ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಮಾಲಿನ್ಯದಲ್ಲಿ ಭಾರತ ಮುಂದು?

Last Updated 14 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ನಮ್ಮ ದೇಶದ ಅನೇಕ ದೊಡ್ಡ ನಗರಗಳು ಜಗತ್ತಿನ ಅತಿಹೆಚ್ಚು ವಾಯುಮಾಲಿನ್ಯದ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತವೆ. ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಜಗತ್ತಿನ ಅತಿಹೆಚ್ಚು ವಾಯುಮಾಲಿನ್ಯದ ಹತ್ತು ನಗರಗಳ ಪಟ್ಟಿಯಲ್ಲಿ ಭಾರತದ 9 ನಗರಗಳು ಕಾಣಿಸಿಕೊಂಡವು. ಅವೆಲ್ಲ ಗಂಗಾ ಬಯಲಿನಲ್ಲಿರುವ ಉತ್ತರ ಭಾರತದ ನಗರಗಳೇ ಆಗಿದ್ದವು. ಕಾನ್ಪುರ, ಫರೀದಾಬಾದ್, ವಾರಾಣಸಿ, ಗಯಾ, ಪಟ್ನಾ, ದೆಹಲಿ, ಲಖನೌ, ಆಗ್ರಾ ಮತ್ತು ಮುಜಫ್ಫರ್‌ಪುರ. ಹೆಚ್ಚು ಮಲಿನಗೊಂಡಿರುವ ಚೀನಾದ ನಗರಗಳು ಮತ್ತು ತೃತೀಯ ಜಗತ್ತಿನ ಹಲವು ನಗರಗಳು ಈ ಪಟ್ಟಿಯಲ್ಲಿ ಏಕೆ ಸೇರಿಲ್ಲ ಎಂಬ ಸಂದೇಹಗಳು ಏಳದೇ ಇರುವುದಿಲ್ಲ.

ಭಾರತದ ನಗರಗಳು ಇಷ್ಟು ಮಲಿನಗೊಳ್ಳಲು ಹಲವು ಕಾರಣಗಳಿವೆ. ಹರಿಯಾಣ, ಪಂಜಾಬ್, ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯಗಳಲ್ಲಿ ಭತ್ತ, ಗೋಧಿಯ ಒಣ ಹುಲ್ಲನ್ನು ಸುಡುವುದರಿಂದ ಅದರ ಹೊಗೆಯು ಗಾಳಿಯಲ್ಲಿ ಸೇರಿಕೊಳ್ಳುತ್ತದೆ. ಚಳಿಗಾಲದಲ್ಲಿ ಮಂಜು ಹನಿಯುವುದರಿಂದ ಈ ಹೊಗೆಯು ಗಾಳಿಯಲ್ಲಿ ಸಿಕ್ಕಿಕೊಂಡು ಬಂದಿಯಾಗುತ್ತದೆ. ಇದರ ಜೊತೆಗೆ ವಾಹನಗಳು ಉಗುಳುವ ವಿಷಾನಿಲಗಳೂ ಗಾಳಿಯಲ್ಲಿ ಸೇರಿಕೊಳ್ಳುತ್ತವೆ. ಇವುಗಳ ಜೊತೆಗೆ ದೂಳು, ಕೈಗಾರಿಕೆಗಳಿಂದ ಹೊರಬೀಳುವ ರಾಸಾಯನಿಕಗಳು ಮತ್ತು ನಗರಗಳಿಂದ ಹೊರಬೀಳುವ ತ್ಯಾಜ್ಯದಿಂದ ಇನ್ನಷ್ಟು ಮಾಲಿನ್ಯಕಾರಕ ಅಂಶಗಳು ಹಾಗೂ ಅಪಾಯಕಾರಿ ಹಸಿರುಮನೆ ಅನಿಲಗಳು ಗಾಳಿಯಲ್ಲಿ ಸೇರಿಕೊಳ್ಳುತ್ತವೆ.

ಗಾಳಿಯಲ್ಲಿ ತೇಲಾಡುವ ಪಾರ್ಟಿಕ್ಯುಲೇಟ್ ಮ್ಯಾಟರ್ (ಪಿ.ಎಂ), ವಿಷಾನಿಲಗಳು ಹಾಗೂ ದ್ರವವು ಮನುಷ್ಯ ಉಸಿರಾಡುವಾಗ ನಮ್ಮ ದೇಹವನ್ನು ಸೇರುತ್ತವೆ. ನೈಸರ್ಗಿಕವಾಗಿ ಗಾಳಿಯಲ್ಲಿ ಶೇ 21ರಷ್ಟು ಆಮ್ಲಜನಕವಿದ್ದು, ಉಸಿರಾಡುವಾಗ ಅದು ದೇಹದ ಒಳಕ್ಕೆ ಹೋಗಿ, ಉಸಿರು ಹೊರಹಾಕಿದಾಗ ಶೇ 6ರಷ್ಟು ಆಮ್ಲಜನಕ ಹೊರಕ್ಕೆ ಬರುತ್ತದೆ. ಅಂದರೆ ಶೇ 15ರಷ್ಟು ಆಮ್ಲಜನಕ ದೇಹದ ಒಳಗೆ ಉಳಿದುಕೊಳ್ಳುತ್ತದೆ. ಒಬ್ಬ ಮನುಷ್ಯನ ಬದುಕಿಗೆ ಅಷ್ಟು ಆಮ್ಲಜನಕ ದೇಹದ ಒಳಗೆ ಇರುವುದು ಅಗತ್ಯ. ಆಮ್ಲಜನಕದ ಪ್ರಮಾಣ ಏರುಪೇರಾದರೆ ಮನುಷ್ಯನ ಅಂಗಾಂಗಗಳು ತೊಂದರೆಗೆ ಸಿಲುಕಿಕೊಳ್ಳುತ್ತವೆ. ಮನುಷ್ಯನ ದೇಹದಲ್ಲಿ ಕೆಲವೇ ಕೆಲವು ಕ್ಷಣಗಳ ಕಾಲ ಆಮ್ಲಜನಕದ ಕೊರತೆ ಉಂಟಾದರೂ ಮಿದುಳಿನಲ್ಲಿರುವ ನರಕೋಶಗಳು ಸಾಯಲಾರಂಭಿಸುತ್ತವೆ.

ಗಾಳಿಯಲ್ಲಿನ ವಿಷದ ಕಣಗಳು ದೇಹವನ್ನು ಹೊಕ್ಕರೆ ಶ್ವಾಸಕೋಶ ಮತ್ತು ಹೃದಯದ ಬೇನೆ ಕಾಣಿಸಿಕೊಳ್ಳುತ್ತದೆ. ಈ ವಿಷಕಾರಿ ಕಣಗಳನ್ನು 2.5 ಪಿ.ಎಂ. ಮತ್ತು 10 ಪಿ.ಎಂ. ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. 2.5 ಪಿ.ಎಂ. ಎಂದರೆ 2.5 ಮೈಕ್ರೊಮೀಟರಿಗಿಂತ ಕಡಿಮೆ ಗಾತ್ರ ಇರುವ ಸೂಕ್ಷ್ಮ ಕಣಗಳು. ಗಾಳಿಯಲ್ಲಿ ಈ ಕಣಗಳ ಪ್ರಮಾಣ ಹೆಚ್ಚಾದಾಗ ಮನು
ಷ್ಯನ ಕಣ್ಣುಗಳು ಮಸುಕಾಗಿ ಎದುರಿಗೆ ಏನೂ ಕಾಣಿಸುವುದಿಲ್ಲ. 10 ಪಿ.ಎಂ. ಎಂದರೆ 10 ಮೈಕ್ರೊಮೀಟರಿಗಿಂತ ಕಡಿಮೆ ಗಾತ್ರ ಇರುವ ಕಣಗಳು. ಇವೆರಡರಲ್ಲಿ ಕಡಿಮೆ ಗಾತ್ರದ ಕಣಗಳು ಹೆಚ್ಚು ಅಪಾಯಕಾರಿ.

ಹೊಗೆ, ಕೊಳಕು, ಕಾರ್ಖಾನೆಗಳಿಂದ ಬರುವ ದೂಳು, ಕೃಷಿಚಟುವಟಿಕೆ, ರಸ್ತೆಗಳ ನಿರ್ಮಾಣ, ಪರಾಗಮತ್ತು ಕಟ್ಟಡ ನಿರ್ಮಾಣದಿಂದ ದೊಡ್ಡ ಕಣಗಳು ಉತ್ಪಾದನೆಯಾಗುತ್ತವೆ. ವಾಹನಗಳಿಂದ ಬಿಡುಗಡೆಯಾಗುವ ಅನಿಲ, ತ್ಯಾಜ್ಯಗಳನ್ನು ಸುಡುವುದರಿಂದ,
ಮಣ್ಣು, ಲೋಹ ಕರಗಿಸುವ ಕಾರ್ಖಾನೆ ಇತ್ಯಾದಿಗಳಿಂದ ಸಣ್ಣ ಕಣಗಳು ಉತ್ಪತ್ತಿಯಾಗುತ್ತವೆ. ಇದರ ಜೊತೆಗೆ ಸೇರಿಕೊಳ್ಳುವ ಇನ್ನಷ್ಟು ಮುಖ್ಯ ಪಿ.ಎಂ. ಅಂಶಗಳೆಂದರೆ ಸಲ್ಫೇಟ್‌, ನೈಟ್ರೇಟ್ಸ್, ಸೋಡಿಯಂ ಕ್ಲೋರೈಡ್‌, ಅಮೋನಿಯ, ಕಾರ್ಬನ್, ಖನಿಜಗಳ ದೂಳು ಮತ್ತು ನೀರಿನಾಂಶ. ದೊಡ್ಡ ಪಿ.ಎಂ. ಕಣಗಳು ಮೇಲಿನ ಉಸಿರಾಟದ ಟ್ರ್ಯಾಕ್‌ನಲ್ಲಿ ಕುಳಿತುಕೊಂಡರೆ, ಸಣ್ಣ ಪಿ.ಎಂ. ಕಣಗಳು ಕೆಳಗಿನ ಉಸಿರಾ
ಟದ ಟ್ರ್ಯಾಕ್‌ನಲ್ಲಿ ಕುಳಿತುಕೊಂಡು ಕೆಲವೇ ನಿಮಿಷಗಳಲ್ಲಿ ಶ್ವಾಸದ ಅಂಗಾಂಶದಲ್ಲಿ ಸೇರಿಕೊಳ್ಳುತ್ತವೆ. ಆನಂತರ ರಕ್ತದಲ್ಲಿ ಸೇರಿಕೊಂಡು ಇಡೀ ದೇಹದಲ್ಲಿ ಹರಡಿಕೊಂಡು ಅನೇಕ ಅಪಾಯಕಾರಿ ರೋಗಗಳಿಗೆ ಕಾರಣವಾಗುತ್ತವೆ.

ಈ ಕಾರಣದಿಂದ ಪ್ರಸ್ತುತ, ಜಗತ್ತಿನಾದ್ಯಂತ ವರ್ಷಕ್ಕೆ 15 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 2050ರ ವೇಳೆಗೆ ಈ ಸಂಖ್ಯೆ 36 ಲಕ್ಷಕ್ಕೆ ಏರಲಿದೆ ಎಂದು ಅಂದಾಜಿಸಲಾಗಿದೆ. ಮೇಲಿನ ಶ್ವಾಸಕೋಶದ ಟ್ರ್ಯಾಕ್‌ ಮೂಲಕ ಬರುವ ರೋಗಗಳೆಂದರೆ ಅಲರ್ಜಿಕ್ ರಿನಿಟಿಸ್‌, ಕಿವಿಸೋಂಕು, ದೀರ್ಘಕಾಲದ ಕೆಮ್ಮು, ನಿದ್ರಾಹೀನತೆ, ಉಸಿರಾಟದ ತೊಂದರೆ, ಗಂಟಲು ಬೇನೆ ಇತ್ಯಾದಿ. ಕೆಳ ಶ್ವಾಸದ ಟ್ರ್ಯಾಕ್ ಮೂಲಕ ಬರುವ ರೋಗಗಳೆಂದರೆ ದೀರ್ಘಕಾಲದ ಕೆಮ್ಮು, ಬ್ರಾಂಕೈಟಿಸ್ ಆಸ್ತಮಾ, ಎಂಫಿಸೆಮಾ ನ್ಯುಮೋನಿಯಾ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಇತ್ಯಾದಿ. ಇವುಗಳ ಜೊತೆಗೆ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಮತ್ತು ಮಧುಮೇಹ, ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳೂ ಬರುತ್ತವೆ.

ವಾಯಮಾಲಿನ್ಯವನ್ನು ತಹಬಂದಿಗೆ ತರಲು ಅಥವಾ ಕಡಿಮೆ ಮಾಡಲು ಅನೇಕ ಉಪಾಯಗಳಿವೆ. ಸರ್ಕಾರಗಳು ಕಾನೂನುಗಳನ್ನು ಬಿಗಿಗೊಳಿಸಬೇಕು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿಜಾರಿ ಮಾಡಬೇಕು. ಸಾರ್ವಜನಿಕರೂ ಇದಕ್ಕೆ ಕೈಜೋಡಿಸಬೇಕು. ಇಲ್ಲವೆಂದರೆ ಎಲ್ಲರೂ ಬೆಂಕಿಯ ಕುಲುಮೆಯಲ್ಲಿ ಕುಳಿತು ಅದರ ‘ಬಿಸಿ’ ಅನುಭವಿಸಬೇಕಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT