ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ನದಿ ಆರೋಗ್ಯ ರಕ್ಷಣೆಗೆ ಏನಿವೆ ದಾರಿಗಳು?

Last Updated 29 ಫೆಬ್ರುವರಿ 2020, 20:38 IST
ಅಕ್ಷರ ಗಾತ್ರ

ನಗರದ ಹೊಲಸು, ಕಾರ್ಖಾನೆಯ ತ್ಯಾಜ್ಯವನ್ನು ನದಿಗೆ ಹರಿಸುವುದು, ನದಿ ಹರಿವಿನ ಆಸುಪಾಸಿನಲ್ಲಿ ಯಥೇಚ್ಛವಾಗಿ ರಸಗೊಬ್ಬರ, ಕೀಟನಾಶಕ ಬಳಸಿ ಕೃಷಿ ಚಟುವಟಿಕೆ ನಡೆಸುವುದು, ನದಿ ಆಸುಪಾಸಿನಲ್ಲಿ ಸ್ವಾಭಾವಿಕ ಅರಣ್ಯ ಕಡಿಮೆಯಾಗುತ್ತಿರುವುದು... ಇಂಥ ಹಲವು ಕಾರಣಗಳಿಂದಾಗಿ ನದಿ ನೀರಿನ ಸ್ವಾಸ್ಥ್ಯ ಹಾಳಾಗುತ್ತಿದೆ.

ಈ ಹಿನ್ನೆಲೆಯಲ್ಲಿ ನದಿ ಆರೋಗ್ಯ ರಕ್ಷಣೆ ಮಾಡುವುದು ಹೇಗೆ ಎಂಬ ಪ್ರಶ್ನೆಯನ್ನು ಪರಿಸರ ವಿಜ್ಞಾನಿಗಳು, ಜಲತಜ್ಞರು, ಹೋರಾಟಗಾರರ ಎದುರು ಇಟ್ಟಾಗ, ಅವರು ಒಂದಿಷ್ಟು ಮಾರ್ಗೋಪಾಯಗಳನ್ನು ನೀಡಿದ್ದಾರೆ. ಅವುಗಳು ಹೀಗಿವೆ...

ನದಿ ಹರಿಯುವ ಆಸುಪಾಸಿನಲ್ಲಿ 50ರಿಂದ 100 ಮೀಟರ್‌ ವ್ಯಾಪ್ತಿಯಲ್ಲಿ ಸ್ಥಳೀಯ ಪ್ರಭೇದಗಳ ಮರಗಳನ್ನು ಬೆಳೆಸಬೇಕು (ರೈಪೇರಿಯನ್ ಫಾರೆಸ್ಟ್) ಎನ್ನುತ್ತಾರೆ ಕುಮಟಾದ ಪರಿಸರ ವಿಜ್ಞಾನಿ ಡಾ.ಎಂ.ಡಿ.ಸುಭಾಷ್‌ ಚಂದ್ರನ್.

ಡಾ.ಎಂ.ಡಿ.ಸುಭಾಷ್‌ ಚಂದ್ರನ್

ನದಿ ತೀರದ ಜಲಾನಯನ ಪ್ರದೇಶದಲ್ಲಿ ನಡೆಯುವ ಕೃಷಿ ಚಟುವಟಿಕೆಗಳಲ್ಲಿ ಯಥೇಚ್ಛವಾಗಿ ರಸಗೊಬ್ಬರ, ಕೀಟನಾಶಕಗಳ ಬಳಕೆಯಿಂದಲೂ ನದಿ ನೀರು ಹಾಳಾಗುತ್ತದೆ. ಹೀಗಾಗಿ, ಆ ಪ್ರದೇಶದ ಜಮೀನಿನಲ್ಲಿ ಕಡ್ಡಾಯವಾಗಿ ಸಾವಯವ ವಿಧಾನದಲ್ಲೇ ಕೃಷಿ ಮಾಡಬೇಕು. ಅಂಥ ರೈತರಿಗೆ ಸಾವಯವ ಕೃಷಿ ಅನುಷ್ಠಾನಕ್ಕೆ ಪ್ರೋತ್ಸಾಹಧನ ನೀಡಬೇಕು ಎಂಬುದು ಅವರ ಸಲಹೆ.

ಕಾರ್ಖಾನೆಗಳ ತ್ಯಾಜ್ಯ ನೀರು ಹಾಗೂ ನಗರದ ತ್ಯಾಜ್ಯ ನೀರಿನಿಂದ ಜಲಮೂಲಗಳು ಕಲುಷಿತಗೊಳ್ಳುತ್ತಿವೆ. ದಾಂಡೇಲಿ ಸಮೀಪದಲ್ಲಿ ಕಾಳಿ ನದಿ ಇದಕ್ಕೊಂದು ಉದಾಹರಣೆ. ಇಂಥ ಸ್ಥಳಗಳಲ್ಲಿ ನದಿ ನೀರನ್ನು ನಿಯಮಿತವಾಗಿ ಪರೀಕ್ಷೆಗೊಳಪಡಿಸಿ, ಆ ಫಲಿತಾಂಶ/ಡೇಟಾವನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮುಕ್ತವಾಗಿಡಬೇಕು.

ಸರ್ಕಾರ ನಡೆಸುವ ಈ ಪರೀಕ್ಷೆ ಜತೆಗೆ, ಬೇರೆ ಸಂಸ್ಥೆಗಳು ನದಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಮರುಪರಿಶೀಲನೆ ಮಾಡಬೇಕು. ಇದರಿಂದ ಯಾವ್ಯಾವ ಕಾರಣದಿಂದ ನದಿ ನೀರು ಕಲುಷಿತವಾಗುತ್ತಿದೆ ಎಂಬುದು ಗೊತ್ತಾಗುತ್ತದೆ. ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂಬುದು ಅವರ ಸಲಹೆ.

‘ಅಭಿವೃದ್ಧಿಯ ನೆಪದಲ್ಲಿ ನದಿ ಮೂಲಗಳ ಸುತ್ತ ಮಾನವ ಹಸ್ತಕ್ಷೇಪ ಮಾಡದಿದ್ದರೆ ನದಿಗಳು ಸುರಕ್ಷಿತವಾಗಿರುತ್ತವೆ, ಸ್ವಾಭಾವಿಕವಾಗಿ ಹರಿಯುತ್ತವೆ. ನದಿ ಮೂಲ ಉಳಿಸುವ ಕೆಲಸವಾದರೆ ಸಾಕು, ನದಿಗಳು ಆರೋಗ್ಯದಿಂದಿರುತ್ತವೆ’ ಎನ್ನುತ್ತಾರೆ ಪಶ್ಚಿಮಘಟ್ಟ ಮತ್ತು ಅಲ್ಲಿ ಹರಿಯುವ ನದಿಗಳ ಕುರಿತು ಆಳವಾದ ಅಧ್ಯಯನ ಮಾಡಿರುವ ಪರಿಸರ ಕಾರ್ಯಕರ್ತ ದಿನೇಶ್ ಹೊಳ್ಳ.

ದಿನೇಶ್ ಹೊಳ್ಳ

ನದಿ ಮೂಲದ ಸುತ್ತಲಿನ ಪ್ರದೇಶದಲ್ಲಿದ್ದ ಹುಲ್ಲುಗಾವಲು ಹಾಳಾದ ಪರಿಣಾಮದಿಂದಲೇ ಕೊಡಗಿನಲ್ಲಿ ಭೂ ಕುಸಿತ ಸಂಭವಿಸಿತು. ಕಾಳ್ಗಿಚ್ಚಿನಂತಹ ಪ್ರಕರಣಗಳಿಗೂ ಇದೇ ಕಾರಣ. ಮಳೆ ನೀರು ಹೀರಿಕೊಂಡು ಒರತೆಯ ರೂಪದಲ್ಲಿ ಪರಿಶುದ್ಧ ನೀರನ್ನು ನದಿಗೆ ಹರಿಸಲು ನೆರವಾಗುವ ಹುಲ್ಲುಗಾವಲು ಪ್ರದೇಶ, ಶೋಲಾ ಅರಣ್ಯಗಳನ್ನು ರಕ್ಷಿಸಿದರೆ ನದಿಗಳು ಆರೋಗ್ಯವಾಗಿರುತ್ತವೆ ಎಂಬುದು ಅವರ ಪ್ರತಿಪಾದನೆ.

ದೊಡ್ಡ ದೊಡ್ಡ ನಗರದಿಂದ ಹೊರಹೊಮ್ಮುವ ತ್ಯಾಜ್ಯ ಸರಿಯಾಗಿ ಸಂಸ್ಕರಣೆಯಾಗದೇ ನದಿಗೆ ಸೇರುವುದರಿಂದ ಕಲುಷಿತವಾಗುತ್ತಿದೆ. ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿರುತ್ತವೆ. ಆದರೆ, ಅವುಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಈ ಸಂಸ್ಕರಣಾ ಘಟಕದ ಕೊರತೆ ಇದೆ. ಇಂಥ ಘಟಕಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿಯವರು ಪರೀಕ್ಷಿಸಬೇಕು. ಘಟಕಗಳನ್ನು ಅನುಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಜಲತಜ್ಞ ‘ರೈನ್ ಮ್ಯಾನ್’ ಎಸ್. ವಿಶ್ವನಾಥ್ ಸಲಹೆ.

ಎಸ್. ವಿಶ್ವನಾಥ್

‘ನದಿ ರಕ್ಷಣೆ; ಸಮುದಾಯಕ್ಕೆ ಬಿಡಿ’
‘ಪುರಾತನ ಕಾಲದಿಂದಲೂ ಭಾರತೀಯರು ನದಿಗಳ ಆರೋಗ್ಯ ರಕ್ಷಣೆಗೆ ಮಹತ್ವ ನೀಡಿದ್ದರು. ನೈಸರ್ಗಿಕವಾಗಿಯೇ ಅವುಗಳ ಸಂರಕ್ಷಣೆ ಮಾಡಿಕೊಂಡು ಬಂದಿದ್ದರು. ವಿಪರ್ಯಾಸವೆಂದರೆ ಬ್ರಿಟಿಷರ ಆಡಳಿತದ ನಂತರ ಜಲಮೂಲಗಳೆಲ್ಲವೂ ಸರ್ಕಾರದ ಸ್ವತ್ತಾದವು. ಸಮಸ್ಯೆ ಶುರುವಾದದ್ದೇ ಅಲ್ಲಿಂದ. ನದಿ ನೀರು ಹಂಚಿಕೆ ವಿವಾದ ತಲೆದೂರಿದವು. ಅಂತರರಾಜ್ಯ ಜಲ ವಿವಾದಗಳು ಹುಟ್ಟಿಕೊಂಡವು’ ಎನ್ನುತ್ತಾರೆ ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಜಲತಜ್ಞ ರಾಜೇಂದ್ರಸಿಂಗ್.

‘ಜನರ ಜೀವನಾಡಿಯಾಗಿದ್ದ ನದಿಗಳ ನಿರ್ವಹಣೆ ಸರ್ಕಾರಕ್ಕೆ ಸೇರಿದ್ದು’ ಎಂಬ ಭ್ರಮೆ ಮೂಡಿಸಿದ ನಂತರ, ಕಾಲಕ್ರಮೇಣ ಈ ಮನೋಭಾವ ಬಲವಾಗತೊಡಗಿತು. ಜಲಮೂಲಗಳ ನಿರ್ವಹಣೆಯ ಹೊಣೆಯಿಂದ ಜನಸಮುದಾಯವನ್ನು ದೂರ ಇಡಲಾಯಿತು. ಇದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು. ನಂತರ ಆಡಳಿತ ನಡೆಸಿದ ಸರ್ಕಾರಗಳು ಕೂಡ ಜನರ ಸಹಭಾಗಿತ್ವದಲ್ಲಿ ನದಿ, ಕೆರೆಗಳ ಆರೋಗ್ಯ ಕಾಪಾಡಬೇಕು ಎಂಬ ಗೊಡವೆಗೆ ಹೋಗಲಿಲ್ಲ.

ಜಲತಜ್ಞರಾಜೇಂದ್ರಸಿಂಗ್‌

‘ಜನ ಜೀವನದ ಅವಿಭಾಜ್ಯ ಅಂಗಗಳಾದ ನದಿ, ಕೆರೆ, ಬಾವಿಗಳ ನಿರ್ವಹಣೆಯನ್ನು ಸಮುದಾಯಗಳಿಗೆ ಒಪ್ಪಿಸಬೇಕು. ಅಂದಾಗ ಮಾತ್ರ ಅವುಗಳನ್ನು ಆರೋಗ್ಯವಾಗಿ ಇಡಲು ಸಾಧ್ಯ’ ಎಂದು ಅಭಿಪ್ರಾಯಪಡುವ ರಾಜೇಂದ್ರಸಿಂಗ್, ‘ಇದಾಗದಿದ್ದರೆ ಮುಂದಿನ ದಿನಗಳಲ್ಲಿ ಜಲಸಂಪನ್ಮೂಲಗಳ ಸ್ಥಿತಿ ಮತ್ತಷ್ಟು ದಯನೀಯ ಸ್ಥಿತಿಗೆ ತಲುಪಲಿದ’ ಎಂದು ಎಚ್ಚರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT