ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕ್ವಾಸನ ‘ಲಾಭದ ಕುರ್ಚಿ’!

Last Updated 18 ಜನವರಿ 2019, 20:00 IST
ಅಕ್ಷರ ಗಾತ್ರ

ಹಿರಿಯ ಮಾಜಿ ಸಂಸದ ಬಕಾಸುರ ಅವರ ಮಗರಾಯ ಬಕ್ವಾಸ ರಾಜಕೀಯಕ್ಕೆ ಧುಮುಕಬೇಕೆಂದು ಒಂದು ದಿವಸ ನಿರ್ಧಾರ ಮಾಡುತ್ತಾನೆ. ನೇರ ಅಪ್ಪಾಜಿಯ ಬಳಿ ಬಂದು ತನ್ನ ಅಹವಾಲು ತೋಡಿಕೊಳ್ಳುತ್ತಾನೆ. ‘ಸರಿ, ಮಗನೇ… ನಿನಗೆ ಮುಂದಿನ ಜೋಕರ್ ಸಭಾ ಚುನಾವಣೆಗೆ ಟಿಕೆಟ್ ಕೊಡಿಸುತ್ತೇನೆ. ಆದರೆ ಒಂದು ಕಂಡೀಷನು. ನೀನು ರಾಜಕೀಯಕ್ಕೆ ಸಂಬಂಧಿಸಿದ ಯಾವುದಾದರೂ ವಿಷಯದ ಮೇಲೆ ಪ್ರಬಂಧ ಬರೆದು ನನಗೆ ತೋರಿಸಬೇಕು. ಅದು ನನಗೆ ಇಷ್ಟವಾದರೆ ನಿನಗೆ ಟಿಕೆಟ್ ಗ್ಯಾರಂಟಿ’ ಎಂದು ಶ್ರೀಮಾನ್ ಬಕಾಸುರರು ಮಗನಿಗೇ ಕೊಕ್ಕೆ ಇಡುತ್ತಾರೆ.

ಚಾಲೆಂಜು ಒಪ್ಪಿಕೊಂಡ ಬಕ್ವಾಸ ಹತ್ತು ಸಿಗರೇಟು ಬೂದಿ ಮಾಡುವ ಹೊತ್ತಿಗೆ, ಅಧಿಕಾರದ ಕುರ್ಚಿ ಅವನ ತಲೆಯಲ್ಲಿ ಗಿರಿಗಿಟ್ ಹೊಡೆಯತೊಡಗಿತು. ಬಕ್ವಾಸ ಕೂಡಲೇ ‘ಲಾಭದ ಕುರ್ಚಿ’ ಎಂಬ ತಲೆಬರಹ ಕೊಟ್ಟು ‘ಮಹಾ ಪ್ರಬಂಧ’ ಬರೆಯಲು ಶುರು ಮಾಡಿದ.

ಕುರ್ಚಿ ಅಂದರೆ ಜನಸಾಮಾನ್ಯರಿಗೆ ಅದೊಂದು ಯಃಕಶ್ಚಿತ್ ಕುಳಿತುಕೊಳ್ಳುವ ವಸ್ತು. ಆದರೆ, ಜನಸೇವಕರ ಛದ್ಮವೇಷದಲ್ಲಿರುವ ರಾಜಕಾರಣಿಗಳಿಗೆ ಕುರ್ಚಿ ಬರೀ ಕೂರುವುದಕ್ಕಷ್ಟೇ ಅಲ್ಲ. ಅದು ಅವರಿಗೆ ದೈವಶಕ್ತಿ. ಅದಕ್ಕೆ ಮಾಂತ್ರಿಕಶಕ್ತಿಯೂ ಇದ್ದಂತಿದೆ. ಈ ಕುರ್ಚಿಗೆ ಒಂದೇ ಕಾಲಿದ್ದರೂ, ಜನಸಾಮಾನ್ಯರು ಕೂರುವ ನಾಲ್ಕು ಕಾಲುಗಳ ಕುರ್ಚಿಗಿಂತ ನಾಲ್ಕು ಪಟ್ಟು ಬಲಶಾಲಿಯಾಗಿರುತ್ತದೆ. ಅದರಲ್ಲಿ ಆಸೀನರಾದರೆ ಸಾಕು, ಆಂಜನೇಯನು ರಾವಣನ ಎದುರು ತನ್ನ ಬಾಲವನ್ನೇ ಆಳೆತ್ತರದ ‘ಕುರ್ಚಿ’ಯನ್ನಾಗಿಸಿ ಗರ್ವದಿಂದ ಕೂರುವ ಭಾವನೆಯಲ್ಲೇ ಇರಬಹುದು. ರಾಜಕಾರಣಿಗಳಿಗೆ ಕುರ್ಚಿಯೇ ತಾಯಿ, ತಂದೆ. ಕುರ್ಚಿಯೇ ಬಂಧು ಬಳಗ. ಪ್ರತೀ ಸೆಕೆಂಡು, ಪ್ರತೀ ನಿಮಿಷ, ಮುನ್ನೂರ ಅರವತ್ತೈದು ದಿವಸಗಳೂ ಅವರ ತಲೆಯಲ್ಲಿ ತಿರುಗುವುದು ಒಂದೇ… ತಿರುಗುವ ಕುರ್ಚಿ!

ಈ ಕುರ್ಚಿ ರಾಜಕಾರಣಿಗಳನ್ನೆಲ್ಲಾ ಇಷ್ಟು ಮೋಡಿ ಮಾಡುವುದಕ್ಕೆ ಕಾರಣವೇನಿರಬಹುದು? ಪಕ್ಕಾ ಪುಢಾರಿಯ ಭಾಷೆಯಲ್ಲಿ ಇದಕ್ಕೆ ಉತ್ತರ ಕೊಡುವುದಿದ್ದರೆ ‘ಜನಸೇವೆ ಮಾಡುವುದಕ್ಕೆ ಕುರ್ಚಿಯ ಅವಶ್ಯಕತೆ ಇದೆ’ ಎಂದು ಹೇಳಬಹುದು. ಇಂತಹ ಅನೇಕಾನೇಕ ಸುಳ್ಳುಗಳನ್ನು ಹೇಳುವುದಕ್ಕೆ ಪ್ರೇರೇಪಿಸಿ, ಸುಳ್ಳುಮೇವ ಜಯತೆ ಎಂಬ ಸತ್ಯಾನುಸತ್ಯತೆಯನ್ನು ತೋರಿಸಿಕೊಟ್ಟದ್ದೇ ಈ ಅಸಾಧಾರಣ ಕುರ್ಚಿ!

‘ಕುರ್ಚಿ… ಕುರ್ಚಿ’ ಎಂದು ನಮ್ಮ ಶಾಸಕರು ಬಾಯಿ ಬಾಯಿ ಬಿಡುವುದಕ್ಕೆ ಬೇರೆ ಬೇರೆ ಕಾರಣಗಳಿವೆ. ಮೊದಲೇ ಹೇಳಿದಂತೆ, ಒಂದು ಕಾಲಿನ ಈ ಕುರ್ಚಿಯಲ್ಲಿ ಒಂದು ವಿಶೇಷ ಸೆಳೆತವಿದೆ. ಯಾವುದೇ ಮದ್ಯದಿಂದ ದೊರೆಯದ ಅಮಲು ಈ ಕುರ್ಚಿಯಿಂದ ಸಿಗುತ್ತದೆ. ಬಹುಮತವೇ ಇಲ್ಲದಿದ್ದರೂ, ಒಂದು ದಿವಸದ ಮಟ್ಟಿಗಾದರೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತವರು ನಮ್ಮಲ್ಲಿದ್ದಾರೆ. ಈ ಕಂತ್ರಿ ಮೈತ್ರಿ ಎಲ್ಲಾ ನಡೆಯುವುದಿಲ್ಲ ಎಂದು ಖಡಾಖಡಿ ಗೊತ್ತಿದ್ದರೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಸಿಗುವ ಅಮಲು, ಘಮಲಿಗೆ ದೋಸ್ತಿ ಬೇಡವೆನ್ನಲಾದೀತೇ? ‘ಕಿಕ್’ ಪಡೆದು ಮಜಾ ಉಡಾಯಿಸಿರುವ ಎಷ್ಟೋ ಮಂದಿ, ಅದು ಮುಂದೊಂದು ದಿವಸ ಸಿಗದೇ ಹೋದರೆ ಮದ್ಯವ್ಯಸನಿ ತರ ವರ್ತಿಸುವುದನ್ನು ನಾವೆಲ್ಲ ಕಂಡಿದ್ದೇವೆ. ಕುರ್ಚಿಯ ಮಹಿಮೆ ಅಂತಹುದು!

ಕುರ್ಚಿ ಸುಲಭದಲ್ಲಿ ದಕ್ಕುವುದಿಲ್ಲ ಎಂದು ಎಲ್ಲಾ ರಾಜಕಾರಣಿಗಳಿಗೆ ಗೊತ್ತಿರಬೇಕು. ಹಾಗೆಯೇ ಒಮ್ಮೆ ಸಿಕ್ಕಿದ ಕುರ್ಚಿಯನ್ನು ಭದ್ರವಾಗಿ ರಕ್ಷಿಸುವುದಕ್ಕೆ ಯಾವ ‘ಝಡ್’ ಕ್ಯಾಟಗರಿ ಭದ್ರತೆ ಸಿಕ್ಕಿದರೂ ಸಾಧ್ಯವಿಲ್ಲ. ಆದ್ದರಿಂದ ಕುರ್ಚಿ ಸಿಗುವ ಮೊದಲು ಮಾತ್ರವಲ್ಲ, ಸಿಕ್ಕಿದ ನಂತರವೂ ಹಗಲು– ರಾತ್ರಿ ಅದರ ಚಿಂತೆಯಲ್ಲೇ ಇರಬೇಕು. ಲಾಬಿ ಮಾಡಿದರೆ ಮಾತ್ರ ಕುರ್ಚಿ ಭಾಗ್ಯ ಸಿಗುತ್ತದೆ ಅನ್ನುವುದು ಸಂಪೂರ್ಣ ಸತ್ಯ ಅಲ್ಲ. ಅದಕ್ಕೆ ನಾನಾ ವಿಧಾನಗಳಿವೆ. ಶಾಸಕರು ಬೆಂಬಲಿಗರ ಮೂಲಕ ದಾಂದಲೆ ಎಬ್ಬಿಸಬಹುದು. ಬೆಂಬಲಿಗರಲ್ಲಿ ಯಾರಾದರೂ ಪಾಪದ ಪ್ರಾಣಿಯನ್ನು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಹೇಳಬಹುದು. ಮುಂಬೈಗೆ ಹೋಗಬಹುದು. ಆಪರೇಷನ್ ಪಕ್ಷದಿಂದ ‘ಆಫರ್’ ಬಂದಿದೆ ಎಂದು ಬುರುಡೆ ಬಿಟ್ಟರೂ ಸಾಕು.

ಹಿಂದೆ ನಿಧಾನಸಭೆಯಲ್ಲಿ ಕೂರೋಕೆ ಅಥವಾ ಗೊರಕೆ ಹೊಡೆಯೋಕೆ ಕುರ್ಚಿ ಸಿಕ್ಕಿದರೆ ಸಾಕು ಅನ್ನುವವರಿದ್ದರು. ಈಗ ಹಾಗಲ್ಲ. ಸಚಿವ ಸ್ಥಾನದ ಕುರ್ಚಿ ಸಿಗಲೇಬೇಕು. ಅದೂ ನೇರವಾಗಿ ಲಾಭದ ಕುರ್ಚಿಯನ್ನೇ ಕೇಳುವ ಕಾಲ ಬಂದಿದೆ. ಅಷ್ಟೇ ಅಲ್ಲ, ‘ಲಾಭದ ಕುರ್ಚಿ’ ಇರುವುದನ್ನು ಸಾಬೀತುಪಡಿಸಲು ‘ಪುಟ್ಟ-ಗೋಸಿ’ ಕೆಲಸವನ್ನೂ ಮಾಡಬೇಕಾಗುತ್ತದೆ. ಲಾಭದ ಕುರ್ಚಿ ಅಂದರೆ ಸಚಿವರು ಅದಕ್ಕೆ ತಕ್ಕ ಮರ್ಯಾದೆ ಕೊಡಬೇಕಾಗಿರುವುದರಿಂದ, ದಿನಕ್ಕೆ 25 ಲಕ್ಷ ರೂಪಾಯಿಯ ಬದಲು ಕೋಟಿ ಲೆಕ್ಕದಲ್ಲಿ ಲಂಚ ತೆಗೆದುಕೊಳ್ಳುವುದು ಸೂಕ್ತ.

ಯಾವುದೇ ವಿಘ್ನ ಬರಬಾರದೆಂದು ಕೆಲವರು ಮುಂಜಾಗ್ರತೆ ಕ್ರಮವಾಗಿ ‘ಲಾಭದ ಕುರ್ಚಿ’ಗೆ ತಿಂಗಳಿಗೊಮ್ಮೆ ಶನಿ ಪೂಜೆ ಮಾಡುವುದು ಒಳ್ಳೆಯದು. ದಿನಾ ಕುರ್ಚಿಯಲ್ಲಿ ಕೂರಬೇಕಾದರೆ, ಜ್ಯೋತಿಷಿಯೊಂದಿಗೆ ಸಮಾಲೋಚಿಸಿಯೇ ಕೂರುವುದರಿಂದ ಗೋಲ್‌ಮಾಲ್ ಮಾಡುವುದಕ್ಕೆ ಆತ್ಮಸ್ಥೈರ್ಯ ಹೆಚ್ಚುತ್ತದೆ.

ಓಂ ಕುರ್ಚಿ ನಮಃ

ಬಕ್ವಾಸ ಮಹಾಪ್ರಬಂಧವನ್ನು ಅಲ್ಲಿಗೆ ಮುಗಿಸಿ ಅಪ್ಪಾಜಿಯ ಮುಂದಿಟ್ಟ. ಬಕಾಸುರ ಅದನ್ನು ಓದಿ ‘ಶಹಬ್ಬಾಸ್ ಮಗನೇ!’ ಎಂದು ಮಗನನ್ನು ತಬ್ಬಿಕೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT