ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೂಹ ಮಾಧ್ಯಮ: ಬದಲಾದ ವ್ಯಾಖ್ಯಾನ

ಒಂದು ಸಮೂಹ ಮಾಧ್ಯಮದಲ್ಲಿ ವಿಚಾರಗಳು ಪ್ರಸಾರವಾದರೂ ಅದರ ಪ್ರಚಾರಕ್ಕೆ ಇನ್ನೊಂದು ಮಾಧ್ಯಮ ಬೇಕೇ?
Last Updated 11 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಹೊಸ ಸಿನಿಮಾ ಬಿಡುಗಡೆಯಾಗುತ್ತಿದೆ ತಪ್ಪದೇ ವೀಕ್ಷಿಸಿ... ನನ್ನದೊಂದು ಬರಹ ಪತ್ರಿಕೆಯಲ್ಲಿ ಬಂದಿದೆ ಲಿಂಕ್ ಕಳುಹಿಸಿರುವೆ ಓದಿ ಪ್ರತಿಕ್ರಿಯಿಸಿ... ನಮ್ಮ ಪತ್ರಿಕೆಯಲ್ಲಿ ಓದಲೇಬೇಕಾದ ಸುದ್ದಿಯೊಂದಿದೆ ಓದಲು ಮರೆಯಬೇಡಿ. ನನ್ನ ಬ್ಲಾಗ್‍ನಲ್ಲಿ ಇಂತಹ ಬರಹವಿದೆ ಕಣ್ಣಾಡಿಸಿ... ಈ ಬಗೆಯ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ, ಅಂತರ್ಜಾಲದಲ್ಲಿ, ಇ– ಮೇಲ್‍ಗಳ ಮೂಲಕ ಪ್ರತಿದಿನ ಎಡತಾಕುತ್ತವೆ. ಹಾಗಿದ್ದರೆ ಮಾಧ್ಯಮವೊಂದು ಏಕಕಾಲಕ್ಕೆ ಸಮೂಹವನ್ನು ತಲುಪುವುದಿಲ್ಲವೇ? ಸಮೂಹ ಮಾಧ್ಯಮ ಎನ್ನಬಹುದಾದ ಮಾಧ್ಯಮದಲ್ಲೇ ವಿಚಾರಗಳು ಪ್ರಸಾರವಾದರೂ ಅದರ ಪ್ರಚಾರಕ್ಕೆ ಇನ್ನೊಂದು ಮಾಧ್ಯಮವೇ ಬೇಕೆ?

ಹಿಂದೆ ಪತ್ರಿಕೋದ್ಯಮ ತರಗತಿಯಲ್ಲಿ ಸಮೂಹ ಮಾಧ್ಯಮ ವ್ಯಾಖ್ಯಾನದ ಸಾರಾಂಶ ಹೀಗಿರುತ್ತಿತ್ತು, ‘ಮಾಹಿತಿ, ಶಿಕ್ಷಣ, ಮನರಂಜನೆಯನ್ನು ಬೃಹತ್ ಜನಸಮೂಹಕ್ಕೆ ಏಕಕಾಲದಲ್ಲಿ ತಲುಪಿಸುವ ಮಾಧ್ಯಮ’. ಅದರ ಪ್ರಾಯೋಗಿಕ ಅರ್ಥವೂ ಯಥಾವತ್ತಾಗಿತ್ತು. ದಿನಪತ್ರಿಕೆಯಲ್ಲಿನ ಸುದ್ದಿ, ಲೇಖನ, ಜಾಹೀರಾತು ಜಗಜ್ಜಾಹೀರಾಗಿರುತ್ತಿತ್ತು. ಟಿ.ವಿ.ಯಲ್ಲಿ ಬರುವ ಸುದ್ದಿ, ಟೆಲಿವಿಷನ್ ಹೊಂದಿದ್ದ ಮನೆಯವರಿಗೆಲ್ಲಾ ಏಕಕಾಲದಲ್ಲಿ ತಲುಪುತ್ತಿತ್ತು, ಅದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿತ್ತು. ಈಗ ಮಾಧ್ಯಮವೊಂದರಲ್ಲಿ ಬಂದ ಸುದ್ದಿ ಜನಸಮೂಹವನ್ನು ತಲುಪಬೇಕಾದರೆ ಹಲವಾರು ಮಾಧ್ಯಮಗಳು ಬೇಕು. ಹಾಗಿದ್ದರೆ ಸಮೂಹ ಮಾಧ್ಯಮವೆಂದರೆ ವಸ್ತು ವಿಷಯವೊಂದನ್ನು ವಿಭಿನ್ನ ರೀತಿಯಲ್ಲಿ, ವಿಭಿನ್ನ ಸಮಯದಲ್ಲಿ ತಲುಪಿಸುವ ಮಾಧ್ಯಮಗಳ ಗುಂಪು ಎಂದು ವ್ಯಾಖ್ಯಾನಿಸಬೇಕೇ ಎನ್ನುವುದು ಜಿಜ್ಞಾಸೆ.

ವಸ್ತುವಿಷಯಗಳ ಮುಂದೆ ತಂತ್ರಜ್ಞಾನವೇ ಮೇಲುಗೈ ಸಾಧಿಸುತ್ತಿರುವ ಸಂದರ್ಭದಲ್ಲಿ, ನಿರ್ದಿಷ್ಟ ಮಾಧ್ಯಮವೊಂದು ಸಮೂಹ ಮಾಧ್ಯಮವಾಗಿ ಉಳಿದಿಲ್ಲ. ಅದರ ವ್ಯಾಪ್ತಿ ಸಂಕುಚಿತವಾಗಿ, ಯಾವುದೋ ಒಂದು ಸೀಮಿತ ಗುಂಪನ್ನು ತಲುಪುವ ರಹದಾರಿ ಮಾತ್ರ. ಆ ನಿರ್ದಿಷ್ಟ ಮಾಧ್ಯಮದಲ್ಲಿ ಪ್ರಸಾರವಾದ ವಿಚಾರವು ಜನಸಮೂಹವನ್ನು ತಲುಪಬೇಕಾದರೆ ಅದಕ್ಕೆ ಮಾಧ್ಯಮಗಳ ಗಡಣವೇ ಬೇಕು. ಮುದ್ರಣ, ಟಿ.ವಿ, ಅಂತರ್ಜಾಲ ಹಾಗೂ ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣಗಳ ಪ್ರಚಾರ ಕೂಡ ಬೇಕಾಗುತ್ತದೆ. ಸಮುದಾಯ ಬಾನುಲಿ ಕಾರ್ಯಕ್ರಮಗಳನ್ನು ಕೂಡ ಕೇಳುಗರಿಗೆ ತಲುಪಿಸಬೇಕಾದರೆ ಅಂತರ್ಜಾಲ ಪ್ರಚಾರದ ನೆರವು ಬೇಕಾಗಿದೆ ಎಂದರೆ, ಒಂದು ನಿರ್ದಿಷ್ಟ ಮಾಧ್ಯಮದ ಪರಿಮಿತಿ ಏನು ಎಂಬುದನ್ನು ಅರಿಯಬೇಕಾಗುತ್ತದೆ.

ಮಾಧ್ಯಮಗಳ ವ್ಯಾಪ್ತಿ ಕಡಿಮೆಯಾಗಲು ಮುಖ್ಯಕಾರಣ, ಬೆರಳತುದಿಯಲ್ಲಿ ಎಟಕುತ್ತಿರುವ ಮಾಧ್ಯಮಗಳು ಹಾಗೂ ಅಂತರ್ಜಾಲದ ಅನೂಹ್ಯ ಬೆಳವಣಿಗೆ. ಇಂದು ಓದುಗರು, ವೀಕ್ಷಕರು ಒಂದೇ ವೇದಿಕೆಗೆ ನಿಷ್ಠರಲ್ಲ. ಡಿಜಿಟಲ್ ಮಾಧ್ಯಮಗಳಿಂದಾಗಿ ಹರಿದು ಹಂಚಿಹೋಗಿದ್ದಾರೆ. ಮಾಧ್ಯಮದ ಓದುಗರು ‘ಮಾಸ್’ ಅಲ್ಲ, ಒಂದೊಂದು ‘ಕ್ಲಾಸ್’ ಆಗಿ ಪರಿವರ್ತನೆ ಆಗಿದ್ದಾರೆ. ಓದುಗರು ಅಥವಾ ವೀಕ್ಷಕರ ವಿಭಿನ್ನ ಗುಂಪುಗಳು ಮಾಧ್ಯಮ ಕಂಪನಿಗಳಿಗೂ ಒತ್ತಡ ಹಾಕಿವೆ. ಜಾಹೀರಾತು, ಮಾಧ್ಯಮಗಳ ಜೀವಾಳ. ಜಾಹೀರಾತು ಜಗತ್ತಿನ ಕೂಡಿಕಳೆಯುವ ಲೆಕ್ಕಾಚಾರದಲ್ಲಿ, ಬಹುಸಂಖ್ಯಾತ ಮಾಧ್ಯಮಗಳಿದ್ದರೆ ಜಾಹೀರಾತುದಾರರ ಉದ್ಯಮವು ಲಾಭದತ್ತ ಸಾಗುತ್ತದೆ. ಈ ನಿಟ್ಟಿನಲ್ಲಿ ಅತಿಹೆಚ್ಚು ವೀಕ್ಷಕರು ಅಥವಾ ಓದುಗರು ಬೇಕೆಂದರೆ ಅವರೆಲ್ಲಿದ್ದಾರೆಯೋ ಅಲ್ಲಿಗೇ ಮಾಧ್ಯಮಗಳು ಹೋಗಬೇಕು. ಕೆಲವರು ಟಿ.ವಿ ಮುಂದಿದ್ದರೆ, ಇನ್ನು ಕೆಲವರು ಸ್ಮಾರ್ಟ್‌ಫೋನಿನ ತೆರೆಯಲ್ಲಿ ಮರೆಯಾಗಿರುತ್ತಾರೆ. ಇನ್ನು ಕೆಲವರು ಕಂಪ್ಯೂಟರಿನಲ್ಲೇ ಕಣ್ಣು ನೆಟ್ಟಿರುತ್ತಾರೆ. ಆದ್ದರಿಂದ ಮಾಧ್ಯಮ ಸಂಸ್ಥೆಗಳಿಗೂ ತಾವು ಸಿದ್ಧಪಡಿಸುತ್ತಿರುವ ಮಾಹಿತಿಯನ್ನು ತಲುಪಿಸಲು ವಿವಿಧ ಮಾಧ್ಯಮಗಳ ವೇದಿಕೆ ಬೇಕು. ಒಂದು ನಿರ್ದಿಷ್ಟ ಮಾಧ್ಯಮದ ವೇದಿಕೆಯನ್ನು ಬಳಸಿಕೊಂಡರೆ ಅವರಿಗೆ ಎಲ್ಲಾ ಸಂಭಾವ್ಯ ಗ್ರಾಹಕರನ್ನೂ ತಲುಪಲು ಸಾಧ್ಯವಿಲ್ಲ.

ಎಫ್‍ಐಸಿಸಿಐ- ಕೆಪಿಎಮ್‍ಜಿ ಬಿಡುಗಡೆ ಮಾಡಿದ ‘ಭಾರತೀಯ ಮಾಧ್ಯಮ ಮತ್ತು ಮನರಂಜನಾ ಉದ್ಯಮ’ ವರದಿಯ ಪ್ರಕಾರ, ಅಂತರ್ಜಾಲ ಬಳಕೆದಾರರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಮುದ್ರಣ ಮಾಧ್ಯಮದ ಜಾಹೀರಾತು ಪ್ರಮಾಣದಲ್ಲಿ ಗಣನೀಯ ಏರಿಕೆ ಆಗುತ್ತಿಲ್ಲ. ಒಟ್ಟು ಜಾಹೀರಾತು ಆದಾಯದಲ್ಲಿ ಅದು ಶೇ 29ರಷ್ಟು ಪಾಲು ಹೊಂದಿದೆ. ಟಿ.ವಿ ಜಾಹೀರಾತು ಶೇ 14ರಷ್ಟು ಇದ್ದರೆ, ಅಂತರ್ಜಾಲದ ಜಾಹೀರಾತು ಆದಾಯ ಶೇ 34ರಷ್ಟು ಪಾಲು ಹೊಂದಿದೆ. ಈ ವರದಿ ಬಹುಶಃ, ವಿವಿಧ ಮಾಧ್ಯಮಗಳಲ್ಲಿ ಚದುರಿಹೋಗಿರುವ ಬಳಕೆದಾರರ ಬಗ್ಗೆ ಹಿಡಿದ ಕನ್ನಡಿ.

ತಂತ್ರಜ್ಞಾನದ ವ್ಯಾಪ್ತಿ, ಪರಿಮಿತಿ ಹೆಚ್ಚುತ್ತಾ ಹೋದಂತೆ, ಮಾಧ್ಯಮವು ಜನರ ಮುಂದೆ ಇಡುವ ವಿಚಾರಗಳ ಪರಿಮಿತಿಯೂ ಹೆಚ್ಚುತ್ತಾ ಹೋಗಿದೆ. ಆದರೆ ಮಾಧ್ಯಮವೊಂದಕ್ಕೆ ಜನರನ್ನು ತಲುಪುವ ಸಾಮರ್ಥ್ಯ ಮಾತ್ರ ಸಂಕುಚಿತಗೊಳ್ಳುತ್ತಾ ಸಾಗಿದೆ. ವಸ್ತುಸ್ಥಿತಿ ಹೀಗಿರುವಾಗ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬರವಣಿಗೆ, ವಿಷಯ ನಿರೂಪಣೆಯ ತರಬೇತಿಯೊಂದಿಗೆ, ಬಹುಮಾಧ್ಯಮದಲ್ಲಿ ಅದನ್ನು ಓದುಗರಿಗೆ, ವೀಕ್ಷಕರಿಗೆ ಅಥವಾ ನೆಟ್ಟಿಗರಿಗೆ ಹೇಗೆ ತಲುಪಿಸಬೇಕು ಎಂದು ತಿಳಿಸುವುದೂ ಅಷ್ಟೇ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT