ಗುರುವಾರ , ಜೂನ್ 17, 2021
22 °C

ಒಳನೋಟ: ‘ಡೆತ್ ಆಡಿಟ್‌’ ಏನು? ಎತ್ತ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ತಾಲ್ಲೂಕು ಮಟ್ಟದ ಆಸ್ಪತ್ರೆಗಳು, ಜಿಲ್ಲಾ ಮಟ್ಟದ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಸಂಭವಿಸುವ ಎಲ್ಲ ಮರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ತಜ್ಞ ವೈದ್ಯರನ್ನು ಒಳಗೊಂಡ ಸಮಿತಿಯಿಂದ ‘ಆಂತರಿಕ ಪರಿಶೀಲನೆ’ ನಡೆಸುವ ಕ್ರಮವನ್ನೇ ‘ಡೆತ್‌ ಆಡಿಟ್‌’ ಎನ್ನಲಾಗುತ್ತದೆ.

ಒಬ್ಬ ವ್ಯಕ್ತಿಯ ಮರಣ ನಿಶ್ಚಿತವಾಗಿ ಯಾವ ಕಾರಣಕ್ಕಾಗಿ ನಡೆದಿದೆ? ಆ ಸಾವನ್ನು ತಪ್ಪಿಸಲು ಸಾಧ್ಯವಿತ್ತೆ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದೇ ಈ ಪ್ರಕ್ರಿಯೆಯ ಉದ್ದೇಶ.

ಜಗತ್ತಿನಾದ್ಯಂತ ಹಲವು ವರ್ಷಗಳಿಂದ ಈ ಪ್ರಕ್ರಿಯೆ ನಡೆಯುತ್ತಿದೆ.  ‘ಡೆತ್‌ ಆಡಿಟ್‌’ಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯೂ ಮಾರ್ಗಸೂಚಿಗಳನ್ನು ನೀಡಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಯಾವುದೇ ವ್ಯಕ್ತಿ ಮೃತಪಟ್ಟರೂ ಆ ಕುರಿತು ಜಿಲ್ಲಾ ಮಟ್ಟದ ಸಮಿತಿಯ ಮೂಲಕ ಪರಿಶೀಲನೆ ನಡೆಸಿ, ಮರಣಕ್ಕೆ ಕಾರಣವಾದ ನೈಜ ಸಂಗತಿಗಳನ್ನು ಪತ್ತೆಹಚ್ಚಲಾಗುತ್ತದೆ.

‘ಡೆತ್‌ ಆಡಿಟ್‌’ ಎಂಬುದು ಲೋಪಗಳನ್ನು ಹುಡುಕುವುದಕ್ಕೆ ನಡೆಸುವ ಪ್ರಕ್ರಿಯೆ ಅಲ್ಲ. ಒಂದು ಸಾವಿಗೆ ಯಾವ ಅಂಶಗಳು ಕಾರಣ ಎಂಬ ಸತ್ಯವನ್ನು ಶೋಧಿಸುವುದು ಇದರ ಉದ್ದೇಶ ಎನ್ನುತ್ತಾರೆ ತಜ್ಞರು.

‘ರೋಗಿ ಆಸ್ಪತ್ರೆಗೆ ಬರುವಾಗ ಯಾವ ಸ್ಥಿತಿಯಲ್ಲಿ ಇದ್ದ? ಆತನಿಗೆ ನಡೆಸಿದ ಪರೀಕ್ಷೆಗಳು ಏನು? ನೀಡಿದ ಚಿಕಿತ್ಸೆ ಮತ್ತು ಔಷಧಿಯ ವಿವರಗಳು, ರೋಗಪತ್ತೆ ಮತ್ತು ಚಿಕಿತ್ಸಾ ಕ್ರಮದಲ್ಲಿ ಏನಾದರೂ ತಪ್ಪುಗಳು ಆಗಿವೆಯೇ? ಮೃತನಾದ ವ್ಯಕ್ತಿ ಮನೆಯಿಂದ ಆಸ್ಪತ್ರೆಗೆ ಬರುವುದು ವಿಳಂಬವಾಯಿತೆ? ಆಗಿದ್ದಲ್ಲಿ ಕಾರಣಗಳೇನು? ಪ್ರಯಾಣದಲ್ಲೇ ಹೆಚ್ಚು ಸಮಯ ಕಳೆಯಿತೆ? ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡುವುದು ವಿಳಂಬ ಆಯಿತೆ ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸಮಿತಿಯು ಪರಿಶೀಲನೆ ನಡೆಸುತ್ತದೆ’ ಎಂದು ಹಿರಿಯ ವೈದ್ಯರೊಬ್ಬರು ವಿವರಿಸಿದರು.

ಚಾಮರಾಜನಗರ ಕೋವಿಡ್‌ ಆಸ್ಪತ್ರೆಯಲ್ಲಿ 24 ಜನರು ಮೃಪಟ್ಟ ಘಟನೆಗೆ ನಿರ್ದಿಷ್ಟವಾಗಿ ಹೇಳುವುದಾದರೆ ಆಮ್ಲಜನಕದ ಕೊರತೆಯಿಂದ ಮರಣಗಳು ಸಂಭವಿಸಿಯೆ ಎಂಬ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ‘ಡೆತ್‌ ಆಡಿಟ್‌’ ಆರಂಭಿಸಬೇಕಾಗುತ್ತದೆ. ಆಮ್ಲಜನಕದ ಪೂರೈಕೆಯಲ್ಲಿ ಸಮಸ್ಯೆ ಇತ್ತೆ? ದಾಸ್ತಾನು ಎಷ್ಟಿತ್ತು? ಸಕಾಲಕ್ಕೆ ಆಮ್ಲಜನಕ ಪೂರೈಕೆಗೆ ಸಂಬಂಧಿಸಿದ ಆಸ್ಪತ್ರೆಯ ಮುಖ್ಯಸ್ಥರು, ಸ್ಥಾನಿಕ ವೈದ್ಯಾಧಿಕಾರಿ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ಏನು ಕ್ರಮ ಕೈಗೊಂಡಿದ್ದರು? ಅವರಿಂದ ಏನಾದರೂ ಲೋಪಗಳಾಗಿವೆಯೆ? ವೈದ್ಯಕೀಯ ಕಾಲೇಜಿನ ಅಧೀನದ ಆಸ್ಪತ್ರೆಯಾಗಿದ್ದಲ್ಲಿ ಡೀನ್‌ ಮತ್ತು ನಿರ್ದೇಶಕರು ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದ್ದರು ಎಂಬುದನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಬೇಕಾಗುತ್ತದೆ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು