ಉಗ್ರರ ವಿರುದ್ಧ ಕಠಿಣ ನಿಲುವು: ರಾಜತಾಂತ್ರಿಕ ಪಟ್ಟು ಬಿಗಿಯಾಗಲಿ

ಶುಕ್ರವಾರ, ಮಾರ್ಚ್ 22, 2019
21 °C

ಉಗ್ರರ ವಿರುದ್ಧ ಕಠಿಣ ನಿಲುವು: ರಾಜತಾಂತ್ರಿಕ ಪಟ್ಟು ಬಿಗಿಯಾಗಲಿ

Published:
Updated:
Prajavani

ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರದ ಬೆಳವಣಿಗೆಗಳು ಭಾರತ ಮತ್ತು ಪಾಕಿಸ್ತಾನವನ್ನು ಯುದ್ಧದ ಅಂಚಿಗೆ ತಂದು ನಿಲ್ಲಿಸಿವೆ. ಈ ಸ್ಥಿತಿ ಉದ್ಭವಿಸಲು ಬಹುಮುಖ್ಯ ಕಾರಣ, ಭಯೋತ್ಪಾದಕ ಸಂಘಟನೆಗಳನ್ನು ಬಳಸಿಕೊಂಡು ಭಾರತದ ವಿರುದ್ಧ ಪ್ರಚ್ಛನ್ನ ಯುದ್ಧ ಸಾರಿರುವ ಪಾಕಿಸ್ತಾನ. ಜೈಷ್-ಎ- ಮೊಹಮ್ಮದ್ (ಜೆಇಎಂ) ಸಂಘಟನೆಯು ಪಾಕಿಸ್ತಾನವನ್ನೇ ನೆಲೆಯಾಗಿಟ್ಟುಕೊಂಡು ಕಾರ್ಯಾಚರಿಸುತ್ತಿದೆ. ಪುಲ್ವಾಮಾ ದಾಳಿ ನಡೆದ ಕೂಡಲೇ ಆ ಸಂಘಟನೆ ಇದು ತನ್ನದೇ ಕೃತ್ಯವೆಂದು ಘೋಷಿಸಿಕೊಂಡಿತ್ತು. ಇಷ್ಟಾಗಿಯೂ ಪಾಕಿಸ್ತಾನಿ ಆಡಳಿತ ಆ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳುವುದಿರಲಿ ಕನಿಷ್ಠ ಪುಲ್ವಾಮಾ ದಾಳಿಯನ್ನು ತೀವ್ರವಾಗಿ ಖಂಡಿಸುವ ಕೆಲಸವನ್ನೂ ಮಾಡಲಿಲ್ಲ. ಜೆಇಎಂ ಮತ್ತಷ್ಟು ದಾಳಿಗಳನ್ನು ಯೋಜಿಸುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಭಾರತ ನಿರ್ದಿಷ್ಟ ದಾಳಿಯೊಂದನ್ನು ನಡೆಸಿತು. ಪಾಕಿಸ್ತಾನದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಳ್ಳದೆ ಮತ್ತು ಆ ದೇಶದ ಸಾಮಾನ್ಯ ನಾಗರಿಕರ ಪ್ರಾಣಕ್ಕೆ ಯಾವುದೇ ಅಪಾಯವಾಗದಂತೆ ಈ ದಾಳಿ ನಡೆಯಿತು. ಭಯೋತ್ಪಾದಕರನ್ನು ಮಟ್ಟ ಹಾಕುವ ತನ್ನ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಪಾಕಿಸ್ತಾನ ಇದನ್ನು ತನ್ನ ವೈಮಾನಿಕ ಪ್ರದೇಶದ ಉಲ್ಲಂಘನೆ ಎಂಬಂತೆ ವಿಶ್ವ ಸಮುದಾಯದ ಮುಂದೆ ಬಿಂಬಿಸಲು ಪ್ರಯತ್ನಿಸಿತು. ಆದರೆ ವಿಶ್ವಸಮುದಾಯವು ಭಾರತದ ಪರವಾಗಿ ನಿಂತಿತೇ ಹೊರತು ಪಾಕಿಸ್ತಾನದ ವಾದಕ್ಕೆ ಮನ್ನಣೆ ನೀಡಲಿಲ್ಲ. ಇದು ಭಾರತಕ್ಕೆ ದೊರೆತ ರಾಜತಾಂತ್ರಿಕ ಗೆಲುವು. ಇದಕ್ಕೆ ಪಾಕಿಸ್ತಾನದ ಪ್ರತಿಕ್ರಿಯೆ ನಿರೀಕ್ಷಿಸಿದಂತೆಯೇಅತ್ಯಂತ ಕೀಳು ಮಟ್ಟದ್ದಾಗಿತ್ತು. ಭಾರತೀಯ ವೈಮಾನಿಕ ಪ್ರದೇಶವನ್ನು ಉಲ್ಲಂಘಿಸಿದ ಪಾಕಿಸ್ತಾನದ ವಿಮಾನವನ್ನು ಬೆನ್ನಟ್ಟಿದ ಭಾರತೀಯ ವಾಯುಪಡೆಯ ವಿಮಾನವನ್ನು ಉರುಳಿಸಿ ತನ್ನ ಸಾಧನೆ ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಿದೆ. ಸತ್ಯವೇ ಯುದ್ಧದ ಮೊದಲ ಬಲಿಪಶು ಎಂಬುದನ್ನು ಈ ಘಟನೆಯೂ ಹೇಳುತ್ತಿದೆ. ಮೊದಲಿಗೆ ‘ಇಬ್ಬರನ್ನು ಬಂಧಿಸಲಾಗಿದೆ’ ಎಂದು ಹೇಳಿಕೊಂಡ ಪಾಕಿಸ್ತಾನ, ನಂತರ ಸಂಖ್ಯೆಯನ್ನು ಒಂದಕ್ಕೆ ಇಳಿಸಿತು. ಇವೆಲ್ಲವೂ ಪಾಕಿಸ್ತಾನ ತನ್ನ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಹೆಣೆಯುತ್ತಿರುವ ತಂತ್ರ ಮಾತ್ರ.

ರಾಜತಾಂತ್ರಿಕವಾಗಿ ಮತ್ತು ನೈತಿಕವಾಗಿ ಈಗಾಗಲೇ ಗೆಲುವು ಸಾಧಿಸಿರುವ ಭಾರತ ಮುಂದಿನ ಹೆಜ್ಜೆಗಳನ್ನು ಬಹಳ ಎಚ್ಚರಿಕೆಯಿಂದ ಇಡಬೇಕು. ಭಯೋತ್ಪಾದನೆಯ ವಿರುದ್ಧ ಭಾರತ ತಳೆದಿರುವ ಕಠಿಣ ನಿಲುವಿಗೆ ವಿಶ್ವಸಮುದಾಯದ ಬೆಂಬಲ ಈಗಾಗಲೇ ದೊರೆತಿದೆ. ಜೆಇಎಂ ಮುಖ್ಯಸ್ಥ ಮಸೂದ್ ಅಜರ್‌ನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವುದನ್ನು ತಡೆಯಲು ಪಾಕಿಸ್ತಾನದ ಜೊತೆಗೆ ನಿಂತಿದ್ದ ಚೀನಾ, ಈ ಬಾರಿ ಅದಕ್ಕೆ ಸಂಯಮ ಬೋಧಿಸಿದೆ ಎಂಬುದು ಭಾರತದ ರಾಜತಾಂತ್ರಿಕ ವಿಜಯವನ್ನು ಘೋಷಿಸುತ್ತಿದೆ. ಈ ತನಕ ಪಾಕಿಸ್ತಾನದ ಜೊತೆಗೆ ಯಾವುದೇ ಪ್ರಮುಖ ರಾಷ್ಟ್ರ ನಿಂತಿಲ್ಲ. ಈ ಒತ್ತಡವನ್ನು ಹೆಚ್ಚಿಸುವ ರಾಜತಂತ್ರದಲ್ಲಿ ಭಾರತ ತೊಡಗಿಕೊಳ್ಳಬೇಕಾಗಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾತುಕತೆಯ ಪ್ರಸ್ತಾವವನ್ನು ಮುಂದಿಟ್ಟಿರುವುದರ ಹಿಂದೆಯೂ ಭಾರತದ ರಾಜತಾಂತ್ರಿಕ ಒತ್ತಡಗಳೇ ಕೆಲಸ ಮಾಡಿವೆ. ಈಗ ಪಾಕಿಸ್ತಾನದ ವಶದಲ್ಲಿರುವ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರ ಸುರಕ್ಷೆಯನ್ನು ಖಾತರಿಪಡಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಭಾರತ ಕೈಗೊಳ್ಳಬೇಕು. ಯುದ್ಧೋನ್ಮಾದವನ್ನು ಹರಡುವ ಕೆಲವು ಶಕ್ತಿಗಳು ಭಾರತದಲ್ಲಿಯೂ ಕೆಲಸ ಮಾಡುತ್ತಿವೆ. ಆಡಳಿತಾರೂಢ ಬಿಜೆಪಿಯ ಪಾಲೂ ಇದರಲ್ಲಿದೆ. ಲೋಕಸಭಾ ಚುನಾವಣೆಯಲ್ಲಿ ಇದು ಆ ಪಕ್ಷಕ್ಕೆ ಸ್ವಲ್ಪಮಟ್ಟಿಗೆ ಲಾಭವನ್ನೂ ತಂದುಕೊಡಬಹುದು. ಆದರೆ ಅದಕ್ಕಾಗಿ ಭಾರತದ ರಾಜತಾಂತ್ರಿಕ ಗೆಲುವನ್ನು ಬಲಿ ಕೊಡಬಾರದು. ರಾಜಕಾರಣವನ್ನು ಮೀರಿ ದೇಶ ಒಂದಾಗಿ ನಿಲ್ಲಬೇಕಾದ ಸಮಯವಿದು ಎಂದು ಭಾಷಣ ಮಾಡುವುದಷ್ಟೇ ಅಲ್ಲ, ದೇಶದ ಚುಕ್ಕಾಣಿ ಹಿಡಿದವರು ಅದನ್ನು ನಡೆಯಲ್ಲಿಯೂ ತೋರಿಸಬೇಕು. ಯುದ್ಧೋನ್ಮಾದವನ್ನು ಸೃಷ್ಟಿಸುತ್ತಿರುವ ಶಕ್ತಿಗಳು ಭಾರತದ ರಾಜತಂತ್ರವನ್ನು ನಿರ್ದೇಶಿಸುವ ಸ್ಥಿತಿ ಉದ್ಭವಿಸಬಾರದು. ವರ್ತಮಾನದ ಯುದ್ಧವೆಂಬುದು ಕೇವಲ ಸೋಲು-ಗೆಲುವುಗಳಲ್ಲಿ ಮುಗಿಯುವುದಿಲ್ಲ. ಇಡೀ ವಿಶ್ವಸಮುದಾಯ ಪಾಕಿಸ್ತಾನಕ್ಕೆ ಸಂಯಮ ಬೋಧಿಸುತ್ತಿರುವುದರ ಹಿಂದಿನ ಸಂದೇಶವನ್ನು ಭಾರತದ ಆಡಳಿತಾರೂಢರೂ ಅರಿತು ಭಾರತದ ಪ್ರಬುದ್ಧ ರಾಜತಂತ್ರದ ಪರಂಪರೆಯನ್ನು ಮುಂದುವರಿಸಬೇಕು.

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !