ಗುರುವಾರ , ಮೇ 6, 2021
25 °C
ನಮಗೆ ಬಂದಿರುವ ಸೋಂಕನ್ನು ಬೇಜವಾಬ್ದಾರಿಯಿಂದ ಬೇರೆಯವರಿಗೆ ತಗಲುವ ಹಾಗೆ ಮಾಡುವುದು ಅಕ್ಷಮ್ಯ ಅಪರಾಧ

ಸಂಗತ: ಆರೋಗ್ಯದ ಹಕ್ಕಿನ ಮೇಲೆ ಪ್ರಹಾರ

ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಎರಡನೇ ಅಲೆ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ, ಕಠಿಣ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳದಿದ್ದರೆ ಪರಿಣಾಮ ಘೋರವಾಗಲಿದೆ ಎಂದು ಮಾಧ್ಯಮಗಳು ಪರಿಪರಿಯಾಗಿ ಹೇಳುತ್ತಲೇ ಇವೆ. ಈಗಾಗಲೇ ಮೊದಲ ಹಂತದಲ್ಲಿ ಸಾವು ನೋವು ಎದುರಿಸಿ, ಅದರ ನಡುವೆಯೂ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡು, ಬೇರೆ ರಾಜ್ಯಗಳಿಗಿಂತಲೂ ಚೆನ್ನಾಗಿ ನಿಯಂತ್ರಣ ಸಾಧಿಸಿದೆವು ಎಂದು ಹೆಮ್ಮೆ ಪಟ್ಟುಕೊಂಡಿದ್ದೇನೋ ಆಯಿತು. ಆದರೆ, ಅದರಿಂದ ಸರ್ಕಾರ ಮತ್ತು ನಾಗರಿಕರು ಪಾಠ ಕಲಿತಿದ್ದು ಮಾತ್ರ ಸೊನ್ನೆ.

ಜನಪ್ರತಿನಿಧಿಗಳಾದ ಮಾತ್ರಕ್ಕೆ ಅವರು ಈ ವಿಚಾರದಲ್ಲಿ ತಜ್ಞರಲ್ಲ. ಆದ್ದರಿಂದ ಇಂಥ ಸಾಂಕ್ರಾ ಮಿಕದ ಸಮಯದಲ್ಲಿ ಸರ್ಕಾರವು ‘ತಜ್ಞರ ಸಮಿತಿ’ ಯನ್ನು ನೇಮಕ ಮಾಡುತ್ತದೆ. ಈ ಸಮಿತಿ ಅತ್ಯಂತ ವೈಜ್ಞಾನಿಕವಾಗಿ, ಸಾಂಕ್ರಾಮಿಕ ರೋಗ ವಿಜ್ಞಾನವನ್ನು ಅರೆದುಕುಡಿದು, ಬಹಳ ಪ್ರಯಾಸದಿಂದ ಆದಷ್ಟು ಬೇಗ ಅನುಷ್ಠಾನಕ್ಕೆ ತರಲು ಶಿಫಾರಸುಗಳನ್ನು ನೀಡುತ್ತದೆ. ಇವರು ತಜ್ಞರು ಎಂದು ಸರ್ಕಾರ ನಂಬಿರುವುದಾದರೆ, ಅವರ ಮಾತುಗಳನ್ನೂ ಕೇಳಬೇಕಲ್ಲವೇ? ಆದರೆ ಅಷ್ಟರಲ್ಲಿ ನಮ್ಮ ರಾಜಕೀಯ ಪಕ್ಷಗಳಲ್ಲಿ ಅಧಿಕಾರಾ ರೂಢ ರಾಜಕಾರಣಿಗಳಿಗೆ ತಮ್ಮದೇ ಆದ ಹಲವು ಹಿತಾಸಕ್ತಿಗಳು ಜ್ವಲಂತವಾಗುತ್ತವೆ. ಕೆಲವೇ ದಿನ ಗಳಲ್ಲಿ ಬರಲಿರುವ ಚುನಾವಣೆಗಳು ಬಹುದೊಡ್ಡ ಆತಂಕವನ್ನು ಸೃಷ್ಟಿಸುತ್ತವೆ. ನಿರ್ಬಂಧ ಹೇರಿಬಿಟ್ಟರೆ ತಾವು ಬೇಕಾಬಿಟ್ಟಿ ಓಡಾಡಿ ಪ್ರಚಾರ ಮಾಡುವುದು ಹೇಗೆ? ಹೇಗಾದರೂ ಮಾಡಿ ಚುನಾವಣೆ ಗೆಲ್ಲುವುದು ಹೇಗೆ? ನೋಡೋಣ, ದೇವರ ದಯೆಯಿಂದ ಇದು ಉಲ್ಬಣಾವಸ್ಥೆಗೆ ಹೋಗದೇ ಇದ್ದರೆ ಅಡ್ಜಸ್ಟ್ ಮಾಡಿಕೊಳ್ಳೋಣ ಎಂಬ ಹುನ್ನಾರ.

ತಜ್ಞರ ಸಮಿತಿ ಬಿಡಿಸಿ ಬಿಡಿಸಿ ನಿರ್ಬಂಧಗಳನ್ನು ಶಿಫಾರಸು ಮಾಡಿದೆ. ಆದರೆ ಅದನ್ನು ಕಟ್ಟುನಿಟ್ಟಾಗಿ ಹೇರಲು ಸರ್ಕಾರ ಇನ್ನೂ ಮೀನಮೇಷ ಎಣಿಸುತ್ತಿದೆ. ಏನು ಮಾಡಿದರೆ ಯಾರು ಮುನಿಸಿಕೊಳ್ಳುತ್ತಾರೋ ಎಂಬ ಭಯ ಸರ್ಕಾರವನ್ನು ಕಾಡುತ್ತದೆ. ಒಟ್ಟಾರೆ ಜನ ಹಿತಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂಬ ಕಠಿಣ ನಿರ್ಧಾರ ತೆಗೆದುಕೊಳ್ಳಲಾರದ ಸ್ಥಿತಿಗೆ ಸರ್ಕಾರ ತಲುಪಿದೆ.

ಹೊರಗಡೆ ಮಾಸ್ಕ್‌ ಇಲ್ಲದೇ ಓಡಾಡುವ ನಾಗರಿಕರಿಗೆ ದುಬಾರಿ ದಂಡ ಹಾಕುವುದು ಅತ್ಯಂತ ಕನಿಷ್ಠ ಮಟ್ಟದ ಕ್ರಮ. ಇದನ್ನು ಜೋರಾಗಿ ಮಾಡಲಾಗುತ್ತಿದೆ. ಆದರೆ ಒಂದೇ ಜಾಗದಲ್ಲಿ ದಟ್ಟವಾಗಿ ಜನ ಸೇರುವ ಚಟುವಟಿಕೆಗಳ ಮೇಲೆ ಸಂಖ್ಯೆಯ ನಿರ್ಬಂಧ, ಕಟ್ಟುನಿಟ್ಟಿನ ಕ್ರಮವನ್ನು ಹೇರಲು ಸರ್ಕಾರ ಹಿಂದುಮುಂದು ನೋಡುತ್ತಿರುವುದು ಏಕೆ?

ಒಬ್ಬ ಸಚಿವರು, ‘ಮುಂದಿನ ದಿನಗಳಲ್ಲಿ ಹೋಲಿ, ಉಗಾದಿ, ಅದರಲ್ಲೂ ಮುಖ್ಯವಾಗಿ ರಂಜಾನ್‌ ಹಬ್ಬ ಗಳು ಸಾಲುಸಾಲಾಗಿ ಬರುತ್ತಿವೆ. ಅವುಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧವನ್ನು ಹೇರಿದರೆ ಜನರ ‘ಧಾರ್ಮಿಕ ಭಾವನೆ’ಗೆ ಧಕ್ಕೆ ಉಂಟಾಗುತ್ತದೆ’ ಎಂದು ಹೇಳಿದರೆಂದು ಸುದ್ದಿ. ಇದೆಂಥಾ ಬೇಜವಾಬ್ದಾರಿಯ ಮಾತು! ದೇವರೋ ಧರ್ಮವೋ, ಪೂಜೆ, ಪ್ರಾರ್ಥನೆ, ನಮಾಜು, ಹೋಮಗಳೋ ನಮ್ಮನ್ನು ಕೊರೊನಾ ದಿಂದ ಕಾಪಾಡಿದ್ದರೆ ಆ ಮಾತೇ ಬೇರೆಯಾಗಿರುತ್ತಿತ್ತು.

ಕಳೆದ ಬಾರಿಯ ಕೊರೊನಾ ಆಕ್ರಮಣದ ವೇಳೆಯಲ್ಲಿ ನಾವು ಮನುಷ್ಯರಿರಲಿ ದೇವತೆಗಳಿಗೆಲ್ಲಾದರೂ ಈ ಹುಲುಮಾನವರ ಸೋಂಕು ತಗುಲೀತು ಎಂದು ದೇವರ ಮೂರ್ತಿಗಳಿಗೂ ಮಾಸ್ಕನ್ನು ಹಾಕಿ, ಪೂಜೆ ಸಲ್ಲಿಸಿದೆವು. ಆದರೆ ಕೊನೆಗೂ ಏನಾದರೂ ಪರಿಹಾರ ಸಿಕ್ಕಿದ್ದರೆ ಅದು ಅಪ್ಪಟ ವಿಜ್ಞಾನದಿಂದ, ತಾಂತ್ರಿಕತೆಯ, ಸಂಸ್ಥೆಗಳ, ಸೇವಾದಾತರ ತರ್ಕಬದ್ಧ ಸದುಪಯೋಗದಿಂದ.

ವೈಯಕ್ತಿಕವಾಗಿ ಬರುವ ಕಾಯಿಲೆಗೂ ಸಾರ್ವತ್ರಿಕ ವಾಗಿ ಹಬ್ಬುವ ಸಾಂಕ್ರಾಮಿಕಕ್ಕೂ ನಮ್ಮ ಸಾರ್ವಜನಿಕರಿಗೆ ವ್ಯತ್ಯಾಸ ಗೊತ್ತಾಗುವುದು ಬೇಡವೇ? ಉದಾಹರಣೆಗೆ, ಹೆಗಲಿಗೆ ಹೆಗಲು ತಾಗಿಸಿಕೊಂಡು ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದರೇನೇ ಹೆಚ್ಚು ಪುಣ್ಯ. ಜಾತ್ರೆಗೋ, ಮೇಳಕ್ಕೋ ಹೋದ ಮೇಲೆ ಆರಡಿ ಅಂತರವನ್ನು ಕಾಯ್ದುಕೊಂಡರೆ ಅದು ಸಂಭ್ರಮವಾಗುತ್ತದೆಯೇ? ಹೀಗೆಲ್ಲಾ ಅನಿಶ್ಚಿತವಾದ ರಿಯಾಯಿತಿಗಳನ್ನು ಹುಡುಕುತ್ತಾ ಹೋದರೆ ನಾವು ನಿಗೂಢವಾದ ಅಪಾಯಗಳಿಗೆ ಸಿಲುಕಿಹಾಕಿಕೊಳ್ಳುವುದು ನಿಶ್ಚಿತ.

ನಿರ್ಬಂಧದಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ನೋವನ್ನು ಅನುಭವಿಸುವವರು ಮತ್ತು ಹಾಗೆ ಆಗುತ್ತದೆ ಎಂದು ಅಂದುಕೊಂಡಿರುವ ರಾಜಕಾರಣಿಗಳು ಒಂದು ಮಾತಿಗೆ ಉತ್ತರವನ್ನು ಕೊಡಬೇಕು. ತಗುಲಿದ ಕಾಯಿಲೆ ನಮಗಷ್ಟೇ ಹಾನಿ ಮಾಡುವುದಾದರೆ ಅದು ನಮ್ಮ ನಮ್ಮ ಜವಾಬ್ದಾರಿಯಷ್ಟೇ ಆಗುತ್ತದೆ. ಆದರೆ ನಮ್ಮ ಬೇಜವಾಬ್ದಾರಿಯಿಂದಾಗಿ ನಮಗೆ ಬಂದಿ ರುವ ಸೋಂಕನ್ನು ಅಷ್ಟೇ ಬೇಜವಾಬ್ದಾರಿಯಿಂದ ಬೇರೆಯವರಿಗೆ ತಗಲುವ ಹಾಗೆ ಮಾಡುವುದು ಎಂದರೆ, ಇನ್ನೊಬ್ಬರ ಆರೋಗ್ಯದ ಹಕ್ಕಿನ ಮೇಲೆ ಪ್ರಹಾರ ಮಾಡಿದಂತೆ. ಅವರಿಗೂ ಕಾಯಿಲೆ ಅಥವಾ ಮರಣವನ್ನು ತರುವ ರೀತಿಯ ಅಪರಾಧ. ಇದನ್ನು ಕ್ಷಮಿಸಲು ಸಾಧ್ಯವೇ?

ನಮ್ಮ ಸಂವಿಧಾನವು ಹಕ್ಕುಗಳನ್ನು ನೀಡಲು, ಬಾಧ್ಯತೆಗಳನ್ನು ಹೊರಿಸಲು ಗುರಿಯಾಗಿ ಇಟ್ಟು ಕೊಂಡಿರುವ ಘಟಕ ಎಂದರೆ ಪ್ರತ್ಯೇಕ ‘ಒಬ್ಬ ವ್ಯಕ್ತಿ’. ಸಮುದಾಯವೂ ಅಲ್ಲ, ಸಮಾಜವೂ ಅಲ್ಲ. ಪ್ರತ್ಯೇಕ ವ್ಯಕ್ತಿಯ ಆರೋಗ್ಯವನ್ನು, ಕ್ಷೇಮವನ್ನು ಕಾಪಾಡುವುದು ಜನಪ್ರತಿನಿಧಿಗಳ ಮತ್ತು ಸಂವಿಧಾನದ ಮೇಲೆ ಶಪಥ ಮಾಡಿ ಅಧಿಕಾರ ವಹಿಸಿಕೊಂಡಿರುವ ಸರ್ಕಾರಗಳ ಆದ್ಯ ಕರ್ತವ್ಯ. ರಾಜಕಾರಣ ಬದಿಗಿಡಿ, ವಿಜ್ಞಾನವನ್ನು ಅನುಸರಿಸಿ, ಲೋಕ ಕಲ್ಯಾಣವಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು