ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕೃಷಿಭೂಮಿ ಮತ್ತು ನಿವೇಶನದ ಹವಣಿಕೆ

ನಿವೇಶನಗಳ ಸಲುವಾಗಿ ಕೃಷಿಭೂಮಿ ಖರೀದಿಸುವ ದಂಧೆ ವ್ಯಾಪಕವಾಗಿದೆ
Last Updated 22 ಆಗಸ್ಟ್ 2021, 20:30 IST
ಅಕ್ಷರ ಗಾತ್ರ

ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿರುವ ನನ್ನ ಮಿತ್ರನಿಗೆ ನಗರದಲ್ಲಿ ಸ್ವಂತ ಮನೆ ಕಟ್ಟಿಕೊಳ್ಳುವಾಸೆ. ನಿವೇಶನ ಖರೀದಿಸಲು ₹ 20 ಲಕ್ಷದಿಂದ 25 ಲಕ್ಷದ ಅಗತ್ಯ ಎದುರಾಯಿತು. ಹಳ್ಳಿಯಲ್ಲಿರುವ ಎರಡು ಎಕರೆ ಕೃಷಿಭೂಮಿಯನ್ನು ಮಾರಾಟ ಮಾಡಿ, ಬಂದ ಹಣದಿಂದ ನಗರದಲ್ಲಿ 30x40 ಅಡಿಗಳ ಅಳತೆಯ ನಿವೇಶನ ಖರೀದಿಸಿದ. ಈಗ ಮನೆ ಕಟ್ಟಲು, ಉಳಿದಿರುವ ಎರಡು ಎಕರೆ ಕೃಷಿಭೂಮಿಯನ್ನು ಮಾರಾಟ ಮಾಡುವ ಹವಣಿಕೆಯಲ್ಲಿದ್ದಾನೆ.

ಒಂದು ಅಂದಾಜಿನಂತೆ, ನಗರ ಪ್ರದೇಶದಲ್ಲಿನ ಎರಡು ಗುಂಟೆಗಳ ನಿವೇಶನದ ಮೌಲ್ಯ ಗ್ರಾಮೀಣ ಪ್ರದೇಶದಲ್ಲಿನ 80 ಗುಂಟೆಗಳ ಕೃಷಿಭೂಮಿ ಮೌಲ್ಯಕ್ಕೆ ಸರಿಸಮವಾಗಿದೆ. ನಗರೀಕರಣದ ದಾಹಕ್ಕೆ ಕೃಷಿಭೂಮಿ ಬಲಿಯಾಗುತ್ತಿದೆ. ರೈತರಿಂದ ಕೃಷಿಭೂಮಿ
ಯನ್ನು ಖರೀದಿಸಿ ನಿವೇಶನಗಳಾಗಿ ಪರಿವರ್ತಿಸಿ ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ. ಅಚ್ಚರಿಯೆಂದರೆ, ಕೆಲವೊಮ್ಮೆ ಸಂಬಂಧಿಸಿದ ಇಲಾಖೆಯಿಂದ ಒಪ್ಪಿಗೆಯನ್ನೇ ಪಡೆಯದೆ ಕೃಷಿಭೂಮಿಯನ್ನು ನಿವೇಶನಗಳಾಗಿ ಪರಿವರ್ತಿಸುತ್ತಾರೆ.

ಪರಿಚಿತರೊಬ್ಬರು ನಗರವೊಂದರ ಹೊರವಲಯದಲ್ಲಿರುವ ಕೃಷಿಭೂಮಿಯಲ್ಲಿ ಮನೆ ಕಟ್ಟಿಕೊಳ್ಳಲೆಂದು ಇತ್ತೀಚೆಗೆ ₹ 3 ಲಕ್ಷಕ್ಕೆ ಒಂದು ಗುಂಟೆ ಜಾಗ ಖರೀದಿಸಿದರು. ಅವರ ಪ್ರಕಾರ, ಮಧ್ಯವರ್ತಿಯು ₹ 50 ಲಕ್ಷಕ್ಕೆ ರೈತನಿಂದ ಐದು ಎಕರೆ ಕೃಷಿಭೂಮಿ ಖರೀದಿಸಿ ನಂತರ ಪ್ರತೀ ಒಂದು ಗುಂಟೆ ವಿಸ್ತೀರ್ಣದ ಜಾಗವನ್ನು ₹ 3 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಅದು ಅಕ್ರಮ ಎಂದು ಗೊತ್ತಿದ್ದೂ ಜನ ಅಲ್ಲಿ
ನಿವೇಶನಗಳನ್ನು ಖರೀದಿಸಿದ್ದಾರೆ. ಮುಂದೊಂದು ದಿನ ಸರ್ಕಾರ ಅಕ್ರಮವನ್ನು ಸಕ್ರಮಗೊಳಿಸಬಹುದೆನ್ನುವ ದೂರದ ಆಸೆ ಅವರದು. ರೈತನಿಂದ ₹ 50 ಲಕ್ಷಕ್ಕೆ ಆ ಕೃಷಿಭೂಮಿಯನ್ನು ಖರೀದಿಸಿದ ಮಧ್ಯವರ್ತಿಗೆ ಒಂದೆರಡು ತಿಂಗಳುಗಳಲ್ಲೇ ₹ 4 ಕೋಟಿಯಿಂದ 5 ಕೋಟಿಯ ನಿವ್ವಳ ಲಾಭವಾಗಿದೆ.

ನಗರ ಪ್ರದೇಶಗಳಲ್ಲಿ ವಸತಿ ಸಮಸ್ಯೆ ಪರಿಹರಿಸಲು ಸರ್ಕಾರದ ಗೃಹಮಂಡಳಿಯಿಂದ ಕಡಿಮೆ ಬೆಲೆಗೆ ಮನೆ ಅಥವಾ ನಿವೇಶನ ಒದಗಿಸುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಇಲ್ಲಿಯೂ ಸರ್ಕಾರ ವಸತಿ ಪ್ರದೇಶಕ್ಕಾಗಿ ಕೃಷಿಭೂಮಿಯನ್ನೇ ವಶಪಡಿಸಿಕೊಳ್ಳುತ್ತದೆ. ಒಂದು ಸಾವಿರ ನಿವೇಶನಗಳಿದ್ದರೆ ಬೇಡಿಕೆ ಕೋರಿ ಒಂದು ಲಕ್ಷ ಅರ್ಜಿಗಳು ಬಂದಿರುತ್ತವೆ. ಈಗಾಗಲೇ ಸ್ವಂತ ಮನೆ ಅಥವಾ ನಿವೇಶನ ಇರುವವರೂ ಅರ್ಜಿ ಗುಜರಾಯಿಸುತ್ತಾರೆ. ಕಡಿಮೆ ಬೆಲೆಗೆ ಖರೀದಿಸಿದ ನಿವೇಶನ ಭವಿಷ್ಯದಲ್ಲಿ ಆರ್ಥಿಕವಾಗಿ ಲಾಭ ತಂದುಕೊಡಬಹುದೆನ್ನುವ ದೂರಾಲೋಚನೆ ಅವರದು. ಇಲಾಖೆಯ ಅಧಿಕಾರಿಗಳಿಗೆ ಒಂದಿಷ್ಟು ಕಾಣಿಕೆ ಸಂದಾಯ ಮಾಡಿ ನಿವೇಶನಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.

ಕಾರ್ಖಾನೆಗಳು, ವಿಶ್ವವಿದ್ಯಾಲಯಗಳು, ಸರ್ಕಾರದ ಆಡಳಿತ ಕಚೇರಿಗಳು ಇವೆಲ್ಲವುಗಳ ಸ್ಥಾಪನೆಗೆ ಸಾವಿರಾರು ಎಕರೆ ಕೃಷಿಭೂಮಿ ಬಳಕೆಯಾಗುತ್ತಿದೆ. ರಸ್ತೆಗಳ ಅಗಲೀಕರಣ, ಹೆದ್ದಾರಿಗಳ ನಿರ್ಮಾಣದಲ್ಲಿಯೂ ಕೃಷಿಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತದೆ. ನಗರ ಪ್ರದೇಶಗಳಿಗೆ ಸಮೀಪದಲ್ಲಿರುವ ಹಳ್ಳಿಗಳ ಕೃಷಿಭೂಮಿಯಲ್ಲಿ ಇಟ್ಟಿಗೆ ಕಾರ್ಖಾನೆಗಳು, ಕಂಕರ್ ಉತ್ಪಾದನೆ ಕೇಂದ್ರಗಳು, ರೆಸಾರ್ಟ್‌ಗಳು ಮತ್ತು ಡಾಬಾಗಳು ಕಾರ್ಯನಿರ್ವಹಿಸುತ್ತಿವೆ. ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಎಡ-ಬಲದ ಕೃಷಿಭೂಮಿಯಲ್ಲಿ ಸಾಲುಸಾಲು ಮನೆಗಳು ಮತ್ತು ವಾಣಿಜ್ಯ ಸಂಕೀರ್ಣಗಳು ನಿರ್ಮಾಣಗೊಳ್ಳುತ್ತಿರುವುದು ಪ್ರತೀ ಹಳ್ಳಿಯಲ್ಲೂ ಕಂಡುಬರುವ ಸಾಮಾನ್ಯ ದೃಶ್ಯ.

ಭೂಮಿ ಈಗ ಹಣ ಹೂಡಿಕೆಯ ಉತ್ಪಾದನಾ ಕ್ಷೇತ್ರವಾಗಿ ಬಂಡವಾಳದಾರರನ್ನು ಆಕರ್ಷಿಸುತ್ತಿದೆ. ಆರ್ಥಿಕ ಸ್ಥಿತಿವಂತರು ಭೂಮಿ ಖರೀದಿಗಾಗಿ ಹಣ ಹೂಡುತ್ತಿದ್ದಾರೆ. ಸ್ವಂತದ ಮನೆಯಿದ್ದೂ ಲಾಭದ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನಗಳನ್ನು ಖರೀದಿಸುವ ದುರಾಸೆ ಜನರಲ್ಲಿ ಹೆಚ್ಚುತ್ತಿದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಉದ್ಯಮಿಗಳು ರೈತರಿಂದ ಕಡಿಮೆ ಬೆಲೆಗೆ ಕೃಷಿಭೂಮಿಯನ್ನು ಖರೀದಿಸಿ ನಿವೇಶನಗಳನ್ನಾಗಿಸಿ ಮಾರಾಟ ಮಾಡುತ್ತಿದ್ದಾರೆ. ಕಪ್ಪುಹಣ ಭೂಮಿ ಖರೀದಿಗಾಗಿ ಹರಿದುಬರುತ್ತಿದೆ. ಕೃಷಿಭೂಮಿ ಅಥವಾ ನಿವೇಶನದ ಖರೀದಿ ಸಂದರ್ಭ ಕೈಬದಲಾಗುವ ಹಣ ಮತ್ತು ನೋಂದಣಿ ಇಲಾಖೆಯಲ್ಲಿ ದಾಖಲಿಸುವ ಬೆಲೆ ನಡುವೆ ತುಂಬ ವ್ಯತ್ಯಾಸವಿರುತ್ತದೆ. ಖರೀದಿಸುವಾತ ಪಾವತಿಸುವ ಒಟ್ಟುಹಣ ನೋಂದಣಿ ಇಲಾಖೆಯಲ್ಲಿ ದಾಖಲಾಗುವುದೇ ಇಲ್ಲ. ಇದು ಸರ್ಕಾರದಿಂದ ಶ್ರೀಸಾಮಾನ್ಯನವರೆಗೆ ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ.

ವರ್ಷದಿಂದ ವರ್ಷಕ್ಕೆ ಕೃಷಿಭೂಮಿ ಕ್ಷೀಣಿಸುತ್ತಿರುವುದು ಮುಂದೊಂದು ದಿನ ತೀವ್ರ ಆಹಾರ ಕ್ಷಾಮವನ್ನು ಸೃಷ್ಟಿಸಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಈಗಲಾದರೂ ಸರ್ಕಾರ ಮತ್ತು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ಈ ಬೆಳವಣಿಗೆಯನ್ನು ನಿಯಂತ್ರಿಸುವ ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು.

ಕೃಷಿಕರಲ್ಲದವರು ಕೃಷಿಭೂಮಿ ಖರೀದಿಸಲು ಅನುಕೂಲವಾಗುವಂತೆ ಇತ್ತೀಚೆಗೆ ಕಾಯ್ದೆಗೆಸರ್ಕಾರ ತಿದ್ದುಪಡಿ ತಂದಿದೆ. ನಿಜಕ್ಕೂ ಇದು ಆತಂಕಪಡುವ ಬೆಳವಣಿಗೆ. ಈಗಾಗಲೇ ವರ್ಷದಿಂದ ವರ್ಷಕ್ಕೆ ಕೃಷಿಭೂಮಿಯ ವ್ಯಾಪ್ತಿ ಕ್ಷೀಣಿಸುತ್ತಿದೆ. ಕಾಯ್ದೆಯಲ್ಲಾದ ತಿದ್ದುಪಡಿಯಿಂದಾಗಿ ಬಂಡವಾಳದಾರರು ಕೃಷಿಭೂಮಿಯನ್ನು ಖರೀದಿಸಿ ಅದನ್ನು ವಸತಿ ಪ್ರದೇಶಗಳಾಗಿ ಪರಿವರ್ತಿಸಲು ಹಳ್ಳಿಗಳಿಗೆ ಲಗ್ಗೆಯಿಡಲಿದ್ದಾರೆ. ನಿವೇಶನಗಳನ್ನು ಖರೀದಿಸಲು ಸ್ಥಿತಿವಂತರು ಪೈಪೋಟಿಗಿಳಿಯುವರು. ಇವರುಗಳ ನಡುವೆ, ವರ್ಷವಿಡೀ ಮಣ್ಣಲ್ಲಿ ಮಣ್ಣಾಗಿ ದುಡಿದರೂ ನಾಲ್ಕು ಕಾಸು ಕಾಣದ ರೈತರು, ಬಂಡವಾಳದಾರರ ಆಮಿಷಕ್ಕೆ ಬಲಿಯಾಗಿ ಕೃಷಿಭೂಮಿಯನ್ನು ಪರಭಾರೆ ಮಾಡಿ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT