಡಲಿಲ್ಲ. ಕಪ್ಪು ಮಣ್ಣಿನಲ್ಲಿ (ಬಿ.ಸಿ) ಸುಭದ್ರ ಅಡಿಪಾಯ ಹಾಕದೇ ಕೆಲ ಮನೆಗಳು ಕಟ್ಟಿದಷ್ಟೇ ವೇಗವಾಗಿ ಕುಸಿದುಬಿದ್ದಿವೆ. ಇನ್ನೂ ಕೆಲವು ಅಡಿಪಾಯ ಹಂತದಿಂದಲೇ ಮೇಲೆದ್ದಿಲ್ಲ. ‘ದಾನ ಕೊಟ್ಟ ಎಮ್ಮೆಯ ಹಲ್ಲು ಎಣಿಸಿ ದರು’ ಎಂಬಂತಾಗಬಾರದು ಎಂದು ಸರ್ಕಾರ ಆಗ ವಿನೀತ ಭಾವ ತೋರಿದ್ದು ಸಂತ್ರಸ್ತರ ಪಾಲಿಗೆ ದುಬಾರಿಯಾಯಿತು.

ಇದನ್ನೂ ಓದಿ: ಆಸರೆ ಮನೆ: ‘10 ವರ್ಷಗಳ ನಂತರ ಗೃಹಪ್ರವೇಶ’

ಸಂತ್ರಸ್ತರು ದೂರ ಉಳಿದರು: ಅಂದು ನೆರೆ ಈಗಿನಷ್ಟು ಗಂಭೀರ ಸ್ವರೂಪದಲ್ಲಿ ಇರಲಿಲ್ಲ. ಪ್ರವಾಹದ ನೀರು ಊರುಗಳ ಸುತ್ತಲೂ ಆವರಿಸಿತ್ತೇ ಹೊರತು, ಊರೊಳಗೆ ನುಗ್ಗಿರಲಿಲ್ಲ. ಹೀಗಾಗಿ ನೆರೆ ಇಳಿಯುತ್ತಿದ್ದಂತೆಯೇ ಬಹುತೇಕ ಸಂತ್ರಸ್ತರು ಮನೆ ಸೇರಿಕೊಂಡಿದ್ದರು. ತೀರಾ ಸಂಕಷ್ಟಕ್ಕೀಡಾದವರಿಗೆ ಮಾತ್ರ ‘ಆಸರೆ’ ನೆರವಾಗಿತ್ತು.

ಲಭ್ಯವಿರುವ ಕಡೆ ಸರ್ಕಾರಿ ಜಾಗ ಗುರುತಿಸಿ ಹಾಗೂ ಖಾಸಗಿಯವರಿಂದ ಭೂಮಿ ಖರೀದಿಸಿ ಮನೆಗಳನ್ನು ಕಟ್ಟಿಕೊಡಲಾಯಿತು. ಆದರೆ ಅವು ಈಗಿನ ಜನವಸತಿ ಯಿಂದ ಕಿ.ಮೀಗಟ್ಟಲೇ ದೂರ ಇದ್ದವು. ಹೀಗಾಗಿ ಹೊಲ, ಗದ್ದೆ, ತೋಟಗಳಿಗೆ ಹತ್ತಿರವಿರುವ ತಮ್ಮೂರಿನಿಂದ ದೂರ ತೆರಳಲು ಸಂತ್ರಸ್ತರು ಇಚ್ಛಿಸಲಿಲ್ಲ. ಕೆಲವರಿಗೆ ಊರಿನೊಂದಿಗಿನ ಭಾವನಾತ್ಮಕ ನಂಟು ‘ಆಸರೆ’ಯತ್ತ ಸೆಳೆಯಲಿಲ್ಲ.

ಭೂಮಿ ಖರೀದಿ, ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂ ಸರ್ಕಾರಿ ಆಸ್ತಿ ಸೃಷ್ಟಿಯ (ಶಾಲೆ, ಆಸ್ಪತ್ರೆ, ಗ್ರಾಮ ಪಂಚಾಯ್ತಿ) ಜವಾಬ್ದಾರಿ ಸರ್ಕಾರವೇ ವಹಿಸಿಕೊಂಡಿತ್ತು. ಆದರೆ ಬರ ನಿರ್ವಹಣೆ ರೀತಿಯೇ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಕೆಲಸವನ್ನು ‘ಹಬ್ಬ’ವಾಗಿಸಿಕೊಂಡ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದರಿಂದ ಕಾಲೊನಿಗಳಿಗೆ ಸೌಕರ್ಯ ಮರೀಚಿಕೆಯಾಯಿತು.

ಅಗತ್ಯವನ್ನೇ ಅರಿಯಲಿಲ್ಲ: ಹಿತ್ತಿಲು, ಅಂಗಳ, ಕೊಟ್ಟಿಗೆ, ತಿಪ್ಪೆ ಹಾಕಲು ಜಾಗ ಹೀಗೆ ಗುಂಟೆಗಟ್ಟಲೇ ವಿಸ್ತೀರ್ಣದಲ್ಲಿ ಮನೆಗಳನ್ನು ಕಟ್ಟಿಕೊಂಡು ಬದುಕಿದ್ದವರು ಹಂದಿಗೂಡಿಗೂ ಕಡೆಯಾದ 15x20 ಅಳತೆಯ ಮನೆಗಳಲ್ಲಿ ಬದುಕಲು ಇಷ್ಟಪಡಲಿಲ್ಲ. ಬೇಸಿಗೆಯಲ್ಲಿ ಬಿಸಿಲ ಝಳ ಕಡಿಮೆ ಮಾಡುವ, ಚಳಿಗಾಲದಲ್ಲಿ ಬೆಚ್ಚಗಿರುವ ಮಾಳಿಗೆ ಮನೆಗಳ ತಾಂತ್ರಿಕತೆ ಆಸರೆಯಲ್ಲಿ ಸಿಗಲಿಲ್ಲ. ಕ್ರಮೇಣ ಫಲಾನುಭವಿಗಳ ಆಯ್ಕೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮೂಗು ತೂರಿಸಿದ್ದರು. ‘ಬಾಯಿ ಇದ್ದವರು ಬದುಕುತ್ತಾರೆ’ ಎಂಬಂತೆ ಬಲಾಢ್ಯರು ಒಂದಕ್ಕಿಂತ ಹೆಚ್ಚು ಮನೆಗಳನ್ನು ತಮ್ಮದಾಗಿಸಿಕೊಂಡರು. ಕೆಲವು ಕಡೆ ಈಗಲೂ ಮನೆಗಳ ಹಂಚಿಕೆ ಆಗಿಲ್ಲ. ಹೀಗಾಗಿ ಅರ್ಹರು ‘ಆಸರೆ’ಯಿಂದ ವಂಚಿತರಾದರು.

ಮೇಲ್ವರ್ಗದವರ ಓಣಿ, ದಲಿತರ ಕೇರಿ ಹೀಗೆ ಗ್ರಾಮೀಣ ಪರಿಸರದಲ್ಲಿನ ಅಘೋಷಿತ ಸಾಮಾಜಿಕ ಸಂರಚನೆ ಆಸರೆ ಮನೆಗಳ ಹಂಚಿಕೆಯಲ್ಲಿ ಪಾಲನೆಯಾಗಲಿಲ್ಲ ಎಂಬ ಕಾರಣಕ್ಕೂ ಓಣಿಯ ಮಂದಿ ಆಸರೆಯತ್ತ ತಲೆಹಾಕಲಿಲ್ಲ. ಅವರು ನಿರಾಸಕ್ತಿ ತೋರಿದ್ದರಿಂದ ಕೇರಿಯವರು ಬೆನ್ನು ತೋರಿದರು. ಅಲ್ಲಿಗೆ ‘ಆಸರೆ’ ಎಂಬ ಯೋಜನೆ ಮುಗ್ಗುರಿಸಿತ್ತು.

ಇದನ್ನೂ ಓದಿ: ಬಾಣಂತಿ,ಮಗು ಆರೈಕೆಗೆ ಮನೆ ಬಿಟ್ಟು ಕೊಟ್ಟ!

ಅಕ್ರಮದ ತನಿಖೆಯೇ ಆಗಲಿಲ್ಲ...!

ಬಾಗಲಕೋಟೆ: ‘ರಾಯಚೂರು ಜಿಲ್ಲೆಯಲ್ಲಿ ನಿರ್ಮಿಸಿದ್ದ 11,386 ಮನೆಗಳ ಪೈಕಿ 8,000 ಮನೆಗಳಲ್ಲಿ ಜನರು ವಾಸವಿಲ್ಲ. ಅಲ್ಲಿನ ಗುರ್ಜಾಪುರ, ಚಿಕ್ಕಸೂಗೂರು, ಚೀಕಲಪರವಿ, ಯಡಿವಾಳ, ಗಡಿಭಾಗದ ಕೊನೆಯ ಹಳ್ಳಿ ತುಂಗಭದ್ರ ‘ಆಸರೆ’ ವೈಫಲ್ಯಕ್ಕೆ ಈಗಲೂ ಸಾಕ್ಷಿಯಾಗಿವೆ.

ಆಸರೆ ಜನವಸತಿಗೆ ಮೂಲಸೌಲಭ್ಯ ಕಲ್ಪಿಸುವ ಕಾಮಗಾರಿಯಲ್ಲಿ ಕೆಲಸ ಮಾಡದೇ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಸೇರಿ ₹90 ಕೋಟಿ ಅವ್ಯವಹಾರ ನಡೆಸಿರುವುದು ಬಯಲಿಗೆ ಬಂದಿತ್ತು.

ಆ ಬಗ್ಗೆ 2015ರಲ್ಲಿ ಅಂದಿನ ಉಪವಿಭಾಗಾಧಿಕಾರಿ ತನಿಖೆ ನಡೆಸಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದರು. ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾಡಳಿತ ಕೂಡ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ಏನೂ ಆಗಲಿಲ್ಲ.

‘2005ರಲ್ಲೂ ಒಮ್ಮೆ ನೆರೆ ಬಂದಿತ್ತು. ಆಗಿನ ಅನುಭವದಿಂದ ಎಚ್ಚೆತ್ತುಕೊಳ್ಳದ ಸರ್ಕಾರ 2009ರಲ್ಲಿ ರಚನಾತ್ಮಕ ಯೋಜನೆ ರೂಪಿಸಲಿಲ್ಲ. ಬದಲಿಗೆ ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದರು ಎಂಬಂತೆ ವರ್ತಿಸಿತು. ಒಟ್ಟಾರೆ ಜನರು, ಸರ್ಕಾರ ಹಾಗೂ ಅಧಿಕಾರಿಗಳ ತ್ರಿಕೋನ ವೈಫಲ್ಯ ಸಂತ್ರಸ್ತರಿಂದ ಆಸರೆ ದೂರ ಉಳಿಯಲು ಕಾರಣವಾಯಿತು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳುತ್ತಾರೆ.

ಇದನ್ನೂ ಓದಿ: ಬದುಕು ಕಸಿದ ಒತ್ತುವರಿ...!

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು