ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾವುಟ ಬದಲಿಸೊ ಭಟ್ಟಂಗಿಗಳು

Last Updated 1 ನವೆಂಬರ್ 2019, 20:04 IST
ಅಕ್ಷರ ಗಾತ್ರ

ದೀಪಾವಳ್ಯಾಗ್‌ ಹಚ್ಚಾಕ ಪಟಾಕಿ ತರಬೇಕಂತ ಬಜಾರಿಗೆ ಹೊಂಟಿದ್ಯಾ. ಎದುರಿಗೆ ಪ್ರಭ್ಯಾ ತಲೆ ಬಗ್ಗಿಸಿ
ಕೊಂಡು ಬರಾಕತ್ತಿದ್ದ. ‘ಹಿಂಗ್ಯಾಕಲೆ ದೊಡ್ಡ ತಪ್‌ ಮಾಡ್ದಂಗ್ ತಲಿ ತಗ್ಗಿಸಿಕೊಂಡ್‌ ಬರಾಕತ್ತಿ. ರಸ್ತೆ ಗುಂಡಿ ಒಳಗ್‌ ಬೀಳ್ತಿ ಅಂತ ಅಂಜಿ ಏನ್‌’ ಎಂದು ಚಾಸ್ಟಿ ಮಾಡಿದೆ.

‘ನಾ ಏನ್‌ ನಿನ್ಹಂಗ್‌ ಗಟಾರ್‌ದಾಗ್‌ ಬೀಳುವಷ್ಟು ಕುಡ್ದು ಹೊಂಟಿಲ್ಲ. ನಮ್ಮ ಸಿಎಂ ಸಾಹೇಬ್ರು ಬೆಂಗಳೂರಿನ್ಯಾಗ್‌ ಹೇಳ್ದಂಗ್‌, ಮುನ್ಸಿಪಾಲ್ಟಿಯವ್ರು ಈ ಕಸಾ ಸ್ವಚ್ಛ ಮಾಡಲಾರ್ದನ್ನ ನೋಡಿ ತಲೆ ಎತ್ತಿ ತಿರಗ್‌ಲಾರ್ದಂಗ್‌ ಆಗೇತಿ’ ಎಂದ.

‘ಭಪ್ಪರೆ ಮಗನs, ಸಿಎಂ ಮೇಲಿನ ನಿನ್ನ ಅಭಿಮಾನಕ್ಕ ಭಲೆ ಅನ್ನಬೇಕು. ಹೊಳಿ ನೀರಾಗ್ ಮನೆ ಮಠ ಕಳಕೊಂಡವ್ರು ಹುನಗುಂದ ಬಸ್‌ಸ್ಟ್ಯಾಂಡ್‌
ನ್ಯಾಗ್‌ ದೀಪಾವಳಿ ಆಚರಿಸಿದ್ದು ನೋಡಿ ನಿನಗ್‌ ಮತ್ತ ಆ ನಿಮ್ಮ ಸಿಎಂಗೆ ಏನೂ ಅನುಸುದಿಲ್ಲ. ಕಸಾ ನೋಡಿ ಕೆಂಡಕಾರೋರಿಗೆ, ಜನರ ಸಂಕಷ್ಟಕ್ಕ ಸ್ಪಂದಿಸದಷ್ಟು ಸರ್ಕಾರ ದಿವಾಳಿ ಎದ್ದದ ಏನಲೇ’ ಎಂದು ಬೈದೆ.

‘ಹಬ್ಬದ ದಿನಾ ಬಾಯ್ಯಾಗ್‌ ಸ್ವಲ್ಪ ಛಲೋ ಮಾತ್‌ ಬರ‍್ಲಿ. ಪ್ರತಿಪಕ್ಷದ ಕಾಯಂ ನಾಯಕ ಸಿದ್ರಾಮಣ್ಣನ ಥರಾ, ಸದಾ ಕಮಲ ಪಕ್ಷವನ್ನ ಟೀಕಿಸೋದನ್ನ ಸ್ವಲ್ಪು ಬಿಡು’ ಎಂದು ದಬಾಯಿಸಿದ.

‘ಅದಿರ‍್ಲಿ, ಕೈಯ್ಯಾಗ್‌ ಏನೊ ಹಿಡ್ಕೊಂಡಿಯಲ್ಲ’ ಎಂದು ಕೇಳಿದೆ.

‘ಕಣ್‌ ಕಾಣ್ಸಾಕತ್ತಾವ ಇಲ್ಲ. ಇದು ಕನ್ನಡ ಬಾವುಟಲೇ, ರಾಜ್ಯೋತ್ಸವ ಬಂದೈತಿ. ನವೆಂಬರ್‌ ಕನ್ನಡಿಗರು ಸುದ್‌ ಕನ್ನಡಾ ಮಾತಾಡೊ ತಿಂಗ್ಳು ಇದು’ ಎಂದು ಎದಿರೇಟು ಕೊಟ್ಟ.

‘ಯಾರು, ಯಾವ್‌ ಹೊತ್ತಿನ್ಯಾಗ್‌ ಯಾವ ಧ್ವಜಾ ಹಿಡಿತಾರಂತ್‌ ಒಂದೂ ಗೊತ್ತಾಗ್ತಾ ಇಲ್ಲ. ಕನಕಪುರದ ಬಂಡೆ (ಕು)ಖ್ಯಾತಿಯ ಡಿಕೆಶಿ ಜೆಡಿಎಸ್ ಧ್ವಜಾ ಹಿಡಿತಾನ್, ಸರ್ಕಾರ ಬೀಳೋ ಸಂದರ್ಭ ಬಂದ್ರ ನೆರವಿಗೆ ಬರ‍್ತೀನಿ ಅಂತ ಕುಮಾರಣ್ಣ ಬಿಜೆಪಿ ಧ್ವಜಾ ಹಿಡ್ಯಾಕ್‌ ಹೊಂಟಾನ್‌. ಇವರಿಬ್ಬರ ಅನ್ಯ ಪಕ್ಷದ ಧ್ವಜ ಪ್ರೀತಿ ನೋಡಿ ಸಿದ್ರಾಮಣ್ಣನ ಹೊಟ್ಯಾಗ್‌ ಉರಿ ಬಿದ್ದಿದ್ರ, ಆಡಿಯೋರಪ್ನೋರ್‌ ರೊಟ್ಟಿ ಜಾರಿ ತುಪ್ಪದಾಗ್‌ ಬಿದ್ದೈತಿ’ ಎಂದೆ.

‘ತಮಗ್‌ ಟಿಕೆಟ್‌ ಸಿಗದಿದ್ರ ಕಾಂಗ್ರೆಸ್‌ ಬಾವುಟ ಹಿಡ್ಯಾಕ್‌ ಬಿಜೆಪಿಯೊಳ್ಗ ಕೆಲವ್ರು ತುದಿಗಾಲಲ್ಲಿ ನಿಂತಾರ್‌. ಯಾವ ಪಕ್ಷದ ಬಾವುಟ ಹಿಡಿಬೇಕಾಗ್ತೈತಿ ಅಂತನ್ನೋದು ಗೊತ್ತಾಗ್ದ ಅನರ್ಹ ಶಾಸಕರು ಅತಂತ್ರ ಆಗ್ಯಾರ್. ಇವರ ಕೃಪೆಯಿಂದನs ನೂರು ದಿನಾ ಮುಗಿಸಿ ಮುನ್ನುಗ್ಗುತ್ತಿರುವ ಸರ್ಕಾರಕ್ಕ ಮುಂದ ಏನ್‌ ಗಂಡಾಂತರ ಕಾದಿದೆಯೋ’ ಎಂದ ಪ್ರಭ್ಯಾ.

‘ಮೂರೂವರೆ ವರ್ಷಾನೂ ನಾನs ಸಿಎಂ ಅಂತ ಆಡಿಯೋರಪ್ನೋರ್‌ ಹೇಳ್ಕೊಂಡಾರಲ್ಲ, ಬಿಡು ಚಿಂತಿ’ ಎಂದೆ.

‘ಬರೀ ಹೇಳ್ಕೊಂಡ್ರ ಏನ್‌ ಉಪಯೋಗ್‌ ಐತಿ. ದೇವರ ಸನ್ನಿಧಾನದಾಗ್‌ ಆಣಿ ಮಾಡ್ಬೇಕ್‌’ ಅಂತ ಪ್ರಭ್ಯಾ ಯಾವುದೋ ಲಹರ‍್ಯಾಗ್‌ ಬಾಯ್ತಪ್ಪಿ ಹೇಳ್ಬಿಟ್ಟ.

‘ಅವರಪ್ಪನಾಣೆಗೂ ಅದು ಆಗೂದಿಲ್ಲ ಅಂತ ಸಿದ್ರಾಮಣ್ಣ ಹೇಳ್ಯಾನ’ ಎಂದೆ.

‘ಎಲ್ಲಿ ಅದರ ಬಗ್ಗೆ ವಿಡಿಯೊ ಬಂದಿಲ್ಲಲ್ಲ’ ಎಂದು ಪ್ರಭ್ಯಾ ಕುತೂಹಲದಿಂದ ಕೇಳ್ದಾ.

‘ಅಂವಾ ಅಷ್ಟ್ ದಡ್ಡ ಅದಾನ ಅಂತ ತಿಳ್ಕೊಂಡಿ ಏನ್‌ ಮಗ್ನ. ಹಿಂದ್‌ ಅವರಪ್ಪನಾಣೆಗೂ ಕುಮಾರಣ್ಣ ಸಿಎಂ ಆಗಲ್ಲ ಅಂತ ಇದೇ ಸಿದ್ರಾಮಣ್ಣ ಹೇಳಿದ್ದ. ಅವ್ನಾ ಮುಂದ ನಿಂತು ಕುಮಾರಣ್ಣನ ಸಿಎಂ ಪಟ್ಟಾಭಿಷೇಕ್‌ ಮಾಡಬೇಕಾಯ್ತು. ಅದ್ಕ ಈ ಬಾರಿ ಆಣಿಗೀಣಿ ಮಾಡಾಕ್‌ ಹೋಗಿಲ್ಲ’ ಅಂತ ಗುಟ್ಟೊಂದು ಹೇಳಿದೆ.

ಧರ್ಮಸ್ಥಳ, ಚಾಮುಂಡೇಶ್ವರಿ ಆತು. ಈಗ್‌ ಮುಂದಿನ ದೇವರ ಸರದಿ ಯಡಿಯೂರ ಸಿದ್ಧ
ಲಿಂಗೇಶ್ವರ ಸ್ವಾಮಿದು. ಅದ್ಕ ಖಾಸಗಿ ಬಸ್‌ನೋರು ಆಣಿ ಪ್ಯಾಕೇಜ್‌ ಟೂರ್‌ ಮಾಡ್ಯಾರಂತ ಹೋಗ್ತಿ ಏನ್‌’ ಎಂದೆ.

‘ನೀನೂ ಅಲ್ಲಿಗೇ ಹೊಂಟಿ ಏನ್‌’ ಅಂತ ಕೇಳ್ದಾ. ‘ದೇವ್ರು– ದಿಂಡ್ರು, ಆಣಿ–ಪಾಣಿ ಒಳಗ್‌ ನನಗ್‌ ನಂಬ್ಕಿ ಇಲ್ಲಲೇ’ ಎಂದೆ.

‘ಪೇಪರ್‌ನ್ಯಾಗ್‌ ದಿನಕ್ಕೊಂದು ಹೊಸಾ ಬಾಂಬ್‌ ಸಿಡ್ಯಾಕತ್ತಾವ್‌. ಅವುಗಳ ಮುಂದ ಲಕ್ಷ್ಮಿ ಪಟಾಕಿ ನಿವಾಳಿಸಿ ತಗಿಬೇಕ್‌ ನೋಡ್‌’ ಎಂದ.

‘ನೀ ಹೇಳಿದ್ದು ಖರೆ. ಬಂಡೆ ಬಾವುಟ ಬಾಂಬ್‌, ಸೀಟಿ ಚಟಾಕಿ, ಸಿದ್ರಾಮಣ್ಣ – ಕುಮಾರಣ್ಣನ ದಾರಿ ಯಾವುದಯ್ಯ ಪಟಾಕಿ ಸರ, ಸವದಿ ಸುರ್‌ಸುರ್‌ ಬತ್ತಿ, ಜೆಡಿಎಸ್‌ ಬಂಡಾಯ (ಠುಸ್‌?), ಟಿಪ್ಪು ಪಠ್ಯ ರಾಕೆಟ್‌, ರಾಜ್ಯೋತ್ಸವ ಪ್ರಶಸ್ತಿಗೊಂದು ಲಾಬಿ ಹುಸಿಬಾಂಬ್‌ ಸದ್ದಿನಾಗ ಲಕ್ಷ್ಮಿ ಪಟಾಕಿ ಸದ್ದs ಕೇಳಿ ಬರಾಕತ್ತಿಲ್ಲ. ಪಟಾಕಿ ಸುದ್ದಿ ಬಿಡು. ಅಕಾಡೆಮಿಗಳಿಗೆ ಈ ಬಾರಿ ಮನೆಹಾಳರನ್ನ ನೇಮಕ ಮಾಡಿಲ್ಲಂತ ಸೀಟಿ ಸಂಸ್ಕೃತಿ ಸಚಿವರು ಅಪ್ಪಣೆ ಕೊಡಿಸಿದ್ರೂ, ವಿಕೆಟ್‌ಗಳು ಬೀಳಾಕತ್ತಾವಲ್ಲೋ’ ಎಂದೆ.

ನನ್ನ ಪ್ರಶ್ನೆಗೆ ಉತ್ರಾ ಕೊಡುದು ಗೊತ್ತಾಗದೆ ಪ್ರಭ್ಯಾ, ‘ಮುಂದ ನೋಡಿ ಪಟಾಕಿ ಹಚ್ಚು, ಕಾಗಿ ಹಾರಿಸಬ್ಯಾಡ’ ಎಂದ.

‘ನಾ ಯಾಕ್‌ ಕಾಗಿ ಹಾರಿಸ್ಲಿ. ರಾಜು ಕಾಗೆ ಅವರs ಬಿಜೆಪಿಯಿಂದ ಕಾಂಗ್ರೆಸ್‌ಗೆ ಹಾರಿ ಹೋಗ್ತೀನಿ ಅಂತ ಹೇಳ್ಯಾರ್‌’ ಎಂದು ತಿರುಗೇಟು ಕೊಟ್ಟೆ.

ನನ್ನ ತಲೆಹರಟೆ ಕೇಳಿ, ‘ಸಾಕು ಮಾಡು ಮಾರಾಯ’ ಅಂತ ಹೇಳಿದ ಪ್ರಭ್ಯಾ, ‘ಈ ಹಾಳ್‌ ರಾಜಕೀಯ ಪಟಾಕಿಗಳ ಬಗ್ಗೆ ಮಾತಾಡಿದ್ರ ನಮ್ಗೇನ್‌ ಬರೂದಿಲ್ಲ. ಪಕ್ಯಾನ ಅಂಗಡ್ಯಾಗ್‌ ಚಹಾ ಕುಡಿಸಂತ ನಡಿ’ ಅಂತ ಎಳ್ಕೊಂಡು ಹೊಂಟ. ಅಲ್ಲಿ ಮುದ್ದಿನ ಮಾವ ಚಿತ್ರದ, ‘ದೀಪಾವಳಿ, ದೀಪಾವಳಿ ಗೋವಿಂದ ಲೀಲಾವಳಿ... ಅಳಿಯ ಮಗನಾದನು...’ ಹಾಡು ನನಗ್‌ ಅನರ್ಹ ಶಾಸಕರು ಬಿಜೆಪಿಯ ಅಳಿಯರಾದರು... ಅಂತ ಕೇಳಿದಂತಾಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT