ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇರಾ: ಕಟ್ಟುನಿಟ್ಟಿನ ಕ್ರಮಕ್ಕೆ ಮೀನಮೇಷ...?

ರೇರಾ ಸುತ್ತಮುತ್ತ
Last Updated 15 ಜೂನ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಿಯಲ್‌ ಎಸ್ಟೇಟ್‌ ಪ್ರಾಧಿಕಾರವು ಅಸ್ತಿತ್ವಕ್ಕೆ ಬಂದ ಬಳಿಕ ಇದುವರೆಗೆ ಮನೆ ಖರೀದಿದಾರರ 117 ದೂರುಗಳ ಸಂಬಂಧ ವಸೂಲಾತಿ ಆದೇಶ ಹೊರಡಿಸಿದೆ. ಬಿಲ್ಡರ್‌ಗಳು ಈ ಆದೇಶ ಪಾಲಿಸದಿದ್ದರೆ ಅದನ್ನು ಜಾರಿಗೊಳಿಸುವುದು ಸಂಬಂಧಪಟ್ಟ ಜಿಲ್ಲಾಧಿಕಾರಿಯ ಕರ್ತವ್ಯ. ಆದರೆ, ವಸೂಲಾತಿ ನಡೆಸಿ ದೂರುದಾರರಿಗೆ ನ್ಯಾಯ ಸಿಕ್ಕಿರುವ ಒಂದೇ ಒಂದು ಉದಾಹರಣೆಯೂ ರಾಜ್ಯದಲ್ಲಿ ಇಲ್ಲ.

‘ಪ್ರಾಧಿಕಾರವು ವಸೂಲಾತಿಗೆ ಆದೇಶ ಹೊರಡಿಸಿರುವುದಷ್ಟೇ ಒಳ್ಳೇ ಬೆಳವಣಿಗೆ. ಅದು ಬಿಟ್ಟರೆ, ದೂರುದಾರರು ಸಮಾಧಾನಪಟ್ಟು ಕೊಳ್ಳುವಂತಹದ್ದೇನೂ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಇಲ್ಲಿಯವರೆಗೆ ದೂರು ನೀಡಿರುವ ಗ್ರಾಹಕರು.

‘ರಿಯಲ್‌ ಎಸ್ಟೇಟ್‌ ಕಂಪನಿಗಳಿಂದ ವಂಚನೆಗೆ ಒಳಗಾದ ಪ್ರಕರಣಗಳಲ್ಲಿ ಇಡೀ ದೇಶದಲ್ಲಿ ಎರಡು ಮೂರು ಪ್ರಕರಣಗಳಲ್ಲಿ ಮಾತ್ರ ಪ್ರಾಧಿಕಾರಗಳು ಹೊರಡಿಸಿದ ವಸೂಲಿ ಆದೇಶವನ್ನು ಜಾರಿಗೊಳಿಸಲಾಗಿದೆ. ಉಳಿದ ಎಲ್ಲ ಕಡೆಯೂ ಈ ಆದೇಶಗಳು ಕಾಗದದಲ್ಲಷ್ಟೇ ಉಳಿದಿವೆ. ಪ್ರಾಧಿಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಅಂಶವನ್ನು ಕಾಯ್ದೆಯಲ್ಲೇ ಸೇರಿಸಬೇಕು’ ಎನ್ನುತ್ತಾರೆ ರೇರಾ ಹೋರಾಟಗಾರ ಅಜಿತ್‌ ನಾಯ್ಕ್‌.

ಇನ್ನಷ್ಟು ಒಳನೋಟ ವಿಶೇಷ ವರದಿಗಳನ್ನು ಓದಲುಈ ಲಿಂಕ್ ಕ್ಲಿಕ್ ಮಾಡಿ:https://www.prajavani.net/tags/olanota

ರಾಜ್ಯದಲ್ಲಿ ಪ್ರಾಧಿಕಾರ ರಚನೆಯಾಗಿ ಎರಡು ವರ್ಷ ಆದರೂ, ಪೂರ್ಣಾವಧಿ ಅಧ್ಯಕ್ಷರ ನೇಮಕ ವಾಗಿದ್ದು ಕಳೆದ ಮೂರು ತಿಂಗಳ ಹಿಂದೆ. ಅಲ್ಲಿವರೆಗೆ ಅಸ್ತಿತ್ವದಲ್ಲಿದ್ದುದ್ದು ಹಂಗಾಮಿ ಪ್ರಾಧಿಕಾರದ ಅಧಿಕಾರಿ ಅಷ್ಟೇ. ಕಾಯ್ದೆ ಜಾರಿಗೆ ಪೂರಕ ನಿಯಮಗಳನ್ನು ರೂಪಿಸುವ ಅಧಿಕಾರ ಅವರಿಗೆ ಇರಲಿಲ್ಲ. ಹಾಗಾಗಿ ತೀರಾ ಇತ್ತೀಚಿನವರೆಗೂ ಅದು ಹಲ್ಲಿಲ್ಲದ ಹಾವಾಗಿಯೇ ಇತ್ತು. ಅಧ್ಯಕ್ಷರ ನೇಮಕದ ಬಳಿಕವೂ ಪ್ರಾಧಿಕಾರ ಅಂಬೆಗಾಲಿಡುತ್ತಿದೆ.

ಪ್ರಾಧಿಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ವ್ಯವಸ್ಥೆ ರೂಪಿಸಬೇಕು. ದೂರುಗಳ ಸತ್ಯಾಸತ್ಯತೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲು ಅಗತ್ಯವಿರುವಷ್ಟು ನ್ಯಾಯನಿರ್ಣಯ ಅಧಿಕಾರಿಗಳ ನೇಮಕವಾಗಬೇಕು. ಆದೇಶ ಜಾರಿ ಬಗ್ಗೆ ನಿಗಾ ಇಡಲು ಸಿಬ್ಬಂದಿ ಬಲ ಬೇಕು. ಕಾಯ್ದೆಯ ಲೋಪ ಗಳನ್ನು ಸರಿಪಡಿಸಬೇಕು. ನಿರ್ಮಾಣದ ಗುಣಮಟ್ಟ ತಪಾಸಣೆಗೆ ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳಬೇಕು. ರೇರಾ ಸಾಗಬೇಕಾದ ಹಾದಿ ಬಹಳಷ್ಟಿದೆ.

ಸದ್ಯದ ಪರಿಸ್ಥಿತಿಯಲ್ಲಿ ವಂಚನೆ ಎಸಗಿದ ಸಂಸ್ಥೆಯ ವಿರುದ್ಧ ವಸೂಲಾತಿಗೆ ಆದೇಶ ಹೊರಡಿಸುವ ಅಧಿಕಾರ ಮಾತ್ರ ಪ್ರಾಧಿಕಾರಕ್ಕೆ ಇದೆ. ಆದರೆ, ಅದನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿ ಜಾರಿಗೊಳಿಸದಿದ್ದರೆ ಮುಂದೇನು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಪ್ರಾಧಿಕಾರದ ಆದೇಶ ವನ್ನು ಜಾರಿಗೊಳಿಸುವ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿ ಗಳಿಗೆ ತಿಳಿವಳಿಕೆ ನೀಡುವ ಪ್ರಯತ್ನಗಳೂ ನಡೆದಿಲ್ಲ.

ಪೊಲೀಸ್‌ ಹಾಗೂ ಕಂದಾಯ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ವಿಚಕ್ಷಣಾ ದಳವನ್ನು ಹೊಂದುವ ಪ್ರಸ್ತಾವ ಪ್ರಾಧಿಕಾರದ ಮುಂದಿದೆ. ರಿಯಲ್‌ ಎಸ್ಟೇಟ್‌ ಹೆಸರಿನಲ್ಲಿ ನಡೆಯುವ ಅವ್ಯವಹಾರ ತಡೆಯಲು, ಒಪ್ಪಂದಗಳು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ಮಾಡಲು ಇದರಿಂದ ಸಾಧ್ಯ. ಆದರೆ ಅದು ಯಾವ ಕಾಲಕ್ಕೆ ಅನುಷ್ಠಾನಕ್ಕೆ ಬರುತ್ತದೆ ಎಂಬುದು ಯಕ್ಷ ಪ್ರಶ್ನೆ.

ರೇರಾ ಆದೇಶ ಪಾಲಿಸದ ಸಂಸ್ಥೆಗಳ ವಿರುದ್ಧ ವಸುಲಾತಿ ಆದೇಶ ನೀಡುವುದಷ್ಟೇ ಅಲ್ಲ, ಅದರ ಮಾಲೀಕರನ್ನು ಜೈಲಿಗಟ್ಟುವುದಕ್ಕೂ ಕಾಯ್ದೆಯಲ್ಲಿ ಅವಕಾಶ ಇದೆ. ಆದರೆ, ಈ ಅಧಿಕಾರವನ್ನು ವಿವೇಚನೆಯಿಂದ ಬಳಸಿಕೊಳ್ಳಬೇಕು. ಇಲ್ಲದಿದ್ದರೆ ಈ ಕಾಯ್ದೆ ಗ್ರಾಹಕರ ಹಿತ ಕಾಯುವ ಬದಲು ತಿರುಗುಬಾಣ ಆಗಬಲ್ಲದು ಎಂದು ಎಚ್ಚರಿಸುತ್ತಾರೆ ರೇರಾ ಹೋರಾಟಗಾರರು.

ನೂರಾರು ಮನೆಗಳನ್ನು ನಿರ್ಮಿಸುತ್ತಿರುವ ರಿಯಲ್‌ ಎಸ್ಟೇಟ್‌ ಸಂಸ್ಥೆಯಿಂದ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದರೆ, ಉಳಿದ ಕಟ್ಟಡ ನಿರ್ಮಾಣ ಚಟುವಟಿಕೆ ಮೇಲೂ ಅದರ ಪರಿಣಾಮ ಉಂಟಾಗುವ ಅಪಾಯವೂ ಇರುತ್ತದೆ. ನಿರ್ಮಾಣ ಸಂಸ್ಥೆಯಿಂದ ಮನೆ ಖರೀದಿಸಿರುವ ಹತ್ತಿಪ್ಪತ್ತು ಗ್ರಾಹಕರು ಒಮ್ಮೆಲೆ ದೂರು ನೀಡುವ ಪರಿಸ್ಥಿತಿ ಉಂಟಾಯಿತು ಎಂದಿಟ್ಟುಕೊಳ್ಳಿ. ಇಂತಹ ಸಂದರ್ಭದಲ್ಲಿ ಆ ಸಂಸ್ಥೆ ವಿರುದ್ಧ ರೇರಾ ಕಟ್ಟುನಿಟ್ಟಿನ ಆದೇಶ ನೀಡಿದರೆ, ಆ ಸಂಸ್ಥೆಯಿಂದ ಮನೆ ಖರೀದಿ ಮಾಡಿರುವ ಇತರರೂ ತೊಂದರೆ ಎದುರಿಸಬೇಕಾಗುತ್ತದೆ. ಹಾಗಾಗಿ ತೀರಾ ಅನಿವಾರ್ಯ ಆದರೆ ಮಾತ್ರ ನಿರ್ಮಾಣ ಸಂಸ್ಥೆಗಳ ಮೇಲೆ ಗದಾ ಪ್ರಹಾರ ಮಾಡಬೇಕು ಎಂಬುದು ಕೆಲವರ ವಾದ.

‘ಗ್ರಾಹಕರನ್ನು ವಂಚಿಸುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದೂ ಸರಿಯಲ್ಲ. ಪ್ರಾಧಿಕಾರವು ಯಾವುದಾದರೂ ನಿರ್ಮಾಣ ಸಂಸ್ಥೆ ವಿರುದ್ಧ ವಸೂಲಾತಿ ಆದೇಶ ನೀಡಿದರೆ ಅದು ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಪ್ರಾಧಿಕಾರದ ಬಗ್ಗೆ ಗ್ರಾಹಕರಲ್ಲಿ ವಿಶ್ವಾಸ ಮೂಡಲು ಸಾಧ್ಯ’ ಎನ್ನುತ್ತಾರೆ ರೇರಾ ಹೋರಾಟಗಾರ ಅಜಿತ್‌ ನಾಯ್ಕ್‌.

ಈ ಕಾಯ್ದೆಯ ಆಶಯ ಈಡೇರಬೇಕಿದ್ದರೆ ಪ್ರಾಧಿಕಾರವನ್ನು ಬಲಪಡಿಸಿದರಷ್ಟೇ ಸಾಲದು. ಇಡೀ ಸರ್ಕಾರಿ ಯಂತ್ರ ಈ ಕಾಯ್ದೆಯ ಅನುಷ್ಠಾನಕ್ಕೆ ಸಹಕರಿಸಬೇಕು. ಬಿಬಿಎಂಪಿ, ಬಿಡಿಎ, ಪಾಲಿಕೆಗಳು, ಉಪನೋಂದಣಾಧಿಕಾರಿ ಕಚೇರಿಗಳ ಪಾತ್ರವೂ ಇದರಲ್ಲಿ ಪ್ರಮುಖವಾಗುತ್ತದೆ. ಇಲ್ಲಿನ ಸಿಬ್ಬಂದಿಗೂ ತರಬೇತಿ ನೀಡಬೇಕಾಗುತ್ತದೆ. ಆದರೆ, ಅಂತಹ ದಿನಗಳು ಬರುವುದು ಯಾವಾಗ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.

ನೋಂದಣಿ– ಪಟ್ಟು ಹಿಡಿಯಲು ಅಂಜಿಕೆ

ಗ್ರಾಹಕರು ನಿರ್ಮಾಣ ಸಂಸ್ಥೆಗಳಿಂದ ಆಸ್ತಿ ಖರೀದಿ ಮಾಡುವಾಗ ಅದರ ಒಟ್ಟು ಮೊತ್ತದ ಶೇ 0.1ರಷ್ಟು ಶುಲ್ಕ ಪಾವತಿಸಿ ‘ಖರೀದಿ ಒಪ್ಪಂದ ಪತ್ರ’ವನ್ನು (ಅಗ್ರಿಮೆಂಟ್‌ ಫಾರ್‌ ಸೇಲ್‌) ಪ್ರಾಧಿಕಾರದಲ್ಲಿ ನೋಂದಣಿ ಮಾಡಬೇಕು.

500 ಚ. ಮೀಗಿಂತ ಹೆಚ್ಚು ಜಾಗದಲ್ಲಿ ನಿರ್ಮಿಸಿದ ಅಥವಾ 8 ಫ್ಲ್ಯಾಟ್‌ಗಿಂತ ಹೆಚ್ಚು ಮನೆ ಇರುವ ಪ್ರತಿ ಯೋಜನೆಯ ನೋಂದಣಿ ಕಡ್ಡಾಯ. ರೇರಾ ಜಾರಿಗೆ ಬರುವಾಗ ಯಾವೆಲ್ಲ ಹಳೆಯ ಯೋಜನೆಗಳು ಸ್ವಾಧೀನಾನುಭವ ಪ್ರಮಾಣಪತ್ರ ಪಡೆದಿರಲಿಲ್ಲವೋ, ಅವೆಲ್ಲವೂ ಈ ಕಾಯ್ದೆ ವ್ಯಾಪ್ತಿಗೆ ಬರುತ್ತವೆ. ಆದರೆ ಇಂತಹ ಸಾವಿರಾರು ಯೋಜನೆಗಳು ಇದುವರೆಗೂ ನೋಂದಣಿ ಆಗಿಲ್ಲ.

ಈ ಕಾಯ್ದೆ ಸಮರ್ಪಕವಾಗಿ ಜಾರಿಯಾದರೆ ಗ್ರಾಹಕರಿಗೆ ಮಾತ್ರವಲ್ಲ, ಕ್ರಮಬದ್ಧ ವ್ಯವಹಾರ ನಡೆಸುವ ನಿರ್ಮಾಣ ಸಂಸ್ಥೆಗಳಿಗೂ ತಲೆನೋವು ಕಡಿಮೆಯಾಗುತ್ತದೆ. ಆದರೂ ಬಹುತೇಕ ಯೋಜನೆಗಳು ನೋಂದಣಿ ಆಗದಿರುವುದಕ್ಕೆತೆರೆಮರೆಯಲ್ಲಿ ಅನೇಕ ಕಾರಣಗಳಿವೆ.

ಖರೀದಿ ಒಪ್ಪಂದ ಪತ್ರವನ್ನು ನೋಂದಣಿ ಮಾಡಿಸಿದರೆ, ನಿರ್ಮಾಣ ಸಂಸ್ಥೆ ಅದರಲ್ಲಿರುವ ಷರತ್ತುಗಳಿಗೆ ಕಟಿಬದ್ಧವಾಗಬೇಕಾಗುತ್ತದೆ. ಗ್ರಾಹಕರಿಗೆ ಕಾನೂನು ಬಲ ಸಿಗುತ್ತದೆ. ಕಾಮಗಾರಿಯಲ್ಲಿ ಲೋಪ ಆದರೆ, ಹೊಣೆ ಹೊರಬೇಕಾಗುತ್ತದೆ. ಸ್ವಾಧೀನಾನುಭವ ಪ್ರಮಾಣಪತ್ರ ಪಡೆದ ಐದು ವರ್ಷದೊಳಗೆ ಕಟ್ಟಡದಲ್ಲಿ ದೋಷ ಕಾಣಿಸಿಕೊಂಡರೆ ಸಂಸ್ಥೆಯೇ ದುರಸ್ತಿಪಡಿಸಿಕೊಡಬೇಕಾಗುತ್ತದೆ. ಇಂತಹ ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಉದ್ದೇಶದಿಂದಲೇ ನಿರ್ಮಾಣ ಸಂಸ್ಥೆಗಳು ಖರೀದಿ ಒಪ್ಪಂದವನ್ನು ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಲು ಮೀನಮೇಷ ಎಣಿಸುತ್ತವೆ.

‘ನೋಂದಣಿಗೆ ನಾವೇನಾದರೂ ಪಟ್ಟು ಹಿಡಿದರೆ, ನಿರ್ಮಾಣ ಸಂಸ್ಥೆಯವರು ನಮ್ಮ ಮನೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಿಕೊಡುತ್ತಾರೋ ಇಲ್ಲವೋ’ ಎಂಬ ಅಂಜಿಕೆಯನ್ನು ಗ್ರಾಹಕರೂ ವ್ಯಕ್ತಪಡಿಸುತ್ತಿದ್ದಾರೆ.

* ಸ್ವಂತ ಮನೆ ಕನಸು ಕಾಣುವ ಗ್ರಾಹಕರ ಹಕ್ಕುಗಳನ್ನು ರಕ್ಷಿಸುವುದು ಮತ್ತು ನಿರ್ಮಾಣ ವಲಯದಲ್ಲಿನ ಎಲ್ಲ ಸಂಸ್ಥೆ ಮತ್ತು ಡೆವಲಪರ್ ಗಳನ್ನು ಕಾನೂನಿನ ಚೌಕಟ್ಟಿಗೆ ತರುವುದು ಕಾಯ್ದೆಯ ಉದ್ದೇಶ.

*ನಿರ್ಮಾಣ ಸಂಸ್ಥೆ/ ಡೆವಲಪರ್ ಗಳಿಂದ ಆಗುತ್ತಿದ್ದ ಕಿರುಕುಳ, ನಷ್ಟ, ವಿನ್ಯಾಸದಲ್ಲಿ ಬದಲಾವಣೆ, ಮೊತ್ತದಲ್ಲಿ ಹೆಚ್ಚಳ, ಕಳಪೆ ಗುಣಮಟ್ಟದ ನಿರ್ಮಾಣ, ಗ್ರಾಹಕರಿಗೆ ಮಾಹಿತಿ ನೀಡದೆ ಮಾಲಿಕತ್ವವನ್ನು ಬೇರೆಯವರಿಗೆ ಹಸ್ತಾಂತರಿಸುವುದು, ನಿಗದಿತ ಕಾಲಮಿತಿಯಲ್ಲಿ ಹಸ್ತಾಂತರಿಸದಿರುವುದು, ಅಗತ್ಯ ದಾಖಲೆ ನೀಡದೆ ಸತಾಯಿಸುವುದು ಇತ್ಯಾದಿ ತೊಂದರೆಗಳಿಂದ ಗ್ರಾಹಕರನ್ನು ಮುಕ್ತಗೊಳಿಸುವ ಜತೆಯಲ್ಲೇ, ಸರ್ಕಾರಕ್ಕೆ ಆಗುತ್ತಿದ್ದ ಆರ್ಥಿಕ ವಂಚನೆಗಳನ್ನು ತಪ್ಪಿಸಬೇಕು ಎಂಬ ದಶಕಗಳ ಬೇಡಿಕೆ ಹಿನ್ನಲೆಯಲ್ಲಿ ಈ ಕಾನೂನು ಜಾರಿಗೊಳಿಸಲಾಯಿತು.

*ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಯುವ ನಿರ್ಮಾಣ ಕ್ಷೇತ್ರದಲ್ಲಿದ್ದ ಬಹುತೇಕ ಸಂಸ್ಥೆ/ಡೆವಲಪರ್ ಗಳು ಸರ್ಕಾರದ ಹಿಡಿತಕ್ಕೆ ಸಿಕ್ಕದೆ ಮುಕ್ತವಾಗಿ ಆರ್ಥಿಕ ಚಟುವಟಿಕೆಗಳನ್ನು ನಡೆಸುತ್ತಿದ್ದವಲ್ಲದೆ, ಗ್ರಾಹಕರಿಗೆ ಕೋಟ್ಯಂತರ ರೂಗಳನ್ನು ವಂಚಿಸಿದರೂ ಅವರನ್ನು ಕಾನೂನು ಶಿಕ್ಷೆಗೆ ಗುರಿಪಡಿಸುವುದು ಅಸಾಧ್ಯವಾಗಿತ್ತು. ಇದಕ್ಕೆ ತೆರೆ ಎಳೆದು ಗ್ರಾಹಕರು ಮತ್ತು ಕಾನೂನು ವ್ಯಾಪ್ತಿಯಲ್ಲಿ ಚಟುವಟಿಕೆ ನಡೆಸುವ ನಿರ್ಮಾಣ ಸಂಸ್ಥೆಗಳ ಹಿತರಕ್ಷಿಸುವ ಉದ್ದೇಶ ಕಾಯ್ದೆಗಿದೆ.

*ಕನಿಷ್ಠ 500 ಚದರ ಮೀಟರ್ ವಿಸ್ತೀರ್ಣ ಅಥವಾ 8 ಫ್ಲ್ಯಾಟ್ ಇರುವ ಎಲ್ಲ ವಸತಿ ಯೋಜನೆಗಳಿಗೆ ರೇರಾ ಅನ್ವಯಿಸುತ್ತದೆ. ಪ್ರಾಧಿಕಾರಕ್ಕೆ ಅಗತ್ಯ ದಾಖಲೆಗಳಲ್ಲಿ ಯಾವುದೇ ದಾಖಲೆಗಳನ್ನು ನೀಡದೆ ಇದ್ದರೆ ಅಥವಾ ನಿಯಮ ಪಾಲಿಸದಿದ್ದರೆ ಅಂಥ ಏಜೆಂಟ್ ಮತ್ತು ಡೆವಲಪರ್‌ಗಳಿಗೆ ನಿರ್ದಿಷ್ಟ ಯೋಜನೆಯ ಶೇ 10ರಷ್ಟು ದಂಡ ಮತ್ತು ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ.

*ಪ್ರಾಧಿಕಾರದಲ್ಲಿ ನೋಂದಣಿ ಮಾಡದ ಹೊರತು ಡೆವಲಪರ್‌ಗಳು ಯೋಜನೆಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಕಾಯ್ದೆ ಜಾರಿ ವೇಳೆಯಲ್ಲಿ ಬಡಾವಣೆ ಅಥವಾ ಅಪಾರ್ಟ್‌ಮೆಂಟ್‌ ಸಮುಚ್ಚಯ ಯೋಜನೆಗಳಲ್ಲಿಶೇ 60 ರಷ್ಟು ನಿವೇಶನ ಅಥವಾ ಫ್ಲ್ಯಾಟ್‌ಗಳನ್ನು ಗ್ರಾಹಕರಿಗೆ ಕ್ರಯಪತ್ರ ಮಾಡಿಕೊಟ್ಟ ಯೋಜನೆಗಳಿಗೆ ಮಾತ್ರ ರೇರಾ ಕಾಯ್ದೆಯ ನಿಯಮಗಳು ಅನ್ವಯವಾಗುವುದಿಲ್ಲ. ಹೊಸತಾಗಿ ಆರಂಭಗೊಂಡಿರುವ ಮತ್ತು ಇನ್ನು ಮುಂದೆ ಆರಂಭವಾಗುವ ಎಲ್ಲ ಯೋಜನೆಗಳಿಗೆ ರೇರಾ ಅನ್ವಯಿಸುತ್ತದೆ.

*ಅಪಾರ್ಟ್‌ಮೆಂಟ್‌ ಸಮುಚ್ಚಯ ಅಥವಾ ವಸತಿ ಬಡಾವಣೆ ಯೋಜನೆಗಳ ಸಮಗ್ರ ವಿವರಗಳೊಂದಿಗೆ ನೋಂದಾಯಿಸಿ, ಅನುಮೋದನೆ ಪಡೆಯದಿದ್ದರೆ ಫ್ಲಾಟ್‌ ಅಥವಾ ನಿವೇಶನ ಮಾರಾಟಕ್ಕಿದೆ ಎಂದು ಜಾಹೀರಾತು ನೀಡುವುದು, ಮಾರಾಟ ಅಥವಾ ಮುಂಗಡ ಬುಕ್ಕಿಂಗ್ ಮಾಡುವುದು ಶಿಕ್ಷಾರ್ಹ ಅಪರಾಧ. ನೋಂದಣಿ ಮಾಡದೇ ಫ್ಲ್ಯಾಟ್‌ ನೀಡುವುದಾಗಿ ಜಾಹೀರಾತು ನೀಡಿ, ಬುಕ್ಕಿಂಗ್‌ ಮಾಡಿಕೊಳ್ಳು ತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಇವೆ.

*ಯೋಜನೆಗಳ ಪ್ರವರ್ತಕ ಕಂಪೆನಿಗಳು, ಗೃಹ ನಿರ್ಮಾಣ ಸಹಕಾರ ಸಂಘಗಳು ಅಥವಾ ವ್ಯಕ್ತಿಗಳು ರೇರಾ ಪ್ರಾಧಿಕಾರದ ವೆಬ್ ಸೈಟ್‌ನಲ್ಲಿ ಮೊದಲು ನೋಂದಣಿ ಮಾಡಿಕೊಳ್ಳಬೇಕು. ಪ್ರವರ್ತಕ ಕಂಪೆನಿಗಳು ನೀಡುವ ಮಾಹಿತಿ, ದಾಖಲೆ ಆಧರಿಸಿ ರೇರಾ ಅದನ್ನು ಅನುಮೋದನೆ ನೀಡುತ್ತದೆ. ಇಂತಹ ಯೋಜನೆಗಳನ್ನು ನಿಯಮಾನುಸಾರ, ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಖರೀದಿದಾರರಿಗೆ ಫ್ಲ್ಯಾಟ್ ಅಥವಾ ನಿವೇಶನ ಹಂಚಿಕೆ ಮಾಡುವುದು ಪ್ರವರ್ತಕ ಕಂಪನಿಗಳ ಹೊಣೆ.

*ಚಾಲ್ತಿಯಲ್ಲಿರುವ ಹಾಗೂ ಹೊಸದಾಗಿ ಆರಂಭಿಸುವ ಯೋಜನೆಗಳ ಸಂಪೂರ್ಣ ಮಾಹಿತಿ, ಪ್ರವರ್ತಕರ ವೈಯಕ್ತಿಕ ವಿವರ, ಮೂರು ತಿಂಗಳಿಗೊಮ್ಮೆ ಯೋಜನೆಯ ಪ್ರಗತಿಯನ್ನು ಪ್ರಾಧಿಕಾರಕ್ಕೆ ನೀಡುವುದು ಕಡ್ಡಾಯ.

*ಯೋಜನೆಗಳನ್ನು ಅನುಷ್ಠಾನ ಮಾಡುವ ಕಂಪನಿಗಳಲ್ಲದೇ, ರಿಯಲ್‌ ಎಸ್ಟೇಟ್ ಏಜೆಂಟರಾಗಿ ಕೆಲಸ ಮಾಡುವವರೂ ಸೂಕ್ತ ದಾಖಲೆಗಳೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ಏಜೆಂಟ್‌ಗಳು ನೋಂದಣಿಗೆ ₹25 ಸಾವಿರ ಶುಲ್ಕ ಪಾವತಿಸಬೇಕು. ನವೀಕರಣಕ್ಕೆ ₹5 ಸಾವಿರ ನೀಡಬೇಕು. ಸೊಸೈಟಿ/ಕಂಪನಿ/ಪಾಲುದಾರಿಕೆಯ ಸಂಸ್ಥೆ/ ಟ್ರಸ್ಟ್‌ ನೋಂದಣಿಗೆ ₹2 ಲಕ್ಷ ಹಾಗೂ ನವೀಕರಣಕ್ಕೆ ₹25 ಸಾವಿರ ಶುಲ್ಕ ಪಾವತಿಸಬೇಕು.

***

‘ರೇರಾ ಪಾರದರ್ಶಕತೆ ಹಾಗೂ ಬದ್ಧತೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಡೆವಲಪರ್‌ಗಳಲ್ಲಿ ಹೊಣೆಗಾರಿಕೆ ಹೆಚ್ಚಿಸುವ ಹಾಗೂ ಈ ಕ್ಷೇತ್ರದ ಕೆಟ್ಟ ಸಂಪ್ರದಾಯಗಳನ್ನು ಮಟ್ಟ ಹಾಕುವ ಉದ್ದೇಶದಿಂದ ಈ ಕಾಯ್ದೆ ರೂಪಿಸಲಾಯಿತು. ಗ್ರಾಹಕರು ಈ ಕ್ಷೇತ್ರಕ್ಕೂ ಒಂಬುಡ್ಸ್‌ಮನ್‌ ಬೇಕೆಂಬ ನಿರೀಕ್ಷೆ ಹೊಂದಿದ್ದರು. ಕಾಯ್ದೆ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದು ಹೊಸ ಕಾಯ್ದೆಯಾದ ಕಾರಣ, ಬೆರಳೆಣಿಕೆ ರಾಜ್ಯಗಳಷ್ಟೇ ಅನುಷ್ಠಾನಗೊಳಿಸುವ ಆಸಕ್ತಿ ತೋರಿಸಿವೆ. ಕೆ–ರೇರಾ ಆರಂಭವಾದಾಗ, ನಿರ್ಮಾಣ ಯೋಜನೆಗಳನ್ನು ನೋಂದಾಯಿಸಲು ಡೆವೆಲಪರ್‌ಗಳಿಗೆ ನೆರವಾಗಬಹುದಾದ ಅನೇಕ ಅಂಶಗಳ ಕೊರತೆ ಇತ್ತು. ಮಾರ್ಗದರ್ಶನದ ಕೊರತೆ, ಕೆ–ರೇರಾಕ್ಕೆ ಕಾಯಂ ಮುಖ್ಯಸ್ಥ ಅಧ್ಯಕ್ಷರ ನೇಮಕವಾಗದಿದ್ದುದು, ತಾಂತ್ರಿಕ ನೆರವಿನ ಕೊರತೆ ಮತ್ತಿತರ ಕಾರಣಗಳಿಂದ ಡೆವೆಲಪರ್‌ಗಳು ಗೊಂದಲಕ್ಕೊಳಗಾಗಿದ್ದರು. ಈ ಕಾರಣಗಳಿಂದಾಗಿಯೇ ರೇರಾದಲ್ಲಿ ತಮ್ಮ ಯೋಜನೆಗಳನ್ನು ನೋಂದಾಯಿಸಲು ಹಿಂದೇಟು ಹಾಕಿದ್ದರು. ಡೆವೆಲಪರ್‌ಗಳ ಸತತ ಮನವಿಗಳ ಬಳಿಕ ಬಹುತೇಕ ಸಮಸ್ಯೆ ಬಗೆಹರಿದಿವೆ. ಈಗ ನೋಂದಣಿ ಪ್ರಕ್ರಿಯೆ ಚುರುಕುಗೊಂಡಿದೆ. ಕೆಲವೇ ವರ್ಷಗಳಲ್ಲಿ ಮಹತ್ವದ ಬದಲಾವಣೆ ತರುವಲ್ಲಿ ರೇರಾ ನೆರವಿಗೆ ಬರಲಿದೆ. ಈಗಾಗಲೇ ಡೆವೆಲಪರ್‌ಗಳು ಹೊಸ ನಿರ್ಮಾಣ ಯೋಜನೆಗಳನ್ನು ಪ್ರಕಟಿಸುವಾಗ ತುಂಬಾ ಎಚ್ಚರ ವಹಿಸುತ್ತಿದ್ದಾರೆ. ಎಲ್ಲ ರೀತಿಯ ಮಂಜೂರಾತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.’

–ಕಿಶೋರ್‌ ಜೈನ್‌, ಅಧ್ಯಕ್ಷ, ಕ್ರೆಡೈ, ಬೆಂಗಳೂರು

‘ರಿಯಲ್‌ ಎಸ್ಟೇಟ್‌ ಸಂಸ್ಥೆಗಳಿಂದ ಮೋಸ ಹೋದವರು ಅಳಲು ಹೇಳಿಕೊಳ್ಳಲು ಒಂದು ವ್ಯವಸ್ಥೆ ಇರಲಿಲ್ಲ. ರೇರಾ ಈ ಕೊರತೆ ನೀಗಿಸಿದೆ. ಇದು ಈಗಷ್ಟೇ ಅಂಬೆಗಾಲಿಡುತ್ತಿರುವ ಸಂಸ್ಥೆ. ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರ ವಿಶ್ವಾಸಗಳಿಸುವ ದೊಡ್ಡ ಹೊಣೆ ಈ ಪ್ರಾಧಿಕಾರದ ಮೇಲಿದೆ. ಇದನ್ನು ಇನ್ನಷ್ಟು ಬಲಪಡಿಸುವ ಹೊಣೆ ಸರ್ಕಾರದ್ದು’.

– ಅಜಿತ್‌ ಎನ್‌.ನಾಯ್ಕ್‌, ರೇರಾ ಹೋರಾಟಗಾರ

‘ಕಾಯಂ ಅಧ್ಯಕ್ಷರ ನೇಮಕದ ಬಳಿಕವಾದರೂ ಪ್ರಾಧಿಕಾರ ಗ್ರಾಹಕ ಸ್ನೇಹಿ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ನಾವು ಹೊಸಬರು, ಸಿಬ್ಬಂದಿ ಕೊರತೆ ನೆಪ ಹೇಳುತ್ತಾರೆ. ಸಾಫ್ಟ್‌ವೇರ್‌ ಸಮಸ್ಯೆ ಇದೆ ಎಂಬ ಹಾರಿಕೆಯ ಉತ್ತರ ನೀಡುತ್ತಾರೆ. ಹೀಗಾಗಿ, ಪ್ರಾಧಿಕಾರ ಪಾರದರ್ಶಕ ವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅನುಮಾನ ಮೂಡುತ್ತಿದೆ.’

– ಎಂ.ಎಸ್.ಶಂಕರ್‌, ರೇರಾ ಹೋರಾಟಗಾರ

ನಿಯಮಗಳಲ್ಲಿ ಇಲ್ಲ ತಾಳ ಮೇಳ

ಕೇಂದ್ರ ಸರ್ಕಾರ ರೂಪಿಸಿದ ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆಯ (ರೇರಾ) ಅಂಶಗಳಿಗೂ ಹಾಗೂ ರಾಜ್ಯ ಸರ್ಕಾರ ರೂಪಿಸಿ ಜಾರಿಗೊಳಿಸಿರುವ ನಿಯಮಗಳಿಗೂ ಹೊಂದಾಣಿಕೆ ಆಗುತ್ತಿಲ್ಲ. ರಿಯಲ್‌ ಎಸ್ಟೇಟ್‌ ಚಟುವಟಿಕೆಗೆ ಸಂಬಂಧಿಸಿದ
ವ್ಯಾಖ್ಯಾನಗಳಲ್ಲೂಪ್ರಬಲ ವ್ಯತ್ಯಾಸವಿದೆ.

ಕೇಂದ್ರವು ಕಾಯ್ದೆ ರೂಪಿಸಿದ ಬಳಿಕ ರಾಜ್ಯ ಸರ್ಕಾರ ತನ್ನ ಕಾಯ್ದೆಯಲ್ಲಿ ಹಾಗೂ ನಿಯಮಗಳಲ್ಲಿ ಕೆಲ ಅಂಶಗಳನ್ನು ಬದಲಿಸಬೇಕಿತ್ತು. ಆದರೆ, ಆ ಪ್ರಕ್ರಿಯೆ ಸಮರ್ಪಕವಾಗಿ ನಡೆದಿಲ್ಲ. ಉದಾಹರಣೆಗೆ ಕೇಂದ್ರದ ಕಾಯ್ದೆ ಪ್ರಕಾರ ಒಂದು ಕಟ್ಟಡಕ್ಕೆ ‘ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ನೀಡಬೇಕಾದರೆ, ಅದಕ್ಕೆ ಕುಡಿಯವ ನೀರು, ವಿದ್ಯುತ್‌ ಹಾಗೂ ಒಳಚರಂಡಿ ಸಂಪರ್ಕ ಇರಲೇ ಬೇಕು. ಆದರೆ, ರಾಜ್ಯದಲ್ಲಿ ಜಾರಿಯಲ್ಲಿರುವ ನಿಯಮಗಳೇ ಬೇರೆ. ಇಲ್ಲಿ ಸಂಬಂಧಪಟ್ಟ ಪ್ರಾಧಿಕಾರದಿಂದ ಕಟ್ಟಡಕ್ಕೆ ಸ್ವಾಧಿನಾನುಭವ ಪ್ರಮಾಣಪತ್ರ ಪಡೆದ ಬಳಿಕವಷ್ಟೇ ಕುಡಿಯುವ ನೀರು ಹಾಗೂ ವಿದ್ಯುತ್‌ ಸಂಪರ್ಕಗಳಿಗೆ ಅರ್ಜಿ ಸಲ್ಲಿಸಬಹುದು.

‘ಇಂತಹ 20ಕ್ಕೂ ಅಧಿಕ ಲೋಪಗಳನ್ನು ಗುರುತಿಸಿದ್ದೇವೆ. 20ಕ್ಕೂ ಅಧಿಕ ವ್ಯಾಖ್ಯಾನಗಳನ್ನು ರಾಜ್ಯವು ಕೇಂದ್ರ ಕಾಯ್ದೆ ಪ್ರಕಾರ ಬದಲಾವಣೆ ಮಾಡಬೇಕಾಗುತ್ತದೆ. ರೇರಾದ ಹೊಸ ಸಮಿತಿಗೂ ಈ ಬಗ್ಗೆ ಪತ್ರ ಬರೆದಿದ್ದೇನೆ’ ಎನ್ನುತ್ತಾರೆ ರೇರಾ ವಿಚಾರವಾಗಿ ಹೋರಾಟ ನಡೆಸಿರುವ ಅಜಿತ್‌ ಎನ್‌.ನಾಯ್ಕ್‌.

ರೇರಾ ಪ್ರಕಾರ, ಅಪಾರ್ಟ್‌ಮೆಂಟ್‌ ನಿರ್ಮಾಣವಾಗುತ್ತಿರುವ ಭೂಮಿಯನ್ನು ಖರೀದಿದಾರರ ಅಸೋಸಿಯೇಷನ್‌ ಹೆಸರಲ್ಲಿ ನೋಂದಾಯಿಸಬೇಕು. ಆದರೆ, ಅದಕ್ಕೆ ಪೂರಕವಾದ ಯಾವ ಕಾಯ್ದೆಯೂ ರಾಜ್ಯದಲ್ಲಿ ಇಲ್ಲ. 1972ರ ಕರ್ನಾಟಕ ಅಪಾರ್ಟ್‌ಮೆಂಟ್ ಸಮುಚ್ಚಯ ಮಾಲೀಕತ್ವ ಕಾಯ್ದೆಯನ್ನು (ಕೆಎಒಎ) ಸರ್ಕಾರ ರೂಪಿಸಿತ್ತು. ಆದರೆ ಅದನ್ನು ಅನುಷ್ಠಾನಗೊಳಿಸಿಲ್ಲ. 1972ರ ಕೆಎಒ ಕಾಯ್ದೆ ಅನುಷ್ಠಾನಗೊಳಿಸುವುದಕ್ಕೆ ಒಂದು ಪ್ರಾಧಿಕಾರವನ್ನು ರಚಿಸಬೇಕಿತ್ತು. ಇಲ್ಲವೇ ಸಹಕಾರ ಇಲಾಖೆಗಾದರೂ ಈ ಹೊಣೆ ವಹಿಸಬೇಕಿತ್ತು. ಅದನ್ನು ಸರ್ಕಾರ ಮಾಡಲೇ ಇಲ್ಲ. ಇತ್ತೀಚಿನವರೆಗೆ 1960ರ ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯ್ದೆ (ಕೆಎಸ್‌ಆರ್‌ಎ) ಇವುಗಳನ್ನು ತಪ್ಪಾಗಿ ನೋಂದಣಿ ಮಾಡಲಾಗುತ್ತಿತ್ತು. ಆದರೆ, ಅಪಾರ್ಟ್‌ಮೆಂಟ್‌ ಸಮುಚ್ಚಯಗಳನ್ನು ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣಕ್ಕೆ2018ರ ಬಳಿಕ ಇಲಾಖೆ ಇದನ್ನೂ ಸ್ಥಗಿತಗೊಳಿಸಿದೆ. ಹಾಗಾಗಿ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಸಂಸ್ಥೆಗಳ ನೋಂದಣಿಗೆ ಅವಕಾಶ ಇಲ್ಲದಂತಾಗಿದೆ. ಈ ಗೊಂದಲ ನಿವಾರಣೆ ಬಗ್ಗೆ ಸ್ಪಷ್ಟ ನಿರ್ಧಾರ ತಳೆಯಲು ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ.

ಈ ಗೊಂದಲ ನಿವಾರಣೆ ಆಗದಿರುವುದು ರಿಯಲ್‌ ಎಸ್ಟೇಟ್‌ ಸಂಸ್ಥೆಗಳಿಗೆ ವರವಾಗಿದೆ. ಅವರು ಇಂತಹ ಲೋಪಗಳನ್ನೇ ಗುರಾಣಿಯಾಗಿಟ್ಟುಕೊಂಡು ತಮ್ಮ ತಪ್ಪುಗಳನ್ನು ಮುಚ್ಚಿಹಾಕುತ್ತಿದ್ದಾರೆ.

ಸಿಬ್ಬಂದಿ ಭರ್ತಿಗೆ ಕ್ರಮ: ಕಾಂಬ್ಳೆ

ಎಂ.ಆರ್‌.ಕಾಂಬ್ಳೆ
ಎಂ.ಆರ್‌.ಕಾಂಬ್ಳೆ

ರಾಜ್ಯದಲ್ಲಿ ಪೂರ್ಣ ಪ್ರಮಾಣದ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು ಅಸ್ತಿತ್ವಕ್ಕೆ ಬಂದ ಮೂರೇ ತಿಂಗಳಲ್ಲಿ 21 ವಿಚಾರಣಾ ಸಭೆ ನಡೆಸಿ 174 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಎಂ.ಆರ್‌.ಕಾಂಬ್ಳೆ ತಿಳಿಸಿದರು.

‘ನಿಯಮ ಉಲ್ಲಂಘಿಸಿದ ಹಲವು ಬಿಲ್ಡರ್‌ಗಳಿಗೆ ದಂಡ ವಿಧಿಸಲಾಗಿದೆ. ರೇರಾ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು ಕೇವಲ ಎರಡು ವರ್ಷವಾಗಿದ್ದು, ತನ್ನ ಬೇರನ್ನು ಭದ್ರಪಡಿಸಿಕೊಳ್ಳುತ್ತಿದೆ’ ಎಂದರು.

* ರೇರಾ ಅಸ್ತಿತ್ವಕ್ಕೆ ಬಂದು 2 ವರ್ಷಗಳಾದರೂ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆ ಸಾಧ್ಯವಾಗಿಲ್ಲ. ಪ್ರಾಧಿಕಾರಕ್ಕೆ ಇರುವ ಅಡ್ಡಿಗಳೇನು?

ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು 2017ರ ಜುಲೈ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದಾಗನಿಂದಲೂ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿರುತ್ತದೆ. 2019ರ ಮಾರ್ಚ್‌ವರೆಗೆ ರಾಜ್ಯದಲ್ಲಿ ಮಧ್ಯಂತರ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು ಕಾರ್ಯನಿರ್ವಹಿಸಿದೆ.2019ರ ಮಾರ್ಚ್‌ನಿಂದ ಪೂರ್ಣ ‍ಪ್ರಮಾಣದ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಕಾರ್ಯವಿಧಾನ ರೂಪಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಖಾಲಿಯಿರುವ ವಿವಿಧ ಶ್ರೇಣಿಯ ಹುದ್ದೆ ಗಳನ್ನು ಭರ್ತಿಗೆ ಕ್ರಮಕೈಗೊಳ್ಳಲಾಗುತ್ತಿದೆ.

* ಮಾರ್ಗಸೂಚಿ ಉಲ್ಲಂಘನೆ ದೂರುಗಳ ತ್ವರಿತ ವಿಲೇವಾರಿ ಆಗುತ್ತಿಲ್ಲ, ತಪ್ಪಿತಸ್ಥ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಆರೋಪಗಳಿವೆ?

ಮಾರ್ಗಸೂಚಿ ಉಲ್ಲಂಘನೆ ದೂರುಗಳ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ. ತಪ್ಪಿತಸ್ಥ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಈವರೆಗೆ 790 ಬಿಲ್ಡರ್‌ಗಳು ದಂಡ ಪಾವತಿಸಿದ್ದಾರೆ.

* ಪ್ರಾಧಿಕಾರಕ್ಕೆ ಇರುವ ಸವಾಲುಗಳು ಮತ್ತು ಸಮಸ್ಯೆಗಳೇನು? ತುರ್ತಾಗಿ ಆಗಬೇಕಾಗಿರುವುದೇನು?

ಸದ್ಯ ಕಾರ್ಯನಿರ್ವಹಿಸುತ್ತಿರುವ ಏಕೈಕ ನ್ಯಾಯ ನಿರ್ಣಯಾಧಿಕಾರಿಯ ಜೊತೆಗೆ ಮತ್ತೊಂದು ನ್ಯಾಯ ನಿರ್ಣಯಾಧಿಕಾರಿಯ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಾಧಿಕಾರದ ವೆಬ್ ಪೋರ್ಟಲಿನ ತಾಂತ್ರಿಕ ಉನ್ನತೀಕರಣಕ್ಕೆ ಏರಿಸಲು ತಾಂತ್ರಿಕ ಘಟಕವನ್ನು ತುರ್ತಾಗಿ ಸ್ಥಾಪಿಸುವ ಕಾರ್ಯ ತ್ವರಿತಗತಿಯಲ್ಲಿ ನಡೆದಿದೆ.

ಲಾಬಿಗೆ ಮಣಿದು ಸಡಿಲ...

ದೇಶದಲ್ಲಿ ರೇರಾ ನಿಯಮದ ಕರಡನ್ನು ಮೊದಲು ಸಿದ್ಧಪಡಿಸಿದ ರಾಜ್ಯ ಕರ್ನಾಟಕ. ಆದರೆ, ನಿಯಮಗಳನ್ನು ದುರ್ಬಲಗೊಳಿಸುವ ಮೂಲಕ ಉಳಿದ ರಾಜ್ಯಗಳ ಸಾಲಿಗೆ ಸೇರ್ಪಡೆಯಾಯಿತು!

ಕೇಂದ್ರ ಸರ್ಕಾರ 2016ರ ಮಾರ್ಚ್‌ ತಿಂಗಳಲ್ಲಿ ಕಾಯ್ದೆ ಜಾರಿ ಮಾಡಿತು. ಎಲ್ಲ ರಾಜ್ಯಗಳು 6 ತಿಂಗಳಲ್ಲಿ ಆಯಾ ರಾಜ್ಯ ಗಳಿಗೆ ಅನ್ವಯಿಸುವ ನಿಯಮಗಳ ಕರಡು ಸಲ್ಲಿಸಲು ಸೂಚಿಸಿತು. ಕರ್ನಾಟಕ ರಾಜ್ಯ 2 ತಿಂಗಳಲ್ಲಿ ಕರಡು ಸಿದ್ಧಪಡಿಸಿತ್ತು. ಬಳಿಕ ಗುಜರಾತ್‌ ಹಾಗೂ ಉತ್ತರ ಪ್ರದೇಶದಲ್ಲಿ ನಿಯಮ ಜಾರಿಗೆ ಬಂ‌ತು. ಕೇಂದ್ರದ ಕಾ‌ಯ್ದೆಯಲ್ಲಿದ್ದ ಕೆಲ ಅಂಶಗಳನ್ನು ಕೈಬಿಟ್ಟು ಈ ರಾಜ್ಯಗಳು ನಿಯಮ ರೂಪಿಸಿದವು. ‘ಬಿಜೆಪಿ ಆಡಳಿತದ ರಾಜ್ಯಗಳಲ್ಲೇ ಕರಡನ್ನು ದುರ್ಬಲಗೊಳಿಸಲಾಗಿದೆ. ಹೀಗಾಗಿ, ಬಿಲ್ಡರ್‌ಗಳ ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ನಾವು ಕೆಲ ಅಂಶಗಳನ್ನು ಕೈಬಿಟ್ಟು ನಿಯಮ ರೂಪಿಸುವುದು ಉತ್ತಮ’ ಎಂದು ನಮ್ಮ ರಾಜ್ಯದ ಕೆಲ ಪ್ರಭಾವಿ ಸಚಿವರು ಪಟ್ಟು ಹಿಡಿದರು. ಆದರೆ,ಅಂದಿನ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಂಭು ದಯಾಳ್‌ ಮೀನಾ ಅದಕ್ಕೆ ಅವಕಾಶ ನೀಡಲಿಲ್ಲ. ಆದರೆ ಅವರು ನಿವೃತ್ತರಾದ ಬಳಿಕ ಕಾಯ್ದೆಯನ್ನು ದುರ್ಬಲಗೊಳಿಸುವ ಪ್ರಯತ್ನಕ್ಕೆ ವೇಗ ಸಿಕ್ಕಿತು. ನಿಯಮಗಳ ಜಾರಿಗೆ ಸಚಿವ ಸಂಪುಟ ಒಪ್ಪಿಗೆ ಬೇಕಿರಲಿಲ್ಲ. ಈ ವಿಷಯವನ್ನು ಸಚಿವ ಸಂಪುಟ ಸಭೆಗೆ ತೆಗೆದುಕೊಂಡು ಹೋಗಿ ಹಲ್ಲು ಕಿತ್ತು ಹಾವಿನಂತೆ ಮಾಡಲಾಯಿತು.

ಹಿಂದಿನ ಸರ್ಕಾರದಲ್ಲಿ ಬೆಂಗಳೂರಿನ ಮೂವರು ಸಚಿವರು ನಿಯಮಗಳನ್ನು ದುರ್ಬಲಗೊಳಿಸಲು ಸಾಕಷ್ಟು ಪ್ರಯತ್ನ ಪಟ್ಟರು. ಅದರಲ್ಲಿ ಯಶಸ್ವಿಯಾದರು. ಬಿಲ್ಡರ್‌ಗಳ ಲಾಬಿಗೆ ಮಣಿದರು.

ರೇರಾ ಸುತ್ತಮುತ್ತ

3,252 ‌- ಕಾಯ್ದೆಯಡಿ ನೋಂದಣಿಗೆ ಅರ್ಜಿ ಸಲ್ಲಿಸಿದ ಯೋಜನೆಗಳು

296 - ರೇರಾ ಕರ್ನಾಟಕದ ಅಡಿ ಪ್ರಕ್ರಿಯೆಯಲ್ಲಿರುವ ಯೋಜನೆಗಳು

2,597 - ಯೋಜನೆಗಳಿಗೆ ಅನುಮೋದನೆ

174 - ಯೋಜನೆಗಳ ತಿರಸ್ಕಾರ

973 - ಯೋಜನೆಗಳ ಅನುಮೋದನೆಗೆ ಸಲ್ಲಿಸಿದ ಅರ್ಜಿಯ ಅವಧಿ ಮುಕ್ತಾಯ

828 - ರೇರಾದಡಿ ತೀರ್ಪು ನೀಡಲ್ಪಟ್ಟ ಹಾಗೂ ವಿಚಾರಣೆ ನಡೆದ ಪ್ರಕರಣಗಳು

56 - ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಬಾಕಿ ಇರುವ ಪ್ರಕರಣಗಳು

14 - ತೀರ್ಪು ನೀಡಲ್ಪಟ್ಟ ಹಾಗೂ ವಿಚಾರಣೆಗೆ ಒಳಪಟ್ಟ ಪ್ರಕರಣಗಳು

08 - ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳು

1,069 - ರೇರಾ ಕಾಯ್ದೆಯಡಿ ನೋಂದಣಿಯಾಗದ ಯೋಜನೆಗಳು

1756 - ನೋಂದಣಿಗಾಗಿ ಅರ್ಜಿ ಸಲ್ಲಿಸಿದ ಏಜೆಂಟ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT