ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೂಕದಲ್ಲಿ ಮೋಸ: ದಡ ಮುಟ್ಟುತ್ತಿಲ್ಲ ಪ್ರಕರಣಗಳು

ಒಳನೋಟ
Last Updated 5 ಅಕ್ಟೋಬರ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಕಾನೂನು ಮಾಪನ ಇಲಾಖೆಯಲ್ಲೂ ಕೆಲ ಪ್ರಾಮಾಣಿಕ ಅಧಿಕಾರಿಗಳಿದ್ದಾರೆ. ತೂಕದಲ್ಲಿ ವಂಚನೆ ಹಾಗೂ ಗ್ರಾಹಕರಿಗೆ ಕಡ್ಡಾಯವಾಗಿ ನೀಡಬೇಕಾದ ಮಾಹಿತಿ ನೀಡದೆ ವಂಚಿಸುವ ಪ್ರಯತ್ನಗಳನ್ನು ಈ ಅಧಿಕಾರಿಗಳು ಬೆಳಕಿಗೆ ತಂದು, ವಂಚನೆ ನಡೆಸುವ ಕಾರ್ಪೊರೇಟ್‌ ಕಂಪನಿಗಳ ವಿರುದ್ಧ ತೊಡೆ ತಟ್ಟಿದ ಪ್ರಯತ್ನಗಳು ರಾಜ್ಯದಲ್ಲೂ ಸಿಗುತ್ತವೆ. ಆದರೆ, ಇವು ತಾರ್ಕಿಕ ಅಂತ್ಯ ಕಾಣದೆ ಗ್ರಾಹಕರ ಹಿತ ಕಾಯುವ ಬೆರಳೆಣಿಕೆ ಪ್ರಯತ್ನಗಳೂ ಮಣ್ಣು ಪಾಲಾಗುತ್ತಿವೆ.

ಬೆಂಗಳೂರು ನಗರ ಜಿಲ್ಲೆ ದಾಸನಪುರ ಹೋಬಳಿ ಅಡಕಮಾರನಹಳ್ಳಿಯಲ್ಲಿ ಮಳಿಗೆಯೊಂದರ ವಿರುದ್ಧ ಅಧಿಕಾರಿಗಳು ಎಂಟು ವರ್ಷಗಳ ಹಿಂದೆ ದಾಳಿ ನಡೆಸಿದ್ದರು. ಅಲ್ಲಿ ಅನೇಕ ರೀತಿಯಲ್ಲಿ ವಂಚನೆ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಮಳಿಗೆಗೆ ಬೀಗ ಹಾಕಿಸಿದ್ದಲ್ಲದೇ ಅಲ್ಲಿದ್ದ ಕೋಟ್ಯಂತರ ರೂಪಾಯಿ ಮೊತ್ತದ ಸಾಮಗ್ರಿಗಳನ್ನು ವಶಪಡಿಕೊಳ್ಳಲಾಗಿತ್ತು. ಇಲಾಖೆ ಕ್ರಮ ಪ್ರಶ್ನಿಸಿ ಆ ಸಂಸ್ಥೆ ಕೋರ್ಟ್ ಮೊರೆ ಹೋಯಿತು. ಕಂಪೆನಿಯು ನಿಯಮಗಳನ್ನು ಉಲ್ಲಂಘಿಸಿ ಗ್ರಾಹಕರಿಗೆ ವಂಚಿಸಿರುವುದಕ್ಕೆ ಪುರಾವೆಗಳಿದ್ದವು. ಆದರೆ, ಈ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಕೋರ್ಟ್‌ನಲ್ಲಿ ವಿಚಾರಣೆಗೆ ಬರುತ್ತದೆ, ಮುಂದೂಡಲ್ಪಡುತ್ತದೆ. ಅಷ್ಟೇ.

‘ಇಲಾಖೆ ಪರ ವಾದ ಮಂಡಿಸುವ ಸರ್ಕಾರಿ ವಕೀಲರು ಎದುರಾಳಿ ಜೊತೆ ರಾಜಿ ಮಾಡಿಕೊಳ್ಳುತ್ತಾರೆ. ಪ್ರಭಾವಿ ಕಂಪನಿಗಳ ವಿರುದ್ಧ ಕೆಲವು ದಕ್ಷ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಳ್ಳುವ ಪ್ರಯತ್ನ ಮಾಡಿದರೂ ಅದು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅಧಿಕಾರಿಯೊಬ್ಬರು.

ಅದೇ ರೀತಿ, ಟೈರ್‌ಗಳನ್ನು ಉತ್ಪಾದಿಸುವ ಬಹುರಾಷ್ಟ್ರೀಯ ಕಂಪನಿ ತನ್ನ ಉತ್ಪನ್ನದ ಮೇಲೆ ಗರಿಷ್ಠ ಮಾರಾಟ ಬೆಲೆ ನಮೂದಿಸದೆ ಗ್ರಾಹಕರನ್ನು ವಂಚಿಸುತ್ತಿತ್ತು. ಅದರ ವಿರುದ್ಧ ಅಧಿಕಾರಿಯೊಬ್ಬರು ಪ್ರಕರಣ ದಾಖಲಿಸಿದ್ದರು. ಐದಾರು ವರ್ಷಗಳ ಬಳಿಕವೂ ಆ ಪ್ರಕರಣ ತಾರ್ಕಿಕ ಅಂತ್ಯ ಕಂಡಿಲ್ಲ. ‘ಈ ಹಿಂದೆ ಎಂಆರ್‌ಪಿ ದಾಖಲಿಸದ ಬಗ್ಗೆ ಬ್ಯಾಟರಿಗಳನ್ನು ತಯಾರಿಸುವ ಕಂಪನಿ ವಿರುದ್ಧ ಮಹಾರಾಷ್ಟ್ರದ ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಸರ್ಕಾರಿ ವಕೀಲರು ಸಮರ್ಥವಾಗಿ ವಾದ ಮಂಡಿಸದ ಕಾರಣ ಆ ಪ್ರಕರಣದಲ್ಲಿ ಕಂಪನಿ ಪರ ತೀರ್ಪು ಬಂತು. ಅವರು ತಯಾರಿಸುವ ಬ್ಯಾಟರಿಗಳು ಪ್ಯಾಕೇಜಿಂಗ್‌ ಉತ್ಪನ್ನಗಳ ವ್ಯಾಖ್ಯಾನದಡಿ ಬರುತ್ತವೆ ಎಂಬುದು ಸ್ಫಟಿಕ ಸ್ಪಷ್ಟ. ಆದರೆ, ಆ ಕಂಪನಿ ತಯಾರಿಸುವ ಬ್ಯಾಟರಿಗಳು ‘ಪ್ಯಾಕೇಜಿಂಗ್‌ ಉತ್ಪನ್ನ’ ವ್ಯಾಖ್ಯಾನದಡಿ ಬರುವುದಿಲ್ಲ ಎಂದು ಕೋರ್ಟ್‌ ಆದೇಶ ನೀಡಿತು. ಟೈರ್‌ಗಳ ಮೇಲೆ ಗರಿಷ್ಠ ಮಾರಾಟ ಬೆಲೆ ನಮೂದಿಸುವ ವಿಚಾರದಲ್ಲೂ ಇದೇ ರೀತಿ ಆಗುವ ಅಪಾಯವಿದೆ. ನಮ್ಮ ವಕೀಲರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದಮಂಡಿಸಿ ಇಲಾಖೆ ಪರ ತೀರ್ಪು ಬರುವಂತೆ ನೋಡಿಕೊಂಡರೆ ಗ್ರಾಹಕರ ಪರವಾಗಿ ಬಂದ ಐತಿಹಾಸಿಕ ತೀರ್ಪು ಇದಾಗಲಿದೆ’ ಎಂದು ಆ ಅಧಿಕಾರಿ ಅಭಿಪ್ರಾಯಪಟ್ಟರು.

ಕ್ಯಾಲಿಬರೇಷನ್‌ ಪ್ರಮಾಣಪತ್ರದ ಹೆಸರಲ್ಲಿ ವಂಚಿಸುತ್ತಿದ್ದ ಕಂಪನಿಯೊಂದು 2012ರಲ್ಲೇ ಸಿಕ್ಕಿಬಿದ್ದರೂ, ನಿಯಂತ್ರಕರು, ಉಪ ನಿಯಂತ್ರಕರು ಕಾನೂನು ಕ್ರಮಕ್ಕೆ ಆದೇಶಿಸಿದ್ದರೂ ಕನಿಷ್ಠ ಸಂಸ್ಥೆಯ ಪರವಾನಗಿ ಅಮಾನತು ಸಾಧ್ಯವಾಗಿಲ್ಲ. ಆರು ವರ್ಷಗಳಾದರೂ ಪ್ರಕರಣ ಕೋರ್ಟ್‌ನಲ್ಲಿ ತೆವಳುತ್ತಾ ಸಾಗಿದೆ.

ಉಚಿತದ ಹೆಸರಿನಲ್ಲಿ ಮೋಸ ಪ್ಯಾಕೇಜಿಂಗ್‌ ಉತ್ಪನ್ನಗಳಲ್ಲಂತೂ ಭಾರಿ ವಂಚನೆಗಳು ನಡೆಯುತ್ತಿವೆ. ಪೊಟ್ಟಣದಲ್ಲಿ ನಮೂದಿಸಿರುವ ತೂಕದಷ್ಟೇ ಪದಾರ್ಥ ಇದೆ ಎಂದು ಬಳಕೆದಾರರು ಭಾವಿಸುತ್ತಾರೆ. ಅಸಲಿಗೆ ಹಾಗೆ ಇರುವುದೇ ಇಲ್ಲ ಎನ್ನುತ್ತಾರೆ ಗ್ರಾಹಕ ಹಕ್ಕುಗಳ ಹೋರಾಟಗಾರರು.

ಅಧಿಕಾರಿಗಳು ಅಂಗಡಿಗಳು, ಮಾಲ್‌ಗಳು ಹಾಗೂ ಸೂಪರ್‌ ಮಾರ್ಕೆಟ್‌ಗಳ ಮೇಲೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸುವ ಕಾರ್ಯ ವ್ಯಾಪಕವಾಗಿ ನಡೆಸಬೇಕು. ಆದರೆ, ಹಾಗಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗ್ರಾಹಕರ ಹಕ್ಕುಗಳ ತಜ್ಞ ವೈ.ಜಿ.ಮುರಳೀಧರನ್‌.

ಚಹಾಪುಡಿ ಪೊಟ್ಟಣದಲ್ಲಿ 100 ಗ್ರಾಂ ಎಂದು ನಮೂದಿಸಿದ್ದರೆ, ಗ್ರಾಹಕರಿಗೆ 100 ಗ್ರಾಂ ಸಿಗಲೇಬೇಕು. ಅದರ ಪ್ಯಾಕೇಜಿಂಗ್‌ಗೆ ಬಳಸಿದ ವಸ್ತುಗಳ ತೂಕವನ್ನು ಸೇರಿಸಿ ಆ ಪೊಟ್ಟಣದ ತೂಕವನ್ನು ಲೆಕ್ಕ ಹಾಕಬಾರದು. ಈ ವಿಚಾರ ಹೆಚ್ಚಿನ ಬಳಕೆದಾರರಿಗೆ ತಿಳಿದೇ ಇಲ್ಲ. ಬಹುತೇಕ ಪ್ಯಾಕೇಜಿಂಗ್‌ ಉತ್ಪನ್ನಗಳು ಈ ವಿಚಾರದಲ್ಲಿ ನಿಯಮ ಪಾಲಿಸುತ್ತಿಲ್ಲ.

ಇತ್ತೀಚೆಗೆ ಒಂದು ಕಂಪನಿ ಕಾಫಿ ಪುಡಿ ಪೊಟ್ಟಣ ಖರೀದಿಸಿದರೆ, ಚಮಚ ಉಚಿತ ಎಂದು ಜಾಹೀರಾತು ನೀಡಿತು. ಆ ಚಮಚವನ್ನು ಪೊಟ್ಟಣದೊಳಗೆ ಸೇರಿಸಿ ಮಾರಾಟ ಮಾಡಿತ್ತು. ಚಮಚದ ತೂಕವೇ 10 ಗ್ರಾಂ ಇತ್ತು. ಗ್ರಾಹಕರಿಗೆ ಅಷ್ಟು ಪ್ರಮಾಣದ ಕಾಫಿ ಪುಡಿ ನಷ್ಟವಾಯಿತು. ಹಾಗಾದರೆ ಚಮಚವನ್ನು ಉಚಿತವಾಗಿ ನೀಡಿದ್ದು ಸುಳ್ಳಲ್ಲವೇ? ಇವೆಲ್ಲ ಸೂಕ್ಷ್ಮ ವಿಚಾರಗಳು. ಈ ಬಗ್ಗೆ ಗ್ರಾಹಕರಿಂದ ದೂರು ಬಂದರೆ ಮಾತ್ರ ಕ್ರಮ ಕೈಗೊಳ್ಳುವಂತಾಗಬಾರದು. ಅಧಿಕಾರಿಗಳು ಸ್ವಯಂತಪಾಸಣೆ ನಡೆಸಿ ಕ್ರಮ ಕೈಗೊಂಡರೆ ವ್ಯವಸ್ಥೆ ಸರಿದಾರಿಗೆ ಬರುತ್ತದೆ ಎನ್ನುತ್ತಾರೆ ಮುರಳೀಧರನ್‌.

ಪೊಟ್ಟಣದಲ್ಲಿ ತೂಕ, ಅದರಲ್ಲಿ ಅಡಕವಾಗಿರುವ ಸಾಮಗ್ರಿಗಳು, ತಯಾರಿಸಿದ ಸ್ಥಳ, ತಯಾರಾದ ದಿನಾಂಕ, ಅದರ ಅವಧಿ ಕೊನೆಗೊಳ್ಳುವ ದಿನಾಂಕ, ಅದರ ಬಗ್ಗೆ ದೂರುಗಳಿದ್ದರೆ ಸಂಪರ್ಕಿಸಬೇಕಾದ ಸಹಾಯವಾಣಿ ಇತ್ಯಾದಿ ವಿವರಗಳನ್ನು ಕಡ್ಡಾಯವಾಗಿ ಉಲ್ಲೇಖಿಸಲೇಬೇಕು. ಒಂದು ವೇಳೆ ಉತ್ಪನ್ನವು ತೀರಾ ಚಿಕ್ಕದಾಗಿದ್ದರೆ, ಅದಕ್ಕೆ ಒಂದು ಟ್ಯಾಗ್‌ ಕಟ್ಟಿ ಅದರ ವಿವರಗಳನ್ನು ನೀಡಲೇಬೇಕು ಎನ್ನುತ್ತದೆ ನಿಯಮ. ಆದರೆ, ಈ ವಿಚಾರದಲ್ಲಿ ಸಾಕಷ್ಟು ಉಲ್ಲಂಘನೆಗಳು ಆಗುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ.

ಸ್ಟಿಕ್ಕರ್‌ ಅಂಟಿಸುವುದೂ ಅಕ್ರಮ: ಪೊಟ್ಟಣಗಳಲ್ಲಿ ಬೆಲೆಯ ಮೇಲೆ ಬೇರೆ ಸ್ಟಿಕ್ಕರ್‌ ಅಂಟಿಸುವಂತಿಲ್ಲ. ಪ್ಯಾಕೇಜಿಂಗ್‌ನಲ್ಲಿ ನಮೂದಿಸಿದ ದರದಲ್ಲಿ ಎಲ್ಲ ರೀತಿಯ ತೆರಿಗೆಗಳು ಸೇರಿರಬೇಕು. ಗ್ರಾಹಕರಿಂದ ಸೇವಾ ಶುಲ್ಕ ರೂಪದಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಬಾರದು ಎಂಬ ನಿಯಮ ಇದೆ. ಪ್ರವಾಸಿತಾಣ, ಚಿತ್ರಮಂದಿರಗಳಲ್ಲಿ ಈ ನಿಯಮ ಪಾಲನೆ ಆಗುತ್ತಿಲ್ಲ. ಕುಡಿಯುವ ನೀರನ್ನೂ ಸಹ ಒಳಗೆ ತರಲು ಅವಕಾಶ ನೀಡುವುದಿಲ್ಲ. ಉತ್ಪನ್ನಗಳಿಗೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಾರೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮಾರಾಟದಲ್ಲಿ ಸ್ಟಿಕ್ಕರ್‌ ಅಂಟಿಸಿ ದೊಡ್ಡಮಟ್ಟದಲ್ಲಿ ವಂಚಿಸಲಾಗುತ್ತಿದೆ.

ಆಡಳಿತಾತ್ಮಕ ಸಮಸ್ಯೆ: ‘ನಮ್ಮ ರಾಜ್ಯ ಸರ್ಕಾರಗಳು ಕಾನೂನು ಮಾಪನಶಾಸ್ತ್ರ ಇಲಾಖೆಯನ್ನು ಒಂದು ಮಹತ್ತರ ಇಲಾಖೆ ಎಂದು ಪರಿಗಣಿಸಿಯೇ ಇಲ್ಲ. ಈ ಇಲಾಖೆಯ ಮುಖ್ಯಸ್ಥರಾದ ನಿಯಂತ್ರಕರಿಗೆ ಕನಿಷ್ಠ 2–3 ವರ್ಷ ಅಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ಆಗ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಿಕೊಂಡು ಕೆಲಸ ಮಾಡಲು ಸಾಧ್ಯ. ಆದರೆ, ಹಾಗಾಗುತ್ತಿಲ್ಲ. ಇಲಾಖೆ ನಿಯಂತ್ರಕರನ್ನು ಆರು ತಿಂಗಳಿಗೊಮ್ಮೆ ಎತ್ತಂಗಡಿ ಮಾಡಲಾಗುತ್ತಿದೆ. ಇದು ಸರಿಯಲ್ಲ’ ಎನ್ನುತ್ತಾರೆ ಮುರಳೀಧರನ್‌.

ಬೇರೆ ರಾಜ್ಯಗಳಲ್ಲಿ (ಉದಾಹರಣೆಗೆ ದೆಹಲಿ, ಮಹಾರಾಷ್ಟ್ರ) ನಿಯಂತ್ರಕ ಹುದ್ದೆಗೆ ಐಪಿಎಸ್‌/ ಐಎಎಸ್‌ ಅಧಿಕಾರಿಗಳನ್ನು ನಿಯೋಜಿಸುವ ಪರಿಪಾಠ ಇದೆ. ನಮ್ಮಲ್ಲಿ ಹಿರಿಯ ಕೆಎಎಸ್‌ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ನಮ್ಮಲ್ಲೂ ಐಎಎಸ್/ಐಪಿಎಸ್‌ ಅಧಿಕಾರಿಗಳನ್ನು ಮುಖ್ಯಸ್ಥರನ್ನಾಗಿ ನೇಮಿಸಬೇಕು. ಆಗ ಮೋಸ ಮಾಡುವವರಿಗೆ ಸ್ವಲ್ಪ ಭಯ ಮೂಡುತ್ತದೆ ಎಂದು ಅಧಿಕಾರಿಯೊಬ್ಬರು ವಿಶ್ಲೇಷಿಸಿದರು.

ಕಾನೂನು ಮಾಪನಶಾಸ್ತ್ರ ಕಾಯ್ದೆಯ ಬಗ್ಗೆ ಬಹುತೇಕ ಗ್ರಾಹಕರಿಗೆ ಮಾಹಿತಿಯೇ ಇಲ್ಲ. ಇಲಾಖೆಯೂ ಈ ಜನಜಾಗೃತಿ ಮೂಡಿಸುವ ಕಾರ್ಯವನ್ನು ವಸ್ತುನಿಷ್ಠವಾಗಿ ನಡೆಸಿಲ್ಲ.

ಗ್ರಾಹಕರಿಂದ ಇಲಾಖೆ ದೂರ ದೂರ...

ಈ ಹಿಂದೆ ತೂಕ ಮತ್ತು ಅಳತೆ ಇಲಾಖೆ ಎಂದು ಕರೆಯಲಾಗುತ್ತಿದ್ದ ಇಲಾಖೆಯ ಹೆಸರನ್ನು ಅಂತರರಾಷ್ಟ್ರೀಯ ಕಾನೂನುಬದ್ಧ ಮಾಪನಶಾಸ್ತ್ರ ಸಂಸ್ಥೆಗೆ ಪೂರಕವಾಗಿರುವಂತೆ ‘ಕಾನೂನು ಮಾಪನಶಾಸ್ತ್ರ ಇಲಾಖೆ’ ಎಂದು ಮರುನಾಮಕರಣ ಮಾಡಲಾಗಿದೆ.

ಈ ಹೆಸರು ಸಹ ಯಾರಿಗೂ ಅರ್ಥವಾಗುವುದಿಲ್ಲ. ಈ ಹೆಸರನ್ನು ಗ್ರಾಹಕರ ಹಕ್ಕುಗಳ ರಕ್ಷಣಾ ಇಲಾಖೆ ಎಂದು ಬದಲಾಯಿಸಬೇಕು ಎಂಬ ಬಲವಾದ ಒತ್ತಾಯ ಕೇಳಿಬಂದಿದೆ.

‘ನಮ್ಮ ಹಕ್ಕುಗಳ ರಕ್ಷಣೆಗಾಗಿ ಒಂದು ಇಲಾಖೆ ಇದೆ ಎಂಬುದೇ ಅನೇಕ ಗ್ರಾಹಕರಿಗೆ ತಿಳಿದಿಲ್ಲ. ಇಲಾಖೆಯ ಹೆಸರನ್ನು ಗ್ರಾಹಕರ ಹಕ್ಕುಗಳ ರಕ್ಷಣಾ ಇಲಾಖೆ ಎಂದು ಬದಲಾಯಿಸಬೇಕು. ವಂಚನೆಗೆ ಒಳಗಾದ ಗ್ರಾಹಕರು ಈ ಇಲಾಖೆಯನ್ನು ಸಂಪರ್ಕಿಸುವುದು ಸುಲಭವಾಗುತ್ತದೆ’ ಎಂದು ಕನ್ನಡ ಗ್ರಾಹಕರ ಕೂಟದ ಕಾರ್ಯದರ್ಶಿ ಅರುಣ್‌ ಜಾವಗಲ್‌ ಒತ್ತಾಯಿಸಿದರು.

ಬಹುತೇಕ ಪ್ಯಾಕೇಜಿಂಗ್‌ ಪದಾರ್ಥಗಳಲ್ಲಿ ಮಾಹಿತಿ ಒಂದೋ ಇಂಗ್ಲಿಷ್‌ ಅಥವಾ ಹಿಂದಿಯಲ್ಲಿರುತ್ತದೆ. ಇದು ಹೆಚ್ಚಿನವರಿಗೆ ಅರ್ಥ ಆಗುವುದಿಲ್ಲ. ಪ್ಯಾಕೇಜಿಂಗ್‌ ಉತ್ಪನ್ನಗಳ ಮೇಲೆ ನೀಡುವ ವಿವರಗಳನ್ನು ಆಯಾ ರಾಜ್ಯದ ಭಾಷೆಯಲ್ಲಿ ಒದಗಿಸುವುದನ್ನು ಕಡ್ಡಾಯ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಇದನ್ನು ಜಾರಿಗೊಳಿಸುವುದು ಕಷ್ಟವೇನಲ್ಲ. ಗ್ರಾಹಕರ ವ್ಯವಹಾರಗಳ ವಿಚಾರವು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹವರ್ತಿ ಪಟ್ಟಿಯಲ್ಲಿದೆ. ರಾಜ್ಯದಲ್ಲಿ 6 ಕೋಟಿ ಕನ್ನಡಿಗರು ಇದ್ದಾರೆ ಎಂದರೆ, ಅಷ್ಟು ಮಂದಿ ಗ್ರಾಹಕರು ಇದ್ದಾರೆಂದೇ ಅರ್ಥ. ತಮ್ಮ ಉತ್ಪನ್ನಗಳನ್ನು ರಾಜ್ಯದಲ್ಲಿ ಮಾರಾಟ ಮಾಡುವ ಕಂಪನಿಗಳಿಗೆ ಆಯಾ ರಾಜ್ಯದ ಭಾಷೆಯಲ್ಲಿ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರೆ ಹೇಗೆ ಎಂದು ಅವರು ಪ್ರಶ್ನಿಸಿದರು.

ಡಿಜಿಟಲ್‌ ‘ವಂಚನೆ‘

‘ಒಂದು ದಶಕದಿಂದೀಚೆಗೆ ಡಿಜಿಟಲ್‌ ಮಾಪಕಗಳೇ ವ್ಯಾಪಕವಾಗಿ ಬಳಕೆಯಾಗುತ್ತಿವೆ. ನಿಖರ ಅಳತೆ ನೀಡುವ ಕಾರಣಕ್ಕೆ ಗ್ರಾಹಕರಿಗೂ ಇವುಗಳ ಮೇಲೆ ಒಲವು ಹೆಚ್ಚು. ಆದರೆ, ಇವುಗಳ ನಿಖರ ತೂಕ ಒದಗಿಸುವಂತೆ ಹೊಂದಾಣಿಕೆ (ಕ್ಯಾಲಿಬರೇಷನ್‌) ಮಾಡಿದ ಬಳಿಕ ಅದರಲ್ಲಿ ಯಾವುದೇ ಬದಲಾವಣೆ ಮಾಡುವುದಕ್ಕೆ ಅವಕಾಶ ಇರಬಾರದು. ಇವುಗಳ ಕ್ಯಾಲಿಬರೇಷನ್‌ನಲ್ಲಿ ತುಸು ಏರುಪೇರಾದರೂ ತೂಕದಲ್ಲಿ ಭಾರಿ ವ್ಯತ್ಯಾಸ ಉಂಟಾಗಬಲ್ಲದು. ಡಿಜಿಟಲ್‌ ಮಾಪಕಗಳಲ್ಲಿ ಕ್ಯಾಲಿಬರೇಷನ್‌ ಬದಲಿಸಿ ತೂಕದಲ್ಲಿ ನಷ್ಟ ಉಂಟುಮಾಡುವುದು ಮಾಮೂಲಿ ಎಂಬಂತಾಗಿದೆ.

ಇಲಾಖೆ ಕ್ಷೇತ್ರಾಧಿಕಾರಿಗಳು ಅಂಗಡಿಯ ಡಿಜಿಟಲ್‌ ಮಾಪಕವನ್ನು ಪರಿಶೀಲನೆ ಮಾಡಿ ಬಾಹ್ಯ ಹೊಂದಾಣಿಕೆ ಮಾಡುವಂತಹ ಗುಂಡಿಯನ್ನು ನಿಷ್ಕ್ರಿಯಗೊಳಿಸಿ ಅವುಗಳ ಮಾದರಿ ಮಂಜೂರಾತಿ ಪ್ರಮಾಣಪತ್ರದ ಪ್ರಕಾರ ಮುದ್ರೆ ಹಾಕಬೇಕು. ‘ಲೋಡ್‌ ಸೆಲ್‌ ಕವರ್‌’ ಮಾಡಬೇಕು. ಸೀಲ್‌ ಹಾಕುವುದಕ್ಕೂ ಚೌಕಾಕಾರದ ಸೀಸದ ಪೆಲೆಟ್ ಹಾಗೂ ಟ್ವಿಸ್ಟೆಡ್‌ ತಂತಿ ಬಳಸಬೇಕು. ಆ ಬಳಿಕ ಅದರಲ್ಲಿ ಯಾವುದೇ ಮಾರ್ಪಾಟು ಮಾಡಲು ಅವಕಾಶ ಇಲ್ಲ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ಆದರೆ, ಬಹುತೇಕ ಡಿಜಿಟಲ್‌ ಮಾಪಕಗಳನ್ನು ಅಂಗಡಿಯವರು ಮತ್ತೆ ಕ್ಯಾಲಿಬರೇಷನ್‌ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ದಿಢೀರ್‌ ತಪಾಸಣೆ ವೇಳೆ, ಕ್ಯಾಲಿಬರೇಷನ್‌ ಗುಂಡಿಯನ್ನು ನಿಷ್ಕ್ರಿಯಗೊಳಿಸಿದ್ದನ್ನು ಮಾರ್ಪಾಡು ಮಾಡಿದ್ದು ಕಂಡುಬಂದರೆ ಇಲಾಖಾ ಅಧಿಕಾರಿಗಳು ಅಂಗಡಿ ಮಾಲೀಕರಿಗೆ ದಂಡ ವಿಧಿಸಿ ಆ ಮಾಪಕವನ್ನು ಜಪ್ತಿ ಮಾಡಬೇಕು ಎನ್ನುತ್ತದೆ ನಿಯಮ. ಆದರೆ, ಇಲಾಖೆಯ ಅಧಿಕಾರಿಗಳೇ ಈ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ. ಬಹುತೇಕ ಅಧಿಕಾರಿಗಳಿಗೆ ಇಂತಹ ಅಕ್ರಮಗಳೇ ‘ಹೆಚ್ಚುವರಿ ಆದಾಯ’ದ ಮೂಲಗಳಾಗಿವೆ.

‘ಇ–ಮಾಪನ್‌‘ ಎದ್ದೇಳಲೇ ಇಲ್ಲ!

ಇಲಾಖೆಯ ‘ಇ–ಮಾಪನ್‌’ (www.emapan.karnataka.gov.in) ವೆಬ್‌ಸೈಟ್‌ ಹೊಂದಿದೆ. ಗ್ರಾಹಕರಿಗೆ ಪ್ರಯೋಜನಕಾರಿಯ ಮಾಹಿತಿಗಳ ಕೊರತೆ ಇದರಲ್ಲಿ ಎದ್ದು ಕಾಣುತ್ತಿದೆ. ಅಂಗಡಿ ಮಾಲೀಕರನ್ನಷ್ಟೇ ಕೇಂದ್ರವಾಗಿಟ್ಟುಕೊಂಡಂತಿದೆ ಎಂದು ದೂರುತ್ತಾರೆ ಗ್ರಾಹಕ ಹಕ್ಕುಗಳ ಹೋರಾಟಗಾರರು.

ಕಾನೂನು ಮಾಪನ ಇಲಾಖೆ ಚಟುವಟಿಕೆಗಳನ್ನು ಗಣಕೀಕೃತ ಗೊಳಿಸುವ ‘ಇ–ಮಾಪನ’ ಯೋಜನೆಗೆ 2015ರಲ್ಲಿ ಚಾಲನೆ ನೀಡಲಾಗಿತ್ತು. ‘ಈವರೆಗೆ ತೂಕ ಮತ್ತು ಅಳತೆ ಮಾಪನ ಕ್ರಿಯೆ ಕೈಬರಹದಲ್ಲಿ ನಡೆಯುತ್ತಿತ್ತು. ಇದರಿಂದ ಮಾಪನದಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತಿದ್ದವು. ‘ಇ–ಮಾಪನ’ ಯೋಜನೆಯಿಂದ ನಿಖರ ಮಾಪನ ಸಾಧ್ಯ. ಆಡಳಿತವೂ ಪಾರದರ್ಶಕವಾಗಿ ಗ್ರಾಹಕ ಸ್ನೇಹಿಯಾಗಲಿದೆ’ ಎಂದು ಸಚಿವರಾಗಿದ್ದ ದಿನೇಶ್‌ ಗುಂಡೂರಾವ್‌ ಹೇಳಿಕೊಂಡಿದ್ದರು. ಆದರೆ, ನಾಲ್ಕು ವರ್ಷ ಕಳೆದರೂ ಇ–ಮಾಪನ ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿಲ್ಲ.

ಇ– ಮಾಪನ್‌ನಲ್ಲಿ ಅಂಗಡಿಯವರು ಮಾತ್ರ ಅಹವಾಲು ಹೇಳಿಕೊಳ್ಳಲು ಅವಕಾಶ ನೀಡಲಾಗಿದೆ. ಗ್ರಾಹಕರು ದೂರು ನೀಡುವುದಕ್ಕೆ ಅವಕಾಶ ಕಲ್ಪಿಸಿಲ್ಲ. ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ದೂರು ನೀಡೋಣ ಎಂದರೆ ಅವರ ವಿವರ ಸಂಗ್ರಹಿಸುವುದೇ ಸವಾಲಿನ ಕೆಲಸ. ತೂಕ ಮತ್ತು ಅಳತೆ ವ್ಯತ್ಯಾಸದ ಬಗ್ಗೆ ದೂರು ನೀಡುವುದಕ್ಕೆ ಇಲಾಖೆ ಸಹಾಯವಾಣಿಯನ್ನೂ ಹೊಂದಿಲ್ಲ ಎಂದು ಹೋರಾಟಗಾರರು ಬೇಸರ ವ್ಯಕ್ತಪಡಿಸಿದರು.

ಗ್ರಾಹಕರೂ ಇಲಾಖೆಯ ವೆಬ್‌ಸೈಟ್‌ನಲ್ಲೇ ದೂರು ದಾಖಲಿಸುವುದಕ್ಕೆ ಅವಕಾಶ ಕಲ್ಪಿಸಬೇಕು. ಆ ದೂರಿನ ಪರಿಶೀಲನೆ ಯಾವ ಹಂತದಲ್ಲಿದೆ, ಜಿಲ್ಲಾವಾರು ಎಷ್ಟು ದೂರುಗಳು ದಾಖಲಾಗಿವೆ, ಅವುಗಳಲ್ಲಿ ಎಷ್ಟು ಇತ್ಯರ್ಥವಾಗಿವೆ, ದೂರು ನೀಡಿದ ಗ್ರಾಹಕರಲ್ಲಿ ಎಷ್ಟು ಮಂದಿಗೆ ಪರಿಹಾರ ಸಿಕ್ಕಿದೆ ಎಂಬ ಮಾಹಿತಿಯೂ ವೆಬ್‌ಸೈಟ್‌ನಲ್ಲಿರಬೇಕು ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT