ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಈಗಿನ ತಲೆಮಾರಿಗೆ ಹೋರಾಟದ ಬೆಳಕು

ಅಂಬೇಡ್ಕರ್‌ ವಿಚಾರದಲ್ಲಿ ಭಾವನಾತ್ಮಕತೆಗಿಂತ ಅರಿವು ಬೇಕಾಗಿದೆ
Last Updated 6 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

‘ಅಂದು ಮುಂಜಾನೆ ಪತ್ರಿಕೆಯಲ್ಲಿನ ಸುದ್ದಿಯನ್ನು ಓದಿ, ನನ್ನ ಕಣ್ಣಾಲಿಗಳು ತುಂಬಿ ಬಂದಿದ್ದವು. ದೇಹ ಕಂಪಿಸಲು ಆರಂಭಿಸಿತು. ಇದನ್ನು ಕಂಡು ನನ್ನ ಕುಟುಂಬ ಅತಂಕಕ್ಕೆ ಒಳಗಾಯಿತು. ‘ಬಾಬಾ ಸಾಹೇಬರು ನಮ್ಮನ್ನು ಬಿಟ್ಟು ಹೋಗಿಬಿಟ್ಟರು’ ಎಂದಷ್ಟೇ ನಾನು ಹೇಳಿದ ನೆನಪು. ಅದನ್ನು ಕೇಳಿ ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿಹೋಯಿತು’.

‘ಲಗುಬಗೆಯಿಂದ ನನ್ನ ಕಚೇರಿಗೆ ತೆರಳಿ, ರಜಾ ಚೀಟಿಯನ್ನು ಮೇಲಧಿಕಾರಿಗೆ ಕೊಟ್ಟೆ. ಅದನ್ನು ಓದಿದ ಅವರು ‘ಡಾ. ಅಂಬೇಡ್ಕರ್ ಒಬ್ಬ ರಾಜಕಾರಣಿ, ನೀವು ಸರ್ಕಾರಿ ನೌಕರ. ಹಾಗಾಗಿ ಅವರು ಮರಣ ಹೊಂದಿದ ಕಾರಣಕ್ಕೆ ರಜೆ ನೀಡಿ ಎಂದು ಬರೆದಿದ್ದೀರ. ಇದನ್ನು ಬದಲಿಸಿ, ವೈಯಕ್ತಿಕ ಕಾರಣಕ್ಕೆ ಎಂದು ಬರೆದುಕೊಡಿ’ ಎಂದರು. ನಾನು ‘ಸಾರ್, ಅವರು ನನ್ನ ಕುಟುಂಬದ ಸದಸ್ಯರು...! ನೀವು ಏನಾದರೂ ಮಾಡಿಕೊಳ್ಳಿ’ ಎಂದಷ್ಟೇ ಹೇಳಿ ಅಂಬೇಡ್ಕರ್ ಅವರ ಪಾರ್ಥಿವ ಶರೀರವನ್ನು ಇರಿಸಿದ್ದ ರಾಜಭವನದ ಕಡೆ ಓಡತೊಡಗಿದೆ. ಬಾಂಬೆಯ ಎಲ್ಲಾ ಹಾದಿಗಳು ಕೇವಲ ರಾಜಭವನದ ಕಡೆಗೆ ಮುಖ ಮಾಡಿದಂತೆ, ಸಾವಿರಾರು ಜನ ಓಡಿಬರುತ್ತಿದ್ದರು. ಆ ಜನರ ದಂಡು ಕೇವಲ ಸಂಖ್ಯೆಯಾಗಿರದೆ ‘ಮಾನವೀಯತೆಯ ಸಮುದ್ರವೊಂದು ಉಕ್ಕಿಬರುತ್ತಿರುವಂತೆ ತೋರುತ್ತಿತ್ತು’.

1956ರ ಡಿ. 7, ಅಂದರೆ ಬಾಬಾ ಸಾಹೇಬರು ಮರಣ ಹೊಂದಿದ ಮರುದಿನ ತಮ್ಮ ಭಾವುಕ ಕ್ಷಣವನ್ನು ಮಹಾರಾಷ್ಟ್ರದ ಲೇಖಕ ದಯಾ ಪವಾರ್ ಅವರು ಬರೆದುಕೊಂಡ ಬಗೆ ಇದು. ಪ್ರಮುಖ ರಾಜಕೀಯ ವಿಶ್ಲೇಷಕರಲ್ಲಿ ಒಬ್ಬರಾದ ಕ್ರಿಸ್ಟಾಫ್‌ ಜ್ಯಾಫ್ರೆಲಟ್‌ ಅವರು ಈ ಸಂಗತಿಯನ್ನು ತಮ್ಮ ಕೃತಿ ‘ಡಾ. ಅಂಬೇಡ್ಕರ್‌ ಆ್ಯಂಡ್‌ ಅನ್‌ಟಚಬಿಲಿಟಿ’ಯಲ್ಲಿ ದಾಖಲಿಸಿದ್ದಾರೆ.

ಬಾಬಾ ಸಾಹೇಬರು ನಮ್ಮನ್ನು ತೊರೆದ ದಿನವನ್ನು ಇಂದು ನಾವು ‘ಮಹಾಪರಿನಿರ್ವಾಣ ದಿನ’ವನ್ನಾಗಿ ಆಚರಿಸುತ್ತಿದ್ದೇವೆ. ಈ ದಿನ ನಾವು ಯಾವ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳಬೇಕು ಎಂಬುದು ಬಹಳ ಮುಖ್ಯ ಪ್ರಶ್ನೆ. ಏಕೆಂದರೆ, ಈ ದೇಶದಲ್ಲಿ 1970ರ ತನಕ, ಸಮ-ಸಮಾಜಕ್ಕಾಗಿ ಹಗಲಿರುಳು ದುಡಿದ ಬಾಬಾ ಸಾಹೇಬರ ಬರಹ ಮತ್ತು ಭಾಷಣಗಳನ್ನು ಪ್ರಕಟಿಸಬೇಕು ಎಂಬ ಆಲೋಚನೆಯೇ ನಮ್ಮನ್ನು ಆಳುವವರಿಗೆ ಬಂದಿರಲಿಲ್ಲ. 2000ನೇ ಇಸವಿಯಲ್ಲಿ ಉಪೇಂದ್ರ ಬಕ್ಷಿ ಅವರು ‘ಧಾರ್ಮಿಕ ಮತ್ತು ರಾಜಕೀಯ ಸಂಘಟನೆಗಳ ಸ್ಥಳೀಯ ನಾಯಕರ ಕುರಿತು ಬಂದಿರುವ ಸಾಹಿತ್ಯಕ್ಕೆ ಹೋಲಿಸಿದರೆ, ಸಾಹಿತ್ಯದಲ್ಲಿ ಇಂದಿಗೂ ಅಂಬೇಡ್ಕರ್ ಮರೆತುಹೋದ ವ್ಯಕ್ತಿತ್ವವಾಗಿಯೇ ಉಳಿದಿದ್ದಾರೆ’ ಎಂಬ ಸಂಗತಿಯನ್ನು ದಾಖಲಿಸುತ್ತಾರೆ.

ಈ ದೇಶದ ಬೌದ್ಧಿಕ ರಾಜಕಾರಣವು ಮುಖ್ಯವಾಹಿನಿಯ ಚರ್ಚೆಗಳಿಂದ ಬಾಬಾ ಸಾಹೇಬರನ್ನು ಬಹುದಿನಗಳ ಕಾಲ ದೂರ ಇಟ್ಟಿದ್ದರೂ ದಯಾ ಪವಾರ್ ಅವರಂತಹ ಲಕ್ಷ ಲಕ್ಷ ಸಾಮಾನ್ಯ ಜನ ಅಂಬೇಡ್ಕರ್ ಎಂಬ ಚಳವಳಿಯನ್ನು ತಮ್ಮ ಎದೆಯಲ್ಲಿ ಹೊತ್ತು ಬೆಳೆಸಿದ್ದಾರೆ ಮತ್ತು ತಾವೂ ಬೆಳೆದಿದ್ದಾರೆ.

ಬಾಬಾ ಸಾಹೇಬರು ರೂಪಿಸಿದ ಸಾಮಾಜಿಕ ಅರಿವು ಎಷ್ಟು ಪ್ರಖರವಾಗಿತ್ತು ಎಂದರೆ, ಅದು 1980ರ ದಶಕದ ನಂತರದ ದೇಶದ ರಾಜಕೀಯದ ದಿಕ್ಕನ್ನೇ ಬದಲಿಸಿತ್ತು. ಸಾಮಾಜಿಕ ಹೋರಾಟಗಳಿಗೆ ಹೊಸ ದೃಷ್ಟಿಕೋನವನ್ನು ಒದಗಿಸಿಬಿಟ್ಟಿತ್ತು. ಈ ಎಲ್ಲಾ ಬೆಳವಣಿಗೆಗಳ ಪ್ರಭಾವದಿಂದ, ಇಂದು ಅಂಬೇಡ್ಕರ್ ಅವರನ್ನು ನಿರ್ಲಕ್ಷಿಸಿ ಯಾವ ರಾಜಕೀಯ ಪಕ್ಷವೂ ದೂರ ಉಳಿಯಲಾರದ ಸ್ಥಿತಿ ಸೃಷ್ಟಿಯಾಗಿ ಹೋಗಿದೆ.

ಇವೆಲ್ಲದರ ಪರಿಣಾಮವಾಗಿ, ಇಂದು ಬಾಬಾ ಸಾಹೇಬರು ಮುಂಚೂಣಿ ಕಲಾಪ್ರಕಾರಗಳಾದ ಸಿನಿಮಾ, ಧಾರಾವಾಹಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಕುರಿತು ಭಾವನಾತ್ಮಕ ಪ್ರತಿಮೆಯೊಂದನ್ನು ಕಟ್ಟುವ ಪ್ರಕ್ರಿಯೆ ಸದ್ದಿಲ್ಲದೇ ನಮ್ಮ ನಡುವೆ ನಡೆಯುತ್ತಿದೆ. ಆದರೆ ವರ್ತಮಾನದ ತಲೆಮಾರಿಗೆ ಬೇಕಿರುವುದು ರಾಜಕಾರಣ ಸೃಷ್ಟಿಸಿಕೊಳ್ಳುತ್ತಿರುವ ಅಂಬೇಡ್ಕರ್ ಪ್ರತಿಮೆ ಮಾತ್ರವಲ್ಲ...!

ಬದಲಾಗಿ, ಅಸ್ಪೃಶ್ಯತೆಯ ನೋವನ್ನು ಅನುಭವಿಸಿಯೂ ಅಂಜದೆ ವಿದೇಶಗಳಲ್ಲಿ ವ್ಯಾಸಂಗ ಮಾಡಿದ ಮಹತ್ವದ ಆರ್ಥಿಕ, ರಾಜಕೀಯ ಚಿಂತಕ, ಕೆರೆ ನೀರಿಗಾಗಿ, ದೇವಸ್ಥಾನದ ಪ್ರವೇಶಕ್ಕಾಗಿ ಹೋರಾಡಿದ ಸಾಮಾಜಿಕ ಚಳವಳಿಗಾರ, ಸಂವಿಧಾನ ಕರ್ತೃ, ಮಹಿಳೆಯರ ಹಕ್ಕಿಗಾಗಿ ಮಂತ್ರಿ ಸ್ಥಾನವನ್ನೇ ತ್ಯಜಿಸಿದ ಸ್ತ್ರೀವಾದಿ ಅಂಬೇಡ್ಕರ್ ಎಂಬುದನ್ನು ನಾವು ಗುರುತಿಸಿಕೊಳ್ಳಬೇಕಿದೆ.

ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ವರದಿಯಂತೆ, 2018ಕ್ಕೆ ಹೋಲಿಸಿದರೆ 2019ರಲ್ಲಿ ಪರಿಶಿಷ್ಟ ಜಾತಿಗಳ ಮೇಲಿನ ದೌರ್ಜನ್ಯದ ಪ್ರಮಾಣ ಶೇ 7 ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯದ ಪ್ರಮಾಣ ಶೇ 26ರಷ್ಟು ಏರಿಕೆಯಾಗಿದೆ. ದಿನವೊಂದಕ್ಕೆ ಸರಾಸರಿ 88 ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ ಮತ್ತು ಆ ಪೈಕಿ ಶೇ 11ರಷ್ಟು ದಲಿತ ಹೆಣ್ಣುಮಕ್ಕಳ ಮೇಲೆ ನಡೆದವಾಗಿವೆ ಎಂಬ ಆಘಾತಕಾರಿ ಸಂಗತಿಗೆ ಕಿವುಡಾಗಿದ್ದೇವೆ.

ವರ್ತಮಾನದ ‘ಭಾವನಾತ್ಮಕ ಅಂಬೇಡ್ಕರ್’ ಜಾಗದಲ್ಲಿ ಅರಿವಿನ ಅಂಬೇಡ್ಕರ್, ಸಾಮಾಜಿಕ ಚಳವಳಿಗಾರ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುವುದು ಸಮರ್ಥ ಮಾರ್ಗ ಅನ್ನಿಸುತ್ತಿದೆ. ಏಕೆಂದರೆ ಈ ದೇಶದ ಜಾತಿ ಮತ್ತು ಲಿಂಗಾಧಾರಿತ ಶೋಷಿತರ ಸಮಸ್ಯೆ ‘ಕೇವಲ ಹಸಿವಿನದ್ದಲ್ಲ, ಅಪಮಾನದ್ದು ಕೂಡಾ ಆಗಿದೆ’. ಅದನ್ನು ಮೀರಲು ಅಂಬೇಡ್ಕರ್ ಹೋರಾಟವೇ ಬೆಳಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT