ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ| ಭಾಷೆ ಪ್ರೀತಿಸಿ, ಬಳಸಿರಿ, ಬೆಳೆಸಿರಿ

Last Updated 24 ನವೆಂಬರ್ 2019, 1:13 IST
ಅಕ್ಷರ ಗಾತ್ರ

ಬೆಂಗಳೂರು: ನೆಲದ ಭಾಷೆ ಕನ್ನಡವನ್ನು ಆಡಳಿತ ಭಾಷೆಯಾಗಿ ಕಡ್ಡಾಯಗೊಳಿಸಲು ಎಲ್ಲ ಸರ್ಕಾರಗಳ ಅವಧಿಯಲ್ಲೂ ಪ್ರಯತ್ನಗಳು ನಡೆದಿವೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಲವು ಸುತ್ತೋಲೆಗಳನ್ನು ಹೊರಡಿಸಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.

ಎಲ್ಲ ಕಡತಗಳು ನ. 1ರಿಂದ ಕನ್ನಡದಲ್ಲಿರಬೇಕು ಎಂದು ‘ಮೈತ್ರಿ’ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ 2018ರಲ್ಲಿ ಸೂಚಿಸಿದ್ದರು. ‘ಆಡಳಿತದಲ್ಲಿ ಕನ್ನಡವನ್ನು ಕಡ್ಡಾಯ ಮಾಡಿದರೆ ಪ್ರಾದೇಶಿಕ ಭಾಷೆ ಬೆಳವಣಿಗೆಗೆ ಸಹಾಯಕವಾಗಲಿದೆ. ಶೀಘ್ರವಾಗಿ ಸರ್ಕಾರಿ ಕೆಲಸಗಳನ್ನು ಮಾಡಲು ಅನುಕೂಲವಾಗಲಿದೆ’ ಎನ್ನುವುದು ಅವರ ಇಂಗಿತವಾಗಿತ್ತು. ಆದರೆ, ಬಹುತೇಕ ಇಲಾಖೆಗಳಲ್ಲಿ ಕಡತಗಳ ಭಾಷೆ ಇನ್ನೂ ಬದಲಾಗಿಲ್ಲ. ‌ಕಾನೂನಿನ ಮೂಲಕ ಬದಲಾವಣೆ ತಂದರೆ ಮಾತ್ರ ಆಡಳಿತದಲ್ಲಿ ಕನ್ನಡದ ಪರಿಣಾಮಕಾರಿ ಜಾರಿ ಸಾಧ್ಯ ಎನ್ನುವುದು ಬಹುತೇಕರ ಅಭಿಪ್ರಾಯ.

ಬಳಕೆಯಲ್ಲಿರುವ ಭಾಷೆ ಬದುಕುತ್ತದೆ!‌:ಕನ್ನಡ ಭಾಷೆಯನ್ನು ಯಾವ ರೀತಿ ಉಳಿಸಿ ಬೆಳಸಬೇಕು ಎಂದು ಚಿಂತಿಸುವ ಅಗತ್ಯವಿದೆ. ದೊಡ್ಡ ಪಟ್ಟಣಗಳಲ್ಲಷ್ಟೇ ಅಲ್ಲ, ಹಳ್ಳಿಗಳಲ್ಲಿ ಕನ್ನಡದ ಕಂಪು ಕಡಿಮೆಯಾಗುತ್ತಾ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಪ್ರಭಾವ ಹೆಚ್ಚುತ್ತಿದೆ. ಗಡಿಗಳಲ್ಲಂತೂ ಅನ್ಯ ಭಾಷೆಗಳ ದಾಳಿಯಿಂದ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗುವ ಸ್ಥಿತಿ ಇದೆ. ಆಡಳಿತಶಾಹಿ ನಿರ್ಲಕ್ಷ್ಯ, ಅನುದಾನದ ಕೊರತೆ, ಶಿಕ್ಷಕರಿಲ್ಲದೆ ಕನ್ನಡ ಶಾಲೆಗಳು ಸೊರಗುತ್ತಿವೆ.

ಕಾವೇರಿ ನೀರು, ಕನ್ನಡ ರಾಜ್ಯೋತ್ಸವ, ಸಾಹಿತ್ಯ ಸಮ್ಮೇಳನ, ಉಳಿದಂತೆ ಸಭೆ – ಸಮಾರಂಭಗಳಲ್ಲಿ ಜಾಗೃತವಾಗುವ ಕನ್ನಡ ಪ್ರೀತಿ, ಭಾಷೆಯಾಗಿ ಕಟ್ಟುವ ವಿಷಯ ಬಂದಾಗ ನಿರಂತರವಾಗಿ ನಡೆದಿಲ್ಲ ಎಂಬುದು ಅಕ್ಷರಶಃ ಸತ್ಯ. ಭಾಷೆಯ ಅಭಿರುಚಿಯನ್ನು ಜನರಲ್ಲಿ ಹೆಚ್ಚಿಸಿ ಅದನ್ನು ಉಳಿಸಿಕೊಳ್ಳಬೇಕು. ಯಾವುದೇ ಕಾನೂನು, ನಿಯಮದಿಂದ, ಬಲವಂತದಿಂದ ಭಾಷೆಯ ಅಭಿವೃದ್ಧಿ ಸಾಧ್ಯ ಇಲ್ಲ. ಕನ್ನಡ ಬಾವುಟ ಹಾರಿಸುವುದು, ಕೂಗುವುದು, ಮೆರವಣಿಗೆಗಳಿಂದ ಕನ್ನಡಕ್ಕೆ ಲಾಭ ಆಗಿದೆಯೇ? ಯೋಚಿಸಬೇಕಾದ ಕಾಲವಿದು.

ಉದ್ದೇಶ ಬಿಟ್ಟು ಬೇರೆಲ್ಲ!: ಟ್ರಸ್ಟ್‌, ಪ್ರತಿಷ್ಠಾನಗಳು, ಸಾಹಿತಿಗಳ ಸಾಧನೆಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಒಯ್ಯುವ ಕೆಲಸ ಮಾಡಬೇಕು. ಆದರೆ, ವಾರ್ಷಿಕ ಕಾರ್ಯಕ್ರಮ ಮಾಡಿ ಅನುದಾನ ವೆಚ್ಚದ ಲೆಕ್ಕ ತೋರಿಸಿ ಕೈತೊಳೆಯುವುದಕ್ಕಷ್ಟೆ ಸೀಮಿತವಾಗಿವೆ. ಕರ್ನಾಟಕ ಜನಪದ ಪರಿಷತ್‌, ಜಾನಪದ ಅಕಾಡೆಮಿ, ಜಾನಪದ ವಿಶ್ವವಿದ್ಯಾಲಯ ಎಲ್ಲವೂ ಏಕಮಾದರಿಯ ಕೆಲಸಕ್ಕೆ ಸೀಮಿತ ವಾಗಿವೆ. ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ವಿಭಾಗಗಳಿವೆ. ಅಧ್ಯಯನ ವಿಭಾಗಗಳಿಗೆ. ಈ ವಿಶ್ವವಿದ್ಯಾಲಯಗಳು ಮಾಡುವ ಕೆಲಸವನ್ನೇ ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯವೂ ಮಾಡಿದರೆ ಅರ್ಥವೇನು!.

ಪುಸ್ತಕ ಪ್ರಕಟಣೆ, ಪ್ರದರ್ಶನ, ಮಾರಾಟದ ಉದ್ದೇಶ ಪುಸ್ತಕ ಪ್ರಾಧಿಕಾರದ್ದು. ಆದರೆ, ಆ ಕೆಲಸವನ್ನು ಸಾಹಿತ್ಯ ಪರಿಷತ್‌, ಅಕಾಡೆಮಿಗಳು, ಟ್ರಸ್ಟ್‌ಗಳೂ ಮಾಡಿದರೆ ಹೇಗೆ? ಕುವೆಂಪು ಭಾಷಾ ಪ್ರಾಧಿಕಾರ ಪುಸ್ತಕ ಗಳನ್ನು ಪ್ರಕಟಿಸಿ ಗೋದಾಮುಗಳಲ್ಲಿ ರಾಶಿ ಹಾಕಿಟ್ಟರೆ ಪ್ರಯೋಜನವೇನು? ಕನ್ನಡ ಕೆಲಸ ಆಗುವುದಾದರೂ ಹೇಗೆ? ಅನುದಾನಿತ ಸಂಸ್ಥೆಗಳು ರಚನೆಯಾದ ಉದ್ದೇಶ ಬಿಟ್ಟು ಕೆಲಸ ಮಾಡುವುದರಿಂದ ಭಾಷೆ– ಸಂಸ್ಕೃತಿಯ ಬೆಳವಣಿಗೆ ಹಳಿ ತಪ್ಪಿದೆ!

ಗಡಿ ಅಭಿವೃದ್ಧಿ ಹಣದಲ್ಲಿ ಮನೆ, ಮಠ: 54 ಗಡಿ ತಾಲ್ಲೂಕುಗಳು ಮತ್ತು ಹೊಂದಿಕೊಂಡಿರುವ ನೆರೆ ರಾಜ್ಯಗಳಲ್ಲಿ ಕನ್ನಡ ಅಭಿವೃದ್ಧಿಗೆ ಪೂರಕವಾಗಿ ಕನ್ನಡ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಜೊತೆಗೆ ಚಟುವಟಿಕೆ ನಡೆಸುವುದು ಗಡಿ ಅಭಿವೃದ್ಧಿ ಪ್ರಾಧಿಕಾರದ ಕೆಲಸ. ಆದರೆ, ಅನುದಾನ ಸದ್ಬಳಕೆ ಆಗಿದೆಯೇ ಎಂದು ಪರಿಶೀಲಿಸಿದರೆ, ಸಂಸ್ಕೃತಿ ಭವನದ ಹೆಸರಿನಲ್ಲಿ ಅನುದಾನ ಪಡೆದುಕೊಂಡವರು ಮನೆ, ಮಠ ಕಟ್ಟಿಸಿಕೊಂಡವರು ಸಿಕ್ಕಿದ್ದಾರೆ! ಈ ಕುರಿತು ದೂರು ಪೊಲೀಸ್‌ ಠಾಣೆ ಮೆಟ್ಟಿಲನ್ನೂ ಏರಿದೆ. ಆದರೂ ಅಕ್ರಮ, ಹಣ ಲೂಟಿ ತಡೆಯಲು ಕ್ರಮ ಆಗಿಲ್ಲ.

ಮೀಸಲಿಟ್ಟ ನಿಧಿ ‘ದಲ್ಲಾಳಿ’ಗಳ ಪಾಲು!

ಭಾಷೆ, ಸಂಸ್ಕೃತಿಯ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ಹಾಗೂ ಆರ್ಥಿಕ ನೆರವು ‘ದಲ್ಲಾಳಿ’ಗಳ ಪಾಲಾಗುತ್ತಿವೆ ಎನ್ನುವುದು ಸಾಂಸ್ಕೃತಿಕ ವಲಯದ ಅಳಲು. ಲೆಟರ್‌ ಹೆಡ್‌ ಸಂಸ್ಥೆಗಳು ಅನುದಾನವನ್ನು ಕೊಳ್ಳೆ ಹೊಡೆಯುತ್ತವೆ. ಕಾರ್ಯಕ್ರಮ ನಡೆಸದೆ ಲಕ್ಷಾಂತರ ಮೊತ್ತ ವಂಚಿಸುತ್ತಿದ್ದರೂ, ಭ್ರಷ್ಟ ವ್ಯವಸ್ಥೆ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಒಳಗಿನ ಭ್ರಷ್ಟಾಚಾರವನ್ನು ಲೋಕಾಯುಕ್ತ ಪೊಲೀಸರು 2013ರಲ್ಲೇ ಬಯಲು ಮಾಡಿದ್ದಾರೆ. ಅನುದಾನ ದುರ್ಬಳಕೆ ಆರೋಪದಲ್ಲಿ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಕಡತಗಳನ್ನು ತಡಕಾಡಿದ್ದರು. ರಾಜ್ಯೋತ್ಸವ ಮುಂತಾದ ಪ್ರಶಸ್ತಿಗಳು ಪುರಸ್ಕೃತರಲ್ಲಿ ಕೆಲವರು ಕಾರಣಾಂತರಗಳಿಂದ ಸ್ವೀಕರಿಸಿಲ್ಲ. ಅಂಥ ಪ್ರಶಸ್ತಿಗಳ ಚಿನ್ನಕ್ಕೆ ಕನ್ನ ಹಾಕಿರುವುದು ಶೋಧದಲ್ಲಿ ಬಯಲಾಗಿತ್ತು. ಈ ಪ್ರಕರಣ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ.

ಕನ್ನಡ ಜಾತ್ರೆ’ಗೆ ಸೀಮಿತವಾದ ಕಸಾಪ

‘ಅಖಿಲ ಭಾರತ ಕನ್ನಡ ಸಮ್ಮೇಳನ’ವೆಂಬ ವಾರ್ಷಿಕ ಜಾತ್ರೆ ಆಯೋಜನೆಯಷ್ಟೇ ಸಾಧನೆ ಅಂದುಕೊಂಡಿದೆ ‘ಕನ್ನಡ ಸಾಹಿತ್ತ ಪರಿಷತ್ತು’. ಈ ಉತ್ಸವದ ಸಿದ್ಧತೆಯಲ್ಲೇ ಪರಿಷತ್ತಿನ ಕಾರ್ಯಚಟುವಟಿಕೆ ಇಡೀ ವರ್ಷ ಕೇಂದ್ರಿತವಾಗಿರುತ್ತದೆ. ಪರಿಷತ್ತಿಗೆ ನೀಡುವ ಉದಾರವಾದ ಹಣದ ನೀತಿಯಿಂದಾಗಿ ಶತಮಾನದ ಇತಿಹಾಸವಿರುವ ಪರಿಷತ್ತು, ಸಾಹಿತ್ಯ ಚಟುವಟಿಕೆಯನ್ನು ಬದಿಗಿರಿಸಿ, ಕನ್ನಡ ಜಾತ್ರೆಗಳ ಹಿಂದೆ ಹೆಜ್ಜೆ ಹಾಕುತ್ತಿದೆ ಎನ್ನುವುದು ದೂರು. ಇನ್ನು ವಿದೇಶಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ಪರಿಷತ್‌, ಇಲ್ಲಿಂದಲೇ 80–100 ಮಂದಿಯನ್ನು ಕೊಂಡೊಯುತ್ತದೆ. ಐಷಾರಾಮಿ ಹೋಟೆಲ್‌ಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಇಲ್ಲಿಂದ ಹೋದವರಷ್ಟೆ ಅತಿಥಿಗಳು, ಪ್ರೇಕ್ಷಕರು. ವಲಸಿಗ ಕನ್ನಡಗರ ಭಾಗಿದಾರಿಕೆ ಇಲ್ಲದ ಇಂಥಹ ‘ಪ್ಯಾಕೇಜ್‌ ಟೂರ್‌’ ಕಾರ್ಯಕ್ರಮಗಳಿಂದ ಹೊರದೇಶಗಳಲ್ಲಿ ಕನ್ನಡದ ಕಂಪು ಬಿತ್ತರಿಸಲು ಸಾಧ್ಯವೇ ಎನ್ನುವುದು ಕೆಲವರ ಪ್ರಶ್ನೆ.

ಅಕಾಡೆಮಿಗಳ ಚಟುವಟಿಕೆ ಹೀಗಿದ್ದರೆ...

* ಜನಸಾಮಾನ್ಯರ ಹಾಗೂ ಆಯಾ ಕ್ಷೇತ್ರಗಳ ತಜ್ಞರ ದೃಷ್ಟಿಯಿಂದ (ಎರಡು ಆಯಾಮಗಳಲ್ಲಿ) ಅಕಾಡೆಮಿಗಳ ಕಾರ್ಯಕ್ರಮ ರೂಪುಗೊಳ್ಳಬೇಕು.
* ಸಾಹಿತ್ಯ ಪರಿಷತ್ತು, ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳು ನಡೆಸುವ ಸಾಂಸ್ಕೃತಿಕ ಚಟುವಟಿಕೆಗಳನ್ನು ಅಕಾಡೆಮಿಗಳು ಪುನಾರವರ್ತಿಸಬೇಕಿಲ್ಲ.

* ಅಕಾಡೆಮಿಗಳ ದಾಖಲೀಕರಣ ಪ್ರಕ್ರಿಯೆಯಲ್ಲಿ ಎಲ್ಲ ಭಾಗಗಳ ಅಕಡೆಮಿಕ್ ತಜ್ಞರನ್ನು ಒಳಗೊಳ್ಳಬೇಕು.

* ಸಾಹಿತ್ಯ, ಸಂಶೋಧನೆ, ದಾಖಲೀಕರಣ ಸಾಮಗ್ರಿಗಳ ಪ್ರಕಟಣೆಗೆ ಪುಸ್ತಕ ಪ್ರಾಧಿಕಾರವಿದೆ. ಹೀಗಾಗಿ, ಅಕಾಡೆಮಿಗಳು ಪ್ರಕಟಣೆ ಕೆಲಸ ಬಿಟ್ಟು ಆ ಸಮಯವನ್ನು ತಮ್ಮ ತಮ್ಮ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳಿಗೆ ಬಳಸಬೇಕು.

* ಪುಸ್ತಕ ಪ್ರಾಧಿಕಾರದ ಚಟುವಟಿಕೆ ಎಲ್ಲ ಅಕಾಡೆಮಿಗಳ ಪ್ರಕಟಣೆಗಳನ್ನು ಒಳಗೊಳ್ಳಲಿರುವುದರಿಂದ ಅದರ ಸ್ವರೂಪದಲ್ಲಿ ಬದಲಾವಣೆ ಅವಶ್ಯಕ.

* ಪ್ರಶಸ್ತಿಗಳ ಸಂಖ್ಯೆ, ಸ್ವರೂಪ, ಬಹುಮಾನ ಮೊತ್ತದಲ್ಲಿ ಏಕರೂಪತೆ ಇರಬೇಕು. ಅಕಾಡೆಮಿ ಪ್ರಶಸ್ತಿಗಳ ಆಯ್ಕೆಗೆ ರಾಜ್ಯ ಪ್ರಶಸ್ತಿ ಆಯ್ಕೆಗೆ ಸಮಾನವಾದ ಮಾನದಂಡಗಳನ್ನು ರೂಪಿಸಬೇಕು.

* ನಾಡು– ನುಡಿಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜಾಗತಿಕ ಮಟ್ಟದಲ್ಲಿ ಔನ್ನತ್ಯಕ್ಕೆ ಏರಿಸುವುದನ್ನು ಎಲ್ಲ ಅಕಾಡೆಮಿಗಳೂ ಒಂದು ಧ್ಯೇಯವಾಗಿಸಿಕೊಳ್ಳಬೇಕು.

* ಅಕಾಡೆಮಿ, ಪ್ರಾಧಿಕಾರ, ವಿವಿ ಕನ್ನಡ ವಿಭಾಗಗಳು ನಿರ್ದಿಷ್ಟ ಕಾರ್ಯಸೂಚಿ ಅಡಿಯಲ್ಲೇ ಕಾರ್ಯನಿರ್ವಹಿಸಬೇಕು. ಪರಿಸ್ಪರ ‍ಪುನಾರವರ್ತನೆಗೆ ಅವಕಾಶ ನೀಡದಂತೆ ಇಲಾಖೆ ಎಲ್ಲರೊಂದಿಗೆ ಸಮನ್ವಯ ಇಟ್ಟುಕೊಳ್ಳಬೇಕು.

ಸಾಹಿತಿ ಚಂದ್ರಶೇಖರ ಪಾಟೀಲ
ಸಾಹಿತಿ ಚಂದ್ರಶೇಖರ ಪಾಟೀಲ

ಸಮನ್ವಯ ಬೇಕು

ಅಕಾಡೆಮಿ ಪ್ರಾಧಿಕಾರ, ಪ್ರತಿಷ್ಠಾನಗಳ ಆರ್ಥಿಕ ಗಂಗೋತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹೀಗಾಗಿ ಇಲಾಖೆ ಅಡಿಯಲ್ಲಿ ಬರುವ ಎಲ್ಲಾ ಸಂಸ್ಥೆಗಳು ಪರಸ್ಪರ ಸಮನ್ವಯತೆ ಸಾಧಿಸಿಕೊಳ್ಳಬೇಕು. ತಾವು ರೂಪಿಸಿರುವ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಎಲ್ಲ ಸಂಸ್ಥೆಗಳೂ ಒಟ್ಟುಗೂಡಿ ನಿಯಮಿತವಾಗಿ ಸಭೆ ನಡೆಸಬೇಕು. ಹಾಗೆ ಮಾಡಿದರೆ, ಯೋಜನೆ, ಕಾರ್ಯಕ್ರಮಗಳ ಪುನರಾವರ್ತನೆ ತಪ್ಪುತ್ತದೆ. ಅಕಾಡೆಮಿ, ಪ್ರಾಧಿಕಾರ, ಪ್ರತಿಷ್ಠಾನಗಳ ನಡುವೆ ಸಮನ್ವಯತೆ ಸಾಧಿಸಲು ಒಬ್ಬ ಸಂಯೋಜನಾಧಿಕಾರಿಯನ್ನು ಸರ್ಕಾರ ನೇಮಿಸುವುದು ಒಳಿತು ಎನ್ನುತ್ತಾರೆ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ.

ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು

ಉತ್ತಮ ಸಾಹಿತ್ಯ, ಲೇಖನ, ಪುಸ್ತಕಗಳಿಗೆ ಪ್ರೋತ್ಸಾಹ ಮತ್ತು ಮಾತೃಭಾಷೆಯಲ್ಲೇ ಶಿಕ್ಷಣ ನೀಡುವುದರಿಂದ ಮಾತ್ರ ಭಾಷೆ ಅಭಿವೃದ್ಧಿ ಸಾಧ್ಯ ಎಂಬುದು ನನ್ನ ನಂಬಿಕೆ. ಸರ್ಕಾರ ಉತ್ತಮ ಪುಸ್ತಕಗಳನ್ನು ಪ್ರೋತ್ಸಾಹಿಸಬೇಕು. ಖರೀದಿಸಬೇಕು. ಪುಸ್ತಕ ಖರೀದಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸುವುದು ಅಗತ್ಯ. ಮಾತೃ ಭಾಷೆಯಲ್ಲೇ ಶಿಕ್ಷಣ ನೀಡಲು ಸರ್ಕಾರ ಪ್ರೋತ್ಸಾಹ ನೀಡಬೇಕು. ಈ ಎರಡೂ ಕೆಲಸಕ್ಕೆ ಹೆಚ್ಚಿನ ಅನುದಾನ ನೀಡಿದರೆ ಸಾಕು.

ಚಿರಂಜೀವಿ ಸಿಂಘ್, ನಿವೃತ್ತ ಐಎಎಸ್ ಅಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT