ಬೆನ್ನುಬಿದ್ದ ಬೇತಾಳ

7

ಬೆನ್ನುಬಿದ್ದ ಬೇತಾಳ

Published:
Updated:
Prajavani

ವಿಧಾನಸೌಧದ ಮುಂದೆ ಕುತಗಂಡಿದ್ದಾಗ ಅದೇನೋ ಬೆನ್ನ ಮೇಲೆ ಹೇರಿಕಂಡ ಹಾಗಾಯಿತು. ತಿರುಗಿ ನೋಡಿದರೆ, ಬೇತಾಳ ಬಂದು ಕೂತಿತ್ತು. ‘ಯಾರಪ್ಪ ನೀನು?’ ಅಂದೆ.

‘ನಾನು ಪ್ರೊಬೇಶನರಿ ಬೇತಾಳ ಸಾ. ನಿಮ್ಮ ಮೇಲೆ ಅಟಕಾಯಿಸಿಕಳಕೆ ಹೆಡ್ಡಾಪೀಸು ವಾರಂಟು ಕೊಟ್ಟದೆ’ ಅಂತು.

‘ಸಾ ಸ್ಟೀಲು ಬ್ರಿಡ್ಜು ಮಾಡಕೆ ಮರಗಳ ಬಾಯಿಗೆ ಮಣ್ಣಾಕ್ತರಲ್ರಾ, ಆ ಮರಗಳಲ್ಲಿರೋ ಭೂತ-ಪ್ರೇತಗಳೆಲ್ಲಾ ಲ್ಯಾಂಡ್‍ಲೂಸರ್ ಆಯ್ತವಲ್ಲಾ. ಅವುಕ್ಕೆಲ್ಲಾ ನ್ಯಾತು ಬೀಳಕೆ ಸ್ಟೀಲ್ ಬ್ರಿಡ್ಜು ಕೆಳಗೆ ಬದಲಿ ಸೈಟ್‌ನ ಕೊಡ್ತೀವಿ ಅಂತ ನಮ್ಮ ಹೆಡ್ಡಾಪೀಸು ಹೇಳದೆ. ಅಲ್ಲಿವರಗೂ ಹಿಂಗೇ ನಿಮ್ಮಂತೋರ ಬೆನ್ನ ಮೇಲೆ ಅದಿಕ್ಕಂಡು ಡೂಟಿ ಮಾಡತೀವಿ’ ಅಂತು. ಎಲಾ ಇವನಾ, ಸ್ಟೀಲ್ ಬ್ರಿಡ್ಜ್ ಮಾಡಲೇಬೇಕು ಅಂತ ಅಮರಿಕಂಡಿರಾ ಬೇತಾಳಗಳೇ ಜಾಸ್ತಿ ಇರುವಾಗ ಇವಕ್ಕೆಲ್ಲಿ ಜಾಗ ಅನ್ನಿಸಿದ್ರೂ, ‘ಈಗೇನು ಬಂದುದ್ದು?’ ಅಂದೆ.

‘ಅದೇ ಸಾ. ನಾಕೈದು ಪ್ರಶ್ನೆಗೆ ಉತ್ತರ ಕೊಟ್ಟುಬುಡಿ ಹೋಯ್ತಿನಿ ಅತ್ಲಗೆ’ ಅಂತು ಬೇತಾಳ. ‘ಸರಿ ಕಣಪ್ಪ ಅದೇನು ಹೇಳು?’ ಅಂದೆ.

‘ಪ್ರಶ್ನೆ ಒಂದು- ನಮ್ಮ ಮುಖ್ಯಮಂತ್ರಿಗಳು ಯಾರ ಕ್ಲಾರ್ಕು? ಪ್ರಶ್ನೆ ಎರಡು- ಭಿನ್ನಮತೀಯ ಪಕ್ಷಿಗಳಿಗೆ ಹಕ್ಕಿಜ್ವರ ಯಾವಾಗ ವಾಸಿಯಾಯ್ತದೆ? ಪ್ರಶ್ನೆ ಮೂರು– ಯಡುರಪ್ಪಾರು ಮುಖ್ಯಮಂತ್ರಿ ಆದಾರೇ? ಸಾ ಪ್ರಶ್ನೆ ನಾಕು- ಬೆಂಗಳೂರಾದ ಬೆಂಗಳೂರಿಗೆಲ್ಲಾ ವೈಟ್ ಟಾಪಿಂಗ್ ಮಾಡ್ತೀವಿ ಅಂತ ಕುಣಿತಾವ್ರಲ್ಲಾ, ಯಾರ ಬ್ಲಾಕು ವೈಟಾಯ್ತಾ ಅದೆ? ಪ್ರಶ್ನೆ ಐದು- ಕುಮಾರಸ್ವಾಮಿಗಳು ಎಲ್ಲೀಗಂಟಾ ಸಾಂದರ್ಭಿಕ ಶಿಶು ಆಗಿರ್‌ತರೆ? ಪಟಪಟನೆ ಉತ್ತರ ಕೊಟ್ಟುಬುಡಿ ಸಾ. ಮಂತ್ರಿಗಿರಿ ಸಿಗದ ಕಾಂಗ್ರೆಸ್ ಎಮ್ಮೆಲ್ಲೇ ಥರಾ ಮುಂಬೈಗೆ ಹೊಂಟೋಯ್ತಿನಿ’ ಅಂತು ಬೇತಾಳ.

ಬೇತಾಳದ ಪ್ರಶ್ನೆ ಕೇಳಿ ನನಗೆ ತಲೆ ತಿರುಗಿ ಕಣ್ಣಮುಂದೆ ಬ್ರಿಡ್ಜು- ವೈಟು ಟಾಪಿಂಗು ಕಾಣಿಸಿಕಂಡು ನಡು ರೋಡಾಗೇ ಬಿದ್ದೋದೆ. ಬೇತಾಳ ‘ಥೂ ಇವನ್ಯಾವನಯ್ಯ. ಬೇಗ ಹೋಗಿ ಅಳ್ಳಿಮರದಾಗೆ ಕೆಜಿಎಫ್ ಸಿನಿಮಾ ನೋಡನಾ ಅಂತಿದ್ದೆ. ಇವನು ನೋಡಿದರೆ ವಯಕ್ ಅಂದಂಗೈತೆ. ನನ್ನ ನಸೀಬಿಗೆ ಸಿಗವೆಲ್ಲಾ ಇಂತಾ ಅಡ್ಡನಾಡಿ ಕೇಸೇ!’ ಅಂತ ಬಯ್ಯದು ಮಾತ್ರ ಗೊತ್ತಾಗತಿತ್ತು.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !