ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಬಸವಳಿದ ಪಿಪಿಪಿ ಯೋಜನೆಗಳು!

ಸರ್ಕಾರದ ಅನುದಾನವಿಲ್ಲ: ಖಾಸಗಿಯವರೇ ಹಣ ಹೂಡಿದರೂ ‘ಪಾಲು’ ತಪ್ಪಲ್ಲ
Last Updated 11 ಡಿಸೆಂಬರ್ 2021, 20:41 IST
ಅಕ್ಷರ ಗಾತ್ರ

ಬೆಂಗಳೂರು: ನಗರಾಭಿವೃದ್ಧಿ, ರಸ್ತೆ ನಿರ್ಮಾಣ, ಕೈಗಾರಿಕಾ ಬಡಾವಣೆಗಳ ಅಭಿವೃದ್ಧಿಯಂತಹ ಬೃಹತ್‌ ಯೋಜನೆಗಳಲ್ಲಿ ಬೊಕ್ಕಸದ ಮೇಲಿನ ಹೊರೆಯನ್ನು ತಗ್ಗಿಸುವುದಕ್ಕಾಗಿ ಸರ್ಕಾರಿ– ಖಾಸಗಿ ಸಹಭಾಗಿತ್ವದ (ಪಿಪಿಪಿ) ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಈ ಕಾಮಗಾರಿಗಳಿಗೆ ಸರ್ಕಾರ ಯಾವುದೇ ಅನುದಾನವನ್ನೂ ನೀಡುತ್ತಿಲ್ಲ. ಆದರೂ, ಲಂಚಕ್ಕಾಗಿ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪಿಪಿಪಿ ಯೋಜನೆಗಳ ಅನುಷ್ಠಾನಕ್ಕೆ ಅಡಿಗಡಿಗೂ ಅಡ್ಡಿಪಡಿಸುತ್ತಿದ್ದಾರೆ.

ಪಿಪಿಪಿ ಯೋಜನೆಗಳಲ್ಲಿ ಗುತ್ತಿಗೆದಾರರೇ ಪೂರ್ಣ ಮೊತ್ತವನ್ನು ಹೂಡಿಕೆ ಮಾಡಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ಉಳಿತಾಯ, ಟೋಲ್‌ ಸಂಗ್ರಹ ಸೇರಿದಂತೆ ವಿವಿಧ ಮಾನದಂಡಗಳ ಆಧಾರದಲ್ಲಿ ಗುತ್ತಿಗೆದಾರರಿಗೆ ಹಣ ಸಂದಾಯವಾಗುತ್ತದೆ. ಹೂಡಿಕೆ ಮಾಡಿದ ಮೊತ್ತ ಹಿಂದಿರುಗಲು ವರ್ಷಗಳವರೆಗೆ ಕಾಯಬೇಕಿದೆ. ಕಾಮಗಾರಿ ಆರಂಭಕ್ಕೂ ಮೊದಲೇ ಕೋಟಿಗಟ್ಟಲೆ ‘ಕಾಣಿಕೆ’ಯನ್ನು ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಸಂದಾಯ ಮಾಡಬೇಕಾದ ಸ್ಥಿತಿ ಇದೆ ಎಂಬುದು ಗುತ್ತಿಗೆದಾರರ ದೂರು.

ಬೆಂಗಳೂರು, ಹುಬ್ಬಳ್ಳಿ– ಧಾರವಾಡ, ಬೆಳಗಾವಿ, ಮಂಗಳೂರು, ದಾವಣಗೆರೆ, ಶಿವಮೊಗ್ಗ ಮತ್ತು ತುಮಕೂರು ನಗರಗಳಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನದಲ್ಲಿದೆ. ಒಟ್ಟು ₹ 39,993 ಕೋಟಿ ವೆಚ್ಚದಲ್ಲಿ 2,127 ಕಾಮಗಾರಿಗಳನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ಇವುಗಳಲ್ಲಿ ಅರ್ಧದಷ್ಟು ಕಾಮಗಾರಿಗಳು ಪಿಪಿಪಿ ಮಾದರಿಯಲ್ಲೇ ಇವೆ.

‘ಪಿಪಿಪಿ ಮಾದರಿಯ ಯೋಜನೆಗಳಲ್ಲಿ ಅನುದಾನ ಬಿಡುಗಡೆ, ಬಿಲ್ ಪಾವತಿಯ ಪ್ರಮೇಯ ಉದ್ಭವಿಸುವುದಿಲ್ಲ. ಹೀಗಾಗಿ ಟೆಂಡರ್‌ ಪ್ರಕ್ರಿಯೆ, ಒಪ್ಪಂದ ಮತ್ತು ಕಾಮಗಾರಿ ಆರಂಭಿಸುವ ಮುನ್ನವೇ ತಮ್ಮ ‘ಪಾಲು’ ಸಂದಾಯ ಆಗಲೇಬೇಕು ಎಂಬುದು ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬೇಡಿಕೆ. ಇದಕ್ಕಾಗಿ ಎಲ್ಲ ಹಂತದಲ್ಲೂ ಗುತ್ತಿಗೆದಾರರಿಗೆ ಕಿರುಕುಳ ನೀಡಲಾಗುತ್ತಿದೆ. ಸ್ಮಾರ್ಟ್‌ ಸಿಟಿಯಲ್ಲಿನ ಪಿಪಿಪಿ ಕಾಮಗಾರಿಗಳ ವಿಳಂಬಕ್ಕೆ ಇದೇ ಕಾರಣ’ ಎನ್ನುತ್ತಾರೆ ವಿವಿಧ ಸ್ಮಾರ್ಟ್‌ ಸಿಟಿಗಳಲ್ಲಿ ಕಾಮಗಾರಿಗಳ ಗುತ್ತಿಗೆ ಪಡೆದಿರುವ ಸಂಸ್ಥೆಯೊಂದರ ಪಾಲುದಾರರೊಬ್ಬರು.

ಟೆಂಡರ್‌ ಹಂತದಲ್ಲೇ ಅಡ್ಡಗಾಲು: ಪಿಪಿಪಿ ಕಾಮಗಾರಿಗಳಲ್ಲಿ ಲಂಚಕ್ಕಾಗಿ ಟೆಂಡರ್ ಹಂತದಲ್ಲೇ ಅತಿಯಾದ ಒತ್ತಡ ಹೇರಲಾಗುತ್ತಿದೆ ಎಂಬ ದೂರುಗಳಿವೆ. ಲಂಚದ ಮೊತ್ತ ತಲುಪಿಸದವರು ಅಥವಾ ಹಣ ಕೊಡಲು ನಿರಾಕರಿಸಿದವರು ಯಶಸ್ವಿ ಬಿಡ್‌ದಾರರಾದರೆ ಯಾವುದೇ ಕಾರಣ ನೀಡದೆ ಟೆಂಡರ್‌ ‍ಪ್ರಕ್ರಿಯೆಯನ್ನೇ ರದ್ದುಗೊಳಿಸಲಾಗುತ್ತದೆ. ಮರು ಟೆಂಡರ್‌ ಆಹ್ವಾನಿಸಿ ತಮ್ಮ ಬೇಡಿಕೆ ಪೂರೈಸಲು ಒಪ್ಪಿದವರಿಗೆ ಗುತ್ತಿಗೆ ನೀಡುವ ವ್ಯವಸ್ಥೆ ಇದೆ ಎಂಬ ಆರೋಪವಿದೆ.

ಏಳು ಸ್ಮಾರ್ಟ್‌ ಸಿಟಿಗಳಲ್ಲಿ 1,578 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪ್ರಕ್ರಿಯೆ ಆರಂಭಿಸಲಾಗಿತ್ತು. ಯೋಜನೆಯ ಅವಧಿ ಪೂರ್ಣಗೊಳ್ಳುತ್ತಾ ಬಂದರೂ 505 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. 799 ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. 823 ಕಾಮಗಾರಿಗಳ ಗುತ್ತಿಗೆಗೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಈ ಅಂಕಿಅಂಶಗಳು ಪಿಪಿಪಿ ಮಾದರಿಯ ಯೋಜನೆಗಳೂ ಸೇರಿದಂತೆ ಸ್ಮಾರ್ಟ್‌ ಸಿಟಿಗಳಲ್ಲಿ ನಡೆಯುತ್ತಿರುವ ‘ಲಂಚಾವತಾರ’ದ ಆರೋಪಕ್ಕೆ ಪುಷ್ಟಿ ನೀಡುವಂತಿವೆ.

ಲೋಕೋಪಯೋಗಿ ಇಲಾಖೆಯಲ್ಲಿ ಟೋಲ್‌ ರಸ್ತೆಗಳ ನಿರ್ಮಾಣದಲ್ಲೂ ಪಿಪಿಪಿ ಮಾದರಿ ಅನುಸರಿಸಲಾಗುತ್ತಿದೆ. ರಾಜ್ಯದ ಕೆಲವು ಕೈಗಾರಿಕಾ ಬಡಾವಣೆಗಳ ಅಭಿವೃದ್ಧಿಗೂ ಇದೇ ಮಾದರಿಯ ಮೊರೆ ಹೋಗಲಾಗುತ್ತಿದೆ. ಈ ಎಲ್ಲ ಕಡೆಗಳಲ್ಲೂ ಮುಂಗಡ ಲಂಚದ ಬೇಡಿಕೆ ದಟ್ಟವಾಗಿದೆ. ಈ ಕಾರಣಕ್ಕಾಗಿಯೇ ಪಿಪಿಪಿ ಮಾದರಿಯ ಬಹುತೇಕ ಯೋಜನೆಗಳು ತೆವಳುತ್ತಾ, ಕುಂಟುತ್ತಾ ಸಾಗುತ್ತಿವೆ ಎನ್ನುವುದು ಈ ಪ್ರಕ್ರಿಯೆಯ ಒಳ–ಹೊರಗನ್ನು ಬಲ್ಲ ಗುತ್ತಿಗೆದಾರರ ಮಾತು.

ಮುಂಗಡ ಬಿಡುಗಡೆಯಲ್ಲೂ ದಂಧೆ

ಬೃಹತ್‌ ಹೆದ್ದಾರಿಗಳ ನಿರ್ಮಾಣ ಸೇರಿದಂತೆ ಪಿಪಿಪಿ ಮಾದರಿಯ ಕೆಲವು ಕಾಮಗಾರಿಗಳಿಗೆ ಸರ್ಕಾರವೇ ಖಾತರಿ ನೀಡಿ ಮುಂಗಡ ಹಣದ ವ್ಯವಸ್ಥೆ ಮಾಡುತ್ತಿದೆ. ಕೆಲವು ಕಂಪನಿಗಳಿಗೆ ಹೀಗೆ ಸಾವಿರಾರು ಕೋಟಿ ರೂಪಾಯಿ ಮುಂಗಡ ನೀಡಲಾಗಿದೆ. ಅದಕ್ಕೆಲ್ಲವೂ ರಾಜ್ಯ ಸರ್ಕಾರದ್ದೇ ಖಾತರಿ. ಈ ಪ್ರಕ್ರಿಯೆಯಲ್ಲೂ ಭಾರಿ ಪ್ರಮಾಣದ ಲಂಚ ಕೈ ಬದಲಾಗುತ್ತಿರುವ ಆರೋಪವಿದೆ.

‘ಅಧಿಕಾರಿಗಳು ಮತ್ತು ರಾಜಕಾರಣಿಗಳೇ ಖುದ್ದು ಆಸ್ಥೆ ವಹಿಸಿ ಮುಂಗಡ ಕೊಡಿಸುತ್ತಿದ್ದಾರೆ. ‘ಪಾಲು’ ಪಡೆದುಕೊಂಡೇ ಇದೆಲ್ಲವನ್ನೂ ಮಾಡುತ್ತಿದ್ದಾರೆ’ ಎನ್ನುತ್ತಾರೆ ಈ ಪ್ರಕ್ರಿಯೆಯ ಕುರಿತು ಮಾಹಿತಿ ಹೊಂದಿರುವ ಅಧಿಕಾರಿಯೊಬ್ಬರು.

‘ಮೋದಿ ಮೌನಕ್ಕೆ ಕಾರಣವೇನು?’

ಟೆಂಡರ್‌ ಪ್ರಕ್ರಿಯೆಯಲ್ಲಿ ಮಂತ್ರಿಗಳು, ಅಧಿಕಾರಿಗಳಿಗೆ ಶೇಕಡ 40ರಷ್ಟು ಲಂಚ ಕೊಡಬೇಕು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ದೂರು ನೀಡಿದ್ದಾರೆ. ಈ ವಿಚಾರದಲ್ಲಿ ಮೋದಿಯವರ ಮೌನಕ್ಕೆ ಕಾರಣವೇನು? ಕುರಿ ಕಾಯಲು ತೋಳ ಎಂಬಂತೆ ಆಗಬಾರದು. ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು.

- ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

‘ಎಲ್ಲರೂ ಗಾಜಿನ ಮನೆಯಲ್ಲಿದ್ದೇವೆ’

ಟೆಂಡರ್‌ನಲ್ಲಿ ಲಂಚದ ಆರೋಪದ ವಿಚಾರದಲ್ಲಿ ಎಲ್ಲರೂ ಗಾಜಿನ ಮನೆಯಲ್ಲೇ ಇದ್ದೇವೆ. ಕಾಂಗ್ರೆಸ್‌, ಜೆಡಿಎಸ್‌ ಸರ್ಕಾರ ಇದ್ದಾಗಲೂ ಇದು ನಡೆದಿದೆ. ಕಮಿಷನ್‌ ಪ್ರಮಾಣದಲ್ಲಿ ಈಗ ಹೆಚ್ಚಳ ಆಗಿರಬಹುದು. ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಕೆಲವರು ಇಂತಹದ್ದನ್ನು ಮಾಡುತ್ತಿದ್ದರು. ಅನಿವಾರ್ಯ ಕಾರಣಕ್ಕೆ ಸುಮ್ಮನೆ ಇರಬೇಕಾಯಿತು. ರಾಜಕಾರಣಿಗಳು ತಿನ್ನದಿದ್ದರೂ ಅವರ ಹೆಸರಿನಲ್ಲಿ ಅಧಿಕಾರಿಗಳು ತಿನ್ನುತ್ತಾರೆ. ಜನರು ಬದಲಾದರೆ ಮಾತ್ರ ಇದಕ್ಕೆ ಕಡಿವಾಣ ಸಾಧ್ಯ.

- ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

‘ಪ್ರಧಾನಿ ಬಳಿಯೇ ಸಾಕ್ಷ್ಯವಿದೆ’

ರಾಜ್ಯ ಸರ್ಕಾರದ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇಕಡ 40ರಷ್ಟು ಲಂಚದ ಹಾವಳಿ ಇದೆ ಎಂದು ಗುತ್ತಿಗೆದಾರರ ಸಂಘದವರೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಿದ್ದಾರೆ. ಇದಕ್ಕಿಂತ ಇನ್ನೇನು ಸಾಕ್ಷ್ಯ ಬೇಕು. ಪ್ರಧಾನಿಯವರು ಹಿಂದೆ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಧಾರಗಳಿಲ್ಲದೇ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈಗ ಎಲ್ಲವೂ ಅವರ ಮುಂದೆಯೇ ಇದೆ.

ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT