ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಭರ್ಜರಿ ಬಂಡವಾಳ ಹೂಡಿಕೆ; ಲೋಕ ಗೆಲ್ಲಲು ಸಾವಿರಾರು ಕೋಟಿ

ಮತ ಖರೀದಿಯ ಸುತ್ತ ಮುತ್ತ: ಇದು ಧನ ದಾಸೋಹದ ಕಾಲ
Last Updated 9 ಏಪ್ರಿಲ್ 2019, 10:05 IST
ಅಕ್ಷರ ಗಾತ್ರ

ಸಂಸದರ ಪ್ರದೇಶಾಭಿವೃದ್ಧಿ ನಿಧಿ ಹೆಸರಿನಲ್ಲಿ ಪ್ರತಿವರ್ಷಕ್ಕೆ ₹5 ಕೋಟಿಯಂತೆ ಐದು ವರ್ಷಗಳಲ್ಲಿ ₹25 ಕೋಟಿ ಅನುದಾನ ಸಿಗುತ್ತದೆ. ವಿವಿಧ ಕಾಮಗಾರಿಗಳಿಗೆ ಇದನ್ನು ಬಳಸಬಹುದು. ಸಂಸದರು ಶಿಫಾರಸು ಪತ್ರ, ಕ್ರಿಯಾಯೋಜನೆ ನೀಡಬಹುದೇ ಹೊರತು ಖರ್ಚು ಮಾಡುವ ವಿವೇಚನಾ ಅಧಿಕಾರ ಜಿಲ್ಲಾಧಿಕಾರಿಗಳದ್ದಾಗಿದೆ. ಅದರಲ್ಲಿ ಶೇ 10ರಷ್ಟು ಅಂದರೆ ಗರಿಷ್ಠ ಲಂಚ ಸಿಕ್ಕಿದರೂ ₹2.50 ಕೋಟಿ ಸಿಗುತ್ತದೆ. ಈ ಹುದ್ದೆಗೇರಲು ₹2 ಕೋಟಿಯಿಂದ ₹100 ಕೋಟಿ ವೆಚ್ಚ ಮಾಡಬೇಕಾಗುತ್ತದೆ. ವೆಚ್ಚಕ್ಕೆ ಬೇಕಾದ ಹಣಹೊಂದಿಸುವ ಹಾಗೂ ಅದನ್ನು ಹಂಚುವ ದಾರಿಗಳ ಕುರಿತು ಒಳನೋಟ ಬೆಳಕು ಚೆಲ್ಲಿದೆ...

ಬೆಂಗಳೂರು: ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಹಣೆಬರಹ ನಿರ್ಧರಿಸುವ ಮಹಾಚುನಾವಣೆಯತ್ತ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ. ಆದರಿಲ್ಲಿ ಪ್ರಜೆಗಳೆಂಬ ಅಲ್ಪಕಾಲದ ‘ಪ್ರಭು’ಗಳನ್ನು ಓಲೈಸಿ, ಗೆಲುವಿನ ದಡ ಹತ್ತಲು ಏದುಸಿರು ಬಿಡುತ್ತಿರುವ ಅಸಲಿ ‘ಅರಸ’ರು ಕಾಂಚಾಣ ಕುಣಿಸಲು ಆರಂಭಿಸಿದ್ದಾರೆ.

ರಾಜಕಾರಣಿಗಳು ಐದು ವರ್ಷ ಅಧಿಕಾರದಲ್ಲಿದ್ದಾಗ ಮಾಡಿಟ್ಟ ‘ಕಳ್ಳಗಂಟ’ನ್ನು ಬಿಚ್ಚಿ ಅದರಲ್ಲಿ ಪುಡಿಪುಡಿ ಉದುರಿಸುವ ಕಾಲ ಇದು. ಉದ್ಯಮಿಗಳು, ವ್ಯವಹಾರಸ್ಥರು ಅಡ್ಡದಾರಿಯಿಂದ ದುಡಿದ ದುಡ್ಡನ್ನು ‘ಮತ’ಕ್ಕಾಗಿ ಬಂಡವಾಳ ಹೂಡಿ ತಮ್ಮ ಭಂಡಾರದ ಸಾಮರ್ಥ್ಯವನ್ನು ಕೋಟಿಯಿಂದ ನೂರಾರು ಕೋಟಿಗೆ ವಿಸ್ತರಿಸುವ ಸಕಾಲವೂ ಹೌದು. ಈ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಅಭ್ಯರ್ಥಿಗಳು ಮಾಡುವ ವೆಚ್ಚ ₹1,500 ಕೋಟಿಗೂ ಮಿಗಿಲು ಎಂಬುದು ರಾಜಕೀಯ ಅರ್ಥಶಾಸ್ತ್ರಜ್ಞರ ಅಂದಾಜು. ಅಷ್ಟರ ಮಟ್ಟಿಗೆ ಉಳ್ಳವರ ಬಳಿಯಿದ್ದ ಹಣ ಚುನಾವಣೆಯ ಹೊತ್ತಿನಲ್ಲಿ ಇಲ್ಲದವರ ಪಾಲಾಗುತ್ತದೆ. ಮತ್ತೈದು ವರ್ಷ ಕಮಕ್‌– ಗಿಮಕ್ ಎನ್ನದೇ ಚುನಾಯಿತರಾದವರನ್ನು ಹಳ್ಳಿಕಟ್ಟೆಯ ಮೇಲೆ, ಹೋಟೆಲ್‌ ಪಡಸಾಲೆಯಲ್ಲಿ ಬೈಯುತ್ತಾ ಕೂರುವುದು ದೇಶವಾಸಿಗಳ ಕರ್ಮ.

ರಾಮನಾಮ, ಮೋದಿನಾಮ, ದೇವನಾಮ, ಸಿದ್ದರಾಮ, ಕುಮಾರನಾಮಗಳ ಜತೆಗೆ ಧನಬಲ ಇಲ್ಲದಿದ್ದರೆ ಚುನಾವಣೆಯಲ್ಲಿ ಗೆಲುವು ಅಸಾಧ್ಯ. ಚುನಾವಣೆ ಆಯೋಗ ಅಭ್ಯರ್ಥಿಯೊಬ್ಬ ಮಾಡ ಬಹುದಾದ ವೆಚ್ಚಕ್ಕೆ ಮಿತಿಯನ್ನು ₹70 ಲಕ್ಷಕ್ಕೆ ನಿಗದಿ ಮಾಡಿದೆ. ಈ ಮೊತ್ತದಲ್ಲಿ ಎಲ್ಲ ಮತಗಟ್ಟೆಗಳಲ್ಲಿ ಕೂರಲು ಬೇಕಾದ ಪಕ್ಷದ ಪ್ರತಿನಿಧಿಗಳು, ಸಮೀಪದಲ್ಲಿ ಕುಳಿತು ಚೀಟಿ ನೀಡುವವರನ್ನು ನಿಯೋಜಿಸಲು ಸಾಧ್ಯವಿಲ್ಲ. ಆದರೆ, ಯಾವೊಬ್ಬ ರಾಜಕಾರಣಿಯೂ ಈ ಮೊತ್ತಕ್ಕಿಂತ ಹೆಚ್ಚಿನ ಖರ್ಚಾಗಿದೆ ಎಂದು ಹೇಳಿಕೊಳ್ಳುವುದಿಲ್ಲ.

ಶೃಂಗೇರಿ–ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಸಮಾಜವಾದಿ ನೇತಾರ ಶಾಂತವೇರಿ ಗೋಪಾಲಗೌಡರು ಮತದಾರರಿಂದ ₹1 ಸಂಗ್ರಹಿಸಿ ಚುನಾವಣೆಯಲ್ಲಿ ಗೆದ್ದಿದ್ದರು. ಅದೇ ಆಸುಪಾಸಿನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿ ಸ್ಪರ್ಧಿಸಿದ್ದಾಗ, ಎದುರಾಳಿ ಪಕ್ಷದ ಪರವಾಗಿ ಹಣಕಾಸು ವ್ಯವಹಾರ ನಿರ್ವಹಿಸಿದ್ದ ಸೀಮೆ ಎಣ್ಣೆ ವ್ಯಾಪಾರಿಯೊಬ್ಬರು ಆಗರ್ಭ ಶ್ರೀಮಂತರಾಗಿ ಪರಿವರ್ತನೆಯಾದ ನಿದರ್ಶನವೂ ಇದೆ.

ಕಾಲ ಅವತ್ತೇ ಬದಲಾಗಿತ್ತು. ಆದರೆ ಈಗ ಹಣವಂತರು ಅಲ್ಲದೇ ಇದ್ದರೆ ಗೆಲುವು ಸಲೀಸಲ್ಲ. ಹಾಗಂತ ಚುನಾವಣೆಯಲ್ಲಿ ನಿಲ್ಲುವವರಿಗೆ ಇರುವುದು ಕೇವಲ ಸೂಜಿ ಹಾಕಿ ದಬ್ಬಳ ತೆಗೆಯುವ ಕಲೆಯಲ್ಲ; ಬೊಗಸೆಯಲ್ಲಿ ನೀರು ಚಿಮುಕಿಸಿ ಹರಿವ ಹೊಳೆಯ ನೀರನ್ನೇ ಆಪೋಶನ ತೆಗೆದುಕೊಳ್ಳುವ ಚತುರಮತಿಗಳು ಅವರು. ಹೀಗಾಗಿ ಇವತ್ತಿನ ದಿನಮಾನಗಳು ‘ಮತ ಬಂಡವಾಳ’ದ ಕಾಲವಾ ಗಿದೆ. ಶಾಸನಸಭೆಗಳನ್ನು ಜನಪ್ರತಿನಿಧಿಗಳ ಬದಲಿಗೆ ಧನ ಪ್ರತಿನಿಧಿಗಳು ಆಕ್ರಮಿಸಿಕೊಳ್ಳುತ್ತಿರುವುದು ಇವತ್ತಿನ ವಿದ್ಯಮಾನ.

ಪ್ರಜಾಪ್ರಭುತ್ವ ಉಳಿವಿನ ಕನಸು ಇಟ್ಟುಕೊಂಡ ಕೆಲವು ಮಂದಿ ತಾವು ಕಷ್ಟಪಟ್ಟು ಸಂಪಾದಿಸಿದ ದುಡ್ಡಿನಲ್ಲಿ ಅಲ್ಪಸ್ವಲ್ಪ ಖರ್ಚು ಮಾಡಿ ಚುನಾವಣೆ ಎದುರಿಸುವುದು ಉಂಟು. ಅವರ ಕಾಳಜಿಯೂ ಪ್ರಶ್ನಾತೀತ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅಂತಹ ಕಾಳಜಿಪರರು ಗೆದ್ದ ನಿದರ್ಶನಗಳಿಲ್ಲ. ಇವರು ಐದು ಖರ್ಚು ಮಾಡಿದರೆ, ಶಾಸನಸಭೆ ಪ್ರವೇಶಿಸಲೇಬೇಕು ಎಂದು ಪಣತೊಟ್ಟಿರುವ ಉದ್ಯಮಿ ಐವತ್ತೈದು ಖರ್ಚು ಮಾಡಲು ಹಿಂಜರಿಯುವುದಿಲ್ಲ.

ಧನ ದಾಸೋಹ

ಇಷ್ಟು ಬಿಡುಬೀಸಾಗಿ ಖರ್ಚು ಮಾಡಲು ಹಣದ ಮೂಲ ಎಲ್ಲಿಂದ ಬರುತ್ತದೆ ಎಂಬ ಕುತೂಹಲ ಸಹಜ.

ಸರ್ಕಾರ ನಡೆಸುತ್ತಿರುವವರಿಗೆ ಈ ಮೊತ್ತ ಸಂಗ್ರಹಿಸುವುದು ಬಹಳ ಸಲೀಸು. ₹10 ಸಾವಿರ ಕೋಟಿ ₹20 ಸಾವಿರ ಕೋಟಿಯ ಎರಡು ಯೋಜನೆಗಳಿಗೆ ಅನುಮೋದನೆ ನೀಡಿದರೆ ನಡೆಯಿತು. ಈಗ ಚಾಲ್ತಿಗೆ ತಂದಿರುವ ಹೊಸ ಪದ್ಧತಿಯಂತೆ ಶೇ 5ರಷ್ಟು ಮುಂಗಡ ಅಂದರೆ ₹500 ಕೋಟಿಯಿಂದ ₹1000 ಕೋಟಿ ಅನಾಮತ್ತು ಬಂದು ಕೂಡುತ್ತದೆ. ಅಷ್ಟನ್ನೂ ಕೊಡಲು ಉದ್ಯಮಿಗಳು ಅಣಿಯಾಗಿರುತ್ತಾರೆ. ಲೋಕೋಪಯೋಗಿ, ಜಲಸಂಪನ್ಮೂಲ ಇಲಾಖೆಗಳ ಎಂಜಿನಿಯರ್‌ಗಳು, ಸಬ್ ರಿಜಿ ಸ್ಟ್ರಾರ್, ಆರ್‌ಟಿಒ, ಹಿರಿಯ ಮೋಟಾರ್ ಇನ್ಸ್‌ಪೆಕ್ಟರ್‌, ಅಬಕಾರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿ, ತಹಶೀಲ್ದಾರ್‌, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಕಂತೆ ಕಂತೆ ಹಣವನ್ನು ಕೊಡಲೇಬೇಕು. ಎಲೆಕ್ಷನ್ ಫಂಡ್ ಹೆಸರಿನಲ್ಲಿ ಭರ್ಜರಿ ಎತ್ತುವಳಿಯಾಗುತ್ತದೆ.

ಚುನಾವಣೆ ಮುಗಿದ ಮೇಲೆ ಕೆಲಸ ಮಾಡಿಸಿ ಕೊಳ್ಳಲು ಮುಂದಾಗುವ ಕೈಗಾರಿಕೋದ್ಯಮಿಗಳು, ರಿಯಲ್ ಎಸ್ಟೇಟ್‌, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಸಾಮಗ್ರಿಯನ್ನು ಪೂರೈಸುವ ಉದ್ಯಮಿಗಳು, ಲೋಕೋಪಯೋಗಿ, ಜಲಸಂಪ ನ್ಮೂಲ ಕಾಮಗಾರಿಗಳನ್ನು ನಿರ್ವಹಿಸುವ ದೊಡ್ಡ ಗುತ್ತಿಗೆದಾರರು, ವೈದ್ಯಕೀಯ ಕಾಲೇಜುಗಳ ಆಡಳಿತಮಂಡಳಿಗಳು ಹಣ ನೀಡುತ್ತಾರೆ. ಎಲ್ಲ ಪಕ್ಷಗಳಿಗೆ, ಕೆಲವು ನಾಯಕರಿಗೆ, ತಮಗೆ ಬೇಕಾದ ಅಭ್ಯರ್ಥಿಗಳಿಗೆ ಇವರು ಕೊಡುತ್ತಾರೆ.

ಇದರ ಜತೆಗೆ ಪ್ರಮುಖ ಪಕ್ಷಗಳು ಎಲೆಕ್ಷನ್ ಫಂಡ್‌ ಸಂಗ್ರಹಿಸಿ ತಮ್ಮ ಅಭ್ಯರ್ಥಿಗೆ ಕಳುಹಿಸಿಕೊಡುತ್ತವೆ. ಈ ಮೊತ್ತವೂ ಕನಿಷ್ಠ ₹2 ಕೋಟಿಯಿಂದ ₹20 ಕೋಟಿವರೆಗೂ ಅಭ್ಯರ್ಥಿಗಳಿಗೆ ಸಿಗುತ್ತದೆ.

ಕೆಲವು ನಾಯಕರು ತಮ್ಮದೇ ಆದ ಸಾಲದ ಮೂಲವನ್ನು ಇಟ್ಟುಕೊಂಡಿರುವುದು ಉಂಟು. ಅಧಿಕಾರದಲ್ಲಿರಲಿ, ಇಲ್ಲದಿರಲಿ ಅವರು ಕೇಳಿದಾಗ ₹20 ಕೋಟಿಯಿಂದ ₹50 ಕೋಟಿವರೆಗೂ ಹಣ ಹೊಂದಿಸುವರು ಇದ್ದಾರೆ. ಇದಕ್ಕೆ ಬಡ್ಡಿ ಇರುವುದಿಲ್ಲ. ಚುನಾವಣೆ ಮುಗಿದ ಐದಾರು ತಿಂಗಳ ಒಳಗೆ ಅದನ್ನು ವಾಪಸ್‌ ಕೊಟ್ಟರಾಯಿತು. ಇಂತಹ ಉದಾರಿಗಳು ಸಾಕಷ್ಟು ಮಂದಿ ಇದ್ದಾರೆ ಎಂದು ರಾಜಕಾರಣಿಗಳು ಹೇಳುತ್ತಾರೆ. ಕರ್ನಾಟಕದ ಮೂರೂ ಪಕ್ಷಗಳ ನಾಯಕರು ಇಂತಹ ನಿಯತ್ತನ್ನು ಇಟ್ಟುಕೊಂಡಿದ್ದಾರೆ ಎನ್ನುತ್ತಾರೆ ಉದ್ಯಮಿಗಳು.

ಹೀಗೆಲ್ಲ ಖರ್ಚು ಮಾಡಿ ಗೆದ್ದವರು ಕುಣಿಯು ತ್ತಾರೆ. ಸೋತರೆ, ‘ಹೆಂಗಾರ ಕುಣಿಕುಣಿದು ಮಂಗಾಟ ನಡೆದಾಗ ಅಂಗಾತ ಬಿತ್ತೋ ಹೆಗಲಲಿ ಎತ್ತೋ’ ಎಂಬ ಸ್ಥಿತಿಗೆ ತಲುಪುವುದು ಮಾತ್ರ ನಿಜ.

1 ಕೆ.ಜಿ. ಟೊಮೆಟೊಗೆ ₹1 ಕೋಟಿ!

ಕೆ.ಜಿಗೆ 30 ಪೈಸೆ ಸಿಕ್ಕಿಲ್ಲ ಎಂದು ಬೆಳೆಗಾರರು ಟೊಮೆಟೊ ರಸ್ತೆಗೆ ಬಿಸಾಕುವುದನ್ನು ನೋಡಿದ್ದೇವೆ. ಅಂತಹ ಟೊಮೆಟೊಗೆ ₹1 ಕೋಟಿ ಎಂದರೆ ನಂಬಲಾಗದು. ಆದರೆ, ಇದು ಚುನಾವಣೆಯಲ್ಲಿ ಹಣ ನೀಡಲು, ಕಳುಹಿಸಿದ್ದೇವೆ ಎಂಬ ಮಾಹಿತಿ ನೀಡಲು ಬಳಸುವ ರಹಸ್ಯ ಪದ (ಕೋಡ್‌ ವರ್ಡ್‌). 1 ಕೆ.ಜಿ ಟೊಮೆಟೊ ಕಳುಹಿಸಿದ್ದೇನೆ, ಎಂದರೆ ₹1 ಕೋಟಿ ಎಂದು ಅರ್ಥ. ರಾಜ್ಯದ ಆಯಾ ಪ್ರಾದೇಶಿಕ ವಲಯದಲ್ಲಿ ಬೇರೆ ಬೇರೆ ಪದ ಬಳಕೆಯಲ್ಲಿದೆ. ಒಂದು ಚೀಲ ಕೊಬ್ಬರಿ, ಒಂದು ಬುಟ್ಟಿ ದ್ರಾಕ್ಷಿ ಎಂದರೆ ಕೋಟಿ ಲೆಕ್ಕ. ಹತ್ತು ಬುಟ್ಟಿ ಎಂದರೆ ₹10 ಕೋಟಿ ಎಂದು ಈ ವ್ಯವಹಾರ ನಡೆಸುವವರು ಹೇಳುತ್ತಾರೆ.

* 28 ಒಟ್ಟು ಕ್ಷೇತ್ರ

* ₹70 ಲಕ್ಷಚುನಾವಣಾ ಆಯೋಗ ನಿಗದಿಪಡಿಸಿದ ಗರಿಷ್ಠ ವೆಚ್ಚ

* ₹25 ಕೋಟಿ ಐದು ವರ್ಷದಲ್ಲಿ ಒಂದು ಕ್ಷೇತ್ರಕ್ಕೆ ಸಿಗುವ ಅನುದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT