ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ ಪ್ರತಿಕ್ರಿಯೆಗಳು: ಅರ್ಹರಿಗೆ ಬೆಳೆ ವಿಮೆ ಸೌಲಭ್ಯ ತಲುಪಲಿ

Last Updated 10 ಜುಲೈ 2022, 11:38 IST
ಅಕ್ಷರ ಗಾತ್ರ

ಅಕ್ರಮಕ್ಕೆ ಕಡಿವಾಣ ಯಾವಾಗ?

ಫಸಲ್ ಬಿಮಾ ಯೋಜನೆ ನಿರ್ವಹಣೆಯಲ್ಲಿ ಸಾಕಷ್ಟು ಅಡ್ಡಿ, ಆತಂಕಗಳು ಎದುರಾಗಿವೆ. ತಾಂತ್ರಿಕ ತೊಂದರೆಯಿಂದ ರೈತರಿಗೆ ಸರಿಯಾದ ರೀತಿಯಲ್ಲಿ ವಿಮೆ ಪರಿಹಾರವೂ ಲಭಿಸುತ್ತಿಲ್ಲ. ಫಸಲ್ ಬಿಮಾ ಯೋಜನೆಯ ನಿರ್ವಹಣೆ, ಅಕ್ರಮ ತಡೆಯುವುದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಒಂದು ವಿಶೇಷ ತಂಡ ರಚಿಸಬೇಕು. ವಿಶೇಷ ಯೋಜನೆ ರೂಪಿಸಬೇಕು. ಹಾಗಾದರೆ ಮಾತ್ರ ಯೋಜನೆ ಸಾಕಾರಗೊಳ್ಳಲಿದೆ. ಸರ್ಕಾರ ನೇಮಿಸಿರುವ ಕಂಪನಿ ಪಾರದರ್ಶಕವಾಗಿದ್ದರೂ ಅಕ್ರಮ ಎಸಗುವವರ ಸಂಖ್ಯೆ ಕಡಿಮೆಯಾಗಿಲ್ಲ. ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ರೈತರಿಗೆ ವರದಾನ ಆಗಿರುವ ಕೆಲವೇ ಯೋಜನೆಗಳಲ್ಲಿ ಫಸಲು ಬಿಮಾ ಯೋಜನೆ ಸಹ ಒಂದು. ಆದರೆ, ಸೌಲಭ್ಯಗಳು ರೈತರಿಗೆ ಸಿಗಬೇಕಾದರೆ ಪಾರದರ್ಶಕತೆ ಅಗತ್ಯ.
– ಶಿವನಗೌಡ ಪೊಲೀಸ್ ಪಾಟೀಲ್, ನವಲಹಳ್ಳಿ, ಕೊಪ್ಪಳ ಜಿಲ್ಲೆ

ವಂಚನೆ ಪ್ರಕರಣ ಹೆಚ್ಚಳ

ಫಸಲ್ ಬಿಮಾ ಯೋಜನೆ ಅಡಿಯಲ್ಲಿ ರಾಜ್ಯದ ಉದ್ದಗಲಕ್ಕೂ ರೈತರಿಗೆ ವಂಚನೆ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ‘ಸರ್ಕಾರ ಮಾತ್ರ ವಂಚನೆ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ’ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದೆ. ಅಧಿಕಾರಿಗಳು ಸಹ‌ ಇದರಲ್ಲಿ ಪರೋಕ್ಷವಾಗಿ ಭಾಗಿಯಾಗಿರುವುದು ಗಮನಕ್ಕೆ ಬಂದರೂ ಕ್ರಮ ಕೈಗೊಳ್ಳಲು ಸಚಿವರು ಮನಸ್ಸು ಮಾಡುತ್ತಿಲ್ಲ.
ಮಧ್ಯವರ್ತಿಗಳ ಹಾವಳಿಗೆ ‘ಬ್ರೇಕ್’ ಬಿದ್ದಿಲ್ಲ. ಸುಳ್ಳು ದಾಖಲೆಗಳ ಸೃಷ್ಟಿಗೆ ಕಡಿವಾಣ ಹಾಕಿಲ್ಲ. ಮಧ್ಯವರ್ತಿಗಳು ಹಾಗೂ ಅಧಿಕಾರಿಗಳ ಮಧ್ಯೆ ರೈತರು ನಷ್ಟ ಅನುಭವಿಸುವುದು ಮಾತ್ರ ನಿಂತಿಲ್ಲ. ಕೂಡಲೇ ಸರ್ಕಾರ ಬೆಳೆ ವಿಮೆಗೆ‌ ಪ್ರತ್ಯೇಕವಾದ ಸಮಿತಿ ರಚಿಸಬೇಕು. ಎಲ್ಲ ರೀತಿಯ ಮಾಹಿತಿ ಮತ್ತು ದಾಖಲೆಗಳನ್ನು ನೇರವಾಗಿ ರೈತರಿಂದ ಪಡೆದು ರೈತರಿಗೆ ವಿಮಾ ಸೌಲಭ್ಯವನ್ನು ಪಾರದರ್ಶಕವಾಗಿ ತಲುಪಲು ಸರ್ಕಾರ ನೆರವಾಗಬೇಕು.
– ಜೆ.ಚಂದ್ರಶೇಖರ, ದಾವಣಗೆರೆ ಜಿಲ್ಲೆ

‘ಸರ್ಕಾರ ಇನ್ನಾದರೂ ಕಣ್ಣು ತೆರೆಯಲಿ’
ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯಲ್ಲಿ 2017-2018ರ ಶೇಂಗಾ ಬೆಳೆ ವಿಮಾ ಹಣವು ಇನ್ನೂ ರೈತರ ಕೈಸೇರಿಲ್ಲ. ಅನೇಕ ಬಾರಿ ಮಂತ್ರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಸ್ಥಳೀಯ ಶಾಸಕರಿಗೂ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಸರ್ಕಾರವು ಇನ್ನಾದರೂ ಕಣ್ಣು ತೆರೆಯಲಿ.
– ಎಂ.ಪರಮೇಶ್ವರ, ಮದ್ದಿಹಳ್ಳಿ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ

ಮಳೆಯಾಶ್ರಿತ ಬೆಳೆಗೆ ಸಿಗದ ವಿಮೆ
ಢವಳಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಜೂನ್‌ನಲ್ಲಿ ತೊಗರಿಗೆ (ನೀರಾವರಿ) ಸಂಬಂಧಿಸಿದಂತೆ ಬೆಳೆ ವಿಮೆಯು 1 ಎಕರೆಗೆ ₹ 7 ಸಾವಿರದಂತೆ ರೈತರ ಖಾತೆಗೆ ಜಮೆಯಾಗಿದೆ. ಆದರೆ, ತೂಗರಿ (ಮಳೆಯಾಶ್ರಿತ) ಬೆಳೆಗೆ ನಯಾಪೈಸೆಯೂ ಬಂದಿಲ್ಲ. ವಿಮಾ ಕಂಪನಿಗೆ ಕರೆ ಮಾಡಿ ಕೇಳಿದರೆ ‘ನಿಮ್ಮ ಪಂಚಾಯಿತಿಯಲ್ಲಿ ಇಳುವರಿ ಉತ್ತಮವಾಗಿದೆ ಬಂದಿದೆ’ ಎಂದು ಹೇಳುತ್ತಾರೆ. ಯಾವ ರೀತಿ ಬೆಳೆ ಸಮೀಕ್ಷೆ ಮಾಡುತ್ತಾರೋ ಗೊತ್ತಿಲ್ಲ.
– ಬಸವರಾಜ ಪೂಜಾರಿ, ಮುದ್ದೆಬೀಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT