ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ| ಅನ್ನದ ಭಾಷೆಗೆ ಕನ್ನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಲೂಟಿಕೋರರ ಕಾಮಧೇನು

ಇಲಾಖೆ ಲೂಟಿಕೋರರ ಕಾಮಧೇನು l ವೆಚ್ಚವಾದ ಹಣಕ್ಕೆ ಲೆಕ್ಕವಿಲ್ಲ l ಭಾಷೆ ಬೆಳವಣಿಗೆ ಶೂನ್ಯ
Last Updated 24 ನವೆಂಬರ್ 2019, 1:17 IST
ಅಕ್ಷರ ಗಾತ್ರ

ಬೆಂಗಳೂರು: ‌ಭಾಷೆ, ಸಾಹಿತ್ಯ, ಸಂಸ್ಕೃತಿ ಸಂವರ್ಧನೆಗಾಗಿ ನಾಲ್ಕು ದಶಕಗಳ ಹಿಂದೆ (1977) ರೂಪು ಪಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬೊಕ್ಕಸದಿಂದ ವಾರ್ಷಿಕ ಕೋಟಿ, ಕೋಟಿ ಹರಿದುಬಂದಿದೆ. ವ್ಯಯವಾದ ಅನುದಾನ ಬಳಸಿ ಸಾವಿರಾರು ಮಂದಿ ಮೆರೆದಿದ್ದಾರೆ. ಸಂಭ್ರಮಿಸಿದ್ದಾರೆ. ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಆ ಮೂಲಕ ಹರಿವ ತೊರೆ ಆಗಬೇಕಿದ್ದ ಕನ್ನಡ ಮಾತ್ರ ನಿಂತ ನೀರಾಗಿಯೇ ಉಳಿದಿದೆ.

ಭಾಷೆಗೊಂದು ಸಚಿವಾಲಯವಿದ್ದರೆ ಅದು ಕರ್ನಾಟಕದಲ್ಲಿ ಮಾತ್ರ. ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ಅಲ್ಲಿನ ಸರ್ಕಾರಗಳು ಸ್ಥಳೀಯ ಭಾಷೆಯ ಅಭಿವೃದ್ಧಿಗೆ ಖರ್ಚು ಮಾಡುತ್ತಿರುವ ಹಣಕ್ಕೆ ಹೋಲಿಸಿದರೆ, ನಮ್ಮದು ಹತ್ತು ಪಟ್ಟು ಹೆಚ್ಚು. ಸರ್ಕಾರ ಇಷ್ಟು ಅಗಾಧವಾಗಿ, ಉದಾರವಾಗಿ ಅನುದಾನ ನೀಡುತ್ತಿದೆ. ಅದರಿಂದ ಕನ್ನಡ ಭಾಷೆಗೆ ಆಗಿರುವ ಅಥವಾ ಆಗುತ್ತಿರುವ ಲಾಭವಾದರೂ ಏನು?

ಇಂಥದ್ದೊಂದು ಪ್ರಶ್ನೆ– ಚರ್ಚೆ, ಇಲಾಖೆಯನ್ನು ಆಳಿದ ಆಡಳಿತ ವರ್ಗದಲ್ಲಿ ಮೂಡಿದ್ದೇ ಇಲ್ಲ. ಇಲಾಖೆಯನ್ನು ನಿಭಾಯಿಸುವ ಚುನಾಯಿತ ಪ್ರತಿನಿಧಿಗೆ ಭಾಷೆ, ಸಾಹಿತ್ಯ, ಕಲೆ, ಸಂಗೀತ, ನೃತ್ಯ, ನಾಟಕದ ಕುರಿತು ಅಭಿರುಚಿ ಇದ್ದರೆ ಸಾಲದು. ಸೂಕ್ಷ್ಮ ಜ್ಞಾನ, ಬದ್ಧತೆ ಇರಬೇಕು. ಎಂ.ಪಿ. ಪ್ರಕಾಶ್ ಅವರಂಥ ರಾಜಕಾರಣಿ ಹೊರತು, ನಂತರದ ದಿನಗಳಲ್ಲಿ ಇಲಾಖೆ ಒಬ್ಬ ದಕ್ಷ ಸಚಿವರನ್ನು ಕಂಡಿಲ್ಲ ಎನ್ನುವುದು ಕನ್ನಡಿಗರ ಕೊರಗು.

‘ಅದೊಂದು ಕಾಲವಿತ್ತು. ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಜಿ.ಎಸ್. ಶಿವರುದ್ರಪ್ಪ, ಲಂಕೇಶ್, ಮೇರುನಟ ಡಾ. ರಾಜಕುಮಾರ್‌ ಅವರಂಥವರು ಸರ್ಕಾರದ ತೀರ್ಮಾನಗಳಿಗೆ ಭಿನ್ನಮತ ವ್ಯಕ್ತಪಡಿಸಿದರೆ ಸಾಕಿತ್ತು. ಇಡೀ ನಾಡು ತಿರುಗಿ ನೋಡುತ್ತಿತ್ತು. ಸರ್ಕಾರ ಸೂಕ್ಷ್ಮ ಪ್ರಜ್ಞೆಯಿಂದ ಅವರ ಮಾತುಗಳನ್ನು ಆಲಿಸುತ್ತಿತ್ತು. ಈಗಲೂ ಧ್ವನಿ ಎತ್ತುವವರು ಇಲ್ಲವೆಂದಲ್ಲ. ಆದರೆ, ಅಷ್ಟರಲ್ಲೇ, ಧ್ವನಿ ಎಡ – ಬಲ ಪಂಥಗಳೆಂದು ಇಬ್ಭಾಗವಾಗುತ್ತದೆ. ಬೆಂಬಲಿಸುವವರ – ವಿರೋಧಿಸುವವರ ನೈತಿಕತೆ ಬಗ್ಗೆಯೇ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅಷ್ಟರಮಟ್ಟಿಗೆ ಭಾಷೆ ಮತ್ತು ಸಾಂಸ್ಕೃತಿಕ ವಲಯ ವಿಷಮಯವಾಗಿದೆ. ಈ ವಾತಾವರಣ ಕೂಡಾ ಭಾಷೆಯ ಬೆಳವಣಿಗೆಗೆ ಅಡ್ಡಿಯಾಗಿದೆ’ ಎನ್ನುತ್ತಾರೆ ಹಿರಿಯ ಸಾಹಿತಿಯೊಬ್ಬರು.

ಇಲಾಖೆಗೆ 2019–20ನೇ ಸಾಲಿಗೆ ₹225.22 ಕೋಟಿ ತೆಗೆದಿಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉಪಯೋಜನೆಯಡಿ ₹10.16 ಕೋಟಿ ಹಂಚಿಕೆಯಾಗಿದೆ. ಈ ಒಟ್ಟು ಮೊತ್ತದ ವಿನಿಯೋಗಕ್ಕೆ ಸಿದ್ಧಪಡಿಸಿದ ಕ್ರಿಯಾ ಯೋಜನೆಗೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಹೀಗೆ ದಶಕಗಳಿಂದಲೂ ಸರ್ಕಾರಗಳು ಪ್ರತಿ ವರ್ಷ ಅನುದಾನ ನೀಡಿವೆ. ಇಷ್ಟೆಲ್ಲಾ ಹಣ ವಿನಿಯೋಗಿಸಿದ ಬಳಿಕ ಆಗಿರುವ ಸಾಧನೆ ಏನು ಎಂದು ಕೇಳಿದರೆ ಉತ್ತರ ಸಿಗುವುದಿಲ್ಲ. ಹೇಳಿಕೊಳ್ಳುವಂತಹ ಯಾವುದೇ ಸಾಧನೆ ಕಾಣುವುದಿಲ್ಲ.

ಇಲಾಖೆಯಡಿಯಲ್ಲಿ ನಾಲ್ಕು ಪ್ರಾಧಿಕಾರಗಳಿವೆ. ಕನ್ನಡ ಸಂರಕ್ಷಣೆ ಮತ್ತು ಸಂವರ್ಧನೆಯೇ ಧ್ಯೇಯವಾಗಿ ರಚಿತವಾದ ಹದಿಮೂರು ಅಕಾಡೆಮಿ, ಸಾಧಕರ ಹೆಸರಿನಲ್ಲಿ 23 ಟ್ರಸ್ಟ್‌ಗಳು, ಪ್ರತಿಷ್ಠಾನಗಳಿವೆ. ವಿವಿಧ ವಿಷಯಗಳ ಅಧ್ಯಯನ ಪೀಠಗಳಿವೆ. ಹಣದಲ್ಲಿ ಈ ಎಲ್ಲ ಸಂಸ್ಥೆಗಳು ಪಾಲು ಪಡೆಯುತ್ತವೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎನಿಸಿಕೊಂಡ ‘ಕನ್ನಡ ಸಾಹಿತ್ಯ ಪರಿಷತ್ತು’ ಇದೆ. ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಅನುದಾನ ಹಂಚಿಕೆಯಾಗುತ್ತದೆ. 2000ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಧನ ಸಹಾಯಕ್ಕಾಗಿ ಇಲಾಖೆಯ ಅಂಗಳದಲ್ಲಿ ಅಂಗಲಾಚುತ್ತವೆ. 28ಕ್ಕೂ ಹೆಚ್ಚು ‘ಜಯಂತಿ’ಗಳಿಗೆ ಇಲಾಖೆ ಹಣ ಸುರಿಯುತ್ತದೆ. ವಿಪರ್ಯಾಸವೆಂದರೆ, 40 ವರ್ಷಗಳ ಅವಧಿಯಲ್ಲಿ ಈ ಸಂಸ್ಥೆಗಳ ಸಾಧನೆ– ಸಿದ್ಧಿಯ ಮೌಲ್ಯಮಾಪನವೇ ಆಗಿಲ್ಲ. ಆ ನಿಟ್ಟಿನಲ್ಲಿ ಯಾರೊಬ್ಬರೂ ಯೋಚನೆ ಕೂಡಾ ಮಾಡಿಲ್ಲ.

ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಸ್ಮಿತೆ ಯನ್ನು, ಕನ್ನಡ ಪರಂಪರೆಯ ಹಿರಿಮೆಯನ್ನು ಮುನ್ನಡೆಸುವ ಕಾಯಕಕ್ಕೆ ಸಾರ್ವಜನಿಕರ ತೆರಿಗೆ ಹಣ ಎಷ್ಟು ಪರಿಣಾಮಕಾರಿಯಾಗಿ ಬಳಕೆಯಾಗಿದೆ, ಬಳಕೆಯಾಗುತ್ತಿದೆ ಎನ್ನುವುದು ಸದ್ಯದ ಪ್ರಶ್ನೆ. ಕನ್ನಡ ಕಟ್ಟುವ ನಿಟ್ಟಿನಲ್ಲಿ ಆಗಿರುವ ಲಾಭವೇನು, ವಿದ್ವಜನರು, ಅಕ್ಷರ ಜ್ಞಾನವೇ ಇಲ್ಲದ ಜನಪದೀಯ ಕಲಾವಿದರಿಗೆ, ಕನ್ನಡ ಉಳಿಸುವ ಕಾಯಕದ ಕಟ್ಟಾಳುಗಳಿಗೆ ದಕ್ಕಿದ್ದೇನು, ಸಾಧಿಸಿದ್ದು ಮತ್ತು ಸಾಧಿಸಬೇಕಾಗಿರುವುದೇನು ಎನ್ನುವುದನ್ನು ಭೂತ ಗನ್ನಡಿ ಹಿಡಿದು ಹುಡುಕಬೇಕಿದೆ.

ಕೋಟ್ಯಂತರ ಅನುದಾನ ಪಡೆಯುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಲ್ಲಾಳಿಗಳ ಕಪಿಮುಷ್ಠಿ ಯಲ್ಲಿದೆ. ಹೊರಗಿನ ಹೆಗ್ಗಣಗಳ ಜೊತೆಗೆ ಒಳಗಿನ ತಿಮಿಂಗಿಲಗಳೂ ಸೇರಿ ಹಣ ಲೂಟಿ ಮಾಡುತ್ತಲೇ ಬಂದಿವೆ ಎನ್ನುವುದು ಆರೋಪ. ಅದಕ್ಕೆ ಸಾಕ್ಷ್ಯವೆಂಬಂತೆ, 2013ರಲ್ಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಇತ್ತೀಚೆಗೆ ರಚನೆಯಾದ ಭ್ರಷ್ಟಾಚಾರ ನಿಗ್ರಹ ದಳದಲ್ಲಿಯೂ (ಎಸಿಬಿ) ದೂರುಗಳು ದಾಖಲಾಗಿವೆ. ಕಚೇರಿಗೆ ಲೆಕ್ಕ ಪರಿಶೀಲನಾಧಿಕಾರಿಗಳು ನುಗ್ಗಿದ್ದಾರೆ. ಏನೇ ಆದರೂ, ಬದಲಾವಣೆ ಆಗಿಲ್ಲ. ಪೋಲಾಗುವ ಹಣದ ಲೆಕ್ಕವೂ ಸಿಕ್ಕಿಲ್ಲ.

ಅತಿ ಹೆಚ್ಚು ಅನುದಾನ ಅನರ್ಹರಿಗೆ ದಕ್ಕುತ್ತಿರುವುದು ಹಾಗೂ ಸೋರಿಕೆ ಯಾಗುತ್ತಿರುವುದು ಇಲಾಖೆಯ ಕ್ರಿಯಾ ಯೋಜನೆಯಲ್ಲಿ ಎನ್ನುವುದು ವಾಸ್ತವ. ವಾರ್ಷಿಕ ಧನಸಹಾಯ, ಪ್ರಾಯೋಜಕತ್ವ, ಪ್ರದರ್ಶನ, ರಂಗ ಚಟುವಟಿಕೆ, ವಾದ್ಯ ಪರಿಕರಗಳ ಖರೀದಿಗಾಗಿ ಪ್ರತಿವರ್ಷ ಸಾವಿರಾರು ಸಂಘ ಸಂಸ್ಥೆಗಳು ಹಣಕ್ಕಾಗಿ ಇಲಾಖೆಯ ಬಳಿ ಬೇಡುತ್ತವೆ. ಭಾಷೆ ಮತ್ತು ಕಲೆಯ ಗಂಧ ಗಾಳಿ ಗೊತ್ತಿಲ್ಲದ ಸಂಸ್ಥೆಗಳೂ ಅದರಲ್ಲಿ ಸೇರಿವೆ. ಯಾವುದೇ ಸಂಸ್ಥೆಗೆ ಅನುದಾನ ಬಿಡುಗಡೆ ಮಾಡಬೇಕೆಂದರೆ ಆ ಸಂಸ್ಥೆ ಹಿಂದಿನ ವರ್ಷ ಮಾಡಿದ ಕಾರ್ಯಕ್ರಮಗಳ ಆಧಾರದ ಮೇಲೆ ಎಷ್ಟು ಅನುದಾನ ಕೊಡಬೇಕು ಎನ್ನುವುದನ್ನು ಇಲಾಖೆ ಅಧಿಕಾರಿಗಳು ನಿರ್ಧರಿಸುತ್ತಾರೆ. ₹ 25 ಸಾವಿರದಿಂದ ₹ 25 ಲಕ್ಷದವರೆಗೂ ಅನುದಾನ ಬಿಡುಗಡೆಯಾದ ಉದಾಹರಣೆಯಿದೆ.

‘ಹಣ ನುಂಗುವುದನ್ನೇ ಕೆಲ ದಲ್ಲಾಳಿಗಳು ಕಾಯಕ ಮಾಡಿಕೊಂಡಿ ದ್ದಾರೆ. ಯಾವುದೇ ಕಾರ್ಯಕ್ರಮ ಮಾಡದಿದ್ದರೂ ಭಾಷೆ, ಸಂಸ್ಕೃತಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಹಣ ಲಪಟಾಯಿಸುತ್ತಿದ್ದಾರೆ. ಪರಿಶಿಷ್ಟ ಸಮುದಾಯಗಳಿಗಾಗಿ ಮೀಸಲಿಟ್ಟ ಹಣವನ್ನೂ ನಕಲಿ ಜಾತಿ ಪತ್ರ ನೀಡಿ ದುರ್ಬಳಕೆ ಮಾಡಿರುವ ನಿದರ್ಶನಗಳು ಸಾಕಷ್ಟಿವೆ. ಪ್ರತಿ ಸಂಸ್ಥೆ ವಿವರಗಳನ್ನು ಪರಿಶೀಲಿಸಿ ಕಾರ್ಯಕ್ರಮ ನಡೆದ ವರದಿ ತರಿಸಿಕೊಂಡರೆ ಅರ್ಧಕ್ಕೂ ಹೆಚ್ಚು ಸಂಸ್ಥೆಗಳು ಬೆತ್ತಲಾಗುವುದು ಖಚಿತ. ಆದರೆ, ಇಲಾಖೆಯೇ ಮೇಯು ವಂತಾದರೆ...’ ಎನ್ನುತ್ತಾ ಹಿರಿಯ ಅಧಿಕಾರಿಯೊಬ್ಬರು ಮಾತು ನಿಲ್ಲಿಸಿದರು.

‘ಭಾಷೆ ಅಥವಾ ಸಂಸ್ಕೃತಿಯ ಏಳಿಗೆಗೆ ಉದಾರವಾಗಿ ಅನುದಾನ ನೀಡುವುದಷ್ಟೇ ಸರ್ಕಾರದ ಹೆಗ್ಗಳಿಕೆ ಅಲ್ಲ. ಹೀಗೆ ನೀಡಿದ ಹಣ, ಎಷ್ಟರಮಟ್ಟಿಗೆ ಮತ್ತು ಹೇಗೆ ವೆಚ್ಚವಾಗಿದೆ ಎಂದು ಪರಿಶೀಲಿಸುವ ನೈತಿಕ ಜವಾಬ್ದಾರಿಯೂ ಸರ್ಕಾರಕ್ಕಿದೆ. ಆ ಕೆಲಸವನ್ನು ಯಾವ ಸರ್ಕಾರವೂ ಸರಿಯಾಗಿ ಮಾಡಿಲ್ಲ’ ಎಂದೂ ಅವರು ಹೇಳಿದರು.

ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿ ಯ ದೂರಗಾಮಿ ನೆಲೆಯಲ್ಲಿ ಇಲಾಖೆ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನವಾಗಲು ಕಠಿಣ ನಿರ್ಧಾರ ಮತ್ತು ಸಮರ್ಥ ನೀತಿ ಜಾರಿಯಾಗಬೇಕು. ಅದನ್ನು ಕಾರ್ಯಗತಗೊಳಿಸುವ ಬದ್ಧತೆ ಸರ್ಕಾರ ಪ್ರದರ್ಶಿಸಬೇಕು.

ಉಮಾಶ್ರೀ
ಉಮಾಶ್ರೀ

ಸರ್ಕಾರ ನೀಡುವ ಹಣ ವಿತರಣೆ ಮತ್ತು ವಿನಿಯೋಗ ಹಂತದಲ್ಲಿ ದುರುಪಯೋಗವಾಗುತ್ತಿರುವುದು ಸತ್ಯ. ನನ್ನ ಅವಧಿಯಲ್ಲಿ ಸಮಸ್ಯೆಗಳನ್ನು ನಿಗ್ರಹಿಸುವ ಕಾರ್ಯ ಮಾಡಲಾಗಿತ್ತು. ಪಟ್ಟಭದ್ರರನ್ನು ಮಟ್ಟಹಾಕಲು ಹೋದ ಕಾರಣಕ್ಕೇ ನನ್ನ ವಿರುದ್ಧ ದೂರು, ಪ್ರತಿಭಟನೆ, ಅಣಕು ಶವಯಾತ್ರೆಗಳು ನಡೆದವು. ಸರ್ಕಾರದ ಹಣವನ್ನು ಸೂಕ್ತ ಕಾರ್ಯಕ್ರಮಕ್ಕೆ, ಸೂಕ್ತ ಸಂಸ್ಥೆಗೆ ಸೂಕ್ತ ರೀತಿ ಹಂಚುವುದು ಇಲಾಖೆ ಮತ್ತು ಅಧಿಕಾರಿಗಳ ಕೆಲಸ. ಈ ಕಾರ್ಯದ ಮೇಲ್ವಿಚಾರಣೆ ಮಾಡಬೇಕಾದ್ದು ಮಂತ್ರಿಯಾದವರ ಕೆಲಸ.

ಉಮಾಶ್ರೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT