ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಕರ್ನಾಟಕದ ಕೊಬ್ಬರಿ- ಉತ್ತರದಲ್ಲಿ ಎಣ್ಣೆ ತಯಾರಿ

ಉತ್ಪನ್ನದ ಬಹುಭಾಗ ಹೊರ ರಾಜ್ಯಗಳಿಗೆ ರವಾನೆ
Last Updated 14 ಮೇ 2022, 20:52 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯಲ್ಲಿ ರೈತರಿಗೆ ಅಡಿಕೆ ಬೆಳೆಯಷ್ಟು ಪ್ರೀತಿ ತೆಂಗಿನ ಮೇಲಿಲ್ಲ. ಹಿರಿಯರು ನೆಟ್ಟು ಬೆಳೆಸಿರುವ ಮರಗಳು ಆದಾಯ ಕೊಡುತ್ತಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 37 ಸಾವಿರ ಹೆಕ್ಟೇರ್‌ನಲ್ಲಿ ತೆಂಗು ಬೆಳೆಯಲಾಗುತ್ತಿದೆ. ‘ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರ್ಷಿಕ ₹92 ಕೋಟಿ ಮೌಲ್ಯದ ಕೊಬ್ಬರಿ ಹೊರ ರಾಜ್ಯಗಳಿಗೆ ಹೋಗುತ್ತದೆ. ಶೇ 5ರಷ್ಟು ಮಾತ್ರ ಸ್ಥಳೀಯವಾಗಿ ಎಣ್ಣೆಗೆ ಬಳಕೆಯಾಗುತ್ತದೆ. ಹಳ್ಳಿಗಳಲ್ಲಿ ಇದ್ದ ಎಣ್ಣೆ ಗಾಣಗಳು, ಗೃಹ ಬಳಕೆಗೆ ಬೇಕಾಗುವಷ್ಟು ಉತ್ಪಾದನೆಗೆ ಸೀಮಿತ. ಜಿಲ್ಲೆಯಲ್ಲಿರುವ ಕೆಲವು ಎಣ್ಣೆ ತಯಾರಿಕಾ ಕಂಪನಿಗಳು, ಕಡಿಮೆ ದರಕ್ಕೆ ಸಿಗುವ ಹೊರ ಜಿಲ್ಲೆಗಳ ಕೊಬ್ಬರಿ ಖರೀದಿಸುತ್ತವೆ’ ಎನ್ನುತ್ತಾರೆ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಪ್ರಸಾದ್ ಶೆಟ್ಟಿ.

ಬೆಳೆಗೆ ನಿರೀಕ್ಷಿತ ದರ ಸಿಗದ ಕಾರಣ ತೆಂಗು ಬೆಳೆಯಲು ಕೃಷಿಕರು ಹಿಂಜರಿಯುತ್ತಿದ್ದಾರೆ. ಇಲ್ಲಿ ಸಂಸ್ಕರಣಾ ವ್ಯವಸ್ಥೆ ರೂಪುಗೊಂಡರೆ ಉತ್ತಮ ಎಂಬುದು ಅವರ ಸಲಹೆ.

ಎಣ್ಣೆ ಉತ್ಪಾದನೆ ಕಡಿಮೆ: ಏಷ್ಯಾದಲ್ಲೇ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆ ಇರುವ ತುಮಕೂರು ಜಿಲ್ಲೆಯ ತಿಪಟೂರು ಹಾಗೂ ಸುತ್ತಮುತ್ತ ಕೊಬ್ಬರಿ ಎಣ್ಣೆ ಉತ್ಪಾದನೆ ಅತಿ ಕಡಿಮೆ ಪ್ರಮಾಣದಲ್ಲಿ ಇದೆ.

ಅಲ್ಲಲ್ಲಿ ಗಾಣಗಳಿದ್ದರೂ ಎಣ್ಣೆ ಉತ್ಪಾದಿಸಿ ಮಾರಾಟ ಮಾಡುವುದು ಕಡಿಮೆ. ಗೃಹಬಳಕೆಗೆ ಅಲ್ಪ ಪ್ರಮಾಣದಲ್ಲಿ ಬಳಕೆ ಮಾಡುತ್ತಾರೆ. ಇಲ್ಲಿ ಅಡುಗೆಗೆ ಕೊಬ್ಬರಿ ಎಣ್ಣೆ ಬಳಕೆ ಕಡಿಮೆಯಾಗುತ್ತಿದೆ. ಶೇಂಗಾ, ಸೂರ್ಯಕಾಂತಿ, ತಾಳೆಎಣ್ಣೆ ಬಳಕೆ ಹೆಚ್ಚುತ್ತಿದೆ. ತೆಂಗು, ಕೊಬ್ಬರಿಯನ್ನು ಉತ್ತರ ಭಾರತಕ್ಕೆ ಕಳುಹಿಸಲಾಗುತ್ತದೆ.

ಹೊರ ರಾಜ್ಯಗಳಿಗೆ ರವಾನೆ: ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಎಪಿಎಂಸಿ ಮಾರುಕಟ್ಟೆಯ ಕೊಬ್ಬರಿ ಮಂಡಿ ವರ್ತಕರು ತಾವು ಖರೀದಿಸುವ ಬಹುತೇಕ ಕೊಬ್ಬರಿಯನ್ನು ಆಹಾರ ಪದಾರ್ಥಗಳ ತಯಾರಿಕೆಗೆ ಬೇರೆ ರಾಜ್ಯಗಳಿಗೆ ಕಳುಹಿಸುತ್ತಾರೆ.

‘ಅರಸೀಕೆರೆ ಕೊಬ್ಬರಿಗೆ ಹೆಚ್ಚು ಬೇಡಿಕೆ ಇದೆ. ಇಲ್ಲಿನ ಕೊಬ್ಬರಿ ಬೇಕರಿ ತಿನಿಸುಗಳು ಮತ್ತು ಚಟ್ನಿ ಪುಡಿ ತಯಾರಿಕೆಗೆ ರಫ್ತಾಗುತ್ತದೆ, ಕೊಬ್ಬರಿ ಎಣ್ಣೆ ತಯಾರಿಕೆಯಲ್ಲಿ ಹೆಚ್ಚಾಗಿ ಕೊಬ್ಬರಿಯ ಕೌಟು ಅನ್ನು ಬಳಸಲಾಗುತ್ತದೆ’ ಎನ್ನುತ್ತಾರೆ ವರ್ತಕ ಗುರು.

‘ನಮ್ಮ ಕಾರ್ಖಾನೆಯಲ್ಲಿ ನಿತ್ಯ 300 ಕೆ.ಜಿ.ಗೂ ಹೆಚ್ಚು ಕೊಬ್ಬರಿಯನ್ನು ಎಣ್ಣೆ ತಯಾರಿಕೆಗೆ ಬಳಸಲಾಗುತ್ತದೆ. ನಮಗೆ ಬೇರೆಡೆ ಮಾರುಕಟ್ಟೆ ಲಭ್ಯವಿಲ್ಲದ ಕಾರಣ ಸ್ಥಳೀಯವಾಗಿ ಮಾತ್ರ ವ್ಯಾಪಾರ ನಡೆಯುತ್ತದೆ’ ಎಂದು ವರ್ತಕ ಮೂರ್ತಿ ಹೇಳಿದರು.

ಪೂರಕ ಮಾಹಿತಿ: ಕೆ.ಜೆ. ಮರಿಯಪ್ಪ, ಕೆ.ಎಸ್.ಸುನಿಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT