ಶನಿವಾರ, ಏಪ್ರಿಲ್ 4, 2020
19 °C

ಒಳನೋಟ | ಬೇಕಿದೆ ವಿಜಯಪುರ, ಶಿರಪುರ ಮಾದರಿ

ಗಣೇಶ ಡಿ.ಚಂದನಶಿವ Updated:

ಅಕ್ಷರ ಗಾತ್ರ : | |

Prajavani

ಪ್ರತಿ ಬೇಸಿಗೆ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಬಹುಪಾಲು ಜನರನ್ನು ನೀರಿನ ಕೊರತೆಯ ಸಂಕಷ್ಟಕ್ಕೆ ನೂಕುತ್ತದೆ; ಮರಳು ಮತ್ತು ಟ್ಯಾಂಕರ್‌ ಮಾಫಿಯಾಗೆ ಸುಗ್ಗಿಯ ಸಂಭ್ರಮ ತರುತ್ತದೆ.

ರಾಜ್ಯದ ಆಲಮಟ್ಟಿಯ ದೊಡ್ಡ ಜಲಾಶಯ ಈ ಭಾಗದ ‘ಆಶಾಕಿರಣ’. ಈ ಜಲಾಶಯದ ಎತ್ತರ 524.256 ಮೀಟರ್‌ಗೆ ಹೆಚ್ಚಿಸಿ, ಅಂದಾಜು 125 ಟಿಎಂಸಿ ಅಡಿಯಷ್ಟು ಹೆಚ್ಚುವರಿ ನೀರು ಸಂಗ್ರಹಿಸುವುದೊಂದೇ ಪರಿಹಾರ. ಆದರೆ, ಇದು ಸಾಧ್ಯವಾಗುತ್ತಿಲ್ಲ. ಕೃಷ್ಣಾ ಮತ್ತು ಭೀಮಾ ನದಿಗಳಿಗೆ ನೀರು ಹರಿಸಿ ಎಂದು ಮಹಾರಾಷ್ಟ್ರವನ್ನು ಗೋಗರೆಯುವುದು ತಪ್ಪುತ್ತಿಲ್ಲ. ಹಣ ಕೊಟ್ಟರೂ ಆ ರಾಜ್ಯ ನೀರು ಕೊಡುತ್ತಿಲ್ಲ. ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿ 30 ಟಿಎಂಸಿ ಅಡಿಗೂ ಹೆಚ್ಚು ನೀರು ಖೋತಾ ಆಗಿರುವುದರಿಂದ ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳ ನದಿ ಪಾತ್ರದ ಜನರ ಸಂಕಷ್ಟ ಹೆಚ್ಚುತ್ತಲೇ ಸಾಗಿದೆ.

ಹುಬ್ಬಳ್ಳಿ–ಧಾರವಾಡ, ಕಲಬುರ್ಗಿಯಂತಹ ದೊಡ್ಡ ನಗರಗಳಲ್ಲೇ ನೀರಿನ ಸಮಸ್ಯೆ ನೀಗಿಲ್ಲ. ಧಾರವಾಡ, ಗದಗ ಜಿಲ್ಲೆಗಳ ಮಲಪ್ರಭಾ ತೀರದಲ್ಲಿರುವ ಜನ ಮಹದಾಯಿ ನೀರು ನವಿಲುತೀರ್ಥ ಜಲಾಶಯಕ್ಕೆ ಹರಿದು ಬರುವುದನ್ನು ಎದುರು ನೋಡುತ್ತಿದ್ದಾರೆ. ಬೆಳಗಾವಿ ನಗರದಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ತಲೆದೋರದಿದ್ದರೂ ಜಿಲ್ಲೆಯ ಬಹುಪಾಲು ಪ್ರದೇಶಕ್ಕೆ ಬೇಸಿಗೆಯಲ್ಲಿ ಟ್ಯಾಂಕರ್‌ ನೀರೇ ಗತಿ ಎಂಬಂತಾಗಿದೆ.

ಇದು ಬಯಲು ನಾಡು. ಅರಣ್ಯ ಪ್ರದೇಶ ಅತ್ಯಲ್ಪ. ಜಲ ಸಾಕ್ಷರತೆಯ ಕೊರತೆ, ಉದಾಸೀನತೆ ಹೆಚ್ಚು. ಮಳೆ ನೀರು ಸಂಗ್ರಹ ಎಂಬುದು ಸರ್ಕಾರಿ ಕಚೇರಿಗಳಿಗಷ್ಟೇ ಸೀಮಿತ. ಕೆರೆ–ಕಟ್ಟೆಗಳೆಲ್ಲ ಅತಿಕ್ರಮಣಗೊಂಡು, ಅಚ್ಚುಕಟ್ಟು ಪ್ರದೇಶಗಳು ಮಾಯವಾಗಿವೆ. ನೀರನ್ನು ಬೇಕಾಬಿಟ್ಟಿಯಾಗಿ ಬಳಸಲಾಗುತ್ತಿದೆಯೇ ವಿನಾ, ಮಳೆ ನೀರು ಸಂರಕ್ಷಿಸುವ ಕೆಲಸ ಪರಿಣಾಮಕಾರಿಯಾಗಿ ಆಗುತ್ತಿಲ್ಲ.

ವಿಜಯಪುರ ಹಿಂದೆ ಆದಿಲ್‌ಶಾಹಿ ಅರಸರ ಆಡಳಿತಕ್ಕೆ ಒಳಪಟ್ಟಿತ್ತು. ಪ್ರತಿ ಬಡಾವಣೆಗಳಲ್ಲೂ ಬಾವಡಿಗಳನ್ನು ಹಾಗೂ ತೊರವಿ ಬಳಿ ಕೆರೆ ನಿರ್ಮಿಸಿ ಅಲ್ಲಿಂದ ಸುರಂಗ ಮಾರ್ಗದ ಮೂಲಕ ನೀರು ಪೂರೈಸುವ ಅಪರೂಪದ ವ್ಯವಸ್ಥೆ ಇತ್ತು. ನಗರದ 30ಕ್ಕೂ ಹೆಚ್ಚು ಬಾವಡಿಗಳನ್ನು ವೈಜ್ಞಾನಿಕವಾಗಿ ಸ್ವಚ್ಛಗೊಳಿಸಲಾಯಿತು. ಬೇಗಂ ಕೆರೆ ಹಾಗೂ ಭೂತನಾಳ ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸಲಾಯಿತು. ಅಂತರ್ಜಲ ಹೆಚ್ಚಿ, ಝರಿಗಳು ತೆರೆದುಕೊಂಡು ಈ ಬಾವಡಿಗಳು ಭರ್ತಿಯಾಗಿವೆ. ಅಲ್ಲೆಲ್ಲ ಶುದ್ಧ ನೀರಿನ ಘಟಕಗಳನ್ನು ಅಳವಡಿಸಿ ನೀರು ಪೂರೈಸಲಾಗುತ್ತಿದೆ.

‘ನದಿಗಳಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ’ ಯಶ ಕಂಡಿದೆ. ವಿಜಯಪುರ ಜಿಲ್ಲೆಯ 100 ಮತ್ತು ಬಾಗಲಕೋಟೆ ಜಿಲ್ಲೆಯ 30 ಕೆರೆಗಳಿಗೆ ಕೃಷ್ಣಾ ನದಿಯಿಂದ ಪ್ರತಿ ವರ್ಷ ಮಳೆಗಾಲದಲ್ಲಿ ನೀರು ತುಂಬಿಸಲಾಗುತ್ತಿದ್ದು, ಅವುಗಳ ಪರಿಸರದಲ್ಲಿ ಅಂತರ್ಜಲ ಹೆಚ್ಚಿ ನೀರಿನ ಸಮಸ್ಯೆ ನೀಗಿದೆ.

‘ಬೀದರ್‌ ಮಾದರಿ ಚೆಕ್‌ ಡ್ಯಾಂಗಳ ನಿರ್ಮಾಣ’ ರಾಜ್ಯದಲ್ಲೇ ಜನಪ್ರಿಯವಾಗಿತ್ತು. ‘ಗೋಡೆ’ಯಂತೆ ಚೆಕ್‌ಡ್ಯಾಂ ಕಟ್ಟುವ ಬದಲು, ನೀರಿನ ಒತ್ತಡ ತಡೆದುಕೊಳ್ಳುವ ಸಾಮರ್ಥ್ಯ ಹೆಚ್ಚಿಸಲು ಅರ್ಧಚಂದ್ರಾಕಾರದ ನಾಲ್ಕಾರು ಕಮಾನಿನ ಮಾದರಿಯಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸುವುದು ಇದರ ವಿಶೇಷತೆ. ಬೀದರ್‌ ಜಿಲ್ಲೆಯಲ್ಲಿ ಅತಿ ಹೆಚ್ಚು ನಿರ್ಮಾಣವಾಗಿರುವ ಇವುಗಳಲ್ಲಿ ಸದ್ಯ ಹೂಳು ತುಂಬಿಕೊಂಡಿದೆ.

ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನಲ್ಲಿ ರಾಜ್ಯ ಸರ್ಕಾರ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿರುವ ‘ಮಹಾರಾಷ್ಟ್ರದ ಲಾತೂರ ಜಿಲ್ಲೆಯ ಶಿರಪುರ ಜಲಸಂಗ್ರಹ ಮಾದರಿ’ ಯೋಜನೆ ಯಶಸ್ವಿಯಾಗಿದೆ. ನಾಲೆ, ಕೆರೆ, ಝರಿಗಳನ್ನು ಅಭಿವೃದ್ಧಿಪ‍ಡಿಸಿ ಅಲ್ಲಲ್ಲಿ ಚೆಕ್‌ಡ್ಯಾಂ ನಿರ್ಮಿಸಿ ಹರಿದು ಹೋಗುವ ಮಳೆನೀರು ಹಿಡಿದಿಟ್ಟು ಅಂತರ್ಜಲ ಹೆಚ್ಚಿಸುವುದು ಇದರ ಉದ್ದೇಶ. 10 ಗ್ರಾಮಗಳಲ್ಲಿ 56 ಕಿ.ಮೀ. ಉದ್ದದ ನಾಲೆಗಳನ್ನು ನಿರ್ಮಿಸಿದ್ದು, ಅಲ್ಲಿ ನೀರು–ಹಸಿರು ನಳನಳಿಸುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)