ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಧಕರಿಗೂ ಬೇಡವಾಯಿತೇ ಹಳ್ಳಿ?

ನೇಮಕಾತಿಯ ಆಶಯವನ್ನೇ ಮರೆತ ಸರ್ಕಾರ, ಬೇಕಾದವರನ್ನು ಬೇಕಾದೆಡೆ ನಿಯೋಜಿಸಿಕೊಂಡು ಗ್ರಾಮೀಣ ವಿದ್ಯಾರ್ಥಿಗಳಿಗೆ ದ್ರೋಹ ಬಗೆದಿದೆ
Last Updated 4 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಸಾಮಾಜಿಕ ಕಾಳಜಿಯುಳ್ಳ ಅನೇಕರು ಬಹಳ ಕಷ್ಟಪಟ್ಟು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ನಾಡು ನಮ್ಮದು. ಗ್ರಾಮಾಂತರ ಪ್ರದೇಶಗಳೂ ಸೇರಿದಂತೆ ಯಾವುದೇ ಪ್ರದೇಶದ, ಯಾವುದೇ ಸಮುದಾಯದ ಜನ ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ಪ್ರಾಮಾಣಿಕ ಕಾಳಜಿಯಿಂದಲೇ ಆರಂಭಿಸಿದ ಅವೆಷ್ಟೋ ಸರ್ಕಾರಿ ಶಾಲಾ- ಕಾಲೇಜುಗಳು ಲಕ್ಷಾಂತರ ಜನರ ಬಾಳು ಬೆಳಗಿವೆ.

ನಗರಗಳು ಬೆಳೆದಾಗಲೂ ನಮ್ಮ ಗ್ರಾಮಾಂತರ ಪ್ರದೇಶದ ಅಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯದ ಕನಸನ್ನು ಇಂದಿಗೂ ಪೋಷಿಸುತ್ತಿರುವುದು ಆ ಭಾಗಗಳಲ್ಲಿರುವ ಸರ್ಕಾರಿ ಶಿಕ್ಷಣ ಸಂಸ್ಥೆಗಳು. ದುರದೃಷ್ಟದ ಸಂಗತಿ ಎಂದರೆ, ಇಂತಹ ಸಂಸ್ಥೆಗಳು ಅನೇಕ ಕೊರತೆಗಳಿಂದ ಬಳಲುತ್ತಿವೆ. ಸರ್ಕಾರ ಪ್ರತಿವರ್ಷ ನೂರಾರು ಕೋಟಿ ರೂಪಾಯಿಗಳನ್ನು ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ಖರ್ಚು ಮಾಡಿದರೂ ಪರಿಣಾಮ ಮಾತ್ರ ಅಷ್ಟಕ್ಕಷ್ಟೆ. ಒಂದೆಡೆ ತರಗತಿ ನಡೆಸಲು ಬೇಕಾದಷ್ಟು ಕಟ್ಟಡಗಳಿಲ್ಲ. ಮತ್ತೆ ಕೆಲವೆಡೆ ತರಗತಿಗಳಿಗೆ ಬೇಕಾದಷ್ಟು ಉಪನ್ಯಾಸಕರಿಲ್ಲ. ಸಮಸ್ಯೆಗಳನ್ನು ಬಗೆಹರಿಸಬೇಕಾದ ಜನಪ್ರತಿಧಿಗಳು ವರ್ಷದಲ್ಲಿ ಹಲವು ತಿಂಗಳು ರೆಸಾರ್ಟ್‌ಗಳಲ್ಲೇ ಕಾಲ ಕಳೆಯುತ್ತಾರೆ. ಲಗಾಮಿಲ್ಲದ ಅಧಿಕಾರಿವರ್ಗ ಜನಸಾಮಾನ್ಯರ ಸಮಸ್ಯೆಗಳನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ.

ಇದರ ನಡುವೆ ‘ಅಧ್ಯಾಪಕರ ಪ್ರತಿಭಾ ಪಲಾಯನ!’ (ಪ್ರ.ವಾ.,ಜ.27) ಆತಂಕಕಾರಿ ಸಂಗತಿ. ನೂತನವಾಗಿ ನೇಮಕಗೊಂಡ ಉಪನ್ಯಾಸಕರು ಪ್ರೊಬೇಷನರಿ ಅವಧಿ ಪೂರೈಸುವ ಮೊದಲೇ ತಮಗೆ ಬೇಕಾದ ಪಟ್ಟಣಕ್ಕೆ ನಿಯೋಜನೆ ಮಾಡಿಸಿಕೊಂಡಿದ್ದಾರೆ ಎಂದರೆ ಸಾಕಷ್ಟು ಪ್ರಭಾವ ಕೆಲಸ ಮಾಡಿರುವುದರಲ್ಲಿ ಸಂಶಯವಿಲ್ಲ. 125 ಉಪನ್ಯಾಸಕರನ್ನು ಹೀಗೆ ಅಕ್ರಮವಾಗಿ ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲೇ ಬೇರೊಂದು ಸ್ಥಳಕ್ಕೆ ‘ಆಡಳಿತಾತ್ಮಕ ಹಿತದೃಷ್ಟಿ’ಯಿಂದವರ್ಗಾಯಿಸಿರುವುದು ಸಾಕಷ್ಟು ಲಾಭದಾಯಕವಾದ ಪ್ರಕ್ರಿಯೆಯೇ ಆಗಿರಬಹುದು.

2017ರಲ್ಲಿ ನೇಮಕಗೊಳ್ಳುವ ಸಂದರ್ಭದಲ್ಲಿ ಉಪನ್ಯಾಸಕರಿಗೆ ನೇಮಕಾತಿ ಆದೇಶ ಪಡೆಯುವುದಕ್ಕೆ ಒಂದು ಖಾಲಿ ಜಾಗ ಬೇಕಾಗಿತ್ತು. ನಿಯಮಾವಳಿಗಳ ಪ್ರಕಾರ, ನೇಮಕಾತಿಯು ಗ್ರಾಮಾಂತರ ಪ್ರದೇಶದ ಖಾಲಿ ಹುದ್ದೆಗಳಿಗೇ ಆಗಬೇಕಿತ್ತು. ಅದರಂತೆ ಗ್ರಾಮಾಂತರ ಪ್ರದೇಶದ ಕಾಲೇಜುಗಳ ಹುದ್ದೆಗಳು ಭರ್ತಿಯಾಗಿದ್ದವು. ಬೋಧಕರಿಲ್ಲದೆ ಕಂಗೆಟ್ಟು, ಕೇವಲ ಅತಿಥಿ ಉಪನ್ಯಾಸಕರನ್ನೇ ನಂಬಿಕೊಂಡಿದ್ದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಪೂರ್ಣಕಾಲಿಕವಾಗಿ ಲಭ್ಯರಾಗುವ ಬೋಧಕರು ದೊರಕಿದಂತಾಗಿತ್ತು. ನೇಮಕಾತಿಯ ಆಶಯವನ್ನೇ ಮರೆತ ಸರ್ಕಾರ ಈಗ ತನಗೆ ಬೇಕಾದವರನ್ನೆಲ್ಲ ಬೇಕಾದ ಕಡೆ ನಿಯೋಜಿಸಿಕೊಂಡು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದ್ರೋಹ ಬಗೆದಿದೆ. ನೇಮಕಗೊಂಡ ಕಾಲೇಜುಗಳಲ್ಲಿ ಕನಿಷ್ಠಪಕ್ಷ ಮುಂದಿನ ನಾಲ್ಕೈದು ವರ್ಷಗಳಾದರೂ ಕಾರ್ಯನಿರ್ವಹಿಸಬೇಕಾಗಿದ್ದ ಅಧ್ಯಾಪಕರೇ ಅನೈತಿಕ ದಾರಿ ಹಿಡಿದದ್ದು ನಾಚಿಕೆಗೇಡಿನ ಸಂಗತಿ.

ಇಲಾಖೆಯೇ ರೂಪಿಸಿದ ನೇಮಕಾತಿ ಹಾಗೂ ವರ್ಗಾವಣೆ ನಿಯಮವನ್ನು ಇಲಾಖೆಯೇ ಮುರಿದು ಅಡ್ಡದಾರಿ ಹಿಡಿದಿದೆ. ಆ ಮೂಲಕ ಮೈತ್ರಿ ಸರ್ಕಾರ ಹಳ್ಳಿ ಮಕ್ಕಳ ಶಿಕ್ಷಣದ ಕನಸಿಗೆ ಕೊಳ್ಳಿ ಇಡಲು ಹೊರಟಂತಿದೆ. ಕಡಿಮೆ ವಿದ್ಯಾರ್ಥಿಗಳಿರುವ ನಗರ ಪ್ರದೇಶದ ಕಾಲೇಜುಗಳಿಗೆ ಹೀಗೆ ನಿಯೋಜಿಸಿಕೊಂಡ ಅಧ್ಯಾಪಕರಲ್ಲಿ ಅನೇಕರು ಪಾಠ ಹೇಳುವುದನ್ನು ಬಿಟ್ಟು ಯಾವುದಾದರೂ ಲಾಭದಾಯಕ ವ್ಯವಹಾರ ಮಾಡಲು ಅನುಕೂಲಕರವಾದ ಸ್ಥಳಗಳನ್ನೇ ಹುಡುಕಿಕೊಂಡು ನಿಯೋಜಿಸಿಕೊಂಡಿರಬಹುದು. ಒಂದೆಡೆ ಸರ್ಕಾರ 7ನೇ ವೇತನ ಆಯೋಗದ ಶಿಫಾರಸಿನಂತೆ ಕಾಲೇಜು ಶಿಕ್ಷಕರಿಗೆ ತಿಂಗಳಿಗೆ ಲಕ್ಷಾಂತರ ರೂಪಾಯಿ ವೇತನ ನೀಡುತ್ತಿದ್ದರೂ ಶಿಕ್ಷಕರಾಗಿ ಬಂದವರು ವೃತ್ತಿಮೌಲ್ಯ ಮರೆತು ಹೀಗೆ ನಡೆದುಕೊಳ್ಳುತ್ತಿರುವಾಗ ಅಧ್ಯಾಪಕರ ಸಂಘಗಳು ಏನು ಮಾಡುತ್ತಿವೆ? ತಮ್ಮ ಅನುಕೂಲಕ್ಕೆ ಮಂತ್ರಿ, ಮುಖ್ಯಮಂತ್ರಿ ಕಚೇರಿಗಳ ಕದ ತಟ್ಟುವ ಸಂಘಟನೆಗಳು ಇಂತಹ ವಿದ್ಯಾರ್ಥಿದ್ರೋಹಿ ಘಟನೆಗಳು ನಡೆದಾಗ ಮೌನವಾಗಿಬಿಡುವುದು ಆಶ್ಚರ್ಯ. ಈಗ ರಾಜ್ಯದಲ್ಲಿರುವ ವಿದ್ಯಾರ್ಥಿ ಸಂಘಗಳು ಕೂಡಲೇ ಉನ್ನತ ಶಿಕ್ಷಣ ಸಚಿವರು ಹಾಗೂ ಇಲಾಖಾ ಮುಖ್ಯಸ್ಥರ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೋರಬೇಕಾಗಿದೆ.

ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ನಿಯೋಜನೆಯ ಮೇಲೆ ಒಬ್ಬ ಉಪನ್ಯಾಸಕ ಕಾಲೇಜಿನಿಂದ ಬಿಡುಗಡೆಗೊಂಡರೆ ಮುಂದಿನ ಅವಧಿ ಪೂರ್ತಿ ಯಾವುದೇ ಅತಿಥಿ ಉಪನ್ಯಾಸಕರನ್ನೂ ಸರ್ಕಾರ ನೇಮಕ ಮಾಡಲು ಸಾಧ್ಯವಿಲ್ಲ. ಈ ವರ್ಷದ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗಳು ವರ್ಷಾರಂಭದಲ್ಲೇ ಪೂರ್ಣವಾಗಿರುವ ಕಾರಣ ಆ ಹುದ್ದೆಗಳು ಖಾಲಿಯಾಗಿಯೇ ಇರಬೇಕಾಗುತ್ತದೆ. ಹೀಗಾಗಿ ಕೂಡಲೇ ಪ್ರಜ್ಞಾವಂತರು ಯಾವೊಬ್ಬ ಉಪನ್ಯಾಸಕರನ್ನೂ ತಮ್ಮ ಕಾಲೇಜುಗಳಿಂದ ಬಿಡುಗಡೆಗೊಳಿಸದಂತೆ ಸರ್ಕಾರವನ್ನು ಒತ್ತಾಯಿಸಬೇಕಾಗಿದೆ.

ಒಂದು ವೇಳೆ ಈಗಾಗಲೇ ಕರ್ತವ್ಯ ಸ್ಥಾನದಿಂದ ಬಿಡುಗಡೆಗೊಂಡಿದ್ದರೆ ಮತ್ತೆ ಅವರೆಲ್ಲರನ್ನೂ ಮೂಲ ಸ್ಥಳಗಳಿಗೆ ಕಳುಹಿಸಿಕೊಡುವಂತೆ ಒತ್ತಾಯಿಸಲೂ ಹಿಂಜರಿಯಬಾರದು. ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಅಧ್ಯಾಪಕರಿಲ್ಲದ ತರಗತಿ ಕೊಠಡಿಗಳಲ್ಲಿ ನಮ್ಮ ಹಳ್ಳಿ ಮಕ್ಕಳ ಭವಿಷ್ಯದ ಕನಸು ಕಮರಿ ಹೋಗುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT