ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಜಮಾನಿಕೆ– ಬಹುಮತ ದಬ್ಬಾಳಿಕೆ

ಭಾರತದ ಮತದಾರ ವರ್ಗಗಳನ್ನು ವಿಮರ್ಶಾತ್ಮಕ ಎಚ್ಚರಕ್ಕೆ ಒಯ್ಯುವುದು ಹೇಗೆ?
Last Updated 21 ಮಾರ್ಚ್ 2019, 20:26 IST
ಅಕ್ಷರ ಗಾತ್ರ

ಭಾರತದ ಚುನಾವಣಾ ಜನತಂತ್ರದಲ್ಲಿ, ಶೇಕಡ 30ರಿಂದ 38ರಷ್ಟು ಮತಪ್ರಮಾಣವನ್ನು ಪಡೆಯುವ ರಾಜಕೀಯ ಪಕ್ಷಗಳು ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗ, ಅವುಗಳನ್ನು ಬೆಂಬಲಿಸುವ ಸಕ್ರಿಯ ಮತದಾರ ವರ್ಗಗಳು ಎಲ್ಲೆಡೆ ಮುಕ್ತವಾಗಿ ತಮ್ಮ ಪಕ್ಷ, ನಾಯಕತ್ವ, ಆಡಳಿತ ವೈಖರಿ ಹಾಗೂ ಸಾಧನೆಗಳ ಸರಮಾಲೆ ಕುರಿತು ಹೆಮ್ಮೆಯಿಂದ ಬೀಗುವುದು ಮತ್ತು ಆವೇಶಭರಿತವಾಗಿ ಮಾತನಾಡುವುದು ಚುನಾವಣಾ ಏರುಕಾಲದಲ್ಲಿ ನಿರಂತರವಾಗಿ ಪ್ರತಿಧ್ವನಿಸುತ್ತವೆ ಹಾಗೂ ಅನಿವಾರ್ಯವಾಗಿ ಅವನ್ನು ಕೇಳಿಸಿಕೊಳ್ಳಬೇಕಾಗುತ್ತದೆ.

ಪ್ರತಿಸ್ಪರ್ಧೆಗೆ ಇಳಿದಂತೆ ನವಮಾಧ್ಯಮಗಳು ಅಲ್ಪ ಬಹುಮತ ಮತಪ್ರಮಾಣವನ್ನು ಶೇ 80ರಿಂದ 90ರಷ್ಟು ಮತದಾರರ ಅಭಿಮತವೆಂಬಂತೆ ಅತಿರಂಜಿತವಾಗಿ ಬಿಂಬಿಸುವ ಭರದಲ್ಲಿರುವಾಗ, ಆ ಸುದ್ದಿಗಳೇ ಜನಮತದ ಧ್ವನಿ ಎಂಬಂತೆ ಸಾಗುತ್ತಿರುವಾಗ, ಉಳಿದ ಮತದಾರರು ನೇರವಾಗಿ ತಮ್ಮ ಮತ ಆಯ್ಕೆಗಳ ಕುರಿತು ತುಟಿ ಬಿಚ್ಚಲು ಹಿಂಜರಿಯಬೇಕಾಗುತ್ತದೆ. ಸಾಮರಸ್ಯಕ್ಕಾಗಿಯೋ, ತಾಪತ್ರಯಗಳನ್ನು ಮೈಮೇಲೆ ಎಳೆದುಕೊಳ್ಳುವುದು ಏಕೆ ಎಂಬುದಕ್ಕೋಇವರು ಮೌನಕ್ಕೆ ಜಾರುವಾಗ, ಶೇ 40ನ್ನೂ ಮೀರದ ಮತಪ್ರಮಾಣದ ಮತದಾರರು ತಾವು ಅಧಿಕಾರಕ್ಕೇರಿಸಿದ ಪ್ರಭುತ್ವವನ್ನೇ ಯಜಮಾನಿಕೆಯ ಪ್ರಭುತ್ವವೆಂಬಂತೆ ಬಿಂಬಿಸುವುದರೊಂದಿಗೆ ನಂಬಿಸಲು ಪ್ರಯತ್ನಿಸುತ್ತಾರೆ.

ಬಿಂದು ಬಿಂದುಗಳಂತೆ ಇರುವ ಹಿತಾಸಕ್ತಿಗಳು ಸಾರ್ವತ್ರಿಕ ಮತದಾನದ ಮೂಲಕ ಒಗ್ಗೂಡಿ ಬಹುಮತವಾಗಿ ಪರಿವರ್ತನೆಯಾಗುತ್ತವೆ. ಹೀಗೆ ಮೈದಳೆದ ಬಹುಮತವು ವಿವಿಧ ಹಿತಾಸಕ್ತಿಗಳ ಹಿನ್ನೆಲೆಯಿಂದ ಬೆಳೆದು ಸಮಗ್ರ ಹಿತಾಸಕ್ತಿಯ ಬಹುಮತ, ಏಕತೆಯ ಸಂಕಲ್ಪದ ಬಹುಮತವೆಂದು ಬಹುಜನರಿಗೆ ಮನವರಿಕೆಯಾದರೆ, ಆಳುವ ಪ್ರಭುತ್ವಕ್ಕೆ ನೈಜ ಯಜಮಾನಿಕೆ ಪಟ್ಟ ಲಭಿಸುತ್ತದೆ. ಇಲ್ಲದೇ ಇದ್ದಲ್ಲಿ ಪ್ರಭುತ್ವವು ಕೂಗುಮಾರಿ ವಿಧಾನಗಳ ಮೂಲಕ, ಆಮಿಷಗಳ ಮೂಲಕ, ಭಾವನಾತ್ಮಕ ಅತಿರೇಕಗಳ ಮೂಲಕ ತನ್ನ ಬಹುಮತವನ್ನು ದೇಶದ ಏಕತೆಯ ಸಂಕಲ್ಪದ ಬಹುಮತವೆಂದು ನಂಬಿಸಲು ಹವಣಿಸಬೇಕಾಗುತ್ತದೆ. ಸದರಿ ಪ್ರಭುತ್ವಗಳು ಅನುಸರಿಸುವ ಕೆಲವು ರೀತಿ-ನೀತಿಗಳು ಬಹುಮತೀಯ ದಬ್ಬಾಳಿಕೆಯಾಗಿ ಜಾರಿಯಾಗುತ್ತವೆ ಹಾಗೂ ಚುನಾವಣಾ ಸಂದರ್ಭದಲ್ಲಿ ಸಾರ್ವಜನಿಕವಾಗಿ ಹೆಚ್ಚು ಸ್ಪಷ್ಟವಾಗತೊಡಗುತ್ತವೆ.

ಪ್ರಭಾವಶಾಲಿ ಆರ್ಥಿಕ ಶಕ್ತಿಗಳಾಗಿ ಬೆಳೆದ ಕಾರ್ಪೊರೇಟ್ ಕಂಪನಿಗಳು ತಮ್ಮ ನಿಯಂತ್ರಣದಲ್ಲಿರುವ ಮಾಧ್ಯಮಗಳ ಮೂಲಕ ಪ್ರಭುತ್ವದ ಯಜಮಾನಿಕೆಯ ಉನ್ಮಾದವನ್ನು ಸಾರ್ವಜನಿಕರಲ್ಲಿ ಸೃಷ್ಟಿಸುವಾಗ, ಅದರಿಂದ ಜನ್ಮತಳೆಯುವ ಸುದ್ದಿ ಉತ್ಪನ್ನಗಳ ಚೊಚ್ಚಲ ಗ್ರಾಹಕರೇ ಮಾಂತ್ರಿಕ ಸಂಖ್ಯೆಯ ಬಹುಮತ ಪ್ರಭುತ್ವವನ್ನು ರೂಪಿಸುವ ಜನಧ್ವನಿಯ ಪ್ರಜ್ಞೆಯ ನೆಲೆಯಾಗುತ್ತಾರೆ. ಇವರೇ ಚಳಿ ಬಿಟ್ಟು ಅಬ್ಬರದ ಪ್ರಚಾರಕ್ಕೆ ಇಳಿಯುವಾಗ, ಅವ್ಯಕ್ತ ರೀತಿಯಲ್ಲಿರುವ ಬಹುಸಂಖ್ಯಾತ ಮತದಾರರ ವರ್ಗ ದಿಗಿಲುಗೊಂಡು ಮರೆಗೆ ಸರಿದಂತೆ ಭಾಸವಾಗುತ್ತದೆ. ಜನರ ದುಃಖ ದುಮ್ಮಾನಗಳ ಸಂಕಥನಗಳನ್ನು, ಶೋಷಣೆಯ ಬಹುಮುಖಗಳನ್ನು ಮುನ್ನೆಲೆಗೆ ತಂದು ಅವುಗಳನ್ನು ಮತಗಳನ್ನಾಗಿ ಪರಿವರ್ತಿಸಿ, ಆ ಮೂಲಕವೇ ಪ್ರಭುತ್ವ ಯಜಮಾನಿಕೆಯನ್ನು ಸಾಧಿಸಬೇಕಾದ ಪ್ರವೃತ್ತಿ ಹಿನ್ನೆಲೆಗೆ ಸರಿಯುತ್ತಿದೆ.

ಬಹುಮತವನ್ನು ರೂಪಿಸುವ ಭಾರತದ ಮತದಾರ ವರ್ಗಗಳನ್ನು ವಿಮರ್ಶಾತ್ಮಕ ಎಚ್ಚರಕ್ಕೆ ಒಯ್ಯುವುದು ಹೇಗೆ? ಭ್ರಾಮಕ ಭವಿಷ್ಯದ ಭಾರತದಿಂದ ಸಮರಸದ ಮುಂದಿನ ಭಾರತದತ್ತ ಚಲಿಸುವಂತೆ ಪ್ರೇರೇಪಿಸುವುದು ಹೇಗೆ? ಯಾವ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಶಕ್ತಿಗಳು ಪ್ರಭುತ್ವದ ದಬ್ಬಾಳಿಕೆಯ ಹಿನ್ನೆಲೆಯಲ್ಲಿ ಸಕ್ರಿಯವಾಗಿವೆ ಎಂಬುದನ್ನು ಗುರುತಿಸಬೇಕಾಗುತ್ತದೆ. ಅವರುಗಳು ಹೆಣೆಯುವ ಹುನ್ನಾರಗಳನ್ನು ಮತದಾರರ ಚಿತ್ತಭಿತ್ತಿಗೆ ದಾಟಿಸಬೇಕಾಗುತ್ತದೆ. ಜನರ ದಿನನಿತ್ಯದ ಬದುಕಿನ ಬವಣೆಗಳ ಆಳ-ಅಗಲಗಳನ್ನು ಮತದಾನದ ಪ್ರಜ್ಞೆಯಾಗಿಸಬೇಕಾಗುತ್ತದೆ. ಇದು ಚುನಾವಣಾ ಕಾಲದ ಭಾಷೆಯ ಶಕ್ತಿಯಾಗಬೇಕು ಹಾಗೂ ಭಾಷೆಯ ತಂತ್ರವೂ ಆಗಬೇಕು. ಉದಾಹರಣೆಗೆ, ಭಾರತದಲ್ಲಿ ನೋಟು ರದ್ದತಿಯ ಹಿಂದೆ ಕೇವಲ ಭ್ರಷ್ಟಾಚಾರ ನಿರ್ಮೂಲನೆ, ಕಪ್ಪುಹಣ ನಿಯಂತ್ರಣ ಕೆಲಸ ಮಾಡಿತ್ತೇ ಅಥವಾ ತೆರೆಮರೆಯಲ್ಲಿ ಡಿಜಿಟಲ್ ಹಣದ ಹೊಸ ಮಾರುಕಟ್ಟೆಯನ್ನು ನಿಯಂತ್ರಿಸಲು ಹವಣಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳ ಕಾಳ ಸಂಚುಗಳಿದ್ದವೇ? ನಗದನ್ನೇ ಹೆಚ್ಚಿನ ನಂಬಿಕೆಯಾಗಿಸಿ ಮಾರುಕಟ್ಟೆಯಲ್ಲಿ ವ್ಯವಹರಿಸುತ್ತಿದ್ದ ಜನರನ್ನು ಅವರು ಬಳಸುತ್ತಿದ್ದ ಶೇ 80ಕ್ಕಿಂತ ಹೆಚ್ಚು ನಗದನ್ನು ಅಪಮೌಲ್ಯಗೊಳಿಸಿ ಸಾಧಿಸಿರುವುದಾದರೂ ಏನು? ಸಮಸ್ಯೆಗಳಿಗೆ ಉತ್ತರವಾಗಿ ಈ ಪ್ರಶ್ನೆಗಳನ್ನು ಕೇಳಲಾಗದಿದ್ದರೂ ಸಮಸ್ಯೆಗಳನ್ನು ಸವಿಸ್ತಾರವಾಗಿ ಅರ್ಥ ಮಾಡಿಸುವ ಸಲುವಾದರೂ ಪ್ರಶ್ನೆಗಳನ್ನು ಕೇಳಲೇಬೇಕಾಗುತ್ತದೆ. ಮತದಾನವು ವರ್ತಮಾನವನ್ನು ಅರ್ಥಮಾಡಿಕೊಂಡು ಭವಿಷ್ಯವನ್ನು ಬದಲಾಯಿಸುವ ಪ್ರಕ್ರಿಯೆ ಆಗಿರುವುದರಿಂದ ಜನರ ಬೇನೆಗಳ ಅನುಭವ, ಇದರಿಂದ ರೂಪಿತವಾಗುವ ಪ್ರಜ್ಞೆ ಹಾಗೂ ಈ ಪ್ರಜ್ಞೆಯ ನೆಲೆಯ ಚರಿತ್ರೆ ಮತದಾನ ರಾಜಕೀಯದ ಸಂಕಥನವಾಗಬೇಕು.

ಪ್ರಶ್ನೆಗಳಿಗೆ ತೆರೆದುಕೊಳ್ಳುವ ಪ್ರಭುತ್ವವು ಸತ್ಯಮೇವ ಜಯತೆಯತ್ತ ಚಲಿಸುವಾಗ, ಪ್ರಶ್ನೆಗಳಿಗೆ ಮುಚ್ಚಿದ ಪ್ರಭುತ್ವ ಜನಪ್ರಜಾತಂತ್ರವನ್ನು ಎತ್ತ ಸಾಗಿಸಬಹುದು ಎಂಬುದನ್ನು, ಬಿಂದು ಬಿಂದುಗಳಾಗಿ ಮತಯಂತ್ರಗಳಲ್ಲಿ ಶೇಖರಣೆಯಾಗಿ ಏಕತೆಯ ಬಹುಮತವಾಗಿ ಪರಿವರ್ತನೆಯಾಗುವ ಜನಸಂಕಲ್ಪವೇ ನಿರ್ಧರಿಸ ಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT