ಗುರುವಾರ , ಏಪ್ರಿಲ್ 9, 2020
19 °C

ಒಳನೋಟ | ಜಲಮೂಲವೇ ಇಲ್ಲ; ಏನನ್ನು ಹಿಡಿದಿಟ್ಟುಕೊಳ್ಳುವುದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಮಾರ್ಚ್‌ ಕೊನೆಯ ಭಾಗದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಆರಂಭವಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಜೀವ ನದಿ ನೇತ್ರಾವತಿ ಹಾಗೂ ಉಡುಪಿ ನಗರಕ್ಕೆ ನೀರು ಪೂರೈಸುವ ಸ್ವರ್ಣಾ ನದಿಯಲ್ಲಿ ಪ್ರತಿ ಬೇಸಿಗೆಯಲ್ಲೂ ನೀರಿನ ಕೊರತೆ ಉಂಟಾಗುತ್ತಿದೆ. ಮತ್ತೆ ಬೋರವೆಲ್‌, ನೀರು ಪೂರೈಸುವ ಟ್ಯಾಂಕರ್‌ಗಳ ಮೊರೆ ಹೋಗಬೇಕಾದ ಸ್ಥಿತಿ ಇದೆ.

‘ಪಶ್ಚಿಮ ಘಟ್ಟದಲ್ಲಿ ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಒಳಹರಿವು ಏಕಾಏಕಿ ಕಡಿಮೆ ಆಗುತ್ತಿದೆ. ಮಳೆಗಾಲದಲ್ಲಿ ಸಂಪೂರ್ಣ ತುಂಬಿ, ನೆರೆ ಸೃಷ್ಟಿಸುವ ನದಿಗಳು, ಮಳೆಗಾಲ ಮುಗಿಯುತ್ತಿದ್ದಂತೆಯೇ ಬರಿದಾಗುತ್ತಿವೆ. ಪಶ್ಚಿಮ ಘಟ್ಟದ ಜಲ ಬಟ್ಟಲು ಬರಿದಾಗುತ್ತಿರುವುದೇ ಇದಕ್ಕೆ ಕಾರಣ’ ಎನ್ನುವುದು ಪರಿಸರವಾದಿ ದಿನೇಶ್ ಹೊಳ್ಳ ಅವರು ಹೇಳುವ ಮಾತು.

‘ಮಳೆಗಾಲದ ನೀರನ್ನು ಹಿಡಿದಿಟ್ಟುಕೊಂಡು, ವರ್ಷವಿಡೀ ತೊರೆಯ ರೂಪದಲ್ಲಿ ನದಿಯಲ್ಲಿ ಒಳಹರಿವು ಕಾಪಾಡುತ್ತಿದ್ದ ಬೆಟ್ಟದ ಮೇಲಿನ ಹುಲ್ಲುಗಾವಲು ಹಾಗೂ ಕೆಳಗಡೆ ಇರುವ ಶೋಲಾ ಅರಣ್ಯಗಳು ತಮ್ಮ ನಿಜ ಸ್ವರೂಪವನ್ನು ಕಳೆದುಕೊಳ್ಳುತ್ತಿವೆ. ಹೀಗಾಗಿ ನದಿಗಳಲ್ಲಿ ಒಳಹರಿವು ಕಡಿಮೆಯಾಗುತ್ತಿದೆ’ ಎನ್ನುವುದು ಅವರ ವಿವರಣೆ.

ಪಶ್ಚಿಮ ವಾಹಿನಿ: ಕರಾವಳಿಯ ಗ್ರಾಮೀಣ ಪ್ರದೇಶದಲ್ಲಿನ ಕುಡಿಯುವ ನೀರಿನ ಕೊರತೆ ನೀಗಿಸಲು, 2001 ರಲ್ಲಿ ಚರ್ಚೆಗೆ ಬಂದಿದ್ದ ‘ಪಶ್ಚಿಮ ವಾಹಿನಿ’ ಯೋಜನೆ ಈಗ ಕೊಂಚ ಮುಂದಡಿ ಇರಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ₹125.45 ಕೋಟಿ ವೆಚ್ಚದಲ್ಲಿ 23 ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ₹72.85 ಕೋಟಿ ವೆಚ್ಚದಲ್ಲಿ ಒಂಬತ್ತು ಮತ್ತು ಉಡುಪಿ ಜಿಲ್ಲೆಯಲ್ಲಿ ₹52.60 ಕೋಟಿ ವೆಚ್ಚದಲ್ಲಿ 14 ಕಿಂಡಿ ಅಣೆಕಟ್ಟೆಗಳ ನಿರ್ಮಾಣ ಮಾಡಲಾಗುತ್ತಿದೆ.

ಪಶ್ಚಿಮವಾಹಿನಿ ಯೋಜನೆಯಡಿ ₹1,394 ಕೋಟಿ ವೆಚ್ಚದಲ್ಲಿ ಮೂರು ಜಿಲ್ಲೆಗಳಲ್ಲಿ 783 ಕಿಂಡಿ ಅಣೆಕಟ್ಟೆಗಳನ್ನು ನಿರ್ಮಿಸುವ ಪ್ರಸ್ತಾವವಿದೆ. ಒಟ್ಟಾರೆ ₹1,394 ಕೋಟಿ ಅನುದಾನವನ್ನು ಪಶ್ಚಿಮ ವಾಹಿನಿಗೆ ಮೀಸಲಿಡಲಾಗಿದ್ದು, ಮೊದಲ ಹಂತದಲ್ಲಿ ₹200 ಕೋಟಿ ನೀಡಲಾಗಿದೆ. ಎರಡನೇ ಹಂತದಲ್ಲಿ ₹611 ಕೋಟಿ, ಮೂರನೇ ಹಂತದಲ್ಲಿ ₹583 ಕೋಟಿ ಅನುದಾನ ಒದಗಿಸಲಾಗುತ್ತಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಶ್ಚಿಮ ವಾಹಿನಿಗೆ ₹200 ಕೋಟಿ ಅನುದಾನ ನಿಗದಿಪಡಿಸಿದ್ದರು. ಮರು ವರ್ಷ ಪಶ್ಚಿಮ ವಾಹಿನಿ ಯೋಜನೆಯಡಿ ಹರೇಕಳ ಬಳಿ ಕಿಂಡಿ ಅಣೆಕಟ್ಟೆ ನಿರ್ಮಾಣಕ್ಕೆ ₹174 ಕೋಟಿ ಮೀಸಲಿಟ್ಟಿದ್ದರು. ಇದೀಗ ಈ ಕಾಮಗಾರಿಯ ಶಿಲಾನ್ಯಾಸ ನೆರವೇರುತ್ತಿದೆ. ಇದನ್ನು ಹೊರತುಪಡಿಸಿ, ಯೋಜನೆಗೆ ಸಿಗಬೇಕಾದ ಪ್ರಾಶಸ್ತ್ರ್ಯ ಸಿಗಲಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ‘ಕಿಂಡಿ ಅಣೆಕಟ್ಟು ಯೋಜನೆ’ಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಮಾಸ್ಟರ್ ಪ್ಲಾನ್ ಮಾತ್ರ ಘೋಷಣೆ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು