ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಮಾಲಿನ್ಯದ ಲೇಪ; ಫಲ್ಗುಣಿಯ ಪರಿತಾಪ

Last Updated 15 ಜನವರಿ 2022, 20:25 IST
ಅಕ್ಷರ ಗಾತ್ರ

ಮಂಗಳೂರು: ಕೈಗಾರಿಕೆಗಳ ತವರಾಗಿರುವ ಬಂದರು‌ ನಗರಿ ಮಂಗಳೂರಿನಲ್ಲಿ ಕಡಲ ತಡಿ ಮತ್ತು ನದಿಯ ದಡದ ಮೇಲಿರುವ ಕೈಗಾರಿಕೆಗಳಿಂದ ಜಲಮೂಲಗಳು ಮಲಿನಗೊಳ್ಳುತ್ತಿವೆ ಎಂಬ ದೂರು ಹೊಸತೇನಲ್ಲ. ಆದರೆ, ಇದರ ಗಂಭೀರ ಪರಿಣಾಮಗಳ ಬಗ್ಗೆ ಸಮಗ್ರ ಅಧ್ಯಯನ ನಡೆದಿಲ್ಲ ಎಂಬುದು ನಾಗರಿಕರ ಅಸಮಾಧಾನ.

ಕೈಗಾರಿಕಾ ನೆಲೆಯ ಅಕ್ಕಪಕ್ಕದಲ್ಲಿರುವ ಹಳ್ಳಗಳು, ನಂದಿನಿ, ನೇತ್ರಾವತಿ‌ ನದಿಗಳು, ಉಪನದಿಗಳು ಬೆಂಕಿಯನ್ನು ಒಡಲಿಗೆ ಸೇರಿಸಿಕೊಂಡು ಫಲ್ಗುಣಿಯಷ್ಟೇ ನಿಸ್ತೇಜಗೊಂಡಿವೆ.

ನದಿ ಸೊರಗಿದಾಗ ನೀರು ಗಾಢ ಬಣ್ಣಕ್ಕೆ ತಿರುಗುವುದು ಕಾಣಿಸುತ್ತದೆ. ಕಳೆದ ಬೇಸಿಗೆಯಲ್ಲಿ ಪೆರ್ಮುದೆಯ ಬಳಿ ನದಿ ನೀರಿನಲ್ಲಿ ಅಸಂಖ್ಯ ‌ಮೀನುಗಳು ತೇಲಿದ್ದವು ಎನ್ನುತ್ತಾರೆ ಮಾಲಿನ್ಯದ ವಿರುದ್ಧ ಧ್ವನಿ ಎತ್ತುತ್ತಿರುವ ಕೃಷಿಭೂಮಿ ಸಂರಕ್ಷಣಾ ಸಮಿತಿ ಪ್ರಮುಖರು.

ಕರಾವಳಿಗೆ ಬರುವ ಹಡಗುಗಳಿಂದ ಹೊರಚೆಲ್ಲುವ ತೈಲದ ಜಿಡ್ಡು, ಎಣ್ಣೆಮಿಶ್ರಿತ ರಾಸಾಯನಿಕಗಳು ಶುದ್ಧನೀರನ್ನು ಕದಡಿವೆ.‌ ನಿಕ್ಕೆಲ್,‌ ಪಾದರಸ, ತಾಮ್ರದಂತಹ ರಾಸಾಯನಿಕಯುಕ್ತ ತ್ಯಾಜ್ಯಗಳು ಪೈಪ್‌ಲೈನ್‌ ಮೂಲಕ ನೀರಿಗೆ ಸೇರುವುದರಿಂದ‌ ಅದು ಮೀನಿನ ಹೊಟ್ಟೆಗೆ‌ ನುಸುಳಿ, ಅದನ್ನು ಸೇವಿಸುವ ಮನುಷ್ಯನ ದೇಹದೊಳಗೆ ಸೇರುತ್ತದೆ.‌ ಇದರಿಂದ ಹಾರ್ಮೋನ್‌ನಲ್ಲಿ ವ್ಯತ್ಯಾಸ, ಜೀರ್ಣಕ್ರಿಯೆಯಲ್ಲಿ ತೊಂದರೆ, ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಮಹಾನಗರ ಪಾಲಿಕೆಯ ಒಳಚರಂಡಿ ನೀರು, ಫಿಷ್ ಮೀಲ್ ತ್ಯಾಜ್ಯಗಳು ಸಮುದ್ರದ ಒಡಲು ಸೇರುವ‌ ಪರಿಣಾಮ ನೀರಿನ ಬಣ್ಣ ಬದಲಾವಣೆ, ಎನ್‌ಪಿಕೆ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ಮೀನುಗಾರಿಕಾ‌‌ ಕಾಲೇಜು ಎರಡು‌ ವರ್ಷಗಳಿಂದ ಅಧ್ಯಯನ ನಡೆಸುತ್ತಿದೆ ಎನ್ನುತ್ತಾರೆ ಕಾಲೇಜಿನ ಡೀನ್ ಸೆಂಥಿಲ್‌ವೇಲ್.

ಇವೆಲ್ಲದರ ಪರಿಣಾಮ ಬೂತಾಯಿ, ಬಂಗುಡೆ ಇನ್ನೂ ಅನೇಕ ಜಾತಿಯ‌ ಮೀನುಗಳ ಸಂತತಿ ಕಡಿಮೆಯಾಗಿದೆ. ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ತಾಪಮಾನ ಕೂಡ ಸಮುದ್ರ ಮೀನುಗಳ ಅಳಿವಿಗೆ ಕಾಣಿಕೆ ನೀಡುತ್ತಿದೆ ಎಂದು ವಿವರಿಸಿದರು.

ನಾಡದೋಣಿ ಮೀನುಗಾರಿಕೆ, ತರಕಾರಿ ಕೃಷಿ, ಕಪ್ಪೆಚಿಪ್ಪು ಆಯುವ ಮೂಲಕ ಬದುಕು ಕಟ್ಟಿಕೊಂಡಿದ್ದ ತೋಕೂರಿನ ನೂರಾರು ಕುಟುಂಬಗಳು ತಮ್ಮ ಮೂಲ ವೃತ್ತಿ ಕಳೆದುಕೊಂಡಿವೆ. ಹಿನ್ನೀರಿನಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಮಾಡಿ ದೋಣಿ ತುಂಬ ಮೀನು ತರುತ್ತಿದ್ದ ಬ್ಯಾರಿ, ಮೊಗವೀರ ಸಮುದಾಯದವರು ಈಗ ಬಹಳಷ್ಟು ದಿನ ಬರಿಗೈಯಲ್ಲಿ ಮರಳುವ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಮೀನುಗಾರ ಅಬ್ದುಲ್ ರೆಹಮಾನ್.

‘ಮಹಾನಗರ ಪಾಲಿಕೆಯ ತ್ಯಾಜ್ಯ ನೀರು‌ಮರವೂರಿನಲ್ಲಿ ನದಿಗೆ ಸೇರುತ್ತಿರುವ‌ ಬಗ್ಗೆ ಗಂಭೀರ ಚರ್ಚೆ ನಡೆದು ಮಾಲಿನ್ಯ ನಿಯಂತ್ರಣ ಮಂಡಳಿಯು‌ ಪಾಲಿಕೆ ವಿರುದ್ಧ ಆರೋಪ‌ ಮಾಡಿತ್ತು. ಆದರೆ, ನಂತರದಲ್ಲಿ ಈ ವಿಷಯ ಮರೆಗೆ ಸರಿದಿದೆ. ಸಾಂದರ್ಭಿಕ ಆರೋಪ, ಚರ್ಚೆಗಳು ನಡೆಯುತ್ತವೆಯೇ ವಿನಾ ನೀರು ವಿಷವಾಗಿ ಭವಿಷ್ಯದಲ್ಲಿ‌ ಸಮಸ್ಯೆ ಉಲ್ಬಣಾವಸ್ಥೆ ತಲುಪಬಹುದಾದ ಸಾಧ್ಯತೆಯ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ಯಾರೂ ಮುಂದಾಗುತ್ತಿಲ್ಲ’ ಎಂದು ಸಾಮಾಜಿಕ‌ ಕಾರ್ಯಕರ್ತ ಮುನೀರ್ ಕಾಟಿಪಳ್ಳ ಆರೋಪಿಸುತ್ತಾರೆ.

ಬೈಕಂಪಾಡಿ ಕೈಗಾರಿಕಾ‌ ಪ್ರದೇಶದಲ್ಲಿರುವ ಹೆಚ್ಚಿನ ಉದ್ದಿಮೆಗಳು ಮಾಲಿನ್ಯ‌ ನಿಯಂತ್ರಣ ನಿಯಮ ಪಾಲನೆಯಲ್ಲಿ
ಎಡವಿವೆ. ರಾಸಾಯನಿಕಗಳು ನದಿ, ಸಮುದ್ರ ಸೇರುತ್ತಿವೆ. ಇದರ ಅಧ್ಯಯನಕ್ಕೆ ಸಮಿತಿ ರಚಿಸುವ ಪ್ರಸ್ತಾಪ ಆಗಿದ್ದರೂ, ಅದು ಅಷ್ಟಕ್ಕೇ ನಿಂತಿದೆ ಎಂದು ಪರಿಸರ ಕಾರ್ಯಕರ್ತ ಶಶಿಧರ ಶೆಟ್ಟಿ ದೂರುತ್ತಾರೆ.

‘ದೃಢಪಟ್ಟಲ್ಲಿ ಕ್ರಮ ನಿಶ್ಚಿತ’

ಎಂಆರ್‌ಪಿಎಲ್‌ನಿಂದ ಹೊರಬಿಡುತ್ತಿರುವ ಎಣ್ಣೆ ಮಿಶ್ರಿತ ತ್ಯಾಜ್ಯದಿಂದ ಜಲಮೂಲಗಳು ಕಲುಷಿತಗೊಳ್ಳುತ್ತಿರುವ ದೂರಿಗೆ ಸಂಬಂಧಿಸಿ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಎರಡು ಬಾರಿ ವಿಚಾರಣೆ ನಡೆದಿದೆ. ಮುಂದಿನ ವಾರ ಮೂರನೇ ಹಿಯರಿಂಗ್ ನಡೆಯಲಿದೆ.

ಎಂಆರ್‌ಪಿಎಲ್ ಆವರಣದೊಳಗೆ ಪರಿಶೀಲನೆ ನಡೆಸಿ, ವರದಿ ನೀಡುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಜಿಲ್ಲಾಡಳಿತ ಈಗಾಗಲೇ ಸೂಚನೆ ನೀಡಿದೆ.

ಈ‌ ಕುರಿತು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರ ಗಮನ ಸೆಳೆದಾಗ, ‘ಕಾರಣ ಹುಡುಕಿ ಶಾಶ್ವತ ಪರಿಹಾರ ಕಂಡುಕೊಳ್ಳುವ ತನಕ ಪ್ರಕರಣ ಮುಕ್ತಾಯಗೊಳಿಸುವ ಪ್ರಮೇಯವಿಲ್ಲ.‌ ಯಾವ ಕೈಗಾರಿಕೆಯೂ ಪರಿಸರಕ್ಕೆ ಹಾನಿ ಮಾಡಬಾರದು. ಪರಿಸರ ಹಾನಿಯಾಗುತ್ತಿರುವ ಸಂಗತಿ ದೃಢಪಟ್ಟಲ್ಲಿ ಪರಿಸರ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಗತ್ಯವಿದ್ದಲ್ಲಿ ಉನ್ನತ ಸಮಿತಿ ರಚಿಸಿ ತನಿಖೆ ನಡೆಸಲಾಗುವುದು’ ಎಂದರು.

‘ಪೈಪ್‌ಲೈನ್ ಅಳವಡಿಕೆಗೆ ಯೋಜನೆ’

‘ಪಾಲಿಕೆಯ ಶುದ್ಧೀಕರಣ ಘಟಕದಲ್ಲಿ ಸಂಸ್ಕರಣೆ ‌ಮಾಡಿದ ನೀರನ್ನು ನದಿಗೆ‌‌ ಬಿಡಲಾಗುತ್ತದೆ. ಆದರೆ, ಸಾರ್ವಜನಿಕರ ಆರೋಪದ ಹಿನ್ನೆಲೆಯಲ್ಲಿ ಎನ್ಐಟಿಕೆ ಸುರತ್ಕಲ್‌ನಿಂದ ವರದಿ ಪಡೆಯಲಾಗಿದ್ದು, ಪೈಪ್‌ಲೈನ್ ಅಳವಡಿಸಿ ಆಳದಲ್ಲಿ ನೀರು ಬಿಡುವ ಸಂಬಂಧ ಯೋಜನೆ ರೂಪಿಸಲಾಗಿದೆ. ಶೇಖರಣೆಯಾಗಿರುವ ಹಳೆಯ ತ್ಯಾಜ್ಯ ತೆರವುಗೊಳಿಸುವ ಪ್ರಸ್ತಾವವನ್ನು ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಅನುಮತಿ ದೊರೆತ ಕೂಡಲೇ ತೆರವುಗೊಳಿಸಿದರೆ, ನದಿಗೆ ಇಲ್ಲಿನ ನೀರು ಸೇರುತ್ತದೆ ಎಂಬ ಆರೋಪಕ್ಕೆ ಶಾಶ್ವತ ಪರಿಹಾರ ದೊರೆತಂತಾಗುತ್ತದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದರು.

ಘನತ್ಯಾಜ್ಯದ ಕಲುಷಿತ ನೀರು

ಫಲ್ಗುಣಿ ನದಿಗೆ ಕೈಗಾರಿಕಾ ತ್ಯಾಜ್ಯ ಮಾತ್ರವಲ್ಲ, ನಗರದ ಪಚ್ಚನಾಡಿಯಲ್ಲಿರುವ ಮಹಾನಗರ ಪಾಲಿಕೆಯ ತ್ಯಾಜ್ಯ ಸಂಸ್ಕರಣಾ ಘಟಕದ ಕಲುಷಿತ ನೀರೂ ಸೇರುತ್ತಿದೆ. ಫಲ್ಗುಣಿ ನದಿಗೆ ಮರವೂರು ಬಳಿ ಅಣೆಕಟ್ಟೆ ನಿರ್ಮಿಸಲಾಗಿದ್ದು, ಇಲ್ಲಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಈ ಅಣೆಕಟ್ಟೆಗೆ ತ್ಯಾಜ್ಯ ಘಟಕದ ಕಲುಷಿತ ನೀರು ಸೇರುತ್ತಿದೆ. ಪ್ರಕರಣವು ಹೈಕೋರ್ಟ್‌ ಮೆಟ್ಟಿಲೇರಿದೆ.

‘ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಕ್ಕೆ ಸಂಗ್ರಹವಾಗುವ 250-300 ಟನ್‍ಗಳಷ್ಟು ಘನತ್ಯಾಜ್ಯವನ್ನು ಪಚ್ಚನಾಡಿ ಡಂಪಿಂಗ್ ಯಾರ್ಡ್‍ನಲ್ಲಿ ಸುರಿಯಲಾಗುತ್ತಿದೆ. ಈ ಕಸದ ರಾಶಿಯ ಕಲುಷಿತ ನೀರು, ಹತ್ತಿರದಲ್ಲಿಯೇ ಹರಿಯುವ ಫಲ್ಗುಣಿ ನದಿಗೆ ಸೇರಿ, ಮರವೂರು ಕುಡಿಯುವ ನೀರಿನ ಕಿಂಡಿ ಅಣೆಕಟ್ಟೆಯ ನೀರು ಮಲಿನಗೊಳ್ಳುತ್ತಿದೆ. ಇದನ್ನು ಕುಡಿಯುವ 15–20 ಗ್ರಾಮಗಳ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ’ ಎಂದುಮಹಾನಗರ ಪಾಲಿಕೆ ಸದಸ್ಯ ಎ.ಸಿ. ವಿನಯ್‌ರಾಜ್ ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT