ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | RTI - ಮಾಹಿತಿ ತಡೆಗೆ ಅಕ್ರಮ ದಾರಿ

ಆಡಳಿತದಲ್ಲಿ ಪಾರದರ್ಶಕತೆ ತರುವ ಆಶಯಕ್ಕೆ ಮುಕ್ಕು
Last Updated 18 ಜೂನ್ 2022, 20:15 IST
ಅಕ್ಷರ ಗಾತ್ರ

ಬೆಂಗಳೂರು: ‌ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಕ್ರಮ–ಅವ್ಯವಹಾರಗಳ ವಿರುದ್ಧದ ಕಾನೂನು ಸಮರ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರಲುಬ್ರಹ್ಮಾಸ್ತ್ರವೆಂಬಂತೆ ಬಿಂಬಿಸಿದ್ದ ‘ಮಾಹಿತಿ ಹಕ್ಕು ಕಾಯ್ದೆ’ ಈಗ ಮಾಹಿತಿ ಮುಚ್ಚಿಡುವ ಕೆಲಸದಲ್ಲಿ ತಲ್ಲೀನವಾಗಿರುವಂತಿದೆ.

ಹಲವು ಹಗರಣಗಳನ್ನು ಬಯಲಿಗೆ ಎಳೆದಿರುವ ಈ ಕಾಯ್ದೆಯನ್ನು ‘ವಿಳಂಬ’ ಎಂಬ ಪ್ರತ್ಯಸ್ತ್ರದ ಮೂಲಕ ಬಲಹೀನಗೊಳಿಸುವ ಪ್ರಯತ್ನ ಸರ್ಕಾರದ ಕಡೆಯಿಂದಲೇ ನಡೆಯುತ್ತಿದೆ. ಕಾಯ್ದೆ ಮುಚ್ಚಿಡಲು ಹಲವು ಕಳ್ಳದಾರಿಗಳನ್ನು ಹುಡುಕುವ ವಿದ್ಯೆಯನ್ನು ಅಧಿಕಾರಶಾಹಿ ಸಿದ್ಧಿಸಿಕೊಂಡಿದ್ದು, ಕಾಯ್ದೆಯ ಆಶಯ ವೇ ಬುಡಮೇಲಾಗುವ ಅಪಾಯ ಎದುರಾಗಿದೆ.

2005ರಲ್ಲಿ ಜಾರಿಗೆ ಬಂದ ಮಾಹಿತಿ ಹಕ್ಕು ಕಾಯ್ದೆ ಹಲವು ಹಗರಣಗಳನ್ನು ಬಯಲಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಾಮಾನ್ಯ ಜನರೂ ಸರ್ಕಾರದಿಂದ ಸುಲಭವಾಗಿ ಮಾಹಿತಿ ಪಡೆದುಕೊಳ್ಳುವ ಅವಕಾಶವನ್ನು ಈ ಕಾಯ್ದೆ ಮಾಡಿಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ಈ ಕಾಯ್ದೆಯಲ್ಲಿರುವ ಕೆಲ ದೋಷಗಳನ್ನೇ ಲಾಭ ಮಾಡಿಕೊಂಡು ಮಾಹಿತಿ ನಿರಾಕರಿಸುವ ಪರಿಪಾಟವನ್ನು ಅಧಿಕಾರಿಗಳು ಬೆಳೆಸಿಕೊಂಡಿದ್ದಾರೆ.

ಯಾವುದೇ ಮಾಹಿತಿ ಕೋರಿ ಇಲಾಖೆಗೆ ಅರ್ಜಿ ಸಲ್ಲಿಸಿದರೆ 30 ದಿನಗಳಲ್ಲಿ ಮಾಹಿತಿ ನೀಡಬೇಕು ಅಥವಾ ಮಾಹಿತಿ ನೀಡದಿರಲು ಸಕಾರಣ ಮತ್ತು ಅದಕ್ಕೆ ಕಾಯ್ದೆಯಲ್ಲಿರುವ ವಿನಾಯಿತಿ ನಮೂದಿಸಿ ಹಿಂಬರಹ ನೀಡಬೇಕು. ಹಿಂಬರಹ ತೃಪ್ತಿ ಎನಿಸದಿದ್ದರೆ ಅಥವಾ ಹಿಂಬರಹ ನೀಡದಿದ್ದರೆ ಅದೇ ಇಲಾಖೆಯ ಉನ್ನತ ಅಧಿಕಾರಿಗೆ ಮೊದಲನೇ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ‌ಆ ಅಧಿಕಾರಿ 45 ದಿನಗಳಲ್ಲಿ ಮಾಹಿತಿ ನೀಡಲು ಆದೇಶಿಸಬಹುದು. ಇಲ್ಲವೇ, ಮಾಹಿತಿ ನೀಡದಿರಲು ಕಾರಣಗಳನ್ನು ವಿವರಿಸಿ ಅರ್ಜಿಯನ್ನು ವಜಾಗೊಳಿಸಬಹುದು. ಬಳಿಕ ಇದನ್ನು ಪ್ರಶ್ನಿಸಿ ಮಾಹಿತಿ ಹಕ್ಕು ಆಯೋಗಕ್ಕೆ ಎರಡನೇ ಮೇಲ್ಮನವಿ ಸಲ್ಲಿಸಲು 90 ದಿನಗಳ ಅವಕಾಶ ಇದೆ.

ಸೇವಾ ನಿಯಮವೇ ಇಲ್ಲ

ರಾಜ್ಯ ಮಾಹಿತಿ ಆಯೋಗದಲ್ಲಿ ಒಬ್ಬನೇ ಒಬ್ಬ ಕಾಯಂ ನೌಕರ ಇಲ್ಲ. ಕಾಯ್ದೆ ಜಾರಿಗೆ ಬಂದು 17 ವರ್ಷಗಳು ಕಳೆದರೂ ನೌಕರರ ನೇಮಕಕ್ಕೆ ಸೇವಾ ನಿಯಮವೇ ರೂಪುಗೊಂಡಿಲ್ಲ.‌

ಮುಖ್ಯ ಆಯುಕ್ತರು ಸೇರಿ 11 ಆಯುಕ್ತರ ಹುದ್ದೆಗಳಿದ್ದು, ಅದರಲ್ಲಿ ಬೆಳಗಾವಿ ಪೀಠದ ಆಯುಕ್ತರ ಹುದ್ದೆ ಖಾಲಿ ಇದೆ. ಬೆಂಗಳೂರಿನಲ್ಲಿ ಖಾಲಿ ಇದ್ದ ಮೂರು ಹುದ್ದೆಗಳನ್ನು ಇತ್ತೀಚೆಗಷ್ಟೇ ಭರ್ತಿ ಮಾಡಲಾಗಿದೆ.

ಆಯೋಗಕ್ಕೆ ಮಂಜೂರಾದ 142 ಹುದ್ದೆಗಳಿದ್ದು, ಇವುಗಳಲ್ಲಿ 116 ಹುದ್ದೆಗಳಲ್ಲಿ ಸಿಬ್ಬಂದಿ ಈಗ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇವಲ ಎಂಟು ಮಂದಿಯನ್ನು ಬಿಟ್ಟರೆ ಉಳಿದವರು ಹೊರಗುತ್ತಿಗೆ ಸಿಬ್ಬಂದಿ. ಅವರೂ ಬೇರೆ ಇಲಾಖೆಗಳಿಂದ ನಿಯೋಜನೆಗೊಂಡವರು.

ತೀರ್ಪು ಬರಹಗಾರರು, ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ದತ್ತಾಂಶ ನಮೂದಿಸುವವರು, ಸಹಾಯಕರು ಮತ್ತು ಡಿ ದರ್ಜೆ ನೌಕರರ ಹುದ್ದೆಗಳಿವೆ. ಎಲ್ಲವನ್ನೂ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಪ್ರಮುಖವಾಗಿ ಪರಿಣತ ತೀರ್ಪು ಬರಹಗಾರರು, ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರು ಬೇಕು. ಕೌಶಲ ಇರುವವರ ಲಭ್ಯತೆ ಇಲ್ಲದಿರುವುದು ಅರ್ಜಿಗಳ ಶೀಘ್ರ ವಿಲೇವಾರಿಗೆ ತೊಡಕಾಗಿದೆ ಎನ್ನುತ್ತಾರೆ ಆಯೋಗದ ಅಧಿಕಾರಿಗಳು.

‘ಸೇವಾ ನಿಯಮ ರೂಪಿಸಲು ಸರ್ಕಾರಕ್ಕೆ ಹತ್ತಾರು ಬಾರಿ ಪ್ರಸ್ತಾವನೆ ಸಲ್ಲಿಸಿ ಆಯೋಗದ ಅಧಿಕಾರಿಗಳು ರೋಸಿ ಹೋಗಿದ್ದಾರೆ. ಸರ್ಕಾರಕ್ಕೆ ಮಾಹಿತಿ ಆಯೋಗದ ಮತ್ತು ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಇರುವ ಜಾಣಗುರುಡಿಗೆ ಇದು ಉದಾಹರಣೆ’ ಎನ್ನುತ್ತಾರೆ ಮಾಹಿತಿ ಹಕ್ಕು ಕಾರ್ಯಕರ್ತರು.

‘ದಂಡ ವಸೂಲಿಗೆ ನಿಯಮವೇ ಇಲ್ಲ’

ಮಾಹಿತಿ ಹಕ್ಕು ಕಾಯ್ದೆಯಲ್ಲಿನ ಕೆಲವು ಲೋಪಗಳಿಂದಾಗಿ ಅಧಿಕಾರಿಗಳಲ್ಲಿ ಭಯವೇ ಇಲ್ಲದಂತಾಗಿದೆ.

ಪ್ರತಿ ಇಲಾಖೆಯಲ್ಲೂ ಒಬ್ಬ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಿಸಲಾಗಿದ್ದು, ಅವರು ಸಕಾರಣವಿಲ್ಲದೆ ಮಾಹಿತಿ ನೀಡಲು ನಿರಾಕರಿಸಿದರೆ ದಂಡ ವಿಧಿಸಲು ಅವಕಾಶ ಇದೆ. ಆದರೆ, ಅದನ್ನು ವಸೂಲಿ ಮಾಡುವುದು ಹೇಗೆ ಎಂಬುದನ್ನು ಕಾಯ್ದೆಯಲ್ಲಿ ಉಲ್ಲೇಖಿಸಿಲ್ಲ.

ಕೆಲವು ಸಂದರ್ಭದಲ್ಲಿ ದಂಡ ವಿಧಿಸುವ ಮಾಹಿತಿ ಆಯುಕ್ತರು, ದಂಡ ಪಾವತಿಸುವಂತೆ ಸೂಚನೆ ನೀಡುತ್ತಾರೆ. ಅವರು ಪಾವತಿಸದೆ ಇದ್ದರೂ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಅವಕಾಶ ಇಲ್ಲ.

ಕಾಯ್ದೆ ತಿದ್ದುಪಡಿ ಅಗತ್ಯ

ಮಾಹಿತಿ ಹಕ್ಕು ಕಾಯ್ದೆ ಹಲವರಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಕಾಯ್ದೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವ ಮೂಲಕ ಈ ಕಾಯ್ದೆಗೆ ಮತ್ತಷ್ಟು ಬಲ ನೀಡುವ ಅಗತ್ಯವಿದೆ ಎಂದು ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಎನ್‌.ಸಿ.ಶ್ರೀನಿವಾಸ್ ಹೇಳಿದರು.

ಸಾರ್ವಜನಿಕ ಮಾಹಿತಿ ಅಧಿಕಾರಿ ಸಕಾರಣವಿಲ್ಲದೆ ಮಾಹಿತಿ ನಿರಾಕರಿಸಿದರೆ ಗರಿಷ್ಠ ₹25 ಸಾವಿರ ತನಕ ದಂಡ ವಿಧಿಸಲು ಅವಕಾಶ ಇದೆ. ಆದರೆ, ಅದನ್ನು ವಸೂಲಿ ಮಾಡುವ ವಿಧಾನ ಇಲ್ಲ. ಮೊದಲನೇ ಮೇಲ್ಮನವಿ ಪ್ರಾಧಿಕಾರ ಆಗಿರುವ ಮೇಲಾಧಿಕಾರಿ ವಿರುದ್ಧ ಯಾವುದೇ ಶಿಸ್ತು ಕ್ರಮವೂ ಇಲ್ಲ, ದಂಡವೂ ಇಲ್ಲ. ಈ ಎರಡು ದೋಷಗಳನ್ನು ಸರಿಪಡಿಸಿಬೇಕು. ದಂಡ ವಸೂಲಿಗೆ ವಿಧಾನ ನಿಗದಿಪಡಿಸಬೇಕು ಮತ್ತು ಮೇಲ್ಮನವಿ ಅಧಿಕಾರಿಗೆ ಹೊಣೆಗಾರಿಕೆ ನಿಗದಿ ಮಾಡಬೇಕು. ಈ ಸಂಬಂಧ ಕಾಯ್ದೆ ತಿದ್ದುಪಡಿ ಮಾಡಬೇಕು ಎಂದರು.

ದುರ್ಬಳಕೆ: ಕೆಲವರಿಗೆ ಇದೇ ಉದ್ಯೋಗ

ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ತಂದ ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡವರ ಸಂಖ್ಯೆಯೂ ಕಡಿಮೆಯೇನಿಲ್ಲ.‌

ಕಾಯ್ದೆಯ ಹೆಸರಿನಲ್ಲಿ ಅಧಿಕಾರಿಗಳನ್ನು ಬೆದರಿಸಿ ‘ವಸೂಲಿ’ ಮಾಡಿಕೊಳ್ಳುವ ತಂಡಗಳು ಎಲ್ಲಾ ಊರಿನಲ್ಲೂ ತಲೆ ಎತ್ತಿಕೊಂಡವು. ಮಾಹಿತಿ ಸಲ್ಲಿಸಿದ ಕೂಡಲೇ ಅಧಿಕಾರಿ ಒಪ್ಪಂದಕ್ಕೆ ಬಂದರೆ ಅಲ್ಲಿಗೇ ಮುಕ್ತಾಯವಾಗುತ್ತವೆ. ಇಲ್ಲದಿದ್ದರೆ ಮಾಹಿತಿ ಆಯೋಗದ ಮುಂದೆ ಬಂದು ಮಾಹಿತಿ ಪಡೆದುಕೊಂಡು ಬಳಿಕವೂ ಕಾನೂನು ಹೋರಾಟಕ್ಕೆ ಇಳಿಯದೆ ವ್ಯವಹಾರ ಕುದುರಿಸಿಕೊಳ್ಳುವುದೂ ಹೆಚ್ಚುತ್ತಿದೆ.

‘ಅರ್ಜಿ ಸಲ್ಲಿಸಿ ಮಾಹಿತಿ ಕೋರುವುದು ಕೆಲವರಿಗೆ ಪರಿಪಾಟವೇ ಆಗಿ ಹೋಗಿದೆ. ಬಿಪಿಎಲ್ ಕಾರ್ಡುದಾರರಿಗೆ ಹೊರತುಪಡಿಸಿ ಉಳಿದವರು ಮಾಹಿತಿ ಕೋರಲು ಕನಿಷ್ಠ ₹500 ನಿಗದಿ ಮಾಡಿದರೆ ಇದೇ ಕೆಲಸಕ್ಕೆ ಇಳಿದಿರುವ ಕೆಲವರಿಗೆ ಕಡಿವಾಣ ಹಾಕಿದಂತೆ ಆಗಲಿದೆ. ಈಗ ಶುಲ್ಕವೇ ಇಲ್ಲದಿರುವುದು ಅರ್ಜಿ ಸಲ್ಲಿಸುವವರಿಗೆ ಸಲೀಸಾಗಿದೆ. ಆದ್ದರಿಂದಲೇ ಒಬ್ಬರೇ ಸಾವಿರಕ್ಕೆ ಹೆಚ್ಚು ಮೇಲ್ಮನವಿಗಳನ್ನು ಆಯೋಗಕ್ಕೆ ಸಲ್ಲಿಸಿರುವ ಉದಾಹರಣೆಗಳಿವೆ’ ಎನ್ನುತ್ತಾರೆ ಅಧಿಕಾರಿಗಳು.

‘ತಮಗೆ ಆಗಿರುವ ಅನ್ಯಾಯ ಸರಿಪಡಿಸಿಕೊಳ್ಳಲು ಮಾಹಿತಿ ಕೇಳುವ ಅರ್ಜಿಗಳಿಂತ ಇದನ್ನೇ ಉದ್ಯೋಗ ಮಾಡಿಕೊಂಡಿರುವ ಜನರೇ ಹೆಚ್ಚಿನ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಆಗ ನಿಜವಾಗಿ ತೊಂದರಿಗೆ ಸಿಲುಕಿರುವ ವ್ಯಕ್ತಿಯ ಅರ್ಜಿ ವಿಚಾರಣೆಗೆ ಬರುವುದು ವಿಳಂಬವಾಗುತ್ತದೆ. ಇದರಿಂದ ಅವರಿಗೆ ನ್ಯಾಯ ಸರಿಯಾದ ಸಮಯಕ್ಕೆ ಸಿಗುವುದೇ ಇಲ್ಲ’ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಎರಡು ವರ್ಷಗಳಿಂದ ಕಾಯುತ್ತಿರುವ ವ್ಯಕ್ತಿಯೊಬ್ಬರು ನೋವು ತೋಡಿಕೊಂಡರು.

ಮಾಹಿತಿ ಮುಚ್ಚಿಡಲು ಹೈಕೋರ್ಟ್‌ಗೆ

ಮಾಹಿತಿ ಆಯೋಗ ನೀಡುವ ಆದೇಶಗಳನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಮೂಲಕ ಜನರಿಗೆ ಮಾಹಿತಿ ಸಿಗದಂತೆ ಮಾಡುವುದನ್ನೂ ಅಧಿಕಾರಿ ವರ್ಗ ರೂಢಿಸಿಕೊಂಡಿದೆ.

ಉತ್ತರ ಪತ್ರಿಕೆಗಳ ನಕಲು ಪ್ರತಿಯನ್ನು ಪರೀಕ್ಷೆ ಬರೆದಿದ್ದ ಅಭ್ಯರ್ಥಿಗೆ ನೀಡುವಂತೆ ಮಾಹಿತಿ ಆಯೋಗ ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಕೆಪಿಎಸ್‌ಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಪಡೆದುಕೊಂಡಿದೆ. ಮಾಹಿತಿ ಕೋರಿದ್ದವರು ಹೈಕೋರ್ಟ್‌ ಸುತ್ತಾಡಿ ತಡೆಯಾಜ್ಞೆ ತೆರವುಗೊಳಿಸುವಷ್ಟು ಶಕ್ತಿ ಬಹುತೇಕರಲ್ಲಿ ಇರುವುದಿಲ್ಲ.

ಕೆಪಿಎಸ್‌ಸಿ ಮಾತ್ರವಲ್ಲ, ಸಾರಿಗೆ ಇಲಾಖೆ, ವಿಶ್ವವಿದ್ಯಾಲದಯ ಅನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ಮಾಹಿತಿ ಒದಗಿಸದೆ ಕೋರ್ಟ್‌ನಲ್ಲಿ ತಡೆಯಾಜ್ಞೆ ತರುವ ಪರಿಪಾಟ ಬೆಳೆಸಿಕೊಂಡಿವೆ. ತಡೆಯಾಜ್ಞೆ ಪಡೆಯಲು ಈ ಸಂಸ್ಥೆಗಳು ಖಾಸಗಿ ವಕೀಲರನ್ನು ನೇಮಿಸಿಕೊಂಡು ಹಣ ಪಾವತಿಸುತ್ತಿವೆ. ಸರ್ಕಾರಿ ವಕೀಲರಿದ್ದರೂ, ಖಾಸಗಿ ವಕೀರಲರನ್ನು ಇಟ್ಟು ಲಕ್ಷಗಟ್ಟಲೆ ಸರ್ಕಾರದ ಹಣವನ್ನೇ ಕೊಟ್ಟು ವಾದ ಮಾಡಿಸುತ್ತಿವೆ. ಜನ ಸಾಮಾನ್ಯರಿಗೆ ಮಾಹಿತಿ ನಿರಾಕರಿಸಿಲು ಸರ್ಕಾರದ ಹಣವನ್ನೇ ವಕೀಲರಿಗೆ ಖರ್ಚು ಮಾಡುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಮಾಹಿತಿ ಹಕ್ಕು ಕಾಯ್ದೆ ಇದ್ದರೂ ಇಲ್ಲದ ಸ್ಥಿತಿಗೆ ತಲುಪಿದೆ ಎನ್ನುತ್ತಾರೆ ನಿವೃತ್ತ ಮಾಹಿತಿ ಆಯುಕ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT