ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಯೋಜನೆಗಳ ಭಾರಕ್ಕೆ ಕಾಳಿ ಏದುಸಿರು

Last Updated 9 ಏಪ್ರಿಲ್ 2022, 20:30 IST
ಅಕ್ಷರ ಗಾತ್ರ

ಕಾರವಾರ: ಕಾಳಿ ನದಿಯಿಂದ ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ನೀರು ಸಾಗಿಸುವ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಈ ಯೋಜನೆಯ ಮೂಲಕ ದಾಂಡೇಲಿಯಲ್ಲಿ ನದಿ ದಂಡೆಯಲ್ಲಿ ಬೃಹತ್ ಜಾಕ್‌ವೆಲ್ ನಿರ್ಮಿಸಿ ಪೈಪ್‌ಲೈನ್‌ಗಳ ಮೂಲಕ ನೀರನ್ನು ಹರಿಸಬೇಕಾಗುತ್ತದೆ.

ಇದಕ್ಕೆ ತಗುಲುವ ಖರ್ಚು ಎಷ್ಟು ಸಾವಿರ ಕೋಟಿ ರೂಪಾಯಿ, ಎಷ್ಟು ಗಾತ್ರದ ಪೈಪ್ ಅಳವಡಿಸಲಾಗುತ್ತದೆ, ಕಾಮಗಾರಿಯ ವೇಳೆ ಪರಿಸರದ ಮೇಲೆ ಎಷ್ಟು ಹಾನಿಯಾಗಲಿದೆ ಎಂಬ ವಿವರ ಲಭ್ಯವಾಗಿಲ್ಲ.

ಕಾಳಿ ನದಿಯ ಮೇಲೆ ಈಗಾಗಲೇ ಹತ್ತಾರು ಯೋಜನೆಗಳು ಕಾರ್ಯಗತವಾಗಿವೆ. ಐದು ಜಲಾಶಯಗಳಲ್ಲಿ ವಿದ್ಯುತ್ ಉತ್ಪಾದನೆ ಯಾಗುತ್ತಿದೆ. ಕೈಗಾ ಅಣು ವಿದ್ಯುತ್ ಸ್ಥಾವರವೂ ಈ ನದಿಯ ದಂಡೆಯಲ್ಲೇ ಇದೆ. ದಾಂಡೇಲಿಯಲ್ಲಿ ಕಾಗದ ಕಾರ್ಖಾನೆ, ಹಳಿಯಾಳದಲ್ಲಿ ಸಕ್ಕರೆ ಕಾರ್ಖಾನೆ, ದಾಂಡೇಲಿಯಲ್ಲಿ ದೇಶದ ಎರಡನೇ ಮೊಸಳೆ ಉದ್ಯಾನ, ಕಾಳಿ ಹುಲಿ ಸಂರಕ್ಷಿತ ಪ್ರದೇಶ, ಅಪಾರ ಪ್ರವಾಸೋದ್ಯಮದ ಚಟುವಟಿಕೆಗಳು, ದಾಂಡೇಲಿ, ಹಳಿಯಾಳಕ್ಕೆ ಕುಡಿಯುವ ನೀರು, ಸಾವಿರಾರು ಎಕರೆ ಕೃಷಿ ಪ್ರದೇಶಗಳು, ಮೀನುಗಾರಿಕೆ ಈ ನದಿಯ ನೀರನ್ನೇ ಅವಲಂಬಿಸಿವೆ. ಮತ್ತಷ್ಟು ಯೋಜನೆಗಳು ಈಗ ಜಾರಿಯ ಹಂತದಲ್ಲಿವೆ. ಇದರ ಜೊತೆಗೇ ಅಳ್ನಾವರಕ್ಕೆ ಕುಡಿಯುವ ನೀರು, ದಾಂಡೇಲಿ ಮತ್ತು ಹಳಿಯಾಳ ತಾಲ್ಲೂಕಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಎರಡು ಹೊಸ ಘಟಕಗಳು ಸ್ಥಾಪನೆಯಾಗಲಿವೆ. ಹಳಿಯಾಳ ಸಕ್ಕರೆ ಕಾರ್ಖಾನೆ ಮತ್ತು ದಾಂಡೇಲಿ ಪೇಪರ್ ಮಿಲ್‌ನಲ್ಲಿ ಉತ್ಪದನಾ ಸಾಮರ್ಥ್ಯ ಹೆಚ್ಚಿಸುವ ಪ್ರಕ್ರಿಯೆಗಳು ಆರಂಭವಾಗಿವೆ.

ವಿ.ಎನ್. ನಾಯಕ
ವಿ.ಎನ್. ನಾಯಕ

‘ಕಾಳಿ ನದಿಗೆ ದಶಕಗಳ ಹಿಂದೆ ಐದು ಜಲಾಶಯಗಳನ್ನು ನಿರ್ಮಿಸಿದಾಗಲೇ ಪರಿಸರದ ಮೇಲೆ ಸಾಕಷ್ಟು ಅಡ್ಡ‍ಪರಿಣಾಮಗಳು ಆಗಿವೆ. ಸಮುದ್ರದ ಉಪ್ಪುನೀರು ಈಗಾಗಲೇ ನದಿಯ ಮೂಲಕ ಸುತ್ತಮುತ್ತಲಿನ ಜಮೀ ನಿಗೆ ಹರಿಯುತ್ತಿದೆ. ಐದು ಜಿಲ್ಲೆಗಳಿಗೆ ನದಿ ನೀರನ್ನು ಸಾಗಿಸಿದರೆ ಕರಾವಳಿಯಲ್ಲಿ ನೇರ ಪರಿಣಾಮವಾಗದು. ಆದರೆ, ಘಟ್ಟದ ಮೇಲೆ ದಾಂಡೇಲಿ ಹಾಗೂ ಪೈಪ್‌ ಲೈನ್ ಸಾಗುವ ಪರಿಸರದಲ್ಲಿ, ನೀರಿನ ಸಂಗ್ರಹಾಗಾರಗಳ ನಿರ್ಮಾಣ ಸ್ಥಳದಲ್ಲಿ ಪರಿಸರಕ್ಕೆ ಹಾನಿಯಾಗ ಬಹುದು’ ಎಂದು ಕಾರವಾರದ ವಿಜ್ಞಾನಿ ವಿ.ಎನ್.ನಾಯಕ ಅಭಿಪ್ರಾಯಪಡುತ್ತಾರೆ.

‘ಜಲಾಶಯಗಳಲ್ಲಿ ಹೂಳು ತುಂಬಿಕೊಂಡಿ ರುವ ಕಾರಣ ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿದೆ. ಬೇಸಿಗೆಯಲ್ಲೂ ನೀರಿನ ಹರಿವಿನ ದಿಕ್ಕನ್ನು ಬದಲಿಸಿದರೆ ವಿದ್ಯುತ್ ಉತ್ಪಾದನೆಗೆ ನೀರಿನ ಕೊರತೆಯಾಗಬಹುದು’ ಎಂದು ಅವರು ಹೇಳುತ್ತಾರೆ.

ಜೀವ ವೈವಿಧ್ಯಕ್ಕೇ ಕನ್ನ ಹಾಕುವ ಶರಾವತಿ ತಿರುವು!

ಬೆಂಗಳೂರು ನಗರದ ನೀರಿನ ದಾಹವನ್ನು ತಣಿಸಲು ಲಿಂಗನಮಕ್ಕಿ ಅಣೆಕಟ್ಟೆಯಿಂದ ಮೊದಲ ಹಂತದಲ್ಲಿ 10 ಟಿಎಂಸಿ ಅಡಿ ನೀರನ್ನು ರಾಜಧಾನಿಗೆ ತರಲು ವಿಸ್ತೃತ ಯೋಜನಾ ವರದಿ ತಯಾರಿಸಲುಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಇದಕ್ಕೆ ಆ ಭಾಗದಲ್ಲಿ ಭಾರೀ ಪ್ರತಿರೋಧವೂ ವ್ಯಕ್ತವಾಗಿತ್ತು. 2014 ರಲ್ಲಿ ಬಿ.ಎನ್‌.ತ್ಯಾಗರಾಜ್‌ ಅಧ್ಯಕ್ಷತೆಯ ತಜ್ಞರ ಸಮಿತಿಯು ಲಿಂಗಮಕ್ಕಿಯಿಂದ 30 ಟಿಎಂಸಿ ಅಡಿ ನೀರು ತರುವ ಸಲಹೆಯನ್ನು ನೀಡಿತ್ತು.

ಶರಾವತಿ ನದಿ ಕಣಿವೆ ಪ್ರದೇಶ ವಿಶ್ವದಲ್ಲಿಯೇ ಅತಿಸೂಕ್ಷ್ಮವಾದುದು. ಪಶ್ಚಿಮಘಟ್ಟದ ಶ್ರೇಣಿಯಲ್ಲೇ ಸಂಪದ್ಭರಿತವಾದ ನಿತ್ಯಹರಿದ್ವರ್ಣ ಕಾಡುಗಳಿರುವ ತಾಣವಿದು. ರಾಮಪತ್ರೆ ಜಡ್ಡಿಯಂಥ ಜೀವಪೋಷಕ ತಾಣಗಳಿರುವ ಇಲ್ಲಿನ ಶರಾವತಿ ಅಭಯಾರಣ್ಯ ಮತ್ತು ಅಳಿವಿನಂಚಿನಲ್ಲಿರುವ ಸಿಂಗಳೀಕ ಸಂರಕ್ಷಿತ ಪ್ರದೇಶಕ್ಕೆ ಈ ಪ್ರಸ್ತಾವಿತ ಯೋಜನೆಯಿಂದ ತೀವ್ರ ಆಘಾತವಾದೀತು. ಹೊಳೆಹಿಪ್ಪೆ, ಹೊಳೆ ಹೊನ್ನೆ, ಹೇತಾರಿ, ರಾಮಪತ್ರೆ, ದೇವದಾರುವಿನಂಥ ನೂರಾರು ವಿನಾಶದಂಚಿನ ಸಸ್ಯಪ್ರಭೇದಗಳುಳ್ಳ ಈ ಜೀವವೈವಿಧ್ಯ ತಾಣಕ್ಕೆ ಹೊಡೆತ ಬೀಳುವುದು ಖಚಿತ. ಈಗಾಗಲೇ ಶರಾವತಿ ಟೇಲ್‌–ರೇಸ್‌ ಯೋಜನೆ ಮತ್ತು ಲಿಂಗನಮಕ್ಕಿ ಜಲವಿದ್ಯುತ್‌ ಯೋಜನೆಗಳ ಕಾಮಗಾರಿಗಳಿಂದ ಬಹಳಷ್ಟು ನಾಶವಾಗಿವೆ. ಅಳಿದುಳಿದಿರುವುದನ್ನೂ ಕಾಪಾಡಿಕೊಳ್ಳುವುದು ಅಗತ್ಯ ಎನ್ನುತ್ತಾರೆ ತಜ್ಞರು.

ಲಿಂಗನಮಕ್ಕಿಯಿಂದ ನೀರು ಒಯ್ಯುವುದು ಎಂದರೆ ಒಂದರ್ಥದಲ್ಲಿ ನದಿ ತಿರುವು ಯೋಜನೆಯೇ ಸರಿ. ಸುಲಭದಲ್ಲಿ ನೀರು ಸಿಗುತ್ತದೆ. ಒಮ್ಮೆ ಈ ಯೋಜನೆ ಚಾಲನೆ ಕೊಟ್ಟರೆ ಬೆಂಗಳೂರು ನಗರ ಮಾತ್ರವಲ್ಲ ದಿನದಿಂದ ದಿನಕ್ಕೆ ನೀರಿನ ಅಭಾವ ಕಾಣುತ್ತಿರುವ ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಮುಂಬರುವ ದಿನಗಳಲ್ಲಿ ಇಲ್ಲಿಂದಲೇ ನೀರಿಗಾಗಿ ಬೇಡಿಕೆ ಇಡತೊಡಗಬಹುದು. ಎತ್ತಿನ ಹೊಳೆಯಂತೆ ನೀರಿಗಿಂತ ಇಲ್ಲಿ ಹಣದ ಹೊಳೆಯೇ ಹೆಚ್ಚಿಗೆ ಹರಿದು ಹೋಗುತ್ತದೆ. ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜೇಬು ತುಂಬುತ್ತದೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT