ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಅವೈಜ್ಞಾನಿಕ ಕಾಮಗಾರಿ ಸಿಗದ ನಿರೀಕ್ಷಿತ ಯಶಸ್ಸು

Last Updated 9 ಜನವರಿ 2021, 21:06 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾರ್ಯರೂಪಕ್ಕೆ ಬಂದು ಆರು ವರ್ಷಗಳಾಗಿವೆ. ಆದರೆ, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಯೋಜನೆ ನಿರೀಕ್ಷಿತ ಯಶಸ್ಸು ಕಂಡಿಲ್ಲ.

ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಪರಿಶ್ರಮದಿಂದ ₹98 ಕೋಟಿ ವೆಚ್ಚ ದಲ್ಲಿ 2008ರಲ್ಲಿ ಆರಂಭಗೊಂಡ 22 ಕೆರೆ ತುಂಬಿಸುವ ಯೋಜನೆ 2014ರಲ್ಲಿ ಪೂರ್ಣಗೊಂಡಿತು. ನದಿ ಪಾತ್ರದ ಮೇಲ್ಮಟ್ಟದಲ್ಲಿ ಜಾಕ್‌ವೆಲ್‌ ನಿರ್ಮಿಸಿರುವುದು, ಕಳಪೆ ಗುಣಮಟ್ಟದ ಪೈಪ್‌ಗಳು ಒಡೆಯುತ್ತಿರುವುದು ಹಾಗೂ ವಿದ್ಯುತ್‌ ಸಮಸ್ಯೆಯಿಂದಾಗಿ ಮಳೆ ಗಾಲದಲ್ಲಿ ಎರಡು ತಿಂಗಳು ಮಾತ್ರ ಕೆರೆ ಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿದೆ. ಯೋಜನೆ ವ್ಯಾಪ್ತಿಯ ಬಹುತೇಕ ಕೆರೆಗಳ ಒಡಲು ಬರಿದಾಗಿಯೇ ಇರುವುದು ಯೋಜನೆಯ ವೈಫಲ್ಯಕ್ಕೆ ಹಿಡಿದ ಕನ್ನಡಿ.

ಬರಪೀಡಿತ ಜಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 57 ಕೆರೆಗಳಿಗೆ ನೀರು ತುಂಬಿಸುವ ₹640 ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ.

121 ಕೆರೆಗಳಿಗೆ ನೀರು ತುಂಬಿಸುವ ₹431 ಕೋಟಿ ವೆಚ್ಚದ ಸಾಸ್ವೆಹಳ್ಳಿ ಏತ ನೀರಾವರಿ 2020ರ ಮಾರ್ಚ್‌ನಲ್ಲಿ ಪೂರ್ಣಗೊಳ್ಳಬೇಕಿತ್ತು. ಪೈಪ್‌ ಅಳವಡಿ ಸುವ ಕೆಲಸ ಶೇ 60ರಷ್ಟು ಮಾತ್ರ ಮುಗಿದಿದೆ. ಹರಪನಹಳ್ಳಿ ತಾಲ್ಲೂಕಿನ 60 ಕೆರೆಗಳಿಗೆ ನೀರು ತುಂಬಿಸುವ ಗರ್ಭಗುಡಿ ಏತ ನೀರಾವರಿ ಯೋಜನೆ ಕಾಮಗಾರಿಯೂ ಕುಂಟುತ್ತಾ ಸಾಗುತ್ತಿದೆ.

2007ರಲ್ಲಿ ಮಂಜೂರಾಗಿ 10 ವರ್ಷಗಳ ನಂತರ ಪೂರ್ಣಗೊಂಡ ಶಿವಮೊಗ್ಗ ಜಿಲ್ಲೆಯ ಹೊಳಲೂರು ಏತ ನೀರಾವರಿ ಯೋಜನೆಯಲ್ಲಿ ಕಳಪೆ ಪೈಪ್‌ಲೈನ್ ಅಳವಡಿಸಿದ ಪರಿಣಾಮ, ಕೆರೆಗಳಿಗೆ ನೀರು ತಲುಪಿಸಲು ಸಾಧ್ಯವಾಗುತ್ತಿಲ್ಲ. ಈ ಯೋಜನೆಗೆ ₹6.25 ಕೋಟಿಗೆ ಮಂಜೂರಾಗಿತ್ತು. ಕಾಮಗಾರಿ ವಿಳಂಬದಿಂದಾಗಿ ₹15 ಕೋಟಿಗೆ ತಲುಪಿತ್ತು. ಮೋಟರ್‌ ಚಾಲನೆ ಮಾಡಿದ ತಕ್ಷಣ ಪೈಪ್‌ಗಳು ಒಡೆಯುತ್ತಿದ್ದವು. ಪೈಪ್‌ಗಳನ್ನು ಬದಲಿಸಲು ಮತ್ತೆ ₹ 8 ಕೋಟಿ ನೀಡಲಾಗಿತ್ತು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಕ್ಷೇತ್ರವಾದ ಶಿಕಾರಿಪುರ ತಾಲ್ಲೂಕಿನ 225 ಕೆರೆಗಳಿಗೆ ನೀರು ತುಂಬಿಸುವ ₹ 850 ಕೋಟಿ ವೆಚ್ಚದ ಪುರದಕೆರೆ ಏತ ನೀರಾವರಿ ಕಾಮಗಾರಿ ಪ್ರಗತಿಯಲ್ಲಿದೆ.

ಹೊಸಹಳ್ಳಿ ತುಂಗಾ ಏತ ನೀರಾವರಿ ಮೂಲಕ ₹87.71 ಕೋಟಿ ವೆಚ್ಚದಲ್ಲಿ30 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಂಡಿದೆ. ಅದರ ಮುಂದುವರಿದ ಭಾಗ ತಮಡಿಹಳ್ಳಿ, ಕುಂಸಿ, ಆಯನೂರು, ಹಾರನಹಳ್ಳಿ, ಆಯನೂರು ಭಾಗದ ಸುಮಾರು 75 ಕೆರೆಗಳಿಗೆ ನೀರು ಹರಿಸುವ ಯೋಜನೆ ಇನ್ನೂ ಸಾಕಾರಗೊಂಡಿಲ್ಲ. 3 ಹೋಬಳಿಗಳ 145 ಹಳ್ಳಿಗಳಿಗೆ ನೀರಾವರಿ ಯೋಜನೆ, ಸೂಗೂರು ಬಳಿ ₹10 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಲು ಅನುಮೋದನೆ ದೊರೆತಿದ್ದರೂ ಕಾಮಗಾರಿ ಆರಂಭವಾಗಿಲ್ಲ.

ಚಿಗುರಿದ ಸೊರಬ ಜನರ ಕನಸು: ಸೊರಬ ತಾಲ್ಲೂಕಿನಲ್ಲಿ ಮೂರು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಮೂಡಿ ಯೋಜನೆಗೆ₹ 285 ಕೋಟಿ ಹಾಗೂಮೂಗೂರು ಯೋಜನೆಗೆ ₹ 105 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ. ಇದು 97 ಕೆರೆಗಳು ತುಂಬಿಸುವ ಯೋಜನೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ ವ್ಯಾಪ್ತಿಯ 367 ಕೆರೆಗಳಿಗೆ ಅರ್ಧದಷ್ಟು ನೀರು ತುಂಬಿಸಲು ಉದ್ದೇಶಿಸಲಾಗಿದೆ. ಯೋಜನೆಗೆ ಅನುಮೋದನೆ ದೊರೆತು ದಶಕ ಕಳೆದರೂ ನಿರ್ಣಾಯಕ ಹಂತ ತಲುಪಿಲ್ಲ.

ತುಂಗಭದ್ರಾ ನದಿಯಿಂದ ಚಿತ್ರದುರ್ಗ ತಾಲ್ಲೂಕಿನ 39 ಕೆರೆಗಳಿಗೆ ನೀರು ತುಂಬಿಸಲು ₹522 ಕೋಟಿ ಮೊತ್ತದ ಯೋಜನೆಗೆ 2019ರ ಸೆಪ್ಟೆಂಬರ್‌ನಲ್ಲಿ ಅನುಮೋದನೆ ಸಿಕ್ಕಿದೆ. ಹರಿಹರ ತಾಲ್ಲೂಕಿನ ರಾಜನಹಳ್ಳಿ ಬಳಿ ನೀರನ್ನು ಮೇಲೆತ್ತಿ, ಪೈಪ್‌ಲೈನ್ ಮೂಲಕ ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಕೆರೆ ತುಂಬಿಸಲಾಗುತ್ತದೆ. ಅಲ್ಲಿಂದ ಇತರ ಕೆರೆಗಳಿಗೆ ಹರಿಸಲಾಗುತ್ತದೆ. ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಒತ್ತಾಯಕ್ಕೆ ಮಣಿದು ಸರ್ಕಾರ ಈ ಯೋಜನೆ ರೂಪಿಸಿದ್ದು, ಕಾಮಗಾರಿ ಆರಂಭವಾಗಿದೆ.

ಪೂರಕ ಮಾಹಿತಿ: ವಿನಾಯಕ ಭಟ್, ಚಂದ್ರಹಾಸ ಹಿರೇಮಳಲಿ, ಜಿ.ಬಿ. ನಾಗರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT