ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ ಪ್ರತಿಕ್ರಿಯೆಗಳು: ‘ಕಾಡಂಚಿನ ಜನರ ಕಷ್ಟಕ್ಕಿಲ್ಲ ಎಣೆ’

Last Updated 8 ಜನವರಿ 2023, 12:12 IST
ಅಕ್ಷರ ಗಾತ್ರ

‘ಕಾಡಂಚಿನ ಜನರ ಕಷ್ಟಕ್ಕಿಲ್ಲ ಎಣೆ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ(ಜನವರಿ 8) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

ಕಾಡೇ ಇಲ್ಲದೆ ಕಾಡುತ್ತಿರುವ ಜೀವ ಸಂಕುಲ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಸೇರಿದಂತೆ ಈ ಭಾಗದ ಮಲೆನಾಡು ಪ್ರದೇಶದಲ್ಲಿ ಅತಿಯಾದ ಭೂ ಒತ್ತುವರಿ ನಡೆಯುತ್ತಿದೆ. ಅರಣ್ಯ ಇಲಾಖೆ ಸಹ ಪ್ರಾಣಿ ಪಕ್ಷಿಗಳಿಗೆ ಪೂರಕವಾದ ಸಸ್ಯ ಸಂರಕ್ಷಣೆ ಮಾಡುವುಲ್ಲಿ ವಿಫಲವಾಗಿದೆ. ಇದರಿಂದ ಕಾಡೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರ ದುಷ್ಪರಿಣಾಮ ಕಾಡಾನೆ, ಹುಲಿ, ಕರಡಿಗಳು ಆಹಾರ ಹುಡುಕುತ್ತಾ ಊರಿಗೆ ಲಗ್ಗೆ ಇಟ್ಟು, ಪ್ರಾಣ ಹಾನಿಮಾಡುತ್ತಿವೆ. ಇಂತಹ ಭಯದಿಂದ ನಿತ್ಯವೂ ಹೆಣಗಾಡುತ್ತಿರುವ ಸಂಕಷ್ಟದ ದಯನೀಯ ಶೋಚನೀಯ ಪರಿಸ್ಥಿತಿ ಇಲ್ಲಿನ ಜನರದ್ದಾಗಿದೆ. ಆದ್ದರಿಂದ, ಸರ್ಕಾರ ಈ ಎರಡೂ ದೃಷ್ಟಿಕೋನದಿಂದ ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಮೊದಲು ನಿಜವಾದ ಅರ್ಥದಲ್ಲಿ ಮೂಲ ಸ್ವರೂಪದ ಅರಣ್ಯವನ್ನು ಉಳಿಸಿ ಬೆಳೆಸಬೇಕಾಗಿದೆ.

-ಸಂಪತ್ ಬೆಟ್ಟಗೆರೆ, ಮೂಡಿಗೆರೆ

==

ಸಂಪನ್ಮೂಲಗಳ ಸಮಾನ ಹಂಚಿಕೆಯಾಗಲಿ

ಕರ್ನಾಟಕವೆಂದರೆ ಪ್ರಕೃತಿ ರಮಣೀಯ ತಾಣ, ಪಶು-ಪಕ್ಷಿಗಳು, ವನ್ಯ ಜೀವಿಗಳಿಂದಾಗಿ ಶ್ರೀಮಂತಿಕೆಯ ಜೀವವೈವಿಧ್ಯತೆಯನ್ನು ಹೊಂದಿದೆ. ಆದರೆ, ವಾಸ್ತವ್ಯದ ಚಿತ್ರಣವೇ ಬೇರೆಯಾಗಿದೆ. ಶ್ರೀಮಂತಿಕೆಯ ಜೀವವೈವಿಧ್ಯತೆಯನ್ನು ಕಾಪಾಡಲು, ಕಾಡಿನಲ್ಲಿ ಸಾವಿರಾರು ವರ್ಷಗಳಿಂದ ತಲೆತಲಾಂತರದಿಂದ ಜೀವನ ನಡೆಸಿಕೊಂಡು ಬಂದ, ಸಾವಿರಾರು ಕುಟುಂಬಗಳು ಇವತ್ತು, ತಮ್ಮ ಮೂಲ ನೆಲೆಗಳನ್ನು ವನ್ಯಮೃಗಗಳ ರಕ್ಷಣೆಗೆ ನೀಡಿ, ಇವತ್ತು ಅವರ ಬದುಕು ಬೀದಿಪಾಲಾಗಿದೆ. ಕಾಡಿನಂಚಿಗೆ ಬಂದು ನೆಲೆಸಿದ ಆ ಸಾವಿರಾರು ಕುಟುಂಬಗಳಿಗೆ ಸರ್ಕಾರವು ಸಮರ್ಪಕವಾಗಿ, ಪರಿಣಾಮಕಾರಿಯಾದಂತಹ ಮೂಲ ಸೌಕರ್ಯಗಳನ್ನು ಒದಗಿಸದೇ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ರಾಜ್ಯದ ಇತರೆ ನಾಗರಿಕರಿಗೆ ದೊರೆಯುವ ಎಲ್ಲ ಸೌಲಭ್ಯ-ಸಂಪನ್ಮೂಲಗಳನ್ನು ಸಮಾನವಾಗಿ ಹಂಚುವುದು, ಸಂವಿಧಾನದ ನಿರ್ದೇಶಕ ತತ್ವಗಳ ಪ್ರಕಾರ, ಸರ್ಕಾರದ ಆದ್ಯತೆಯಾಗಬೇಕು. ಆದರೆ ವ್ಯವಸ್ಥೆಯಲ್ಲಿನ ಲೋಪ ಸರಿಯಾಗಬೇಕಾಗಿರುವುದು ಈಗಿನ ತುರ್ತಾಗಿದೆ.

–ಬೀರಪ್ಪ ಡಿ.ಡಂಬಳಿ, ಕೋಹಳ್ಳಿ, ಬೆಳಗಾವಿ

==

‘ಕಾಡಂಚಿನ ಜನರ ಬದುಕು ಮೂರಾಬಟ್ಟೆ’

ಚಾಮರಾಜನಗರ, ಮೈಸೂರು, ಕೊಡಗು, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜಾರಿಗೊಳಿಸಿರುವ ಹುಲಿ ಯೋಜನೆಯಿಂದ ಈ ಭಾಗದ ಕಾಡಂಚಿನ ಜನರ ಬದುಕು ಮೂರಾಬಟ್ಟೆಯಾಗಿದೆ. ಕುಡಿಯುವ ನೀರು, ರಸ್ತೆ, ಚರಂಡಿ ಸೇರಿ ಸಾರಿಗೆ ಸೌಲಭ್ಯ ಮತ್ತು ಅವರ ಮನೆಗಳಿಗೆ ಸುರಕ್ಷೆಯೇ ಇಲ್ಲದಂತಾಗಿದೆ. ಪುನರ್‌ವಸತಿ ಕೇಂದ್ರಗಳು ಮತ್ತು ಸರ್ಕಾರ ನೀಡುವ ಪರಿಹಾರ ಅರ್ಹರಿಗೆ ತಲಪುತ್ತಿಲ್ಲ. ಶಿಕ್ಷಣವೆಂಬುದು ಇಲ್ಲಿನ ಮಕ್ಕಳಿಗೆ ಮರೀಚಿಕೆಯಾಗಿದೆ.

ಕಾಡಂಚಿನ ಗ್ರಾಮಗಳಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷ ಎಂದೂ ಮುಗಿಯದ ಕಥೆಯಾಗಿದೆ. 2019ರಲ್ಲಿ ಬಂಡೀಪುರ, ನಂಜನಗೂಡಿನಲ್ಲಿ ಹುಲಿ ದಾಳಿಗಳಾಗಿವೆ. ಈ ಭಾಗದಲ್ಲಿ ವಾಸಿಸುವ ಅಮಾಯಕ ಜನರಿಗೆ ಸರ್ಕಾರ ಮೂಲಭೂತ ಸೌಲಭ್ಯಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು.

–ಸಿದ್ಧಲಿಂಗೇಗೌಡ, ಅಧ್ಯಕ್ಷರು, ವರ್ಲ್ಡ್‌ ಹ್ಯೂಮನ್‌ ರೈಟ್ಸ್‌ ಸೇವಾ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT