ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ ಪ್ರತಿಕ್ರಿಯೆಗಳು

Last Updated 22 ಸೆಪ್ಟೆಂಬರ್ 2019, 17:58 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಹೆಸರಿನಲ್ಲಿ ರಾಜಕೀಯ ನಾಯಕರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರುಜೇಬು ತುಂಬಿಸಿಕೊಳ್ಳುತ್ತಿರುವ ಬಗ್ಗೆ ‘ಪ್ರಜಾವಾಣಿ’ ಭಾನುವಾರದ (ಸೆಪ್ಟೆಂಬರ್‌ 22) ಒಳನೋಟ ಸಂಚಿಕೆಯಲ್ಲಿ ‘ದಸರಾ: ಹಣದ ‘ದರ್ಬಾರು’ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ಸಮಗ್ರ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ.

‘ದಸರಾಗೆ ಭ್ರಷ್ಟಾಚಾರದ ಮಸಿ ತಾಗದಿರಲಿ, ಆಚರಣೆಗೂ ಮುನ್ನವೇ ಈ ಲೋಪ‍ ಸರಿಪಡಿಸುವುದು ಸೂಕ್ತ’ ಎಂದು ಹಲವರು ಸಲಹೆ ನೀಡಿದ್ದಾರೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

ಮರುಗದಿರಲಿ ‘ಮೆರುಗು’

ಮೈಸೂರು ದಸರಾ ನಮ್ಮ ಹೆಮ್ಮೆ. ದೇಶ ವಿದೇಶಗಳಿಂದ ದಸರಾ ವೈಭವ ಕಣ್ತುಂಬಿಕೊಳ್ಳಲು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿ ಅದರ ಘನತೆ ಹೆಚ್ಚಿಸಬೇಕು. ಈ ವಿಚಾರದಲ್ಲೂ ಅಕ್ರಮ, ಭ್ರಷ್ಟಾಚಾರ ನಡೆಯುವುದು ಒಳಿತಲ್ಲ.

ಧನಂಜಯ್‌, ಕೊರಟಗೆರೆ

***

ಶೀಘ್ರ ಎಚ್ಚೆತ್ತುಕೊಳ್ಳಿ

ದಸರಾ ಹಿಂದಿರುವ ಭ್ರಷ್ಟಾಚಾರದ ಮುಖವನ್ನು ‘ಪ್ರಜಾವಾಣಿ’ ವರದಿ ಜಗತ್ತಿಗೆ ತೋರಿದೆ. ಇಂತಹ ಭ್ರಷ್ಟಾಚಾರಗಳಿಗೆ ಮೊದಲೇ ತಡೆ ನೀಡುವುದು ಸೂಕ್ತ. ಈ ಬಾರಿಯ ದಸರಾ ಇಂತಹ ಯಾವುದೇ ಕಳಂಕಗಳಿಗೆ ಸಿಲುಕದೆ ನಾಡಿನ ಹೆಮ್ಮೆಯಂತೆ ಆಚರಣೆಯಾಗಲಿ.

ಶೈಲಾ, ಬೆಳಗಾವಿ

***

ಹಣ ಪೋಲು ಮಾಡದಿರಿ

ಮೈಸೂರು ದಸರಾ ವೇಳೆ ಇಲ್ಲಸಲ್ಲದಕ್ಕೆ ಹಣ ವ್ಯಯ ಮಾಡಲಾಗುತ್ತದೆ. ರಾಜಕಾರಣಿಗಳು, ಸಿನಿತಾರೆಯರಿಗೆ ವಿಶೇಷ ಸೌಲಭ್ಯಗಳಿಗಾಗಿ ಅಪಾರ ಹಣ ಖರ್ಚು ಮಾಡುತ್ತಾರೆ. ಇದಕ್ಕಾಗಿಯೇ ಹಣ ಮೀಸಲಿಡಲಾಗುತ್ತಿದೆ. ಈ ಬಾರಿಯ ದಸರಾ ಬಡವರ ಪರವಾಗಿರಲಿ.

ಸುಮಂತ್, ತುಮಕೂರು

***

ಸರ್ಕಾರದ ಕಣ್ಣು ಮುಚ್ಚಿದೆ

ನಾಡಹಬ್ಬ ದಸರಾ ಆಚರಣೆಗೆ ಬಿಡುಗಡೆಯಾದ ಅನುದಾನಗಳು ಭ್ರಷ್ಟರ ಜೇಬು ತುಂಬುತ್ತಿದೆ ಎಂದರೆ ಏನರ್ಥ?. ಸರ್ಕಾರ ದಸರಾ ಆಚರಣೆಗೆ ಕಟ್ಟುನಿಟ್ಟಿನ ಅಧಿಕಾರಿಗಳನ್ನು ನೇಮಿಸಿಲ್ಲ. ಆಡಳಿತ ವ್ಯವಸ್ಥೆ ಕಣ್ಣು ಮುಚ್ಚಿ ಕುಳಿತಂತಿದೆ. ದಸರಾ ನಿರ್ವಹಣೆಗಾಗಿ ಖಡಕ್‌ ತಂಡ ರಚಿಸಬೇಕು.

‌ರವಿ, ಹೊನ್ನಾವರ

***

ಪಾಸ್‌ ವಿತರಣೆಯಲ್ಲೂ ರಾಜಕೀಯ

ದಸರಾ ವೀಕ್ಷಣೆಗೆ ವಿತರಿಸಲಾಗುವ ಪಾಸ್‌ನಲ್ಲೂ ರಾಜಕೀಯ ತುಂಬಿಕೊಂಡಿದೆ. ಅಧಿಕಾರಿಗಳು ತಮಗೆ ಬೇಕಾದವರಿಗೆ ಪಾಸ್‌ ಹಂಚಿಕೊಳ್ಳುತ್ತಾರೆ. ಇದರಿಂದ ಬಡವರು, ಮಧ್ಯಮವರ್ಗದವರಿಗೆ ದಸರಾ ಇನ್ನೂ ದೂರದಲ್ಲಿ ಉಳಿದಿದೆ.

ಪುನೀತ್, ಮೈಸೂರು

***

ದುಂದು ವೆಚ್ಚ ನಿಲ್ಲಲಿ

ಪ್ರತಿ ವರ್ಷ ನವರಾತ್ರಿಯನ್ನು ಅದ್ದೂರಿಯಾಗಿ ಆಚರಿಸುತ್ತಿದ್ದೇವೆ. ಇದಕ್ಕಾಗಿ ಹೆಚ್ಚಿನ ಅನುದಾನ ಮೀಸಲಾಗಿರುತ್ತದೆ. ಬಿಡುಗಡೆಯಾದ ಹಣವೆಲ್ಲಾ ಆಚರಣೆಗಾಗಿಯೇ ಬಳಕೆಯಾಗಿದ್ದರೆ ತೊಂದರೆಯಿಲ್ಲ. ದುಂದು ವೆಚ್ಚಕ್ಕೆ ಅನುದಾನ ಬಳಕೆಯಾಗದಂತೆ ಎಚ್ಚರ ವಹಿಸುವುದು ಅಗತ್ಯ.

ಚೇತನಾ, ಧಾರವಾಡ

***

ಎತ್ತ ಸಾಗಿದೆ ಸಂಸ್ಕೃತಿ?

ಸಾಂಸ್ಕೃತಿಕ ರಾಜಧಾನಿಯಲ್ಲಿ ನಡೆಯುವ ವಿಶ್ವವಿಖ್ಯಾತ ದಸರಕ್ಕೆ ಈ ರೀತಿಯ ಕಳಂಕ ಸರಿಯಲ್ಲ. ಆಚರಣೆಗೆ ಭ್ರಷ್ಟಾಚಾರದ ಮಸಿ ತಾಗದಿರಲಿ. ಸಂಭ್ರಮ–ಸಡಗರದಿಂದ ನಡೆಯುವ ದಸರಾ ಭ್ರಷ್ಟರ ಬಾಳು ಬೆಳಗದಿರಲಿ.

ಆಶಾ ಬಾಯಿ, ಜಾಲಹಳ್ಳಿ

***

ದಸರಾಗೂ ‘ದಂಧೆ’ ಕಾಟ

ದಸರಾ ಉತ್ಸವ ದಂಧೆಯಾಗಿ ಮಾರ್ಪಟ್ಟಿರುವುದು ಬೇಸರದ ಸಂಗತಿ. ಸಾಂಸ್ಕೃತಿಕ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರುವ ದಸರಾ ಮಹೋತ್ಸವ ಲೂಟಿಗಾರರ ಕೈಯಲ್ಲಿ ಸಿಲುಕಿದೆ. ಬಿಲ ತುಂಬಿಸಿಕೊಳ್ಳುವ ಇಲಿಗಳನ್ನು ಮೊದಲು ಓಡಿಸಬೇಕು.

ದೀಪು ರಾವ್, ಬೆಂಗಳೂರು

***

ಚೆಕ್ ಮೂಲಕ ವ್ಯವಹರಿಸಿ

ಹಣ ಕೈಯಿಂದ ಕೈಗೆ ವರ್ಗಾವಣೆ ಆಗುತ್ತಿರುವುದರಿಂದಲೇ ಭ್ರಷ್ಟರ ಜೇಬು ತುಂಬುತ್ತಿದೆ. ದಸರಾ ವೇಳೆಯೇ ಭ್ರಷ್ಟರು ಹುಟ್ಟಿಕೊಳ್ಳುತ್ತಾರೆ. ಇವರನ್ನು ಮಟ್ಟ ಹಾಕಲು ಎಲ್ಲ ವ್ಯವಹಾರಗಳನ್ನು ಚೆಕ್‌ ಮುಖಾಂತರ ನಡೆಸಬೇಕು.

ಪ್ರೀತಿ, ಬೀದರ್‌

***

ನಿರ್ವಹಣೆ ಪಾರದರ್ಶಕವಾಗಿರಲಿ

ಮೈಸೂರು ದಸರಾ ನಾಡಿನ ಹೆಮ್ಮೆ. ಇಂತಹ ಜವಾಬ್ದಾರಿ ಹೊತ್ತ ಅಧಿಕಾರಿಗಳು ಅಚ್ಚುಕಟ್ಟಾಗಿ ತಮ್ಮ ಕಾರ್ಯ ನಿರ್ವಹಿಸುವುದನ್ನು ಬಿಟ್ಟು, ಜೇಬು ತುಂಬಿಸಿಕೊಳ್ಳುವುದು ಸರಿಯಲ್ಲ. ನಿಮ್ಮ ಕಾರ್ಯ ಪಾರದರ್ಶಕವಾಗಿರಲಿ.

ಮುದ್ದೇಶ,ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT