ಭಾನುವಾರ, ಅಕ್ಟೋಬರ್ 2, 2022
19 °C

ಒಳನೋಟ | ಉತ್ತರ ಕರ್ನಾಟಕ: ನಿರ್ಜೀವವಾದ ಟ್ರಸ್ಟ್‌ಗಳು!

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೋವಿಡ್‌ ಜನರ ಆರೋಗ್ಯದ ಮೇಲಷ್ಟೇ ಅಲ್ಲ, ಸಾಂಸ್ಕೃತಿಕ ವಲಯದ ಮೇಲೂ ಗದಾಪ್ರಹಾರ ಮಾಡಿತ್ತು. ಎರಡು ವರ್ಷಗಳವರೆಗೆ ಬಹುತೇಕ ಚಟುವಟಿಕೆಗಳು ನಿಸ್ತೇಜಗೊಂಡಿದ್ದವು. ಈಗ, ಲಸಿಕಾಕರಣದಿಂದ ಜನರ ಆರೋಗ್ಯವೇನೋ ಸುಧಾರಿಸಿದೆ. ಆದರೆ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ಚೇತರಿಕೆ ಕಾಣುತ್ತಿಲ್ಲ. ಕನ್ನಡ ಭಾಷೆ, ಸಾಹಿತ್ಯ ಚಟುವಟಿಕೆ ಹಮ್ಮಿಕೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ರಚನೆಯಾಗಿರುವ ರಾಜ್ಯದ ಹಲವು ಟ್ರಸ್ಟ್‌ಗಳ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.

ಈಗ ಟ್ರಸ್ಟ್‌ಗಳು ಮೈಕೊಡವಿಕೊಂಡು ನಿಲ್ಲಬೇಕೆನ್ನುವಾಗ ಸರ್ಕಾರ ನೆರವಿಗೆ ಬರುತ್ತಿಲ್ಲ. ಅಷ್ಟೇ ಅಲ್ಲದೇ, ಹಿಂದಿನ ವರ್ಷಗಳಲ್ಲಿ  ನೀಡುತ್ತಿದ್ದ ಅನುದಾನಕ್ಕೂ ಕತ್ತರಿ ಹಾಕಿದೆ. ಕೋವಿಡ್‌ಗಿಂತ ಮೊದಲು ₹ 12 ಲಕ್ಷದಿಂದ ₹ 15 ಲಕ್ಷ ಅನುದಾನ ಬರುತ್ತಿತ್ತು. ಈಗ ಕೇವಲ ₹ 2ಲಕ್ಷದಿಂದ ₹ 8 ಲಕ್ಷದವರೆಗೆ ಮಾತ್ರ ಬರುತ್ತಿದೆ. ಈ ಅನುದಾನದಲ್ಲಿ ಡಿಟಿಪಿ ಆಪರೇಟರ್‌, ವಾಚಮನ್‌, ಡಿ ಗ್ರೂಪ್‌ ಸಿಬ್ಬಂದಿಗೆ ಸಂಬಳ ನೀಡಿ ಉಳಿಯುವ ಹಣದಲ್ಲಿ ಕಾರ್ಯಕ್ರಮ ಮಾಡುವುದು ಕಷ್ಟವಾಗುತ್ತಿದೆ ಎನ್ನುವುದು ಬಹುತೇಕ ಟ್ರಸ್ಟ್‌ಗಳ ಸದಸ್ಯರ ಅಳಲು.

ಪ್ರಶಸ್ತಿ ನಿಲ್ಲಿಸಲು ಚಿಂತನೆ: ಅನುದಾನ ಕೊರತೆಯಿಂದಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆನಂದಕಂದ ಅವರ ಸಮಗ್ರ ಸಾಹಿತ್ಯ ಪ್ರಕಟಿಸಲು ಕಳೆದ 6–7 ವರ್ಷಗಳಿಂದ ವಿಶೇಷ ಅನುದಾನ ಕೋರಿದ್ದರೂ ಇದುವರೆಗೆ ಒಂದು ಪೈಸೆಯೂ ಬಂದಿಲ್ಲ. ಆನಂದಕಂದ ಕಾವ್ಯ– ಕಾವ್ಯಾರ್ಥ ಚಿಂತನ– ಎರಡು ದಿನ ಕಾರ್ಯಾಗಾರ ಮೂರು ವರ್ಷದ ನಂತರ ನಡೆದಿಲ್ಲ. 

‘ಅನುದಾನ ಬಿಡುಗಡೆ ಮಾಡಲಿಲ್ಲ ವೆಂದರೆ ವಾರ್ಷಿಕ ಪ್ರಶಸ್ತಿ ಕೊಡುವುದನ್ನು ನಿಲ್ಲಿಸುವುದು ಅನಿವಾರ್ಯವಾಗಲಿದೆ’ ಎಂದು ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್‌ ಅಧ್ಯಕ್ಷ ರಾಘವೇಂದ್ರ ಪಾಟೀಲ ಪ್ರತಿಕ್ರಿಯಿಸಿದರು.

ಇದೇ ಸ್ಥಿತಿ ಹಾವೇರಿಯ ವಿ.ಕೃ.ಗೋಕಾಕ ಟ್ರಸ್ಟ್‌ದ್ದಾಗಿದೆ. ಗೋಕಾಕ ಅವರ ಸ್ವಗ್ರಾಮ ಸವಣೂರಿನಲ್ಲಿ ಸಭಾಭವನ, ಮ್ಯೂಸಿಯಂ ಹಾಗೂ ಗ್ರಂಥಾಲಯ ನಿರ್ಮಾಣ ಕಾರ್ಯ ನಿಧಾನಗತಿಯಲ್ಲಿ ಸಾಗಿದೆ ಎನ್ನುತಾರೆ ಟ್ರಸ್ಟ್‌ ಸದಸ್ಯ ಸತೀಶ ಕುಲಕರ್ಣಿ. 

ಹಾವೇರಿಯ ವೀರಸೌಧ ಎದುರು ಸ್ವಾತಂತ್ರ್ಯಯೋಧರ ಮ್ಯೂಸಿಯಂ ಕಟ್ಟಡ ನಿರ್ಮಾಣವಾಗಿದ್ದು, ಒಳಾಂಗಣ ವಿನ್ಯಾಸ ಬಾಕಿ ಉಳಿದಿದೆ. ಇದಕ್ಕಾಗಿ ಬಂದಿದ್ದ ₹ 2.5 ಕೋಟಿ ಅನುದಾನ ಸರ್ಕಾರಕ್ಕೆ ವಾಪಸ್‌ ಹೋಗಿದೆ. ಇದನ್ನು ಮರಳಿಸುವಂತೆ ಸರ್ಕಾರಕ್ಕೆ ಕೋರಿದ್ದೇವೆ ಎಂದು ಮೈಲಾರ ಮಹದೇವ ಟ್ರಸ್ಟ್‌ ಸದಸ್ಯ ವಿ.ಎನ್‌. ತಿಪ್ಪಣ್ಣಗೌಡ ಹೇಳಿದರು.

ಬಾಕಿ ಹಣದಲ್ಲಿ ಕಾರ್ಯಕ್ರಮ: ಹಿಂದಿನ ವರ್ಷಗಳ ಅನುದಾನದಲ್ಲಿ ಉಳಿದಿದ್ದ ಹಣದಲ್ಲಿ ಕಾರ್ಯಕ್ರಮ ಮಾಡಿದ್ದೇವೆ. ಕೋವಿಡ್‌ ಸಂದರ್ಭದಲ್ಲಿ 2 ಆನ್‌ಲೈನ್‌ ಕಾರ್ಯಕ್ರಮ ಮಾಡಿದ್ದೇವೆ. ಅನುದಾನದ ಕೊರತೆಯಿಂದ ಸಂವಾದ, ವಿಚಾರ ಸಂಕಿರಣ, ಪುಸ್ತಕ ಪ್ರಕಟಿಸಲು ಸಾಧ್ಯವಾಗಿಲ್ಲ. ಕಿತ್ತೂರು ಸಂಸ್ಥಾನದ ದಾಖಲೆಗಳನ್ನು ಸಂಗ್ರಹಿಸುವ ಪ್ರಾಜೆಕ್ಟ್‌ ಕೈಗೆತ್ತಿಕೊಳ್ಳಲಾಗಿದೆ. ಮೊದಲ ಸಂಪುಟ ಪ್ರಕಟವಾಗಿದೆ. ಎರಡನೇ ಸಂಪುಟ ಮುದ್ರಣ ಹಂತದಲ್ಲಿದೆ ಎಂದು ಬಸವರಾಜ ಕಟ್ಟಿಮನಿ ಟ್ರಸ್ಟ್‌ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ಹೇಳಿದರು.

ಮಧುರ ಚೆನ್ನ, ಸಿಂಪಿ ಲಿಂಗಣ್ಣ, ಪಿ.ದುಲ್ಹಾಸಾಹೇಬ ಹಾಗೂ ಕಾಪಸೆ ರೇವಪ್ಪ ಸಾಹಿತ್ಯಗಳ ಕುರಿತು ಚಟುವಟಿಕೆ ನಡೆಸಲು ವಿಜಯಪುರದಲ್ಲಿ ಹಲಸಂಗಿ ಗೆಳೆಯರ ಪ್ರತಿಷ್ಠಾನವಿದೆ. ಅನುದಾನದ ಕೊರತೆಯಿಂದಾಗಿ ಪ್ರತ್ಯೇಕ ಕಟ್ಟಡ ನಿರ್ಮಾಣ ಇನ್ನೂ ಆಗಿಲ್ಲ. ಸರ್ಟಿಫಿಕೇಟ್‌ ಕೋರ್ಸ್‌/ ಡಿಪ್ಲೊಮಾ ಕೋರ್ಸ್‌ ಮಾಡುವ ಯೋಜನೆ ಇನ್ನೂ ಕಾರ್ಯಗತಗೊಂಡಿಲ್ಲ.

ಬಾಗಲಕೋಟೆಯ ಮುಧೋಳದ ಕವಿ ಚಕ್ರವರ್ತಿ ರನ್ನ ಫೌಂಡೇಷನ್‌ ಟ್ರಸ್ಟ್‌ನಲ್ಲಿಯೂ ಮೊದಲಿನಂತೆ ಚಟುವಟಿಕೆಗಳಾಗುತ್ತಿಲ್ಲ. ರನ್ನನ ಜನ್ಮಸ್ಥಳದ ಅಧ್ಯಯನ, ಸಾಹಿತ್ಯ ಸಂಗ್ರಹ, ನಾಟಕವಾಡಿಸುವ ಕಾರ್ಯಕ್ರಮ ಗಳು ಬಹುತೇಕ ನಿಂತೇಹೋಗಿವೆ ಎಂದು ಟ್ರಸ್ಟ್‌ ಮಾಜಿ ಸದಸ್ಯ ವೈ.ಎಚ್‌. ಕಾತರಕಿ ಹೇಳಿದರು.

ಪುಸ್ತಕ ಪ್ರಕಟಣೆಗೆ ಹಿನ್ನಡೆ: ಕೋವಿಡ್‌ ಸಂದರ್ಭದಲ್ಲಿಯೂ ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ವತಿಯಿಂದ ಸತತ ವೆಬಿನಾರ್‌ಗಳನ್ನು ಆಯೋಜಿಸಲಾಗಿತ್ತು. ‌ಇದುವರೆಗೆ 17 ಸಂಶೋಧನಾ ಗ್ರಂಥಗಳನ್ನು ಹಾಗೂ ಶತಮಾನದ ಕವಿ ಬೇಂದ್ರೆ ಪುಸ್ತಕ ಪ್ರಕಟಿಸಲಾಗಿದೆ. ಬೇಂದ್ರೆ ನಾಟಕ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಯೋಜನೆ ರೂಪಿಸಲಾಗಿದ್ದು, ಅನುದಾನದ ಕೊರತೆ ಯಿಂದಾಗಿ ಸ್ಥಗಿತಗೊಂಡಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಡಿ.ಎಂ. ಹಿರೇಮಠ ಹೇಳಿದರು.


ಟ್ರಸ್ಟ್‌ಗಳು ಹೆಚ್ಚು ಕ್ರಿಯಾಶೀಲವಾಗಿಲ್ಲ. ಎಂ.ಎಂ. ಕಲಬುರ್ಗಿ ಅವರು ಬಸವರಾಜ ಕಟ್ಟಿಮನಿ ಟ್ರಸ್ಟ್‌ ಅಧ್ಯಕ್ಷರಾಗಿದ್ದಾಗ ಹಮ್ಮಿಕೊಂಡಂತಹ ಕಾರ್ಯಕ್ರಮಗಳು ಈಗ ಯಾವ ಟ್ರಸ್ಟ್‌ನಲ್ಲೂ ನಡೆಯುತ್ತಿಲ್ಲ. ಟ್ರಸ್ಟ್‌ಗಳು ನೀಡುವ ಪುರಸ್ಕಾರ, ಪ್ರಶಸ್ತಿಗಳಲ್ಲಿ ಪಾರದರ್ಶಕತೆ ಇಲ್ಲ. ಆಯ್ಕೆ ಮಾನದಂಡದ ಬಗ್ಗೆಯೇ ಅನುಮಾನವಿದೆ. ಕೆಲವು ಟ್ರಸ್ಟ್‌ಗಳಿಗೆ ಸಾಹಿತ್ಯದ ಗಂಧ–ಗಾಳಿ ಗೊತ್ತಿಲ್ಲದವರನ್ನು ಸದಸ್ಯರನ್ನಾಗಿ ಸರ್ಕಾರ ನೇಮಕ ಮಾಡಿದೆ. ಕೆಲವು ಟ್ರಸ್ಟ್‌ಗಳ ಸದಸ್ಯರು ಹಲವು ವರ್ಷಗಳಿಂದ ಮುಂದುವರಿದಿದ್ದಾರೆ. ಅವರೇನು ಆಜೀವ ಸದಸ್ಯರೇ? ಅವರನ್ನೇಕೆ ಸರ್ಕಾರ ಬದಲಾಯಿಸಲ್ಲ.

- ಡಿ.ಎಸ್‌. ಚೌಗುಲೆ, ನಾಟಕಕಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು