ಮಂಗಳವಾರ, ಅಕ್ಟೋಬರ್ 22, 2019
21 °C
‘ರಾಶೊಮನ್‌ ಪರಿಣಾಮ’ ನೆನಪಿಸಿದ ರಾಜಕೀಯ ಬೆಳವಣಿಗೆಗಳು

ಗ್ರಹಿಕೆಯ ವಿಭಿನ್ನ ಮಜಲು

Published:
Updated:

1950ರಲ್ಲಿ ಜಪಾನಿ ಸಿನಿಮಾ ನಿರ್ದೇಶಕ ಅಕಿರ ಕುರೋಸಾವ, ಜಾಗತಿಕ ಚಿತ್ರರಂಗಕ್ಕೆ ‘ರಾಶೊಮನ್’ ಎನ್ನುವ ಅದ್ಭುತ ಸಿನಿಮಾವನ್ನು ಕೊಡುಗೆಯಾಗಿ ನೀಡಿದರು. ಸಾರ್ವಕಾಲಿಕ ಮನ್ನಣೆ ಇರುವ ಆ ಸಿನಿಮಾ, ಸತ್ಯ ಅಥವಾ ನೈಜತೆ ಎಂದರೆ ಏನು ಎಂಬುದಕ್ಕೆ ಹೊಸ ವ್ಯಾಖ್ಯಾನವನ್ನು, ಪರಿಭಾಷೆಯನ್ನು ನೀಡುವ ಪ್ರಯತ್ನ ಮಾಡಿತು. ಸತ್ಯ ಎನ್ನುವುದು ಜನರ ದೃಷ್ಟಿಕೋನ ಮತ್ತು ಅವರ ಗ್ರಹಿಕೆಗೆ ಅನುಸಾರವಾಗಿ ವ್ಯಾಖ್ಯಾನಗೊಳ್ಳುವಂತಹದ್ದು ಎನ್ನುವುದನ್ನು ಜಗತ್ತಿಗೆ ಸಾರಿತು.

ಸಿನಿಮಾದ ಕಥೆಯು ದಟ್ಟ ಕಾನನದ ಒಳಗೆ ನಡೆಯುವ ಕೊಲೆಯ ಸತ್ಯಾಸತ್ಯತೆಯ ಸುತ್ತಲೂ ಗಿರಕಿ ಹೊಡೆಯುತ್ತದೆ. ಕೊಲೆಗೆ ಸಾಕ್ಷಿಯಾಗಿದ್ದ ನಾಲ್ವರು ವ್ಯಕ್ತಿಗಳು ತಮ್ಮ ಗ್ರಹಿಕೆಗೆ ತಕ್ಕಂತೆ ಸನ್ನಿವೇಶವನ್ನು ವರ್ಣಿಸುತ್ತಾರೆ. ಪ್ರತಿಯೊಬ್ಬ ಪ್ರತ್ಯಕ್ಷದರ್ಶಿಯ ಸಾಕ್ಷ್ಯ ನಿರೂಪಣೆಯೂ ಭಿನ್ನವಾಗಿರುತ್ತದೆ. ನ್ಯಾಯ ನಿರ್ಣಯವು ಗೊಂದಲಕ್ಕೆ ಒಳಗಾಗುತ್ತದೆ. ಈ ನಾಲ್ವರೊಳಗೆ ಕೊಲೆಗಾರರು ಯಾರು ಎಂಬುದು ಪ್ರೇಕ್ಷಕರಿಗೆ ಒಗಟಾಗೇ ಉಳಿಯುತ್ತದೆ. ಒಟ್ಟಿನಲ್ಲಿ ಸಿನಿಮಾವು ಸತ್ಯದ ದರ್ಶನ, ನ್ಯಾಯ ತೀರ್ಮಾನದಲ್ಲಿ ಎದುರಾಗುವ ಜಟಿಲ ಸಂದರ್ಭಗಳು ಮತ್ತು ಗೊಂದಲವನ್ನು ಪ್ರೇಕ್ಷಕರ ಮುಂದಿಡುತ್ತದೆ. ನಿಜವಾದ ಕೊಲೆಗಾರ ಯಾರು ಎಂಬುದರ ಸುತ್ತ ನಡೆಯುವ ವಿವಿಧ ಸಾಕ್ಷ್ಯಗಳ ನಿರೂಪಣೆಯಿಂದ ಪ್ರೇಕ್ಷಕರಿಗೆ ನೈಜತೆಯ ದರ್ಶನವಾಗುತ್ತದೆ.

ಸಿನಿಮಾ ನೀಡಿದ ವಿರೋಧಾಭಾಸದ ಗ್ರಹಿಕೆಗಳ ಹೊಸ ಹೊಳಹು ಮುಂದಿನ ದಿನಗಳಲ್ಲಿ ‘ರಾಶೊಮನ್ ಎಫೆಕ್ಟ್‌’ ಎನ್ನುವ ಪರಿಭಾಷೆಯೊಂದಕ್ಕೆ ನಾಂದಿಯಾಗುತ್ತದೆ. ಮನಃಶಾಸ್ತ್ರ, ನ್ಯಾಯಶಾಸ್ತ್ರ, ಸಮಾಜಶಾಸ್ತ್ರ್ರ, ಸಾಹಿತ್ಯ, ಇತಿಹಾಸ ಮತ್ತು ಪತ್ರಿಕೋದ್ಯಮ ವಲಯದಲ್ಲಿ ಆಗಾಗ್ಗೆ ಚರ್ಚೆಗೊಳಗಾಗುವ ವಿಷಯವಾಗುತ್ತದೆ. ಇತ್ತೀಚೆಗೆ ಇದು ರಾಜ್ಯಶಾಸ್ತ್ರ ಹಾಗೂ ರಾಜಕಾರಣದಲ್ಲೂ ಆಗಾಗ್ಗೆ ಬಳಕೆಯಾಗುವ ಪದ. ರಾಜಕೀಯ ಸಂಘರ್ಷಗಳು, ಚುನಾವಣೆ ಸಂದರ್ಭದಲ್ಲಿ ನಡೆಯುವ ಅಬ್ಬರದ ಪ್ರಚಾರಗಳು, ಹೇಳಿಕೆಗಳು, ಜನರ ಮುಂದೆ ಮಾಡುವ ಪ್ರಮಾಣಗಳು, ಎದುರಾಳಿ ಪಕ್ಷಗಳ ಕುರಿತಾದ ‘ಸತ್ಯ’ವನ್ನು ಬಯಲಿಗೆಳೆಯಲು ಮುಂದಾಗುವಂತಹ ಸಂದರ್ಭಗಳಲ್ಲಿ ಜನಸಾಮಾನ್ಯನೊಬ್ಬ ರಾಶೊಮನ್‌ ಪರಿಣಾಮಕ್ಕೆ ಒಳಗಾಗುತ್ತಾನೆ. ಇಂತಹ ವಿರೋಧಾಭಾಸದ ಗ್ರಹಿಕೆಗಳ ಪರಿಣಾಮವನ್ನು ವಿವಿಧ ಪಕ್ಷಗಳು ಮತ್ತೆ ಮತ್ತೆ ಮುನ್ನೆಲೆಗೆ ತಂದು, ಸಾಮಾನ್ಯ ಮತದಾರನನ್ನು ಗೊಂದಲಕ್ಕೆ ಈಡುಮಾಡುತ್ತವೆ. ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಮತ್ತೆ ಮತ್ತೆ ರಾಶೊಮನ್ ಪರಿಣಾಮವನ್ನು ನೆನಪಿಸಿದವು.

ಪಕ್ಷಗಳ ಅಧಿಕಾರ ಲಾಲಸೆಯಲ್ಲಿ ಪ್ರಜಾಪ್ರಭುತ್ವದ ಮೂಲ ಆಶಯ ಕೊಲೆಯಾಗಿದೆ. ಆದರೆ ಕೊಲೆ ಮಾಡಿದವರು ಯಾರು ಎಂದರೆ ಜನಸಾಮಾನ್ಯ ನಿರುತ್ತರನಾಗುತ್ತಾನೆ. ಇವರಲ್ಲಿ ಅಪರಾಧಿ ಯಾರು, ನಿರಪರಾಧಿ ಯಾರು ಎಂಬ ನಿರ್ಧಾರ ಕ್ಷಣಕ್ಕೊಮ್ಮೆ ಬದಲಾಗುತ್ತದೆ. ಹಾಗಿದ್ದರೆ ಯಾರು ಪ್ರಾಮಾಣಿಕರು ಎಂಬ ಪ್ರಶ್ನೆ ಬಂದರೆ, ಪ್ರತೀ ಪಕ್ಷದವರೂ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಘಟನಾವಳಿಗಳನ್ನು ವಿವರಿಸುತ್ತಾ ಅವಕಾಶವಾದಿತನವನ್ನು ಮೆರೆಯುತ್ತಾರೆ. ಭಾವನಾತ್ಮಕ ಮಾತಿನ ಓಘದಲ್ಲಿ ಜನರನ್ನು ತಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನವನ್ನು ಪ್ರತೀ ಪಕ್ಷ ಮತ್ತು ನಾಯಕ ಮಾಡುತ್ತಾರೆ. ಸನ್ನಿವೇಶವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚುವ ರಭಸದಲ್ಲಿ ತಮಗೆ ಅಧಿಕಾರ ಲಾಲಸೆಯೇ ಅಂತಿಮ ಗುರಿ ಎಂಬುದನ್ನೂ ಸಾಬೀತುಪಡಿಸುತ್ತಾರೆ.

ರಾಶೊಮನ್ ಪರಿಣಾಮದ ಪ್ರಭಾವ ಈಚೆಗೆ ನಡೆದ ಸಾರ್ವತ್ರಿಕ ಚುನಾವಣೆಯನ್ನೂ ಬಿಟ್ಟಿರಲಿಲ್ಲ. ಅಖಾಡದಲ್ಲಿದ್ದ ಪ್ರಚಂಡ ಸ್ಪರ್ಧಿಗಳು ಬೆರಳೆಣಿಕೆಯಷ್ಟು ವಿಚಾರಗಳನ್ನು ಮಾತ್ರ ಜನರ ಮುಂದಿಟ್ಟು, ತಮ್ಮ ಅನುಕೂಲಕ್ಕೆ ತಕ್ಕಂತೆ ಅವುಗಳನ್ನು ವ್ಯಾಖ್ಯಾನಿಸುತ್ತಾ ಹೋದರು. ಈ ವ್ಯಾಖ್ಯಾನಗಳನ್ನು ವ್ಯವಸ್ಥಿತವಾಗಿ ಜನರಿಗೆ ತಲುಪಿಸಲು ಯಶಸ್ವಿಯಾದ ಪಕ್ಷವೊಂದು ಅಧಿಕಾರದ ಚುಕ್ಕಾಣಿ ಹಿಡಿಯಿತು. ವ್ಯಾಖ್ಯಾನಿಸುವಾಗ ಎಡವಿ, ಸಂವಹಿಸುವಾಗ ತೊಡರಿದ ಪಕ್ಷವು ವಿರೋಧ ಪಕ್ಷವಾಯಿತು. ಇವರಿಬ್ಬರ ನಡುವೆ ಗೊಂದಲಕ್ಕೆ ಒಳಗಾದವರು ಜನಸಾಮಾನ್ಯರು. ಆದರೂ ರಾಜಕೀಯ ಪಕ್ಷಗಳು ಹಾಗೂ ಅವುಗಳ ನಾಯಕರ ‘ಸತ್ಯದ ದರ್ಶನ’ ಆದದ್ದಂತೂ ನಿಜ.

ಇವೆಲ್ಲದರ ನಡುವೆ ಗಂಭೀರವಾಗಿ ಚಿಂತಿಸಬೇಕಾದ ವಿಚಾರ ಎಂದರೆ, ಯಾವುದೇ ಸಿದ್ಧಾಂತದ ಕನ್ನಡಕವನ್ನೂ ಧರಿಸದೆ, ಯಾವುದೇ ಪಕ್ಷದ ಅಥವಾ ನಾಯಕನ ಪರವಾಗಿ ನಿಲ್ಲದೆ ಜವಾಬ್ದಾರಿಯುತ, ನಂಬಿಕಸ್ಥ ನಾಯಕತ್ವವೊಂದನ್ನು ಬಯಸುವ ಮತದಾರನೊಬ್ಬ, ರಾಜ್ಯದಲ್ಲಿ ನಡೆದ ರಾಜಕೀಯ ಘಟನಾವಳಿಗಳನ್ನೂ, ಅನೈತಿಕ ಬೆಳವಣಿಗೆಗಳನ್ನೂ ಚರ್ಚಿಸುತ್ತಾ, ಟೀಕಿಸುತ್ತಾ ಸೋತಿದ್ದಾನೆ. ಪ್ರಜಾಪ್ರಭುತ್ವದ ಕೊಲೆಯ ಪ್ರಕ್ರಿಯೆಯನ್ನು ವಿಮರ್ಶಿಸುವ ಗೋಜಿಗೂ ಹೋಗಲಿಲ್ಲ. ಯಾಕೆಂದರೆ ವಾಸ್ತವವೇನು, ಮುಖವಾಡವೇನು ಎಂಬುದೇ ಅರ್ಥವಾಗದ ಪರಿಸ್ಥಿತಿಯಲ್ಲಿ ಅವನಿದ್ದ. ಇದರಿಂದ, ಎಲ್ಲವನ್ನೂ ಸಂಶಯಾತ್ಮಕವಾಗಿ ನೋಡುವ ಸನ್ನಿವೇಶ ಎದುರಾಗಿದೆ. ಯಾಕೆಂದರೆ ನಾಯಕ ನಾಯಕನಾಗಿ ಉಳಿದಿಲ್ಲ, ಅವರೆಲ್ಲರ ಕಾಯಕವೂ ಅಧಿಕಾರವನ್ನು ತಮ್ಮದಾಗಿಸಿಕೊಳ್ಳುವ ಗುರಿಯತ್ತಲೇ ನೆಟ್ಟಿದೆ. ಈ ಹಿನ್ನೆಲೆಯಲ್ಲಿ, ಮತ್ತೆ ಅಕಿರ ಕುರೋಸಾವ ಅವರ ಸತ್ಯದ ಸತ್ಯಾಸತ್ಯತೆ ಮುನ್ನೆಲೆಗೆ ಬರುತ್ತಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)