ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ‘ಪರಿಸರ ಮಾಲಿನ್ಯ ಸ್ಥಾವರ’!

ಆರ್‌ಟಿಪಿಎಸ್‌ನಿಂದ ಸಂಕಷ್ಟ l ಕೃಷಿ ಕಷ್ಟ, ಬದುಕು ದುಸ್ತರ l ವಿಷವಾಗುತ್ತಿದೆ ಪ್ರಾಣವಾಯು
Last Updated 17 ಏಪ್ರಿಲ್ 2021, 20:20 IST
ಅಕ್ಷರ ಗಾತ್ರ

ರಾಯಚೂರು: ನಾಲ್ಕು ದಶಕಗಳನ್ನು ಪೂರೈಸಿರುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್‌ಟಿಪಿಎಸ್‌) ಸುತ್ತಲಿನ ಜನರಿಗೆ ಮಾರಕವಾಗಿ ಪರಿಣಮಿಸಿದೆ. ಆರೋಗ್ಯದ ಮೇಲಷ್ಟೇ ಅಲ್ಲ, ಭೂಮಿ ಮತ್ತು ಬೆಳೆಯ ಮೇಲೂದುಷ್ಪರಿಣಾಮ ಬೀರುತ್ತಿದೆ.

ಆರ್‌ಟಿಪಿಎಸ್ ಹಾಗೂ ಯರಮರಸ್‌ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ (ವೈಟಿಪಿಎಸ್) ಸುತ್ತಲಿನ ದೇವಸುಗೂರು, ಕಾಡ್ಲೂರು, ಗಂಜಳ್ಳಿ, ವಡ್ಲೂರು, ಯದ್ಲಾಪುರ, ಯರಮರಸ್‌, ಚಿಕ್ಕಸುಗೂರು ಗ್ರಾಮಗಳ ಜನರು ಹಾರುಬೂದಿಯ ಸೂಕ್ಷ್ಮಕಣ ಮಿಶ್ರಿತ ಗಾಳಿ ಸೇವಿಸುತ್ತಿದ್ದುಅವರಲ್ಲಿ ಅಸ್ತಮಾ ತೀರಾ ಸಾಮಾನ್ಯವಾಗಿದೆ. ಶುದ್ಧಗಾಳಿ ಇಲ್ಲದೆ ಇತರೆ ಕಾಯಿಲೆಗಳಿಂದ ಬಳಲುವವರ ಸಂಖ್ಯೆಯೂ ಹೆಚ್ಚಿದೆ.

ಹಾರುಬೂದಿ ಬೆಳೆಯ ಮೇಲೆ ಬೀಳುವುದರಿಂದ ಹತ್ತಿ ಕಪ್ಪುವರ್ಣಕ್ಕೆ ತಿರುಗುತ್ತದೆ ಎನ್ನುವ ಕಾರಣಕ್ಕೆ ಬಹುಪಾಲು ರೈತರು ಹತ್ತಿ ಬೆಳೆಯುವುದನ್ನೇ ಬಿಟ್ಟಿದ್ದಾರೆ.

ಆರ್‌ಟಿಪಿಎಸ್‌ ಮತ್ತು ವೈಟಿಪಿಎಸ್‌ ವಿದ್ಯುತ್‌ ಸ್ಥಾವರಗಳಲ್ಲಿ ಕಲ್ಲಿದ್ದಲು ಉರಿಸಿದಾಗ ಹೊರಬರುವ ಹಾರುಬೂದಿ ಹಾಗೂ ಹೊಗೆಯಿಂದಾಗಿ ವಾಯು ಮತ್ತು ಜಲ ಮಾಲಿನ್ಯ ಆಗುತ್ತಿದೆ. 2018ರಲ್ಲಿ ಹಸಿಬೂದಿ ಹರಿದುಹೋಗಿ ನೇರವಾಗಿ ಕೃಷ್ಣಾ ನದಿ ಸೇರಿತ್ತು.

2005ರವರೆಗೂ ಗುಡ್ಡೆ ಹಾಕಿರುವ ಹಾರುಬೂದಿ ಹಾಗೂ ಹಸಿಬೂದಿ ವಿಲೇವಾರಿಯಾಗಿಲ್ಲ.ಶಕ್ತಿನಗರದ ಬಳಿ ಕೃಷ್ಣಾ ನದಿಗೆ ಹೊಂದಿಕೊಂಡು ನಿರ್ಮಾಣ ಮಾಡಿರುವ 192 ಹೆಕ್ಟೇರ್ ಮತ್ತು 215 ಹೆಕ್ಟೇರ್ ವ್ಯಾಪ್ತಿಯ ಎರಡು ಬೃಹತ್‌ ಹೊಂಡಗಳಲ್ಲಿ ಒಟ್ಟು 4.09 ಕೋಟಿ ಟನ್‌ (2020 ಡಿಸೆಂಬರ್‌ವರೆಗೆ) ಬೂದಿ ಸಂಗ್ರಹವಿದೆ.

ವಿಲೇವಾರಿ ಸಮರ್ಪಕವಾಗಿಲ್ಲ: ಹಾರುಬೂದಿ, ಹಸಿಬೂದಿ ವಿಲೇವಾರಿ ಮತ್ತು ಸಾಗಣೆಯು ಸಮರ್ಪಕವಾಗಿಲ್ಲ. ‘ತೆರೆದ ವಾಹನಗಳಲ್ಲಿ ಬೂದಿ ಸಾಗಿಸುವುದರಿಂದ ವಾಯು ಮಾಲಿನ್ಯ ಉಂಟಾಗುತ್ತಿದ್ದು ಕೂಡಲೇ ಕಂಪನಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಶಕ್ತಿನಗರ ಉಳಿಸಿ ಹೋರಾಟ ಸಮಿತಿ ಮೂಲಕ ಜನರು ರಾಯಚೂರು ಜಿಲ್ಲಾಡಳಿತಕ್ಕೆ ಮೇಲಿಂದ ಮೇಲೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ.

ಬೂದಿಹೊಂಡದ ಸಮೀಪವಿರುವ ಹಗರಿ–ಜಡಚರ್ಲಾ (ಸಂಖ್ಯೆ 167) ರಾಷ್ಟ್ರೀಯ ಹೆದ್ದಾರಿಯಲ್ಲಿ ಬೂದಿ ಹರಡಿದ್ದರಿಂದ ಅದು ಕಚ್ಚಾರಸ್ತೆಯಾಗಿ ಬದಲಾಗಿದೆ.

‘ಪ್ರತಿದಿನ ಸುಮಾರು ಎರಡು ಸಾವಿರ ಟನ್‌ಗೂ ಹೆಚ್ಚು ಹೊಂಡದ ಬೂದಿ ವಿಲೇವಾರಿ ಆಗುತ್ತಿದೆ. ಪ್ರತಿದಿನ ಸರಾಸರಿ ಎಂಟು ಸಾವಿರ ಟನ್‌ ವಿಲೇವಾರಿ ಆರಂಭಿಸಿದರೆ, ಅದು ಖಾಲಿಯಾಗುವುದಕ್ಕೆ ಆರು ವರ್ಷ ಬೇಕಾಗುತ್ತದೆ’ ಎನ್ನುತ್ತಾರೆ ಆರ್‌ಟಿಪಿಎಸ್‌ ಎಂಜಿನಿಯರುಗಳು.

ಮಾಲಿನ್ಯದ ಮೇಲೆ ನಿಗಾ ವಹಿಸಲು ರಾಯಚೂರಿನಲ್ಲಿ ಆನ್‌ಲೈನ್‌ ಎಮಿಷನ್‌ ಮಾನಿಟರಿಂಗ್‌ ಸಿಸ್ಟ್ಂ (ವಾಯುಗುಣ ಪರೀಕ್ಷಣಾ ವ್ಯವಸ್ಥೆ) ಅಳವಡಿಸಲಾಗಿದೆ. ಮಾಲಿನ್ಯ ಪ್ರಮಾಣ ಹೆಚ್ಚಾದರೆ ಕೂಡಲೇ ನೋಟಿಸ್‌ ಜಾರಿಮಾಡಲಾಗುತ್ತದೆ. ಆರ್‌ಟಿಪಿಎಸ್‌ ಮುಖ್ಯದ್ವಾರದ ಎದುರು ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಪರದೆಗಳನ್ನು ಅಳವಡಿಸಿದ್ದು, ವಾಯುಗುಣ ಪ್ರಮಾಣ ಬಿತ್ತರವಾಗುತ್ತದೆ.

ಬೂದಿಯಿಂದ ಆದಾಯ: 2005ರ ನಂತರ ಸಿಮೆಂಟ್‌ ಮತ್ತು ಇಟ್ಟಿಗೆ ಕಂಪನಿಗಳಿಂದ ಹಾರುಬೂದಿಗೆ ಭಾರಿ ಬೇಡಿಕೆ ಬಂದಿದ್ದರಿಂದ, ಅದು ಆದಾಯದ ಮೂಲವಾಗಿ ಬದಲಾಗಿದೆ. 2020ರ ಲಾಕ್‌ಡೌನ್‌ ಅವಧಿಯಲ್ಲಿ ವಿದ್ಯುತ್‌ ಸ್ಥಾವರಗಳೆಲ್ಲವೂ ದೀರ್ಘಾವಧಿವರೆಗೆ ಸ್ಥಗಿತಗೊಂಡಿದ್ದರಿಂದ ಸಿಮೆಂಟ್‌ ಕಂಪನಿಗಳಿಗೆ ಹಾರುಬೂದಿ ಪೂರೈಕೆ ಆಗಲಿಲ್ಲ. ಸಿಮೆಂಟ್‌ ಕಂಪನಿಗಳು ಇದೀಗ ಹಸಿಬೂದಿ ಎತ್ತುವಳಿ ಆರಂಭಿಸಿವೆ. ಒಂದು ವರ್ಷದಲ್ಲಿ ಸಿಮೆಂಟ್‌ ಕಂಪನಿಗಳಿಗೆ ಒಟ್ಟು 2.15 ಲಕ್ಷ ಟನ್‌ ಹೊಂಡದ ಹಸಿಬೂದಿ ಪೂರೈಕೆಯಾಗಿದೆ.

ಎಸಿಸಿ, ರಾಜಶ್ರೀ ಸಿಮೆಂಟ್‌ ಹಾಗೂ ವಾಸವದತ್ತ ಸಿಮೆಂಟ್‌ ಕಾರ್ಖಾನೆಗಳು ಒಟ್ಟಾಗಿ ‘ಎಆರ್‌ವಿ ಸಿಮೆಂಟ್‌ ಸೊಸೈಟಿ’ ಹೊಸ ಸಂಸ್ಥೆ ಸ್ಥಾಪಿಸಿಕೊಂಡು ನಿಗದಿತ ದರದಲ್ಲಿ ಹಾರುಬೂದಿ ಖರೀದಿಸಲು ಒಪ್ಪಂದ ಮಾಡಿಕೊಂಡಿವೆ. ಆರ್‌ಟಿಪಿಎಸ್‌ನಿಂದ ಸಣ್ಣ ಕೈಗಾರಿಕೆಗಳಿಗೆ ಉಚಿತವಾಗಿ ಹಾರುಬೂದಿ ಹಂಚಿಕೆ ಮಾಡುವುದನ್ನು 2019ರ ನಂತರ ಸ್ಥಗಿತಗೊಳಿಸಲಾಗಿದೆ. ಸಮಸ್ಯೆಯಾಗಿದ್ದ ಹಾರುಬೂದಿ, ಹಸಿಬೂದಿ ಇದೀಗ ಆದಾಯದ ಮೂಲಗಳಾಗಿ ಬದಲಾಗಿವೆ. ಬೂದಿ ಮಾರಾಟದಿಂದ ಪ್ರತಿವರ್ಷ ₹ 60 ಕೋಟಿಗೂ ಅಧಿಕ ಆದಾಯ ಆರ್‌ಟಿಪಿಎಸ್‌ಗೆ ಬರುತ್ತಿದೆ.

ದುಷ್ಪರಿಣಾಮದ ಅಧ್ಯಯನವಿಲ್ಲ

ಆರ್‌ಟಿಪಿಎಸ್‌, ವೈಟಿಪಿಎಸ್‌ನಿಂದಾಗಿ ಜನರ ಆರೋಗ್ಯ, ಪರಿಸರ ಹಾಗೂ ಜೀವಜಲದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಬಗ್ಗೆ ಇದುವರೆಗೂ ವೈಜ್ಞಾನಿಕ ಅಧ್ಯಯನಗಳಾಗಿಲ್ಲ. ಶಕ್ತಿನಗರದಲ್ಲಿರುವ ಕೆಪಿಸಿಎಲ್‌ ಆಸ್ಪತ್ರೆಯ ವೈದ್ಯರು ಈ ಬಗ್ಗೆ ಮಾಹಿತಿ ನೀಡುವುದಕ್ಕೆ ನಿರಾಕರಿಸುತ್ತಾರೆ. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲೂ ಈ ಬಗ್ಗೆ ವಿಶ್ಲೇಷಿಸುವ ಪರಿಣತರಿಲ್ಲ.

***

ಆರ್‌ಟಿಪಿಎಸ್‌ ಸುತ್ತಲಿನ ಪ್ರದೇಶದಲ್ಲಿದೂಳಿನ ಕಣಗಳಿಂದಾಗಿ ಕೆಲವೊಮ್ಮೆ ಹಗಲು ಹೊತ್ತಿನಲ್ಲಿಯೇ ರಾತ್ರಿಯಾದ ಅನುಭವ ಆಗುತ್ತಿದೆ. ಆರ್‌ಟಿಪಿಎಸ್‌ ಘಟಕಗಳ ಬಾಳಿಕೆ ಅವಧಿಮುಗಿದಿದ್ದರೂ ಅವುಗಳನ್ನು ಸ್ಥಗಿತಗೊಳಿಸಿಲ್ಲ

- ಎಚ್.ಧರ್ಮರಾಜ,ಭಾರತ ದಲಿತ ಸಂಘರ್ಷ ಸಮಿತಿ, ಶಕ್ತಿನಗರ

***

ಮಣ್ಣಿನ ಫಲವತ್ತತೆ ಕಡಿಮೆಯಾಗಿದೆ. ಬೆಳೆ ಎತ್ತರವಾಗಿ ಬೆಳೆದರೂ ಇಳುವರಿ ಬರುವುದಿಲ್ಲ. ಕೆಲ ರೈತರು ಹತ್ತಿ ಬೆಳೆಯುವುದನ್ನೇ ಬಿಟ್ಟಿದ್ದಾರೆ

-ಎನ್‌.ಬಿ.ಶರಣು, ಯದ್ಲಾಪುರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT