ಸೋಮವಾರ, ಏಪ್ರಿಲ್ 19, 2021
23 °C
ಆರೋಗ್ಯದ ಬಗೆಗಿನ ಸೂಕ್ತ ನಿರ್ಧಾರಗಳನ್ನು ಆತ್ಮಸಾಕ್ಷಿ ಹಾಗೂ ಜೀವನಶ್ರದ್ಧೆಯಿಂದ ತೆಗೆದುಕೊಳ್ಳಬೇಕಾದ ತುರ್ತಿನಲ್ಲಿ ನಾವಿದ್ದೇವೆ

ಸಂಗತ: ಕಂಡಿರಾ... ಜೀವನಶ್ರದ್ಧೆ ಇರುವವರ?

ಡಾ. ಕೆ.ಎಸ್.ಪವಿತ್ರ Updated:

ಅಕ್ಷರ ಗಾತ್ರ : | |

Prajavani

ಕೋವಿಡ್ ಬಿಕ್ಕಟ್ಟಿನ ನಡುವೆಯೇ ಮತ್ತೊಂದು ವಿಶ್ವ ಆರೋಗ್ಯ ದಿನ (ಏ. 7) ಬಂದಿದೆ. 1948ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾದ ನೆನಪಿಗೆಂದು ಈ ದಿನ. ‘ಎಲ್ಲರಿಗೂ ನ್ಯಾಯವನ್ನು ನೀಡುವ, ಆರೋಗ್ಯಕರ ಜಗತ್ತನ್ನು ನಿರ್ಮಿಸೋಣ’ ಎಂಬುದು ಈ ಬಾರಿಯ ಧ್ಯೇಯವಾಕ್ಯ. ಕೋವಿಡ್ ಸೋಂಕಿನ ಸಂಕಷ್ಟ ‘ಕೆಲವರು ಮಾತ್ರ ಜಗತ್ತಿನಲ್ಲಿ ಆರೋಗ್ಯಕರ ಬದುಕು ನಡೆಸಲು, ಆರೋಗ್ಯ ಸೇವೆಗಳನ್ನು ಸುಲಭವಾಗಿ ಪಡೆಯಲು ತಮ್ಮ ಹಿನ್ನೆಲೆಯಿಂದ ಸಾಧ್ಯವಾಗಿದೆ’ ಎಂಬುದನ್ನು ಎತ್ತಿ ತೋರಿಸಿರುವುದೇ ಈ ಧ್ಯೇಯದ ಹಿಂದಿನ ಪ್ರಮುಖ ಆಶಯ.

ನಮ್ಮ ಆಯುಷ್ಯ ‘ಎಷ್ಟು ದೀರ್ಘ’ ಎಂಬುದನ್ನು ನಮ್ಮ ವಂಶವಾಹಿಗಳು ಶೇ 10ರಷ್ಟು ಮಾತ್ರ ನಿರ್ಧರಿಸುತ್ತವೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಉಳಿದ ಶೇ 90ರಷ್ಟನ್ನು ನಿರ್ಧರಿಸುವುದು ನಮ್ಮ ಜೀವನಶೈಲಿಯೇ. ಯಾವುದು ನಮ್ಮನ್ನು ಆರೋಗ್ಯವಾಗಿ ಇರಿಸುತ್ತದೆ ಎಂಬ ಬಗ್ಗೆ ನಮಗಿರುವ ಗೊಂದಲ ಈ ಕೋವಿಡ್ ಸಮಯದಲ್ಲಂತೂ ಭಯಂಕರವಾಗಿ ಬಿಟ್ಟಿದೆ! ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು, ವ್ಯಾಕ್ಸಿನ್ ತೆಗೆದುಕೊಳ್ಳಬೇಕೆ, ಬೇಡವೆ, ಜ್ವರ ಬಂದರೆ ಡಾಕ್ಟರ್‌ ಹತ್ತಿರ ಹೋಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದೇ ಅಥವಾ ಮನೆಯಲ್ಲೇ ಇದ್ದು ಕಾದು ನೋಡುವುದೆ ಸೂಕ್ತವೇ ಇತ್ಯಾದಿ. ಆರೋಗ್ಯದ ಬಗೆಗಿನ ಜನರ ಗೊಂದಲ ಆಡಳಿತ ವ್ಯವಸ್ಥೆಯನ್ನೂ ಬಿಟ್ಟಿಲ್ಲ ಎನ್ನುವುದು ಸ್ಪಷ್ಟವಾಗಿಯೇ ಇದೆ. ಸಾಮಾಜಿಕವಾಗಿ ಬೆರೆಯುವ ಬಗೆಗಿನ ನಿರ್ಧಾರ ಗಳನ್ನು ಆಡಳಿತ ವ್ಯವಸ್ಥೆ ದಿನಕ್ಕೊಮ್ಮೆ ಬದಲು ಮಾಡುತ್ತಿರುವುದೇ ಈ ಗೊಂದಲದಿಂದ.

ಆರೋಗ್ಯವೆಂದರೆ ‘ದೀರ್ಘಾಯುಷ್ಯ’ ಎಂಬ ನಮ್ಮ ಹಿಂದಿನ ಕಲ್ಪನೆ ನಿಧಾನವಾಗಿ ಆರೋಗ್ಯ ಎಂದರೆ ಜೀವನದ ಗುಣಮಟ್ಟ ಎಂಬುದರೆಡೆಗೆ ತಿರುಗುತ್ತಿದೆ. ನಮ್ಮ ಜೀವನಶೈಲಿ ಸರಿಯಾಗಿದ್ದೇ ಆದರೆ, ಕ್ಯಾನ್ಸರ್, ಮಧುಮೇಹ, ದೀರ್ಘಕಾಲಿಕ ಕಾಯಿಲೆಗಳು, ಹೃದಯ ಸಂಬಂಧಿ ಕಾಯಿಲೆಗಳಿರದ ಆರಾಮದ ಜೀವನ ನಮ್ಮದಾಗಬಲ್ಲದು. ಆದರೆ ಈ ಜೀವನಶೈಲಿ ಯಾವುದು ಎಂಬುದನ್ನು ಕಂಡು ಹಿಡಿಯುವುದು, ಅದನ್ನು ಅಳವಡಿಸಿಕೊಳ್ಳುವುದು ಹೇಗೆ?!

ನೂರು ವರ್ಷಕ್ಕೂ ಮೀರಿ ಜೀವಿಸಿರುವ ಜನರ ‘ಗುಂಪು’ಗಳು ಅಲ್ಲಲ್ಲಿ ಜಗತ್ತಿನಲ್ಲಿ ಕಾಣುತ್ತವೆ. ಇಟಲಿಯ ಕರಾವಳಿ ತೀರದಲ್ಲಿರುವ ಸಾರ್ಡಿನಿಯಾ ಎಂಬ ದ್ವೀಪದಲ್ಲಿ 102 ವರ್ಷದವರು ಬೈಕ್ ಓಡಿಸುತ್ತಾರೆ, ಮರಗೆಲಸ ಮಾಡುತ್ತಾರೆ, ತಮಗಿಂತ 60 ವರ್ಷ ಕಡಿಮೆ ವಯಸ್ಸಿನವರನ್ನು ಸ್ಪರ್ಧೆಯಲ್ಲಿ ಸೋಲಿಸುತ್ತಾರೆ. ಆಹಾರ-ನಿಯಮಿತ ವ್ಯಾಯಾಮಗಳೇ ಅವರ ದೀರ್ಘಾಯುಷ್ಯದ ಗುಟ್ಟು ಎಂದು ಮಾಮೂಲಾಗಿ ನಾವಂದುಕೊಳ್ಳಬಹುದು. ಆದರೆ ನಿಜವಾದ ಮಾತು ಅದಷ್ಟೇ ಅಲ್ಲ. ಅವರ ಸಮಾಜ ರೂಪುಗೊಂಡಿರುವ ಬಗೆ. ಸಾರ್ಡಿನಿಯಾದ ಜನ ವಯಸ್ಸು ಹೆಚ್ಚಾಗಿರುವುದನ್ನು, ವಯಸ್ಸಾದರೂ ಆರೋಗ್ಯವಂತರಾಗಿ ಜೀವಿಸಿರುವುದನ್ನು ಸಂಭ್ರಮಿಸು ತ್ತಾರೆ.

ಇಂಥದ್ದೇ ಇನ್ನೊಂದು ಸಮುದಾಯ ಟೋಕಿಯೊ ದಿಂದ 800 ಮೈಲುಗಳ ದಕ್ಷಿಣಕ್ಕೆ ಒಕಿನಾವಾ ಎಂಬ ಸ್ಥಳದಲ್ಲಿದೆ. ಸುಮಾರು 161 ಪುಟ್ಟ ದ್ವೀಪಗಳಿರುವ ಈ ಪ್ರದೇಶದ ಒಂದು ದ್ವೀಪದಲ್ಲಿ ಜಗತ್ತಿನ ಅತ್ಯಂತ ಹಿರಿಯ ಮಹಿಳೆಯರಿದ್ದಾರೆ. ಅಸಮರ್ಥತೆ ರಹಿತ, ಆರೋಗ್ಯವಂತ ದೀರ್ಘಾಯುಷ್ಯದ ಹಿರಿಮೆ ಅವರದು. ನಮಗೆಲ್ಲರಿಗೂ ಬೇಕಾದದ್ದು ಅವರ ಬಳಿ ಇದೆ! ಮತ್ತೆ ಇಲ್ಲಿಯೂ ಅವರ ಆಹಾರ ಪದ್ಧತಿ ಸರಳ, ಹೊಟ್ಟೆ ಶೇ 80ರಷ್ಟು ತುಂಬಿದೆ ಎಂದಾಕ್ಷಣ ನಿಲ್ಲಿಸುವ ಅಭ್ಯಾಸ, ಚಿಕ್ಕ ಚಿಕ್ಕ ತಟ್ಟೆಗಳಲ್ಲಿ, ಹಲವು ಬಾರಿ ಹೆಚ್ಚು ಬಣ್ಣ ಬಣ್ಣದ ತರಕಾರಿಗಳಿಂದ ಮಾಡಿದ ಖಾದ್ಯ ತಿನ್ನುವ ರೂಢಿ. ಆದರೆ ಅವರ ಆಯುಷ್ಯ-ಆರೋಗ್ಯಗಳಿಗೆ ಕಾರಣ ಅದಷ್ಟೇ ಅಲ್ಲ.

ಪ್ರತ್ಯೇಕಿಸುವಿಕೆ ಹಲವು ರೀತಿಗಳಲ್ಲಿ ನಮ್ಮನ್ನು ಕೊಲ್ಲುತ್ತದೆ ಎಂಬುದು ನಮಗೀಗ ಖಂಡಿತವಾಗಿ ಗೊತ್ತು. ಒಕಿನಾವಾದಲ್ಲಿ ಹುಟ್ಟಿದರೆ ನಿಮಗೆ ಮಾವೋಯ್ ಎಂಬ ಸಾಮಾಜಿಕ ವ್ಯವಸ್ಥೆಯ ಮೂಲಕ 6 ಜನ ಸ್ನೇಹಿತ, ಸ್ನೇಹಿತೆಯರು ಗ್ಯಾರಂಟಿ. ಅವರೊಡನೆ ಸುಖ-ದುಃಖಗಳನ್ನು ಹಂಚಿಕೊಳ್ಳಲೇಬೇಕು.

ಎಲ್ಸ್‌ವರ್ತ್ ವೇರ್‍ಹ್ಯಾಮ್ ಎಂಬ 97 ವರ್ಷದ ಕೋಟ್ಯಧೀಶ ತೋಟಕ್ಕೆ ಬೇಲಿ ಹಾಕಿಸಲು ಒಬ್ಬ ಕಂಟ್ರಾಕ್ಟರ್ 6,000 ಡಾಲರ್ ಕೇಳಿದ್ದಕ್ಕೆ ‘ಅಷ್ಟು ದುಡ್ಡಿಗೆ ನಾನೇ ಮಾಡುತ್ತಿದ್ದೆನಲ್ಲ’ ಎಂದು ಮುಂದಿನ ಮೂರು ದಿನಗಳ ಕಾಲ ಗುದ್ದಲಿ-ಪಿಕಾಸಿ ಹಿಡಿದು ಕೆಲಸ ಮಾಡಿದನಂತೆ. ನಾಲ್ಕನೇ ದಿನ ಆಪರೇಷನ್ ಥಿಯೇಟರ್‌ಗೆ ಧಾವಿಸಿದನಂತೆ. ಪೇಷೆಂಟ್ ಆಗಿಯಲ್ಲ, ತೆರೆದ ಹೃದಯದ ಶಸ್ತ್ರಸಚಿಕಿತ್ಸೆ ಮಾಡುವ ವೈದ್ಯನಾಗಿ! 97ರ ವಯಸ್ಸಿನಲ್ಲಿ ಪ್ರತೀ ತಿಂಗಳು ಸುಮಾರು 20 ತೆರೆದ ಹೃದಯದ ಶಸ್ತ್ರಚಿಕಿತ್ಸೆಗಳನ್ನು ಆತ ಮಾಡುತ್ತಾನೆ. ನಮ್ಮ ಭಾರತದಲ್ಲಿಯೂ ಇಂತಹ ಜೀವನ ಶ್ರದ್ಧೆಯುಳ್ಳವರು ಇದ್ದಾರೆ. ಅವರ ಜೀವನಶೈಲಿಯನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಿದರೆ ಆ ಶೈಲಿಯನ್ನು ನಿರ್ದೇಶಿಸುವುದು ಅವರ ಜೀವನಶ್ರದ್ಧೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.

ವಿಶ್ವ ಆತ್ಮಸಾಕ್ಷಿಯ ದಿನ ಮುಗಿದ ಎರಡೇ ದಿನಗಳಿಗೆ ವಿಶ್ವ ಆರೋಗ್ಯ ದಿನವಿರುವುದು ಕಾಕತಾಳೀಯವೇ ಇರಬಹುದಾದರೂ ಅವೆರಡಕ್ಕೂ ಸಂಬಂಧ ಕಲ್ಪಿಸಬಹುದಾಗಿದೆ. ಆರೋಗ್ಯದ ಬಗೆಗಿನ ನಿರ್ಧಾರಗಳನ್ನು ಆತ್ಮಸಾಕ್ಷಿ- ಜೀವನಶ್ರದ್ಧೆಗಳಿಂದ ತೆಗೆದುಕೊಳ್ಳಬೇಕಾದ ತುರ್ತಿನಲ್ಲಿ ನಾವಿದ್ದೇವೆ. ಸರಿಯಾದ ಅರಿವು ಮಾತ್ರ ಮುನ್ನಡೆಸಬಲ್ಲದು. ಆದರೆ ಅರಿವಿನ ಸಲುವಾಗಿ ನಾವು ಅವಲಂಬಿಸಬಹುದಾದ ಮೂಲಗಳನ್ನು ವಿಜ್ಞಾನಿಗಳು-ವೈದ್ಯರು-ಆಡಳಿತ ವ್ಯವಸ್ಥೆಗಳು ಒದಗಿಸಿಕೊಡಬೇಕಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು