ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಹೆಚ್ಚಿದ ವಿ.ವಿ; ಸೊರಗಿದ ಕ್ರೀಡೆ

ಸರ್ಕಾರಿ ವಿಶ್ವವಿದ್ಯಾಲಯಗಳ ‘ಆಟ’ಕ್ಕೆ ಸಿಗದ ಬೆಳವಣಿಗೆ ಭಾಗ್ಯ
Last Updated 30 ಏಪ್ರಿಲ್ 2022, 20:13 IST
ಅಕ್ಷರ ಗಾತ್ರ

ಬೆಂಗಳೂರು: ನಾಲ್ಕೂವರೆ ದಶಕಗಳ ಹಿಂದಿನ ಮಾತು. ಅಂಕೋಲಾದ ಉದಯ ಕೆ. ಪ್ರಭು ಏಷ್ಯನ್ ಕ್ರೀಡಾ ಕೂಟದ ಅಥ್ಲೆಟಿಕ್ಸ್‌ನಲ್ಲಿ ಪದಕ ಸಾಧನೆ ಮಾಡಿದರು. ಅಷ್ಟೇ ಅಲ್ಲ. 400 ಮೀಟರ್ಸ್ ಓಟದಲ್ಲಿ ದಾಖಲೆಗಳನ್ನು ಸ್ಥಾಪಿಸಿದ ಕೀರ್ತಿಯನ್ನೂ ತಮ್ಮದಾಗಿಸಿಕೊಂಡರು.

ಅವರು ಈ ಮಟ್ಟಕ್ಕೆ ಬೆಳೆಯಲು ಚಿಮ್ಮುಹಲಗೆಯಾಗಿದ್ದು ಕರ್ನಾಟಕ ವಿಶ್ವವಿದ್ಯಾಲಯದ ಕ್ರೀಡಾಕೂಟಗಳು. ಜಿ.ಸಿ. ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿಯಾಗಿದ್ದಾಗಲೇ ಅಂತರ ವಿಶ್ವವಿದ್ಯಾಲಯ ಕೂಟದಲ್ಲಿ ಬೆಳ್ಳಿ ಪದಕ ಗೆದ್ದು ಬಂದಿದ್ದರು. ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವ ಆತ್ಮವಿಶ್ವಾಸ ವೃದ್ಧಿಯಾಗಲು ಅಂದಿನ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿದ್ದ ಅಪಾರ ಪೈಪೋಟಿಯೇ ಕಾರಣವಾಗಿತ್ತು.

ಹತ್ತು ವರ್ಷಗಳ ಹಿಂದೆ ಲಂಡನ್ ಒಲಿಂಪಿಕ್ಸ್‌ನ ಮಹಿಳೆಯರ ಹೈಜಂಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಂಗಳೂರಿನ ಹುಡುಗಿ ಸಹನಾ ಕುಮಾರಿ ಅವರ ಪ್ರತಿಭೆ ಹರಳುಗಟ್ಟಿದ್ದು ಕೂಡ ಕಾಲೇಜು ದಿನಗಳಲ್ಲಿಯೇ. ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಮಾಡಿದ ಸಾಧನೆಗಳು ಅವರನ್ನು ಅಂತರ
ವಿಶ್ವವಿದ್ಯಾಲಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ್ದನ್ನು ಅವರೇ ಹಲವು ಬಾರಿ ನೆನಪಿಸಿಕೊಂಡಿದ್ದಾರೆ.

ಕರ್ನಾಟಕದಲ್ಲಿರುವ ವಿಶ್ವವಿದ್ಯಾಲಯಗಳ ಕ್ರೀಡೆಯ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಇಂತಹ ಹಲವಾರು ಕ್ರೀಡಾಪಟುಗಳ ಸಾಧನೆ ಸಿನೆಮಾ ರೀಲಿನಂತೆ ಸಾಗಿಹೋಗುತ್ತದೆ. ಬೆಂಗಳೂರು, ಮಂಗಳೂರು, ಮೈಸೂರು ವಿಶ್ವವಿದ್ಯಾಲಯಗಳ ಅಂಗಳದಿಂದ ಪ್ರವರ್ಧಮಾನಕ್ಕೆ ಬಂದ ಖ್ಯಾತನಾಮರು ಹಲವರು. ಆದರೆ, ಕಳೆದ ಎರಡು ದಶಕಗಳಲ್ಲಿ ಈ ಪರಿಸ್ಥಿತಿ ಇಲ್ಲ. ವಿಶ್ವವಿದ್ಯಾಲಯಗಳು ಕಾಲೇಜುಗಳ ಸಂಖ್ಯೆ ಮತ್ತು ವಿಷಯವಾರು ವಿಭಜನೆಯಾದ ಮೇಲೆ ಕ್ರೀಡೆ ಕಳೆಗುಂದಿತು. ವಿವಿಗಳ ಸಂಖ್ಯೆ ಹೆಚ್ದಿದರೂ ಕ್ರೀಡಾಪಟುಗಳ ಸಂಖ್ಯೆ ವೃದ್ಧಿಸಲಿಲ್ಲ. ಹೆಚ್ಚು ವಿವಿಗಳು ಸ್ಥಾಪನೆಯಾಗುವುದರಿಂದ ಕ್ರೀಡೆಗೆ ಉತ್ತೇಜನ ಹೆಚ್ಚಲಿದೆ ಎಂಬ ನಿರೀಕ್ಷೆ ಬಹುತೇಕ ಹುಸಿಯಾಗಿದೆ.

ಪಠ್ಯ ಮುನ್ನೆಲೆಗೆ; ಆಟ ಹಿನ್ನೆಲೆಗೆ

‘ನಾವು ಕಾಲೇಜಿನಲ್ಲಿದ್ದಾಗ ಕ್ರೀಡೆಗೆ ಸುವರ್ಣ ಕಾಲ ಅದು. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವ ವಿಶ್ವಾಸವನ್ನು ಹೆಚ್ಚಿಸಿದ್ದು ಕಾಲೇಜಿನ ಕ್ರೀಡಾಂಗಣಗಳೇ. ಪ್ರತಿಯೊಬ್ಬ ಕ್ರೀಡಾ ಪಟುವಿಗೆ 16 ರಿಂದ 24 ವರ್ಷಗಳವರೆಗಿನ ವಯಸ್ಸು ಬಹಳ ಮಹತ್ವದ್ದು. ಆದ್ದರಿಂದ ಪಿಯುಸಿ, ಪದವಿ ವಿದ್ಯಾರ್ಥಿ ಗಳು ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಧ್ಯ. ಪದವಿಪೂರ್ವ ವಿಭಾಗದಲ್ಲಿ ಕ್ರೀಡೆಗೆ ಉತ್ತೇಜನವಿಲ್ಲ. ವೃತ್ತಿಪರ ಕೋರ್ಸ್‌ಗಳಿಗೆ ಸೀಟು ಗಿಟ್ಟಿಸುವ ಪೈಪೋಟಿಯಲ್ಲಿ ಗೆಲ್ಲುವುದೇ ಮುಖ್ಯವಾಗುತ್ತದೆ. ಕ್ರೀಡಾ ಕೋಟಾದಲ್ಲಿ ಪದವಿಯಲ್ಲಿ ಸೀಟು ಪಡೆದವರಲ್ಲಿ ಶೇ 80ರಷ್ಟು ಮಕ್ಕಳು ಕ್ರೀಡೆಯನ್ನು ಮುಂದುವರಿಸುವುದೇ ಇಲ್ಲ. ಆದ್ದ ರಿಂದ ವಿಶ್ವವಿದ್ಯಾಲಯದ ಕ್ರೀಡೆ ಸೊರ ಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ರಾಜೀವಗಾಂಧಿ ವೈದ್ಯಕೀಯ ವಿವಿ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ದೊಡ್ಡ ಮೊತ್ತದ ಬಹುಮಾನ, ಪರೀಕ್ಷೆಯ ದಿನಾಂಕಗಳ ಮರುಹೊಂದಾಣಿಕೆ ಮತ್ತು ಗ್ರೇಸ್‌ ಮಾರ್ಕ್ಸ್‌ ಕೂಡ ನೀಡಲಾಗುತ್ತಿದೆ’ ಎಂದು ಉದಯ ಪ್ರಭು ಅವರು ವಿವಿ ಕ್ರೀಡೆಯಲ್ಲಿ ಆಗಿರುವ ಬದಲಾವಣೆಯನ್ನು ಗುರುತಿಸುತ್ತಾರೆ.

ಆದರೆ, ಪದವಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕ್ರೀಡೆಯನ್ನು ಬೆಳೆಸುವ ಕುರಿತು ಆಡಳಿತಗಾರರಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಕೆಲವು ವರ್ಷಗಳ ಹಿಂದೆ ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಧಾರವಾಡದ ವಸತಿ ನಿಲಯ ಮತ್ತು ಕ್ರೀಡಾಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಜಮೀನು ನೀಡುವಂತೆ ವಿಶ್ವವಿದ್ಯಾಲಯವನ್ನು ಕೋರಿತ್ತು. ಸಂಸದರು, ಕೇಂದ್ರ ಸಚಿವರೂ ಶಿಫಾರಸು ಮಾಡಿದ್ದರು. ಆದರೆ, ವಿಶ್ವವಿದ್ಯಾಲಯ ಮನಸ್ಸು ಮಾಡಲಿಲ್ಲ. ಒಂದೊಮ್ಮೆ ಜಮೀನು ಕೊಟ್ಟಿದ್ದರೆ ವಿಶ್ವವಿದ್ಯಾಲಯದ ಕ್ರೀಡಾಪಟುಗಳಿಗೂ ಸಾಯ್‌ ಸೌಲಭ್ಯಗಳು ಸಿಗುತ್ತಿದ್ದವು ಎಂದು ಇಲ್ಲಿಯ ಹಲವು ಹಿರಿಯ ಕ್ರೀಡಾಪಟುಗಳು ಬೇಸರ ವ್ಯಕ್ತಪಡಿಸುತ್ತಾರೆ.

ಜ್ಞಾನಭಾರತಿಯಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಇಂತಹ ಅನುಕೂಲವಿದೆ. ಇದೇ ಆವರಣದಲ್ಲಿಯೇ ಸಾಯ್‌ ಕ್ಯಾಂಪಸ್ ಇದೆ. ರಾಷ್ಟ್ರೀಯ ತಂಡಗಳ ಶಿಬಿರಗಳು ಇಲ್ಲಿ ನಿರಂತರವಾಗಿ ನಡೆಯುತ್ತವೆ.ಸದ್ಯ ನಡೆಯುತ್ತಿರುವ ವಾರ್ಸಿಟಿ ಖೇಲೊ ಇಂಡಿಯಾ ಕ್ರೀಡಾಕೂಟದಲ್ಲಿ ಬೆಂಗಳೂರು ವಿವಿ ಹಾಕಿ ತಂಡದಲ್ಲಿ ಮಿಂಚುತ್ತಿರುವ ಹರೀಶ ಮುತಗಾರ್ ಭಾರತ ಜೂನಿಯರ್ ತಂಡದ ಆಟಗಾರ. ಸಾಯ್‌ನಲ್ಲಿ ತರಬೇತಿ ಪಡೆದವರು. ಆದರೆ, ಇದರಿಂದ ವಿಭಜನೆಗೊಂಡ ಬೆಂಗಳೂರು ವಿವಿ ಮತ್ತು ಬೆಂಗಳೂರು ಉತ್ತರ ವಿವಿಗಳಲ್ಲಿ ಇನ್ನೂ ಮೂಲಸೌಲಭ್ಯಗಳು ಅಭಿವೃದ್ಧಿಯಾಗಬೇಕು.

ರಾಜ್ಯದ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ವಿಶೇಷ ಆಸ್ಥೆ ವಹಿಸಿವೆ. ಅದರಲ್ಲಿ ಜೈನ್ ವಿಶ್ವವಿದ್ಯಾಲಯ, ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಪ್ರಮುಖವಾಗಿವೆ. ಜೂನಿಯರ್ ಹಂತದಲ್ಲಿ ಸಾಧನೆ ಮಾಡಿದ ಪ್ತತಿಭಾನ್ವಿತರನ್ನು ಆಯ್ಕೆ ಮಾಡಿ ಶಿಕ್ಷಣ, ಸೌಲಭ್ಯಗಳನ್ನು ನೀಡುತ್ತವೆ. ಕ್ರಿಕೆಟಿಗ ರಾಬಿನ್ ಉತ್ತಪ್ಪ, ಸ್ನೂಕರ್ ಚಾಂಪಿಯನ್ ಪಂಕಜ್ ಅಡ್ವಾಣಿ, ಟೆನಿಸ್ ಪಟು ರೋಹನ್ ಬೋಪಣ್ಣ, ಒಲಿಂಪಿಯನ್ ಈಜುಪಟು ಶ್ರೀಹರಿ ನಟರಾಜನ್ ಸೇರಿದಂತೆ ಹಲವರು ಜೈನ್ ವಿವಿಯ ವಿದ್ಯಾರ್ಥಿಗಳಾಗಿದ್ದವರು. ಈಗ ಅವರಲ್ಲಿ ಕೆಲವರು ವಿವಿಯ ಕ್ರೀಡಾಶಾಲೆಯಲ್ಲಿ ಕ್ರೀಡಾ ತರಬೇತಿ ನೀಡುತ್ತಾರೆ. ಆದರೆ ಸರ್ಕಾರದ ವಿಶ್ವವಿದ್ಯಾಲಯಗಳು ಮಾತ್ರ ಇಂತಹ ಅವಕಾಶಗಳನ್ನು ಬಳಸಿಕೊಂಡಿಲ್ಲ.

ಕೇರಳ, ತಮಿಳುನಾಡು, ಒಡಿಶಾ, ತೆಲಂಗಾಣಗಳಲ್ಲಿ ಶಾಲೆ, ವಿಶ್ವವಿದ್ಯಾಲಯಮಟ್ಟದಲ್ಲಿ ಕ್ರೀಡೆಗಳಿಗೆ ಅಪಾರ ಪ್ರೋತ್ಸಾಹವಿದೆ. ಅದಕ್ಕಾಗಿಯೇ ಆ ರಾಜ್ಯಗಳಿಂದ ಅಂತರರಾಷ್ಟ್ರೀಯ ಕ್ರೀಡೆಗೆ ಬಹಳಷ್ಟು ಆಟಗಾರರು ಹೋಗುತ್ತಾರೆ. ಅವುಗಳ ಮಾದರಿಯು ನಮ್ಮ ರಾಜ್ಯದಲ್ಲಿಯೂ ಬರುವಂತಾಗಬೇಕು. ಒಲಿಂಪಿಕ್ ಕ್ರೀಡೆಗಳಲ್ಲದ ಆಟಗಳಿಗೂ ಸೌಲಭ್ಯಗಳು ಸಿಗಬೇಕು ಎಂದು ಕರ್ನಾಟಕ ಅಮೇಚೂರ್ ನೆಟ್‌ಬಾಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿ. ಗಿರೀಶ, ಹೇಳಿದರು

ನೆರೆ ರಾಜ್ಯಗಳ ಮಾದರಿ...
ಕೇರಳ, ತಮಿಳುನಾಡು, ಒಡಿಶಾ, ತೆಲಂಗಾಣಗಳಲ್ಲಿ ಶಾಲೆ, ವಿಶ್ವವಿದ್ಯಾಲಯಮಟ್ಟದಲ್ಲಿ ಕ್ರೀಡೆಗಳಿಗೆ ಅಪಾರ ಪ್ರೋತ್ಸಾಹವಿದೆ. ಅದಕ್ಕಾಗಿಯೇ ಆ ರಾಜ್ಯಗಳಿಂದ ಅಂತರರಾಷ್ಟ್ರೀಯ ಕ್ರೀಡೆಗೆ ಬಹಳಷ್ಟು ಆಟಗಾರರು ಹೋಗುತ್ತಾರೆ. ಅವುಗಳ ಮಾದರಿಯು ನಮ್ಮ ರಾಜ್ಯದಲ್ಲಿಯೂ ಬರುವಂತಾಗಬೇಕು. ಒಲಿಂಪಿಕ್ ಕ್ರೀಡೆಗಳಲ್ಲದ ಆಟಗಳಿಗೂ ಸೌಲಭ್ಯಗಳು ಸಿಗಬೇಕು.
-ಸಿ. ಗಿರೀಶ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಅಮೇಚೂರ್ ನೆಟ್‌ಬಾಲ್ ಸಂಸ್ಥೆ

***

ವಿದೇಶಗಳಲ್ಲಿ ವಿವಿ ಕ್ರೀಡೆಗಳಿಗೆ ಆದ್ಯತೆ

ವಿದೇಶಗಳಲ್ಲಿ ಕ್ರೀಡೆಗಳ ಬೆಳವಣಿಗೆಗೆ ವಿಶ್ವವಿದ್ಯಾಲಯಗಳೇ ಮೂಲಸೆಲೆ. ವಿದ್ಯಾರ್ಥಿಗಳ ಆಸಕ್ತಿ ಮತ್ತು ಸಾಮರ್ಥ್ಯಕ್ಕನುಗುಣವಾಗಿ ಕ್ರೀಡೆಗಳಲ್ಲಿ ತೊಡಗಿಕೊಳ್ಳಲು ಅಲ್ಲಿ ಅವಕಾಶ ನೀಡಲಾಗುತ್ತದೆ. ಕ್ರೀಡೆ ಮತ್ತು ಓದು ಸಮಾನ ಆದ್ಯತೆಯೊಂದಿಗೆ ಸಾಗುತ್ತವೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಯುರೋಪ್ ದೇಶಗಳ ಅಥ್ಲೀಟ್‌ಗಳನ್ನು ನೋಡಿ. ಅವರೆಲ್ಲರೂ ವಿವಿಗಳ ವಿದ್ಯಾರ್ಥಿಗಳೇ.

-ಉದಯ ಕೆ ಪ್ರಭು,ಅಂತರರಾಷ್ಟ್ರೀಯ ಅಥ್ಲೀಟ್, ಕೋಚ್

***

ಕ್ರೀಡಾ ಬೋಧಕರ ನೇಮಕಕ್ಕೆ ಕ್ರಮ

ಉನ್ನತ ಶಿಕ್ಷಣದಲ್ಲಿಯೂ ಕ್ರೀಡೆಗೆ ಆದ್ಯತೆ ನೀಡುವುದು ನಮ್ಮ ಗುರಿ. ನೂತನ ಶಿಕ್ಷಣ ನೀತಿಯಲ್ಲಿಯೂ ಒತ್ತು ನೀಡ ಲಾಗಿದೆ. ಯಾವುದೇ ವಿಷಯದಲ್ಲಿ ಪದವಿ ಮಾಡುವವರು ಕ್ರೀಡೆ, ಯೋಗ ಮತ್ತು ಆರೋಗ್ಯದ ವಿಷಯ ಓದಬೇಕು. ಅದಕ್ಕೆ 25 ಅಂಕಗಳನ್ನು ನೀಡಲಾಗುತ್ತದೆ. ಅಲ್ಲದೇ ಕ್ರೀಡೆ
ಯನ್ನು ತಮ್ಮ ಮುಖ್ಯ ಪಠ್ಯದ ಜೊತೆಗೆ ಒಂದು ವಿಷಯವ ನ್ನಾಗಿ ಓದಲು ಆಯ್ಕೆ ಮಾಡಿಕೊಳ್ಳಬಹುದು. ಸದ್ಯ ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 136 ಕ್ರೀಡಾ ಬೋಧಕರ ಹುದ್ದೆಗಳ ನೇಮಕಕ್ಕೆ ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದಲ್ಲದೇ ಬೇರೆ ವಿಷಯಗಳಲ್ಲಿರುವಂತೆ ಕ್ರೀಡೆಗೂ ಅತಿಥಿ ದೈಹಿಕ ಶಿಕ್ಷಕರನ್ನು ನೇಮಕ ಮಾಡುವ ಉದ್ದೇಶವೂ ಇದೆ. ಉನ್ನತ ಶಿಕ್ಷಣದಲ್ಲಿ ಕ್ರೀಡಾ ನೀತಿಯನ್ನು ಜಾರಿಗೊಳಿಸುವ ಚಿಂತನೆ ಇದೆ. ಹಂತ ಹಂತವಾಗಿ ಕ್ರೀಡಾಭಿವೃದ್ಧಿಯನ್ನು ಮಾಡಲಾಗುವುದು.

ಡಾ. ಸಿ.ಎನ್. ಅಶ್ವತ್ಥನಾರಾಯಣ,ರಾಜ್ಯ ಉನ್ನತ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT