ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಕಲಾ ವಿಭಾಗ: ಕನಸು ರೆಕ್ಕೆಗಟ್ಟುವುದೇ?

Published:
Updated:
Prajavani

ಇಂದು, ಶಿಕ್ಷಣ ಪಡೆಯುವುದೇ ಉದ್ಯೋಗಕ್ಕಾಗಿ ಎಂದಾಗಿರುವುದರಿಂದ, ಎಸ್ಎಸ್‌ಎಲ್‌ಸಿ ನಂತರದ ಓದಿನ ಆಯ್ಕೆಯಲ್ಲಿ ಕಲಾ ವಿಭಾಗಕ್ಕಿಂತ ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯದ ಆಯ್ಕೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಕಲಾ ವಿಭಾಗವನ್ನು ಆಯ್ದುಕೊಳ್ಳುವು ದೆಂದರೆ ಬಡವರು, ಹಳ್ಳಿಗರು, ಕನ್ನಡ ಮಾಧ್ಯಮದಲ್ಲಿ ಓದಿದವರು, ಕಡಿಮೆ ಖರ್ಚಿನ ಕೋರ್ಸು, ಓದಿದರೂ ಉದ್ಯೋಗ ಕಷ್ಟ ಎನ್ನುವ ಸಮೀಕರಣವಿದೆ. ಅದಕ್ಕೆ ವಿರುದ್ಧವಾಗಿ ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯದ ಆಯ್ಕೆಯಲ್ಲಿ ಉಳ್ಳವರು, ಇಂಗ್ಲಿಷ್ ಕಲಿತವರು, ನಗರದವರು, ಓದಿಗೆ ಉದ್ಯೋಗವಿದೆ ಇತ್ಯಾದಿಗಳು ತಳಕು ಹಾಕಿಕೊಂಡಿವೆ. ಇದರಲ್ಲಿ ಕೆಲವು ಸಂಗತಿಗಳು ವಾಸ್ತವ ಕೂಡ. ವ್ಯವಸ್ಥೆಯೂ ಇದಕ್ಕೆ ಪೂರಕವಾಗಿದೆ.

ಬಳ್ಳಾರಿ ಜಿಲ್ಲೆ ಕೊಟ್ಟೂರಿನ ‘ಇಂದು’ ಪಿಯು ಕಾಲೇಜು ಸತತವಾಗಿ 5 ವರ್ಷ ಕಲಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದೆ. ಖಾಸಗಿ ಕಾಲೇಜುಗಳು ವಿಜ್ಞಾನ, ವಾಣಿಜ್ಯ, ಕಂಪ್ಯೂಟರ್ ವಿಭಾಗವನ್ನು ಹೊತ್ತು ಮೆರೆಸುವಾಗ, ಈ ಕಾಲೇಜಿನ ಕಲಾ ವಿಭಾಗದ ಒಲವು ಮೆಚ್ಚುವಂತಹದ್ದು. ಆದರೆ ಬರೀ ಇಂತಹ ಸ್ಥಾನ–ಅಂಕಗಳ ಮೂಲಕ ಕಲಾ ವಿಭಾಗದ ಮೌಲ್ಯವನ್ನು ಹೆಚ್ಚಿಸಬಹುದೇ? ಬಹುಶಃ ಸಾಧ್ಯವಿಲ್ಲ. ಕಲಾ ವಿಭಾಗದ ಪ್ರತಿಭೆಗಳಿಗೆ ತಕ್ಕುನಾದ ಉಜ್ವಲ ಭವಿಷ್ಯ ರೂಪುಗೊಂಡರೆ ಮಾತ್ರ ಈ ವಿಭಾಗದ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಒಲವು ಹಾಗೂ ಹುರುಪು ಹೆಚ್ಚಬಹುದು.

ಈ ಕಾರಣಕ್ಕೆ, ಇಂದು ಕಾಲೇಜಿನಲ್ಲಿ ಕಳೆದ ಐದು ವರ್ಷ ಮೊದಲ ಸ್ಥಾನ ಪಡೆದ ಹುಡುಗಿಯರನ್ನು ಮಾತನಾಡಿಸಿದೆ. ಐವರೂ ಕೆಳವರ್ಗಕ್ಕೆ ಸೇರಿದವರು. ಇವರೆಲ್ಲಾ ಉತ್ತಮ ಅಂಕ ಪಡೆದಾಗ, ತಮಗೆ ಕೆಎಎಸ್, ಐಎಎಸ್ ಮೊದಲಾದ ಉನ್ನತ ಹುದ್ದೆಗಳ ಕನಸಿರುವುದನ್ನು ಹೊರಹಾಕಿದ್ದರು. ಆದರೆ ಹೆಚ್ಚು ಅಂಕಗಳು ಅವರನ್ನು ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಸೀಮಿತಗೊಳಿಸಿದವು. ಹಾಗಾಗಿ ಈ ವರ್ಷ ಮೊದಲ ಸ್ಥಾನ ಪಡೆದ ಕುಸುಮಾ ಅವರನ್ನು ಹೊರತುಪಡಿಸಿ, ಈ ಹಿಂದೆ ಮೊದಲ ಸ್ಥಾನ ಪಡೆದಿದ್ದ ನೇತ್ರಾವತಿ ಎಂ.ಬಿ., ಅನಿತಾ ಪಿ., ಚೈತ್ರಾ ಬಿ., ಸ್ವಾತಿ ಎಸ್. ಎಲ್ಲರೂ ವಿಲೇಜ್ ಅಕೌಂಟೆಂಟ್ (ವಿ.ಎ) ಆಗಿದ್ದಾರೆ. ಸದ್ಯಕ್ಕೆ ಎಲ್ಲರೂ ದೂರಶಿಕ್ಷಣದಲ್ಲಿ ಬಿ.ಎ ಮಾಡುತ್ತಿದ್ದು ಮುಂದೆ ಕೆಎಎಸ್ ಅಥವಾ ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವುದಾಗಿ ಚೂರು ಮೆಲ್ಲಗೆ ಹೇಳುತ್ತಾರೆ. ಉತ್ತಮ ಸ್ಥಾನ ಬಂದಾಗ ಪ್ರತಿಕ್ರಿಯಿಸಿದಾಗಿದ್ದ ಆತ್ಮವಿಶ್ವಾಸ ಇದೀಗ ಕುಗ್ಗಿದೆ. ಇವರೆಲ್ಲಾ ಹೇಳುವ ಕಾರಣ ತಮ್ಮ ಮನೆಗಳ ಬಡತನದ್ದು. ಆದರೆ ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯದಲ್ಲಿ ಉತ್ತಮ ಸ್ಥಾನ ಪಡೆದವರು ಮುಂದಿನ ವಿದ್ಯಾಭ್ಯಾಸದಲ್ಲಿ ತೊಡಗುವುದು ಹೆಚ್ಚು. ಇವರ ಓದಿಗೆ ಸಾಂಸ್ಥಿಕ ಸಹಾಯ ಸಿಗುವುದಲ್ಲದೆ, ಮುಂದೆ ಒಳ್ಳೆಯ ಸಂಬಳದ ಉದ್ಯೋಗ ಸಿಗುವ ಭರವಸೆ ಕೂಡಾ ಇರುತ್ತದೆ.

ಇಲ್ಲಿ ಮುಖ್ಯವಾಗಿ, ಇಂದು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳು ಭಾಷೆಯ ಆಯ್ಕೆಯಲ್ಲಿ ಇಂಗ್ಲಿಷ್ ಬದಲಿಗೆ ಸಂಸ್ಕೃತವನ್ನು, ಉಳಿದಂತೆ ಶಿಕ್ಷಣ, ಕಡ್ಡಾಯ ಕನ್ನಡದ ಜತೆ ಐಚ್ಛಿಕ ಕನ್ನಡ, ಇತಿಹಾಸ, ರಾಜ್ಯಶಾಸ್ತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರ ಹಿಂದೆ ಅಂಕದ ಲೆಕ್ಕಾಚಾರ ಇದೆ. ಅದನ್ನು ಸಾಧ್ಯವಾಗಿಸಿಕೊಂಡಿರಲೂಬಹುದು. ಆದರೆ ಪಿಯುನಲ್ಲಿ ಹೆಚ್ಚಿನ ಅಂಕದ ಕಾರಣಕ್ಕೆ ಸಿಕ್ಕ ವಿ.ಎ ಹುದ್ದೆಯನ್ನು ತಿರಸ್ಕರಿಸಲು ಸಾಧ್ಯವಾಗದಿರುವುದರ ಹಿಂದೆ, ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂಗ್ಲಿಷ್ ಭಾಷೆ ತೊಡಕಾಗಬಹುದು ಎಂಬ ಭಯ ಕೂಡ ಕಾಡಿರಬಹುದು ಎಂದು ಅನ್ನಿಸುತ್ತದೆ.

ಮಾನವಿಕ ವಿಜ್ಞಾನಗಳು ನಿರುದ್ಯೋಗದ ಕೋರ್ಸ್‌ಗಳೆಂಬಂತೆ ಈಗ ಅಪಮೌಲ್ಯಕ್ಕೆ ಒಳಗಾಗಿವೆ. ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯದ ಓದನ್ನು ಹೆಚ್ಚಿನವರು ಅಪ್ಪಿಕೊಳ್ಳುತ್ತಿದ್ದಾರೆ. ಅದು ಅವರ ಆಯ್ಕೆ. ಅದರ ಬಗ್ಗೆ ತಕರಾರು ಇಲ್ಲ. ಆದರೆ ನಮ್ಮ ಸಾಮಾಜಿಕ ಸ್ಥಿತಿಗತಿಗಳ ಬಗೆಗೆ ಆ ವಿದ್ಯಾರ್ಥಿಗಳಿಗೆ ಸರಿಯಾದ ತಿಳಿವಳಿಕೆ ಸಿಗುತ್ತಿಲ್ಲ. ಕಲೆಯೇತರ ಆಯ್ಕೆಗಳು ಹೆಚ್ಚಾಗುತ್ತಿರುವುದರಿಂದ ಯುವಜನರಲ್ಲಿ ಸಮಾಜದ ಜತೆಗಿನ ಸಾವಯವ ಸಂಬಂಧಕ್ಕೆ ಬಾಧಕ ಉಂಟಾಗುತ್ತಿದೆ. 

ಮುಖ್ಯವಾಗಿ ಸರ್ಕಾರಗಳು ಕಲಾ ವಿಭಾಗಕ್ಕೆ ಹೆಚ್ಚು ಮೌಲ್ಯ ಪ್ರಾಪ್ತವಾಗುವಂತೆ ಪಠ್ಯಕ್ರಮಗಳನ್ನು ಅಳವಡಿಸಬೇಕು. ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ ಕೋರ್ಸ್‌ಗಳಲ್ಲಿಯೂ ಕನಿಷ್ಠ ಎರಡು– ಮೂರು ಮಾನವಿಕ ವಿಷಯಗಳನ್ನು ಕಡ್ಡಾಯ ಮಾಡಬೇಕು. ಎಲ್ಲಾ ಕೋರ್ಸುಗಳಲ್ಲಿ ಕಡ್ಡಾಯವಾಗಿ ದೇಸಿ ಜ್ಞಾನದ ಪಠ್ಯವನ್ನು ಅಳವಡಿಸುವುದು, ಜಾನಪದ ಪದವಿ ಪಡೆದವರನ್ನು ಇದಕ್ಕೆ ಬೋಧಕರನ್ನಾಗಿ ಆಯ್ಕೆ ಮಾಡುವುದು, ಪೂರಕವಾದ ಉದ್ಯೋಗಗಳನ್ನು ಸೃಷ್ಟಿಸುವುದು, ಉತ್ತಮ ಸ್ಥಾನ ಪಡೆದವರಿಗೆ ವಿಶೇಷ ಕೋಟಾದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯ ಒಳಗೊಂಡಂತೆ ಕಲಾ ವಿಭಾಗವನ್ನು ಮೌಲ್ಯೀಕರಿಸುವ ಕಟ್ಟುನಿಟ್ಟಾದ ಯೋಜನೆಗಳನ್ನು ರೂಪಿಸಬೇಕಿದೆ. ಹೀಗೆ ಕಲಾ ವಿಭಾಗಕ್ಕೆ ಉಜ್ವಲ ಭವಿಷ್ಯದ ದಾರಿಗಳು ತೆರೆದರೆ, ಈ ವಿಭಾಗದ ವಿದ್ಯಾರ್ಥಿಗಳು ಸಹಜವಾಗಿ ಎತ್ತರದ ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡು ಹಾರಲು ಸಜ್ಜಾಗುತ್ತಾರೆ.

ಲೇಖಕ: ಪೋಸ್ಟ್ ಡಾಕ್ಟರಲ್ ಫೆಲೊ ಕನ್ನಡ ವಿಶ್ವವಿದ್ಯಾಲಯ, ಹಂಪಿ

Post Comments (+)