ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಎಣ್ಣೆ ಮಿಲ್‌ ಪುನರಾರಂಭಕ್ಕೆ ಒಲವು

ಇಳುವರಿ ಕುಸಿತ, ಸಂಕಷ್ಟದಲ್ಲಿ ಶೇಂಗಾ ಬೆಳೆಗಾರ
Last Updated 14 ಮೇ 2022, 21:05 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಳೆ ಕೊರತೆ, ಇಳುವರಿ ಕುಸಿತ, ನ್ಯಾಯಯುತ ಬೆಲೆ ಸಿಗದೇ ಶೇಂಗಾ ಬೆಳೆಗಾರ ಸಂಕಷ್ಟದಲ್ಲಿರುವ ಸಂದರ್ಭದಲ್ಲಿಯೇ ಚಳ್ಳಕೆರೆಯ ಎಣ್ಣೆ ಮಿಲ್‌ಗಳನ್ನು ಪುನರಾರಂಭಿಸಲು ಉದ್ಯಮಿಗಳು ಒಲವು ತೋರುತ್ತಿದ್ದಾರೆ.

ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಶೇಂಗಾ. ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು, ಪಾವಗಡ, ಶಿರಾ, ಮಧುಗಿರಿ ಭಾಗದಲ್ಲಿ ಶೇಂಗಾ ಮಳೆಯಾಶ್ರಿತ ಬೆಳೆ. ಕಡಿಮೆ ಪ್ರಮಾಣದ ಮಳೆ ಬೀಳುವುದರಿಂದ ಶೇಂಗಾ ಹೊರತುಪಡಿಸಿ ಬೇರೆ ಬೆಳೆ ಕಷ್ಟ. ಅತಿವೃಷ್ಟಿ, ಅನಾವೃಷ್ಟಿಯ ನಡುವೆಯೂ ಶೇಂಗಾ ಬಿತ್ತುವುದು ರೈತರಿಗೆ ಅನಿವಾರ್ಯ.

ಶೇಂಗಾ ಯಥೇಚ್ಛವಾಗಿ ಬೆಳೆಯುತ್ತಿದ್ದ ಸಂದರ್ಭದಲ್ಲಿ ಚಳ್ಳಕೆರೆಯ ಎಣ್ಣೆ ಮಿಲ್‌ಗಳು ಸದ್ದು ಮಾಡುತ್ತಿದ್ದವು. ಶೇಂಗಾ ಎಣ್ಣೆ ತೆಗೆಯುವ ಮಿಲ್‌ ಹಾಗೂ ಶೇಂಗಾ ಬೀಜ ಬೇರ್ಪಡಿಸುವ (ಡಿಕಾಟಿಕೇಟರ್‌) ನೂರಾರು ಘಟಕಗಳು ಇಲ್ಲಿದ್ದವು. ಅಡುಗೆ ಎಣ್ಣೆ ಉತ್ಪಾದಿಸುವ ದೊಡ್ಡ ಕಂಪನಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟ ಬಳಿಕ ಎಣ್ಣೆ ಮಿಲ್‌ಗಳು ಶಕ್ತಿ ಕಳೆದುಕೊಂಡವು. ಅನಾರೋಗ್ಯಕರ ಮಾರುಕಟ್ಟೆ ಪೈಪೋಟಿಯಿಂದ ಬಹುತೇಕ ಮಿಲ್‌ಗಳು ಬಾಗಿಲು ಮುಚ್ಚಿದ್ದವು.

‘2007ರಲ್ಲಿ 42 ಎಣ್ಣೆ ಮಿಲ್‌ಗಳು ಚಳ್ಳಕೆರೆಯಲ್ಲಿದ್ದವು. 2014ರ ವೇಳೆಗೆ ಎಣ್ಣೆ ಮಿಲ್‌ಗಳ ಸಂಖ್ಯೆ 14ಕ್ಕೆ ಕುಸಿದಿತ್ತು. ಮೂರು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದ್ದು, ಶೇಂಗಾ ಬೆಳೆ ಮಾರುಕಟ್ಟೆಗೆ ಬರುತ್ತಿರುವುದರಿಂದ ಎಣ್ಣೆ ಮಿಲ್‌ ಪುನರಾರಂಭ ಆಗುತ್ತಿವೆ. ಸದ್ಯ 22 ಮಿಲ್‌ಗಳು ಹಾಗೂ 58 ಡಿಕಾಟಿಕೇಟರ್‌ ಘಟಕಗಳು ಕಾರ್ಯನಿರ್ವಹಿಸುತ್ತಿವೆ’ ಎನ್ನುತ್ತಾರೆ ಚಳ್ಳಕೆರೆಯ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಎನ್‌. ಸತೀಶ್‌.

ಚಳ್ಳಕೆರೆಯಲ್ಲಿ ಅಡುಗೆ ಎಣ್ಣೆ ಉದ್ಯಮ ಉತ್ತುಂಗದಲ್ಲಿದ್ದ ಸಮಯದಲ್ಲಿ ಆಂಧ್ರಪ್ರದೇಶದ ಶೇಂಗಾ ಕೂಡ ಕರ್ನಾಟಕಕ್ಕೆ ಬರುತ್ತಿತ್ತು. ಆಂಧ್ರಪ್ರದೇಶದಲ್ಲಿಯೇ ಮಾರುಕಟ್ಟೆ ಸೌಲಭ್ಯ ಸಿಕ್ಕ ಬಳಿಕ ಚಳ್ಳಕೆರೆಯ ಎಣ್ಣೆ ಮಿಲ್‌ಗಳಿಗೆ ಶೇಂಗಾ ಕೊರತೆ ಉಂಟಾಯಿತು. ಸತತ ಬರ, ಉತ್ಪಾದನಾ ವೆಚ್ಚ ಹೆಚ್ಚಳ, ಉತ್ತಮ ಗುಣಮಟ್ಟದ ಶೇಂಗಾ ಬೀಜದ ಅಲಭ್ಯತೆಯಿಂದ ಚಿತ್ರದುರ್ಗದ ಶೇಂಗಾ ಇಳುವರಿ ಕುಸಿಯಿತು.

‘ದಶಕದ ಹಿಂದೆ 100 ಗ್ರಾಂ ಶೇಂಗಾಗೆ 70 ಗ್ರಾಂ ಬೀಜ ಸಿಗುತ್ತಿತ್ತು. ಇಳುವರಿ ಕುಸಿತದ ಪರಿಣಾಮವಾಗಿ 55ರಿಂದ 60 ಗ್ರಾಂ ಬೀಜ ಮಾತ್ರ ಲಭ್ಯವಾಗುತ್ತಿದೆ. ಈ ಶೇಂಗಾ ಖರೀದಿಸಿದರೆ ಉದ್ಯಮಕ್ಕೆ ನಷ್ಟವಾಗುತ್ತದೆ’ ಎಂಬುದು ಎಣ್ಣೆ ಮಿಲ್‌ ಮಾಲೀಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT