ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಟೆ ಮಾಡುವ ಒಂಟೆ ಕಾನೂನು!

ರಾಜಸ್ಥಾನದ ರಾಜ್ಯಪ್ರಾಣಿಗೆ ಮತ್ತು ಅದನ್ನು ಸಾಕುವವರಿಗೆ ಇಬ್ಬರಿಗೂ ಈಗ ಕುತ್ತು ಬಂದಿದೆ
Last Updated 19 ಮೇ 2021, 19:30 IST
ಅಕ್ಷರ ಗಾತ್ರ

ರಾಜಸ್ಥಾನದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕಳೆದ ಡಿಸೆಂಬರ್‌ನಲ್ಲಿ ಅವ್ಯಕ್ತ ಆತಂಕದಲ್ಲಿದ್ದರು. ಅದಕ್ಕೆ ಕಾರಣ, ಅವರ ಕಚೇರಿಗಳಿಗೆ ಬಂದಿದ್ದ ಲೋಕಹಿತ ಪಶುಪಾಲಕ್ ಸಂಸ್ಥಾನ್ (ಎಲ್‍ಪಿಪಿಎಸ್) ಸಂಘಟನೆಯವರು ಬರೆದ ಒಂದು ಪತ್ರ! ಅದರ ಪ್ರಕಾರ, ಏಪ್ರಿಲ್ ಕೊನೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗಳ ಆವರಣಗಳ ಎದುರು ಒಂಟೆಗಳ ಉಪವಾಸ ಸತ್ಯಾಗ್ರಹ ನಡೆಯುವುದರಲ್ಲಿತ್ತು! ಕೊರೊನಾದ ಎರಡನೇ ಅಲೆ ಇರದಿದ್ದರೆ ರಾಜಸ್ಥಾನ ರಾಜ್ಯವು ವಿನೂತನ ಪ್ರತಿಭಟನೆಗೆ ಸಾಕ್ಷಿಯಾಗುತ್ತಿತ್ತು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಒಂಟೆಗಳ ಅಂತರರಾಜ್ಯ ಹಾಗೂ ಅಂತರರಾಷ್ಟ್ರ ಮಾರಾಟವನ್ನು ನಿಷೇಧಿಸಿದ್ದರಿಂದ ಆರ್ಥಿಕ ನಷ್ಟ ಅನುಭವಿಸುತ್ತಿರುವ ಎಂಟು ಸಾವಿರ ಕುಟುಂಬಗಳ ಪರವಾಗಿ, ‘ಸಾಕಲು ಬೇಕಾದಷ್ಟು ಮೇವು ಸಿಗುತ್ತಿಲ್ಲ, ಮಾರಲು ಅನುಮತಿಯೂ ಇಲ್ಲ, ಹಾಗಿದ್ದ ಮೇಲೆ ಇವನ್ನು ನಮ್ಮ ಬಳಿ ಇಟ್ಟುಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ನಿಮ್ಮ ಕಚೇರಿಯ ಆವರಣಕ್ಕೇ ತಂದು ಬಿಡುತ್ತೇವೆ, ನೀವೇ ಸಾಕಿಕೊಳ್ಳಿ’ ಎಂದು ಪತ್ರದಲ್ಲಿ ಬರೆದಿತ್ತು ಎಲ್‍ಪಿಪಿಎಸ್. 2006ರ ಅರಣ್ಯ ಹಕ್ಕು ಕಾಯ್ದೆಯ ಪ್ರಕಾರ, ರಾಜ್ಯಪ್ರಾಣಿ ಎಂದು ಗುರುತಿಸಲಾಗಿರುವ ಪ್ರಾಣಿ ಮತ್ತು ಅದನ್ನು ಸಾಕುವವರಿಗೆ ವಿಶೇಷ ಸವಲತ್ತು ನೀಡಬೇಕೆಂಬ ನಿಯಮವಿದೆ. ಆದರೂ ರಾಜ್ಯ ಸರ್ಕಾರವಾಗಲೀ ಅರಣ್ಯ ಇಲಾಖೆಯಾಗಲೀ ಆ ಕೆಲಸ ಮಾಡುತ್ತಿಲ್ಲ ಎಂದು ಸಂಘಟನೆ ದೂರಿದೆ.

ರಾಜ್ಯ ಸರ್ಕಾರವು 2014ರಲ್ಲಿ ಒಂಟೆಗೆ ‘ರಾಜ್ಯ ಪ್ರಾಣಿ’ಯ ಮಾನ್ಯತೆ ನೀಡಿತ್ತು. ಹೊರದೇಶ ಮತ್ತು ರಾಜ್ಯಗಳಿಗೆ ಮಾರಾಟ ಮಾಡಲು ಯಾವುದೇ ನಿರ್ಬಂಧವಿರಲಿಲ್ಲ. ಹರಿಯಾಣ ಮತ್ತು ಇತರ ರಾಜ್ಯಗಳಲ್ಲಿ ಒಂಟೆ ಹಾಲಿಗೆ ಮತ್ತು ಸರಕು ಸಾಗಣೆ ವಾಹನವಾಗಿ ಹೆಚ್ಚಿನ ಬೇಡಿಕೆ ಇತ್ತು. ಕ್ರೀಡೆಗಳಲ್ಲಿ ಬಳಸಿಕೊಳ್ಳಲು ಅರಬ್ ರಾಷ್ಟ್ರಗಳಿಂದ ಭಾರಿ ಬೇಡಿಕೆ ಇತ್ತು. ₹ 50 ಸಾವಿರದಿಂದ 3 ಲಕ್ಷದವರೆಗೂ ಮಾರಾಟ ಬೆಲೆ ಇದ್ದುದರಿಂದ ಒಂಟೆ ಪಾಲಕರು ಬೇಕಾದಷ್ಟು ಹಣ ಸಂಪಾದಿಸುತ್ತಿದ್ದರು. ಆದರೆ ರಾಜ್ಯ ಪ್ರಾಣಿ ದಯಾ ಸಂಘಟನೆಗಳು 2015ರಲ್ಲಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ‘ಮಾರಾಟದ ಹೆಸರಿನಲ್ಲಿ ಒಂಟೆಗಳನ್ನು ಬಾಂಗ್ಲಾದೇಶದ ಕಸಾಯಿಖಾನೆಗೆ ಕಳಿಸಲಾಗುತ್ತಿದೆ. ಇದರಿಂದ ಒಂಟೆಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ, ಕೂಡಲೇ ಮಾರಾಟ ನಿಷೇಧಿಸಿ’ ಎಂದು ಒತ್ತಾಯಿಸಿದವು. ಕ್ರಮ ಕೈಗೊಳ್ಳದಿದ್ದಲ್ಲಿ ಕಾನೂನಿನ ಮೊರೆ ಹೋಗುವುದಾಗಿ ಎಚ್ಚರಿಸಿದ್ದರಿಂದ ಕೂಡಲೇ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ, ‘ಕ್ಯಾಮೆಲ್ ಆ್ಯಕ್ಟ್’ (ರಾಜಸ್ಥಾನ ಕ್ಯಾಮೆಲ್ ಎಕ್ಸ್‌ಪೋರ್ಟ್ ಪ್ರಾಹಿಬಿಷನ್ ಆ್ಯಕ್ಟ್) ಅನ್ನು ಜಾರಿಗೆ ತಂದು, ಮಾರಾಟ ಮತ್ತು ರಫ್ತು ಎರಡನ್ನೂ ಸಂಪೂರ್ಣವಾಗಿ ನಿಷೇಧಿಸಿತು.

‘ಎಂಟು ವರ್ಷಗಳ ಹಿಂದೆ ಮೂರು ಲಕ್ಷ ಒಂಟೆಗಳಿದ್ದವು. ಈಗ ಸಂಖ್ಯೆ ಎರಡು ಲಕ್ಷಕ್ಕಿಳಿದಿದೆ. ಪ್ರತೀ ವರ್ಷ ಹದಿನೈದರಿಂದ ಇಪ್ಪತ್ತು ಸಾವಿರ ಒಂಟೆಗಳು ಕಾಯಿಲೆ ಹಾಗೂ ಅಪಘಾತಗಳಿಗೆ ಬಲಿಯಾಗುತ್ತವೆ. ಹಿಂದೆಲ್ಲ ರಾಜ ಮಹಾರಾಜರು ಅರಣ್ಯ ಹಾಗೂ ಕೃಷಿ ಪ್ರದೇಶಗಳ ಕೆಲ ಭಾಗಗಳನ್ನು ಒಂಟೆಗಳು ಮೇಯಲೆಂದೇ ಮೀಸಲಿಡುತ್ತಿದ್ದರು. ಹಸು– ಎಮ್ಮೆಗಳನ್ನು ಶೆಡ್‍ಗಳಲ್ಲಿ ಕಟ್ಟಿ ಹಾಕಿ ಮೇಯಿಸಿದಂತೆ ಒಂಟೆಗಳನ್ನು ಮೇಯಿಸಲಾಗುವುದಿಲ್ಲ. ಅವೇನಿದ್ದರೂ ಓಡಾಡಿಕೊಂಡು, ದೇಸೀ ಗಿಡ ಗಂಟೆಗಳನ್ನು ಮೇಯ್ದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಕಾದಿಟ್ಟ ಅರಣ್ಯ ಪ್ರದೇಶಗಳಲ್ಲಿ ಮೇಯುತ್ತಿದ್ದ ಒಂಟೆಗಳಿಗೀಗ ಅದನ್ನೂ ನಿಷೇಧಿಸಲಾಗಿದೆ. ಗಂಡು ಒಂಟೆಗಳನ್ನು ಮಾತ್ರ ಹೊರಗಿನವರಿಗೆ ಮಾರುತ್ತಾರೆ. ಅದನ್ನೇ ನಂಬಿಕೊಂಡು ಲಕ್ಷಾಂತರ ಜನ ಬದುಕುತ್ತಿದ್ದಾರೆ. ಶತಮಾನಗಳಿಂದ ಅವರ ಆರ್ಥಿಕತೆಯ ಬೆನ್ನೆಲುಬೇ ಆಗಿರುವ ಪ್ರಾಣಿಗಳನ್ನು ಮಾರದಂತೆ ಕಾನೂನು ತಂದರೆ ಆ ಕುಟುಂಬಗಳು ಬದುಕುವುದಾದರೂ ಹೇಗೆ? ಹಿಂದೆಲ್ಲ ₹ 50 ಸಾವಿರಕ್ಕೆ ಮಾರಾಟವಾಗುತ್ತಿದ್ದ ಒಂಟೆಗಳಿಗೀಗ ₹ 3 ಸಾವಿರ ಕೊಡುವವರೂ ಇಲ್ಲ ಎನ್ನುತ್ತಾರೆ ರಾಥೋಡ್.

ರಾಜ್ಯ ಹಾಗೂ ಕೇಂದ್ರದ ಜಂಟಿ ಯೋಜನೆಯಂತೆ, ಹುಟ್ಟಿದ ಒಂಟೆ ಮರಿಯ ಪಾಲನೆ- ಪೋಷಣೆಗೆ ಅದಕ್ಕೆ ಹದಿನೆಂಟು ತಿಂಗಳುಗಳಾಗುವಷ್ಟರಲ್ಲಿ ಮೂರು ಕಂತುಗಳಲ್ಲಿ ₹ 10,000 ಸಹಾಯಧನ ನೀಡಲಾಗುತ್ತಿತ್ತು. ಕೇಂದ್ರದ ಏಕಾಏಕಿ ನಿರ್ಧಾರದಂತೆ ಈಗ ಆ ಯೋಜನೆ ನಿಂತು ಹೋಗಿದೆ. ರಾಜ್ಯದಲ್ಲಿ ಪ್ರತಿದಿನ 7,000 ಲೀಟರ್ ಒಂಟೆ ಹಾಲು ಸಂಗ್ರಹವಾಗುತ್ತಿದ್ದು, ಕೇವಲ ಮೂರು ಜಿಲ್ಲಾ ಕೇಂದ್ರಗಳಲ್ಲಿ ಸಂಗ್ರಹಿಸಲಾಗುತ್ತದೆ. 300 ರೂಪಾಯಿಗೆ ಲೀಟರ್‌ನಂತೆ ಹಾಲು ದೂರದ ಬೆಂಗಳೂರು, ಹೈದರಾಬಾದ್, ದೆಹಲಿಗಳಿಗೆ ಹೋಗುತ್ತದೆ. ಸಂಗ್ರಹ ಕೇಂದ್ರಗಳ ಸಂಖ್ಯೆ ಸಾಲದು ಎನ್ನುವ ಒಂಟೆ ಸಾಕಣೆದಾರರು, ಮಿಲ್ಕ್ ಡೈರಿ ನೆಟ್‍ವರ್ಕ್ ಸ್ಥಾಪಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದಿದ್ದಾರೆ.

ಒಂಟೆ ಪಾಲಕರ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರವು ಪಶು ಸಂಗೋಪನಾ ಇಲಾಖೆಯ ಐವರು ಸದಸ್ಯರ ಉನ್ನತ ಸಮಿತಿ ರಚಿಸಿ, ಒಂಟೆ ಸಾಕುವವರೊಂದಿಗೆ ಚರ್ಚಿಸಿ ವರದಿ ಸಲ್ಲಿಸಲು ಸೂಚಿಸಿದೆ. ಒಟ್ಟಿನಲ್ಲಿ ಸರ್ಕಾರಗಳ ಅವೈಜ್ಞಾನಿಕ ಕಾನೂನಿನಿಂದ ಮರಳುಗಾಡಿನ ಹಡಗು ಮುಳುಗುತ್ತಿದೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT