ಸೋಮವಾರ, ಜನವರಿ 17, 2022
27 °C

ಒಳನೋಟ | ಸಿರಿಧಾನ್ಯ: ಸಂಸ್ಕರಣೆಯೇ ಸವಾಲು!

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಳವಣಿಗೆ (ಕೃಷಿ ವಿಸ್ತರಣೆ), ಬೇಡಿಕೆ, ಬಳಕೆ ಎಲ್ಲದರಲ್ಲೂ ಯಶಸ್ವಿಯಾಗಿ ಮುನ್ನಡೆ ಯುತ್ತಿರುವ ‘ಸಿರಿಧಾನ್ಯ ಕೃಷಿ’, ಬೆಳೆಸಿ–ಬಳಸುವ ನಡುವಿನ ಪ್ರಕ್ರಿಯೆಯಾದ ‘ಸಂಸ್ಕರಣೆ’ಯ ಹಂತದಲ್ಲಿ ಮಾತ್ರ ಹಲವು ಸವಾಲುಗಳನ್ನು ಎದುರಿಸುತ್ತಿದೆ.

ಇದು ರಾಜ್ಯದಲ್ಲಿನ ಸಿರಿಧಾನ್ಯ ಸ್ಥಿತಿ-ಗತಿಯ ಕುರಿತು ‘ಒಳನೋಟ’ ಬೀರಿದಾಗ ಸಿಗುವಂತಹ ಸ್ಥೂಲ ಚಿತ್ರಣ. ‘ಸಣ್ಣ ಹಿಡುವಳಿದಾರರು ಸಿರಿಧಾನ್ಯ ಕೃಷಿಯನ್ನು ಮುಂದುವರಿಸಲು‌ ಹಿಂದೇಟು ಹಾಕಲು ಏನು ಕಾರಣ’ ಎಂದು ಹುಡುಕಲು ಹೊರಟರೆ, ಎರಡು ಪ್ರಮುಖ ತೊಡಕುಗಳು –ಉತ್ಪಾದನೆಗೆ ತಕ್ಕಂತೆ ಮಾರುಕಟ್ಟೆ ಸೌಲಭ್ಯದ ಅಭಾವ ಹಾಗೂ ‘ರೈತಸ್ನೇಹಿ’ ಸಂಸ್ಕರಣಾ ಯಂತ್ರಗಳ ಕೊರತೆ– ಎದ್ದು ಕಾಣುತ್ತವೆ.

ರಾಗಿ, ಜೋಳ ಎರಡೂ ಸಿರಿಧಾನ್ಯಗಳ ಗುಂಪಿಗೆ ಸೇರಿದ್ದರೂ ಈಗ ಸದ್ಯ ಹೆಚ್ಚು ಜನಪ್ರಿಯವಾಗಿರುವುದು ಅದೇ ಗುಂಪಿಗೆ ಸೇರಿದ ನವಣೆ, ಸಾಮೆ, ಹಾರಕ, ಸಜ್ಜೆ, ಕೊರಲೆ, ಬರಗು ಮತ್ತು ಊದಲು ಧಾನ್ಯಗಳು. ನಾಗರಿಕರಲ್ಲಿ ಹೆಚ್ಚಿದ ಆರೋಗ್ಯ ಕಾಳಜಿ ಮತ್ತು ಆಹಾರ ತಜ್ಞರು ಮೂಡಿಸಿದ ಅರಿವಿನಿಂದಾಗಿ ದಶಕದಿಂದ ಸಿರಿಧಾನ್ಯಗಳ ಬಳಕೆ, ಬೇಡಿಕೆ ಹೆಚ್ಚುತ್ತಿದೆ.

ಸಂಸ್ಕರಣಾ ಘಟಕಗಳು: ರಾಜ್ಯದಲ್ಲಿ ಅಂದಾಜು 50 ಸಿರಿಧಾನ್ಯ ಸಂಸ್ಕರಣಾ ಘಟಕಗಳಿವೆ. ಸರ್ಕಾರ ಮತ್ತು ಕೃಷಿ ವಿಶ್ವವಿದ್ಯಾಲಯದ   ಸಹಯೋಗದಲ್ಲಿ 15 ಘಟಕಗಳಿವೆ. ಕೆಲವರು ಸ್ವಂತವಾಗಿ ಮಾಡಿಕೊಂಡಿದ್ದಾರೆ. ಏಳೆಂಟು ಹೈಟೆಕ್ ಯಂತ್ರಗಳ ಘಟಕಗಳೂ ಇವೆ. ಸಣ್ಣ ಘಟಕಗಳ ಪ್ರಮಾಣ ಕಡಿಮೆ. ‘ರಾಜ್ಯದಲ್ಲಿನ ಸದ್ಯದ ಉತ್ಪಾದನೆಗೆ, ಈಗಿರುವ ಘಟಕಗಳು ಸಾಕು. ಆದರೆ ರೈತರು ಮತ್ತು ಸಂಸ್ಕರಣಾ ಘಟಕದ ನಡುವೆ ಮಾಹಿತಿ ಕೊರತೆ ಕಾರಣ, ದೊಡ್ಡ ಘಟಕಗಳು ಕಚ್ಚಾ ವಸ್ತುಗಳ ಕೊರತೆ ಎದುರಿಸುತ್ತಿವೆ‘ ಎನ್ನುತ್ತಾರೆ ಬೆಂಗಳೂರಿನ ಗಾಂಧಿ ಕೃಷಿ ವಿಶ್ವವಿದ್ಯಾಲಯದ ಕೊಯ್ಲೋತ್ತರ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಸಿರಿಧಾನ್ಯಗಳ ಉತ್ಕೃಷ್ಟತಾ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಸುರೇಶ್ ಕೆ.ಬಿ.

‘ಜಿಕೆವಿಕೆ ಆವರಣದಲ್ಲಿ ಗಂಟೆಗೆ 100 ಕೆಜಿ ಸಿರಿಧಾನ್ಯ ಸಂಸ್ಕರಣೆ ಮಾಡುವಂತಹ ಸಣ್ಣ ಘಟಕವೊಂದನ್ನು ಅಳವಡಿಸಿದ್ದೇವೆ. ವಿ.ವಿ. ವ್ಯಾಪ್ತಿಯ ನಾಲ್ಕು ಕೃಷಿ ವಿಜ್ಞಾನ ಕೇಂದ್ರಗಳಲ್ಲೂ ಇಂಥ ಯಂತ್ರಗಳಿವೆ. ಸುತ್ತಮುತ್ತಲಿನ ರೈತರಿಗೆ, ನಾಗರಿಕರಿಗೆ ಕೆ.ಜಿ.ಗೆ ₹5 ಶುಲ್ಕದೊಂದಿಗೆ ಧಾನ್ಯವನ್ನೂ ಸಂಸ್ಕರಿಸಿಕೊಡುತ್ತಿದ್ದೇವೆ. ಇಂಥ ಯಂತ್ರಗಳು ತಾಲ್ಲೂಕು ಮಟ್ಟದಲ್ಲಿ ಅನುಷ್ಠಾನವಾದರೆ, ಮಾರಾಟದ ವಿಧಾನಕ್ಕೆ ಕೆಎಂಎಫ್ ಮಾದರಿ ಅನುಸರಿಸಿದರೆ  ಧಾನ್ಯಗಳ ಬೆಲೆಯೂ ಕಡಿಮೆಯಾಗುತ್ತದೆ, ಈಗಿರುವ ಸಮಸ್ಯೆ ಅರ್ಧ ಬಗೆಹರಿಯುತ್ತದೆ’ ಎನ್ನುತ್ತಾರೆ ಸುರೇಶ್.

ಈಗಿರುವ ಕೆಲವು ಮಿಲ್‌ಗಳಲ್ಲಿ ಸಿರಿಧಾನ್ಯ ಸಂಸ್ಕರಿಸಿದಾಗ ಶೇ 100 ಶುದ್ಧ ಅಕ್ಕಿ ಸಿಗುವುದು ತೀರಾ ಕಡಿಮೆ. ಕೆಲವು ಮಿಲ್‌ಗಳಲ್ಲಂತೂ ಸಿರಿಧಾನ್ಯ ಅಕ್ಕಿಯಲ್ಲಿ ಶೇಕಡ 5ರಿಂದ 12ರ ಪ್ರಮಾಣದವರೆಗೆ ಸಂಸ್ಕರಿಸಿಲ್ಲದ ಧಾನ್ಯ ಮಿಶ್ರವಾಗಿರುತ್ತವೆ. ಇದನ್ನು ಮಾನವಚಾಲಿತವಾಗಿ ಅಥವಾ ಮತ್ತೊಂದು ಯಂತ್ರದಿಂದಲೇ ಸ್ವಚ್ಛಗೊಳಿಸಬೇಕು. ಇದಕ್ಕೆ ವೆಚ್ಚ, ಶ್ರಮ ಎರಡೂ ಹೆಚ್ಚು. ಇದು ಸಂಸ್ಕರಣೆಯಲ್ಲಿನ ಪ್ರಮುಖ ಸವಾಲು ಎನ್ನುವುದು ಸಣ್ಣ ಸಂಸ್ಕರಣಾ ಘಟಕಗಳನ್ನು ಇಟ್ಟುಕೊಂಡಿರುವವರ ಅಭಿಪ್ರಾಯ. ಸಿರಿಧಾನ್ಯ ಕೃಷಿ ಹಾಗೂ ಪಾಕವಿಧಾನಗಳು ಇಷ್ಟೆಲ್ಲ ಜನಪ್ರಿಯವಾಗಿದ್ದರೂ ಎಲ್ಲ ಸಿರಿಧಾನ್ಯಗಳನ್ನು (ವಿವಿಧ ತಳಿಗಳನ್ನು) ನಿಖರವಾಗಿ ಒಂದೇ ಯಂತ್ರದಲ್ಲಿ ಸಂಸ್ಕರಿಸುವ ವ್ಯವಸ್ಥೆಯನ್ನೂ ಬಂದಿಲ್ಲ ಎನ್ನುತ್ತಾರೆ, ಸಿರಿಧಾನ್ಯ ಕೃಷಿಕ ಹಾಗೂ ಮಾರಾಟಗಾರ ಶಂಕರ ಲಂಗಟಿ.

ಸರ್ಕಾರದ ಮಟ್ಟದಲ್ಲಿ ಸಣ್ಣ ಸಂಸ್ಕರಣಾ ಯಂತ್ರಗಳ ಅಭಿವೃದ್ಧಿಪಡಿಸುವ ಕೆಲಸಗಳಾಗಿದ್ದು ಕಡಿಮೆ. ಸದ್ಯಕ್ಕೆ ಎಲ್ಲೆಡೆಗೆ ಅಂಥದ್ದೇ ಯಂತ್ರಗಳ ಅಗತ್ಯವಿದೆ. ಸರ್ಕಾರ ಸಬ್ಸಿಡಿ ಮೂಲಕ ಖರೀದಿಸಿ ಬಳಸುತ್ತಿರುವ ಸಂಸ್ಕರಣಾ ಯಂತ್ರಗಳ ಗುಣಮಟ್ಟವೂ ಅಷ್ಟಕ್ಕಷ್ಟೆ ಎನ್ನುವುದು ಅವುಗಳನ್ನು ಬಳಸುತ್ತಿರುವವರ ಅಭಿಪ್ರಾಯ. ಅವುಗಳಲ್ಲಿ ಗುಣಮಟ್ಟದ ಸಿರಿಧಾನ್ಯದ ಅಕ್ಕಿ ಬಾರದೇ (ಸಿಪ್ಪೆ ಸಹಿತ ಕಾಳು ಮಿಶ್ರವಾಗುವ ಪ್ರಮಾಣ ಹೆಚ್ಚು), ರೈತರು ಮಾರಾಟ ಮಾಡುವುದೇ ಕಷ್ಟ. ಈ ಬೆಳವಣಿಗೆ ನಡುವೆ ರಾಜ್ಯದಲ್ಲಿರುವ ಸಿರಿಧಾನ್ಯದ ಜನಪ್ರಿಯತೆ ಮತ್ತು ಬೇಡಿಕೆಯನ್ನು ಬಂಡವಾಳ ಮಾಡಿಕೊಂಡಿದ್ದು ತಮಿಳುನಾಡಿನ ಬೆರಳೆಣಿಕೆಯಷ್ಟು‌ ಮಿಲ್ಲರ್‌ಗಳು ಮಾತ್ರ. ಅವರು ಅಗ್ಗದ ಬೆಲೆಗೆ ಸಿರಿಧಾನ್ಯ ಅಕ್ಕಿಯನ್ನು ತಂದು ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ, ಸ್ಥಳೀಯ ರೈತರಿಂದ ಸಿರಿಧಾನ್ಯ ಅಕ್ಕಿ ಖರೀದಿ ಕಡಿಮೆಯಾಗಿದೆ. ಸಹಜವಾಗಿ ರೈತರಲ್ಲೂ ಬೆಳೆಯುವ ಆಸಕ್ತಿ ಕಡಿಮೆಯಾಗುತ್ತಿದೆ’ ಎಂದು ವಿಶ್ಲೇಷಿಸುತ್ತಾರೆ ಸಹಜ ಸಮೃದ್ಧ ಕೃಷಿಕರ ಬಳಗದ ಸಂಚಾಲಕ  ಜಿ. ಕೃಷ್ಣಪ್ರಸಾದ್‌.

ಸಿರಿಧಾನ್ಯಗಳ ಬೆಲೆ ದುಬಾರಿಯೇ ?
ಒಂದು ಕೆ.ಜಿ. ಸಿರಿಧಾನ್ಯವನ್ನು ಸಂಸ್ಕರಿಸಿದರೆ 500ರಿಂದ 700 ಗ್ರಾಂ ಅಕ್ಕಿ ಸಿಗುತ್ತದೆ. ಉಳಿದಿದ್ದು ಮಣ್ಣು, ದೂಳು, ಜೊಳ್ಳು ಸಿಪ್ಪೆಯಲ್ಲಿ ಹೋಗುತ್ತದೆ. ಒಂದು ಕೆ.ಜಿ. ಸಿಪ್ಪೆಸಹಿತ ನವಣೆ, ಸಾಮೆ ಬೆಲೆ ₹20 ರಿಂದ ₹40. ಎರಡು ಕೆ.ಜಿ. ಸಂಸ್ಕರಿಸಿದಾಗ ಒಂದು ಕೆ.ಜಿ. ಅಕ್ಕಿ ಸಿಗುತ್ತದೆ. ಧಾನ್ಯ ಖರೀದಿ, ಸಂಸ್ಕರಣಾ ವೆಚ್ಚ, ಸಾಗಾಟದ ಖರ್ಚು ಇತ್ಯಾದಿ ಸೇರಿ ಒಂದು ಕೆ.ಜಿ. ನವಣೆಗೆ ₹70 ರಿಂದ ₹75, ಸಾಮೆಗೆ ₹100 ರಿಂದ ₹120 ಬೆಲೆ ನಿಗದಿಮಾಡಬೇಕು (ಸಾಗಾಟ, ಪ್ಯಾಕಿಂಗ್, ತೆರಿಗೆ ಇತರೆ ವೆಚ್ಚಗಳು ಸೇರಿ ಈ ಬೆಲೆ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗುತ್ತದೆ). ಇದು ದುಬಾರಿ ಬೆಲೆ ಅಲ್ಲ. ನೈಜ ಬೆಲೆ. ಆದರೆ, ಇದನ್ನು ಅಕ್ಕಿ–ರಾಗಿ ಬೆಲೆ ಜೊತೆ ಹೋಲಿಕೆ ಮಾಡಿದರೆ ಮಾತ್ರ ದುಬಾರಿ ಎನ್ನಿಸುತ್ತದೆ’ ಎಂಬುದು ಹಾಸನ- ಕೊಡಗು ಜಿಲ್ಲೆಗಳ ಪ್ರಾಂತೀಯ ಸಾವಯವ ಕೃಷಿಕರ ಸಹಕಾರ ಸಂಘಗಳ ಒಕ್ಕೂಟ ಸಿಇಒ ಜಯಪ್ರಸಾದ್ ಬಿ.ಸಿ ಅಭಿಪ್ರಾಯ.

ಜಯಪ್ರಸಾದ್ ಅವರ ಮಾತಿಗೆ ದನಿಗೂಡಿಸುವ ಸಿರಾ ಸಮೀಪದ ಹೆಂದೊರೆಯ ಸಿರಿಧಾನ್ಯ ಬೆಳೆಗಾರ ಮತ್ತು ಸಂಸ್ಕರಣೆದಾರ ರಘು‌ ‘ತಮಿಳುನಾಡು, ಆಂಧ್ರದಲ್ಲಿರುವಂತೆ ಹೈಟೆಕ್ ಮೆಷಿನ್ ಬಳಸಿ ದೊಡ್ಡ ಪ್ರಮಾಣದಲ್ಲಿ ಧಾನ್ಯ ಸಂಸ್ಕರಣೆ ಮಾಡಿದರೆ ಗುಣಮಟ್ಟದ ಅಕ್ಕಿ ಸಿಗುತ್ತದೆ. ಜೊತೆಗೆ ಸ್ವಲ್ಪ ಕಡಿಮೆ ದರದಲ್ಲಿ ಮಾರಬಹುದು. ಆದರೆ, ರೈತರ ಮಟ್ಟದಲ್ಲಿ ಅಂಥ ಯಂತ್ರಗಳ ಅನುಷ್ಠಾನ ಅಸಾಧ್ಯ’ ಎನ್ನುತ್ತಾರೆ.
 
ಮಾರುಕಟ್ಟೆ ಖಾತರಿ ಬೇಕು: ಸುಲಭ ಸಂಸ್ಕರಣೆಯ ಜೊತೆಗೆ, ಅಗತ್ಯ ಮಾರುಕಟ್ಟೆಯೂ ಬೇಕು. ‘ಸರ್ಕಾರ ಪ್ರೋತ್ಸಾಹಧನದ ಬದಲು ಬೆಳೆದಿದ್ದನ್ನು ಖರೀದಿಸುವ ಮಾರುಕಟ್ಟೆ ಖಾತರಿಯನ್ನು ಕೊಟ್ಟರೆ ಸಾಕು. ಸಿರಿಧಾನ್ಯ ಬೆಳೆಯುವರ ಸಂಖ್ಯೆ ಹೆಚ್ಚಾಗುತ್ತದೆ. ನಮಗೆ ಹೊಸದುರ್ಗ ಎಪಿಎಂಸಿಯಲ್ಲಿ ಕಾಯಂ ಮಾರುಕಟ್ಟೆ ಇದೆ. ಹಾಗಾಗಿ, ನಾವು ಮೂರ್ನಾಲ್ಕು ದಶಕಗಳಿಂದ ನಿರಂತರವಾಗಿ ಸಾವೆ ಬೆಳೆಯುತ್ತಿದ್ದೇವೆ’ ಎಂದು ಅಜ್ಜಂಪುರ ಸಮೀಪದ ಭೂತನಹಳ್ಳಿ ಕೃಷಿಕ ಈಶ್ವರಪ್ಪ ತಮ್ಮ ಊರಿನದ್ದನ್ನೇ ಉದಾಹರಣೆ ಕೊಡುತ್ತಾರೆ.

ಆಂಧ್ರಪ್ರದೇಶ ಸರ್ಕಾರ ‘ಮಿಷನ್‌ ಆನ್ ಮಿಲೆಟ್ಸ್‌’ ಅಡಿಯಲ್ಲಿ ರೈತರಿಂದ ಸಿರಿಧಾನ್ಯ ಖರೀದಿಸಿ ಪಡಿತರ, ಅಂಗನವಾಡಿಯ ಮೂಲಕ ಜನರಿಗೆ ಪೌಷ್ಟಿಕ ಆಹಾರ ಸಿಗುವಂತೆ ಮಾಡುತ್ತಿದೆ. ಛತ್ತೀಸ್‌ಗಡ ಸರ್ಕಾರವೂ ‘ಮಿಲ್ಲೆಟ್ ಮಿಷನ್’ ಆರಂಭಿಸಿದೆ. ಒಡಿಶಾ ಸರ್ಕಾರ ಬೆಂಬಲ ಬೆಲೆ ಕೊಟ್ಟು ಸಿರಿಧಾನ್ಯಗಳನ್ನು ಖರೀದಿಸುತ್ತಿದೆ. ಈ ಮಾದರಿಗಳನ್ನು ಕರ್ನಾಟಕ ಸರ್ಕಾರವೂ ಅನುಸರಿಸಬಹುದು’ ಎನ್ನುತ್ತಾರೆ ಕೃಷ್ಣಪ್ರಸಾದ್.

ಸದ್ಯ ಕರ್ನಾಟಕದಲ್ಲಿ ಸರ್ಕಾರದ ಸಹಯೋಗದಲ್ಲಿ 15 ಸಾವಯವ ಕೃಷಿಕರ ಸಹಕಾರ ಸಂಘಗಳಿವೆ. ಸರ್ಕಾರದ ಸಮರ್ಪಕ ಆರ್ಥಿಕ ನೆರವು ಸಿಗದ ಕಾರಣ,  ಇದರಲ್ಲಿ ಕೆಲವು ನಿಷ್ಕ್ರಿಯವಾಗಿವೆ. ಇನ್ನೂ ಕೆಲವು ಕುಂಟುತ್ತಾ ಸಾಗಿವೆ. ಸರ್ಕಾರ ಇವುಗಳಿಗೆ ಆರ್ಥಿಕ ನೆರವು ನೀಡಿ, ಪುನಶ್ಚೇತನಗೊಳಿಸಿ, ಸಣ್ಣ ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಸಂಸ್ಕರಣೆ ಯಂತ್ರ ಮತ್ತು ಮಾರುಕಟ್ಟೆಯನ್ನು ಒದಗಿಸಿದರೆ, ಸಿರಿಧಾನ್ಯ ಕೃಷಿ ಪುನಶ್ಚೇತನದ ಹಾದಿಯಲ್ಲಿ ಸಾಗಬಹುದು.

**
ಸಿರಿಧಾನ್ಯ ಬೆಳೆಯುವ ಎಲ್ಲ ರೈತರಿಗೆ (ಸಣ್ಣ ಮತ್ತು ದೊಡ್ಡ ಹಿಡುವಳಿದಾರರು ಸೇರಿದಂತೆ) ಒಂದು ಹೆಕ್ಟೇರ್‌ಗೆ ₹10 ಸಾವಿರ ಪ್ರೋತ್ಸಾಹಧನ ಕೊಡುತ್ತಿದ್ದೇವೆ. ಈ ಹಿಂದೆ ಸ್ವಲ್ಪ ದಿನ ಈ ಪ್ರೋತ್ಸಾಹಧನ ಕೊಡುವುದು ನಿಂತಿತ್ತು. ಈಗ ಮತ್ತೆ ಮುಂದುವರಿಸಿದ್ದೇವೆ. ಬಿಸಿಯೂಟ ಮತ್ತು ಪಡಿತರ ವ್ಯವಸ್ಥೆಯಲ್ಲಿ ಸಿರಿಧಾನ್ಯ ಸೇರಿಸಿದರೆ ರೈತರಿಗೆ ಉತ್ತೇಜನ ಸಿಗುತ್ತದೆ ಎಂದು ನಾನೇ ಪ್ರಸ್ತಾವ ಸಲ್ಲಿಸಿದ್ದೆ.

ಸಮಾಜ ಕಲ್ಯಾಣ ಇಲಾಖೆ ಮತ್ತು ಕಾನೂನು ಸಚಿವರೊಂದಿಗೆ ಶೀಘ್ರ ಸಭೆ ನಡೆಸಿ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಹಾಸ್ಟೆಲ್ ಮತ್ತು ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುತ್ತದೆ. ಅಪೌಷ್ಟಿಕತೆ ನಿವಾರಣೆಗೆ ನೆರವಾಗಲಿದೆ.
- ಬಿ.ಸಿ.ಪಾಟೀಲ, ಕೃಷಿ ಸಚಿವ

**
ಸಿರಿಧಾನ್ಯ ನಮ್ಮ ನಿತ್ಯದ ಆಹಾರದ ಭಾಗವಾಗಬೇಕು. ಬಳಕೆ ಹೆಚ್ಚಿದಂತೆ ದೊಡ್ಡ ಪ್ರಮಾಣದಲ್ಲಿ ಸಿರಿಧಾನ್ಯ ಬೆಳೆಸಲು ಮತ್ತು ಸಂಸ್ಕರಿಸಲು ಉತ್ತೇಜನ ಅಗತ್ಯ. ರೈತರಿಂದ ಕನಿಷ್ಠ ಬೆಂಬಲ ಬೆಲೆ ನೀಡಿ ಸಿರಿಧಾನ್ಯಗಳನ್ನು ಖರೀದಿಸಿ, ಪಡಿತರ, ಮಧ್ಯಾಹ್ನದ ಬಿಸಿಯೂಟ, ಸರ್ಕಾರದ‌ ಹಾಸ್ಟೆಲ್‌ಗಳಿಗೆ ಪೂರೈಸಿದರೆ, ಬೆಳೆದವರಿಗೆ ಮಾರುಕಟ್ಟೆ ಸಿಗುತ್ತದೆ. ಶಾಲಾ- ಕಾಲೇಜು ಮಕ್ಕಳಿಗೆ ಪೌಷ್ಟಿಕ ಆಹಾರ ಲಭ್ಯವಾಗಿ, ಮಕ್ಕಳಲ್ಲಿನ ಅಪೌಷ್ಟಿಕತೆ ಕಡಿಮೆಯಾಗುತ್ತದೆ.
- ಕೆ.ಸಿ. ರಘು, ಆಹಾರ ತಜ್ಞ

**
ಬಯಲು ಸೀಮೆ ಜಿಲ್ಲೆಗಳಲ್ಲಿ ಹೆಚ್ಚು ಸಿರಿಧಾನ್ಯ ಬೆಳೆಯುತ್ತಾರೆ. ನಮ್ಮಂಥ ಘಟಕಗಳಿಗೆ ದೊಡ್ಡ ಪ್ರಮಾಣದ, ಆಧುನಿಕ ತಂತ್ರಜ್ಞಾನವಿರುವ ಯಂತ್ರಗಳ ಅಗತ್ಯವಿದೆ. ಇಂಥ ಯಂತ್ರಗಳ ಕೊರತೆಯ ಕಾರಣದಿಂದಾಗಿ, ನಮ್ಮ ರಾಜ್ಯದ ಸಿರಿಧಾನ್ಯಗಳು ತಮಿಳುನಾಡಿಗೆ ರವಾನೆಯಾಗಿ, ಅಲ್ಲಿ ಸಂಸ್ಕರಣೆಯಾಗಿ ನಮ್ಮ ರಾಜ್ಯಕ್ಕೆ ವಾಪಸ್ ಬರುತ್ತಿವೆ. ಸರ್ಕಾರ ಮತ್ತಷ್ಟು ಆರ್ಥಿಕ ನೆರವು ನೀಡಿ, ದೊಡ್ಡ ಯಂತ್ರಗಳ ಅಳವಡಿಕೆಗೆ ನೆರವಾದರೆ, ಜನರಿಗೆ ಕಡಿಮೆ ಬೆಲೆಗೆ ಧಾನ್ಯಗಳು ಲಭ್ಯವಾಗುವಂತೆ ಮಾಡಬಹುದು.
-ಆರ್.ಕೆ.ಮಧು, ಸಿಇಒ ತುಮಕೂರು ಜಿಲ್ಲೆ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ

(ಪೂರಕ ಮಾಹಿತಿ : ತುಮಕೂರು– ಕೆ.ಜೆ. ಮರಿಯಪ್ಪ, ಹಾವೇರಿ– ಸಿದ್ದು ಆರ್ ಜಿ ಹಳ್ಳಿ )

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು