ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂತರಿಕ್ಷ ಸಪ್ತಾಹ’ದಲ್ಲಿ ಒಂದು ಸುತ್ತು

ಉಪಗ್ರಹಗಳ ಹಿರಿಮೆಯನ್ನು ಸ್ಮರಿಸುವ ಸಂದರ್ಭ ಈಗ ಬಂದಿದೆ
Last Updated 9 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ವೈಜ್ಞಾನಿಕವಾಗಿ ಮುಂದುವರಿದ ಮತ್ತು ಆರ್ಥಿಕವಾಗಿ ಸಬಲವಾಗಿರುವ ಪ್ರತಿಯೊಂದು ದೇಶವೂ ಅಂತರಿಕ್ಷಕ್ಕೆ ಹಾರಿಸಿರುವ ಉಪಗ್ರಹಗಳು, ಭೂಮಿಯ ಮೇಲಿರುವ ನಮ್ಮ ಸೇವೆ ಮಾಡುತ್ತ ಅರ್ಧ ಶತಮಾನವನ್ನೇ ಕಳೆದಿವೆ. ಭೂಮಿ ಮತ್ತು ಸಾಗರದ ತಳಗಳನ್ನೆಲ್ಲಾ ಶೋಧಿಸಿರುವ ನಾವು, ಅತಿವೇಗದ ರಾಕೆಟ್‍ಗಳ ಒಡಲಲ್ಲಿ ಕ್ಯಾಮೆರಾ ಅಂಟಿಸಿದ ಉಪಗ್ರಹಗಳನ್ನಿರಿಸಿ, ನಭಕ್ಕೆ ಚಿಮ್ಮಿಸಿ, ಭೂಮಿ, ಚಂದ್ರ, ಮಂಗಳನ ಸುತ್ತ ಗಿರಕಿ ಹೊಡೆಸಿ, ಬರಿಯ ಕಣ್ಣಿಗೆ ಕಾಣಿಸದ ಕೋಟ್ಯಂತರ ಮೈಲಿ ದೂರದ ಸೂರ್ಯನ ಸಂಸಾರದ ವಸ್ತು– ವಿವರಗಳ ಚಿತ್ರ ತರಿಸಿಕೊಂಡು, ಜ್ಞಾನದ ಟೊಪ್ಪಿಗೆಯ ತುಂಬ ಹೊಸ ಹೊಸ ಗರಿಗಳನ್ನು ಸಿಕ್ಕಿಸಿಕೊಂಡಿದ್ದೇವೆ.

ಅವು ನಮಗೆ ಕಳಿಸಿದ ಚಿತ್ರಗಳನ್ನು ಅಭ್ಯಸಿಸಿ, ಭೂಮಿಯ ಮೇಲಿನ ಮಳೆ-ಗಾಳಿ- ಪ್ರವಾಹ- ದೂಳಿನ ಮಾಹಿತಿ ಪಡೆದು, ಅದಕ್ಕೆ ಹೊಂದಿಕೊಳ್ಳಲು ಬೇಕಾದ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದ್ದೇವೆ. ಅದಿರಿನ ನಿಕ್ಷೇಪದ ಬಗ್ಗೆ ಮಾಹಿತಿ ಪಡೆದು ಅಗೆದು ತೆಗೆದಿದ್ದೇವೆ. ಚಂದ್ರ, ಮಂಗಳನಲ್ಲಿ ನೀರಿನ ಪಸೆ ಹುಡುಕಿ ಕಪ್ಪುರಂಧ್ರದ ಚಿತ್ರವನ್ನೂ ತೆಗೆದಿದ್ದೇವೆ. ಅಜ್ಞಾತ ಪ್ರದೇಶದಲ್ಲಿ ಉರಿದು ಬಿದ್ದ ವಿಮಾನವನ್ನು ಪತ್ತೆ ಹಚ್ಚಿದ್ದೇವೆ.

ದೂರದ ದೇಶಗಳಿಗೆ ಫೋನ್ ಮಾಡಲು, ಪಿವಿಆರ್ ಕಾರ್ನಿವಲ್‍ಗಳಲ್ಲಿ ಸಿನಿಮಾ ನೋಡಲು, ಸಾಗರ, ಆಕಾಶ, ಭೂಮಿಯ ಮಾಹಿತಿ ಪಡೆಯಲು, ಬೇರೆ ಬೇರೆ ದೇಶಗಳಲ್ಲಿ ನಡೆಯುವ ಆಟ-ಸಮಾರಂಭ, ಉತ್ಸವಗಳ ನೇರ ವೀಕ್ಷಣೆಗೆ ನಿರಂತರವಾಗಿ ನೆರವಾಗುವ ಇಂತಹ ಉಪಗ್ರಹಗಳ ಹಿರಿಮೆಯನ್ನು ನೆನೆಸಿಕೊಳ್ಳಲು, ಕೊಡುಗೆಯನ್ನು ಕೊಂಡಾಡಲು ಇದೇ 4ರಿಂದ 10ರವರೆಗೆ ‘ಸ್ಯಾಟಲೈಟ್ಸ್ ಇಂಪ್ರೂವ್ ಲೈಫ್’ ಎಂಬ ತಿರುಳಿನೊಂದಿಗೆ ‘ವಿಶ್ವ ಅಂತರಿಕ್ಷ ಸಪ್ತಾಹ’ ನಡೆಯುತ್ತಿದೆ.

ಸೋವಿಯತ್‌ ಒಕ್ಕೂಟವು 1957ರ ಅಕ್ಟೋಬರ್ 4ರಂದು ಸ್ಪುಟ್ನಿಕ್-1 ಅನ್ನು ಅಂತರಿಕ್ಷಕ್ಕೆ ಕಳುಹಿಸಿದ ಮೇಲೆ ವಿಶ್ವದಾದ್ಯಂತ ಅನೇಕ ದೇಶಗಳು ಉಪಗ್ರಹ ಉಡಾವಣೆಗೆ ಮುಂದಾದವು. ಅಮೆರಿಕ, ರಷ್ಯಾ, ಜಪಾನ್, ಚೀನಾ, ಜರ್ಮನಿ, ಯುರೋಪಿಯನ್ ಒಕ್ಕೂಟ, ಸೌದಿ ಅರೇಬಿಯ ದೇಶಗಳು ಉಪಗ್ರಹ
ಗಳನ್ನು ಹಾರಿಸಿದ್ದು, ಸಾವಿರಾರು ಉಪಗ್ರಹಗಳು ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿವೆ.

ವಿಕ್ರಂ ಸಾರಾಭಾಯ್ ನೇತೃತ್ವದಲ್ಲಿ ಹಲವು ಯೋಜನೆಗಳನ್ನು ಶುರುಮಾಡಿದ ನಾವು, ಚಂದ್ರನ ಮೇಲೆ ಉಪಗ್ರಹ ಇಳಿಸಿದ ವಿಶ್ವದ ನಾಲ್ಕನೆಯ ರಾಷ್ಟ್ರ ಎಂಬ ಹೆಗ್ಗಳಿಕೆ ಸಂಪಾದಿಸಿದ್ದೇವೆ. ಇದುವರೆಗೆ, ನಮಗಾಗಿ ಮತ್ತು ಇತರ ದೇಶಗಳ ಅನುಕೂಲ, ಅಗತ್ಯಗಳಿಗಾಗಿ ಒಟ್ಟು 319 ಕೃತಕ ಉಪಗ್ರಹಗಳನ್ನು ಹಾರಿಸಿದ್ದೇವೆ.

1975ರಲ್ಲಿ ಪ್ರಥಮ ಉಪಗ್ರಹ ‘ಆರ್ಯಭಟ’ವನ್ನು ಉಡಾಯಿಸಿದ ಇಸ್ರೊ, ಇದುವರೆಗೆ ನಮಗಾಗಿ 118 ಉಪಗ್ರಹಗಳನ್ನು ಹಾರಿಸಿದೆ. ಎರಡು ವರ್ಷಗಳ ಹಿಂದೆ 104 ಉಪಗ್ರಹಗಳನ್ನು ಒಟ್ಟಿಗೇ ಹಾರಿಸಿ ದಾಖಲೆ ಮಾಡಿದ್ದ ಇಸ್ರೊ, ಚಂದ್ರಯಾನ– 1 ಮತ್ತು 2ನ್ನೂ ಮುಗಿಸಿ ಮಂಗಳ ಗ್ರಹಕ್ಕೂ ಉಪಗ್ರಹವನ್ನು ಕಳಿಸಿದೆ.

ಕೃತಕ ಉಪಗ್ರಹಗಳಲ್ಲಿ ಪ್ರಸಾರ, ಸಂವಹನ, ಹವಾಮಾನ, ಜಿಪಿಎಸ್ ಮತ್ತು ಅಂತರರಾಷ್ಟ್ರೀಯ ಅಂತರಿಕ್ಷ ನಿಲ್ದಾಣ ಎಂಬ ಐದು ಮುಖ್ಯ ವಿಧಗಳಿವೆ. ಇವು ಭೂಮಿಯ ಸುತ್ತಲಿನ ಕೆಳ, ಮಧ್ಯಮ ಮತ್ತು ಜಿಯೊಸ್ಟೇಷನರಿ (ಉನ್ನತ) ಕಕ್ಷೆಗಳಲ್ಲಿ ಸುತ್ತುತ್ತಿರುತ್ತವೆ. ಭೂಮಿಯ ಹವಾಮಾನ, ಮಿಲಿಟರಿ ಬೇಹುಗಾರಿಕೆ, ಶಾಖವರ್ಧಕ ಅನಿಲಗಳ ಸಾಂದ್ರತೆ, ಕೃಷಿ, ಪ್ರಕೃತಿ ವಿಕೋಪ, ಜಿಪಿಎಸ್ ವ್ಯವಸ್ಥೆ, ಭೂಮಿಯ ಅಯಾನುಗೋಳದ ಎಲೆಕ್ಟ್ರಾನ್ ಎಣಿಕೆ, ಟೆಲಿಮೆಡಿಸಿನ್– ಟೆಲಿ ಎಜುಕೇಶನ್, ನೈಟ್ ಫೋಟೊಗ್ರಫಿ, ರೇಡಿಯೊ ಸಂಪರ್ಕ, ಉಷ್ಣವಲಯದ ನೀರಿನ ಚಕ್ರ ಅಭ್ಯಸಿಸಲು ಮತ್ತು ಭೂಮಿಯ ಸುತ್ತ ಸುತ್ತಲು ವಿಜ್ಞಾನಿಗಳು, ವಿದ್ಯಾರ್ಥಿಗಳು ನಿರ್ಮಿಸಿದ ರೋಹಿಣಿ, ಭಾಸ್ಕರ, ಇನ್ಸಾಟ್, ಜಿ-ಸ್ಯಾಟ್, ಐಆರ್‍ಎಸ್, ಕಲ್ಪನಾ, ಅನುಸ್ಯಾಟ್, ಯೂಥ್‍ಸ್ಯಾಟ್, ಜುಗ್ನು, ಸರಲ್, ಸತ್ಯಭಾಮ, ಸ್ವಯಂ, ಪ್ರಥಂ ಎಂಬ ಆಕರ್ಷಕ ಹೆಸರಿನ ಉಪಗ್ರಹಗಳನ್ನು ಹಾರಿಸಿ
ಯಶಸ್ವಿಯಾಗಿದ್ದೇವೆ.

ಹಾರಿಸಿರುವ ಹೆಚ್ಚಿನ ಉಪಗ್ರಹಗಳು ಹವಾಮಾನ, ಕೃಷಿ, ಸಂಪರ್ಕ, ಮಿಲಿಟರಿ ಮತ್ತು ಜಲಸಂಚಾರದ ಅಗತ್ಯಗಳನ್ನು ಪೂರೈಸುತ್ತವೆ. ಹಿಂದೆಲ್ಲಾ ಸರ್ಕಾರಿ ಸಂಸ್ಥೆಗಳು ಮಾತ್ರ ಉಪಗ್ರಹವನ್ನು ಹಾರಿಸುತ್ತಿದ್ದವು. ಈಗ ಖಾಸಗಿ ಕಂಪನಿಗಳೂ ಆ ಕೆಲಸ ಮಾಡುತ್ತಿದ್ದು, ಸ್ಪೇಸ್ ಎಕ್ಸ್‌ನ ಎಲಾನ್ ಮಸ್ಕ್ ಅವರು ಆಸಕ್ತರಿಗೆ ವರ್ಷಕ್ಕೆರಡು ಬಾರಿ ‘ಸ್ಪೇಸ್ ಟೂರ್’ ಮಾಡಿಸುತ್ತಿ
ದ್ದಾರೆ. ಬ್ಲೂ ಆರಿಜಿನ್, ಬೋಯಿಂಗ್, ಸಿಯೆರ‍್ರ ನೆವಾಡ ಕಾರ್ಪೊರೇಷನ್, ಆರ್ಬಿಟಲ್ ಸೈನ್ಸಸ್, ವರ್ಜಿನ್ ಗ್ಯಾಲಾಕ್ಟಿಕ್ ಕಂಪನಿಗಳು ಉಪಗ್ರಹ ಉಡಾವಣೆಯ ರೇಸ್‍ನಲ್ಲಿವೆ.

ತಮ್ಮ ಕೆಲಸ ಮುಗಿಸಿ, ಭೂಮಿಗೆ ಹಿಂದಿರುಗಲಾರದೆ ಅಲ್ಲೇ ಸುತ್ತುತ್ತಿರುವ ಅನೇಕ ಉಪಗ್ರಹ ಪಳೆಯುಳಿಕೆಗಳು ಹೊಸದಾಗಿ ಅಲ್ಲಿಗೆ ಹೋಗುವ ಉಪಗ್ರಹಗಳಿಗೆ ಡಿಕ್ಕಿ ಹೊಡೆದ ಪ್ರಸಂಗಗಳೂ ಇವೆ. ನಾಸ್, ಕ್ಯಾಲಿಪ್ಸೊ ಮತ್ತು ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಗಳು ಬರಿಯ ಕಣ್ಣಿಗೂ ಕಾಣಿಸುತ್ತವೆ. ಕೇವಲ 53 ಸೆಂ.ಮೀ. ವ್ಯಾಸ ಹೊಂದಿದ್ದ ಸ್ಪುಟ್ನಿಕ್ ಸಹ ತನ್ನ ದಿನಗಳಲ್ಲಿ ಬರಿಯ ಕಣ್ಣಿಗೆ ಕಾಣಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT