ಶನಿವಾರ, ಜನವರಿ 16, 2021
28 °C

ಒಳನೋಟ: ಕಲ್ಯಾಣದ ಕಡೆಗೆ ಹರಿಯದ ಗಂಗೆ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಕಲ್ಯಾಣ ಕರ್ನಾಟಕ

ಕಲಬುರ್ಗಿ: ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಕಲಬುರ್ಗಿ ಜಿಲ್ಲೆಗಳ 188 ಕೆರೆಗಳಿಗೆ ನೀರು ತುಂಬಿಸಲು 10ಕ್ಕೂ ಹೆಚ್ಚು ಯೋಜನೆಗಳನ್ನು ರೂಪಿಸಲಾಗಿದೆ. ಆ ಪೈಕಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ 6 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಾತ್ರ ಸಾಕಾರಗೊಂಡಿದೆ. 

ಕಲಬುರ್ಗಿ ಜಿಲ್ಲೆಯ ಭೀಮಾ ನದಿಯಿಂದ ಅಫಜಲಪುರ ಹಾಗೂ ಆಳಂದ ತಾಲ್ಲೂಕಿನ ತಲಾ ಎಂಟು ಕೆರೆಗಳಿಗೆ ಹಾಗೂ ಅಮರ್ಜಾ ಜಲಾಶಯಕ್ಕೆ ನೀರು ತುಂಬಿಸುವ ₹ 350 ಕೋಟಿ ಮೊತ್ತದ ಯೋಜನೆ ಕಾಮಗಾರಿ ಅರ್ಧಕ್ಕೇ ನಿಂತಿದೆ. ಬೆಣ್ಣೆತೊರಾ ನದಿಯಿಂದ ಕಲಬುರ್ಗಿ ದಕ್ಷಿಣ ಕ್ಷೇತ್ರದ ಆರು ಹಾಗೂ ಗ್ರಾಮೀಣ ಕ್ಷೇತ್ರದ ಎರಡು ಕೆರೆಗಳನ್ನು ತುಂಬಿಸುವ ₹ 197 ಕೋಟಿ ಮೊತ್ತದ ಕಾಮಗಾರಿಗೆ ಈಗಷ್ಟೇ ಶಂಕುಸ್ಥಾಪ‍ನೆ ನೆರವೇರಿಸಲಾಗಿದೆ.

ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನಲ್ಲಿ ಕೋಂಗಳಿ ಏತ ನೀರಾವರಿಯಿಂದ 15 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಆಮೆ ವೇಗದಲ್ಲಿ ಸಾಗಿದೆ. ಬೀದರ್‌ ಹಾಗೂ ಭಾಲ್ಕಿ ತಾಲ್ಲೂಕುಗಳ 33 ಕೆರೆಗಳನ್ನು ತುಂಬಿಸುವ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿಲ್ಲ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಬಿ.ಗಣೇಕಲ್‌ ಕೆರೆಗೆ ಕೃಷ್ಣಾ ನದಿಯಿಂದ ನೀರು ತುಂಬಿಸಲು ಅನುದಾನ ಮಂಜೂರಾಗಿದೆ. ₹183 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾರ್ಯಾದೇಶ ನೀಡುವುದು ಬಾಕಿ ಇದೆ. ರಾಯಚೂರು ತಾಲ್ಲೂಕಿನ ಗುಂಜಳ್ಳಿ ಕೆರೆಗೆ ನೀರು ತುಂಬಿಸುವ ಯೋಜನೆಗೆ ಅನುದಾನ ಮಂಜೂರಾಗಿಲ್ಲ.

ತುಂಗಭದ್ರಾ, ಕೃಷ್ಣಾ ಮತ್ತು ಸಿಂಗಟಾಲೂರ ಏತ ನೀರಾವರಿಯಿಂದ ಕೊಪ್ಪಳ ಜಿಲ್ಲೆಯ ನಾಲ್ಕು ತಾಲ್ಲೂಕುಗಳ 104 ಕೆರೆ ತುಂಬಿಸಲು ₹1,527 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ. ಗಂಗಾವತಿ ತಾಲ್ಲೂಕಿನ ಕೆಲ ಕೆರೆಗಳಿಗೆ ನೀರು ತುಂಬಿಸುವ  ಕಾಮಗಾರಿ ಆರಂಭವಾಗಿದೆ.

ಕುಷ್ಟಗಿ ತಾಲ್ಲೂಕಿನ 15 ಕೆರೆಗಳಿಗೆ ನೀರು ತುಂಬಿಸುವ ₹ 498.80 ಕೋಟಿಯ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಗಂಗಾವತಿ ತಾಲ್ಲೂಕಿನ 32 ಗ್ರಾಮಗಳ ಕೆರೆ ತುಂಬಿಸಲು ₹ 400 ಕೋಟಿ ವೆಚ್ಚದ ಯೋಜನೆ ತಯಾರಿಸಲಾಗಿದೆ. ತುಂಗಭದ್ರಾ ನದಿಯಿಂದ ಯಲಬುರ್ಗಾ ಮತ್ತು ಕೊಪ್ಪಳ ತಾಲ್ಲೂಕಿನ 13 ಕೆರೆ ತುಂಬಿಸಲು 2017ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 104 ಕಿ.ಮೀ ಪೈಕಿ ಶೇ 2ರಷ್ಟು ಪೈಪ್‌ಲೈನ್ ಕಾಮಗಾರಿ ಮಾತ್ರ ಆಗಿದೆ.

ಯಾದಗಿರಿ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ 71 ಕೆರೆಗಳಿವೆ. ಇವುಗಳಲ್ಲಿ 6 ಕೆರೆಗಳನ್ನು ತುಂಬಿಸಲಾಗಿದೆ. ಸುರಪುರ ತಾಲ್ಲೂಕಿನ ಗೌಡಗೇರಾ ಕೆರೆಗೆ ನೀರು ತುಂಬಿಸಲು ಅನುಮೋದನೆ ಸಿಕ್ಕಿದೆ.

ಪೂರಕ ಮಾಹಿತಿ: ಮನೋಜಕುಮಾರ್‌ ಗುದ್ದಿ, ಚಂದ್ರಕಾಂತ ಮಸಾನಿ, ಸಿದ್ದನಗೌಡ ಪಾಟಿಲ, ನಾಗರಾಜ ಚಿನಗುಂಡಿ, ಬಿ.ಜಿ. ಪ್ರವೀಣಕುಮಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು