‘ಸ್ವಾತಂತ್ರ್ಯ’ ಎಂದಾಗಲೆಲ್ಲ ಆ ವೃತ್ತಾಂತ ನೆನಪಾಗುತ್ತದೆ. ಒಂದು ಹಾಸ್ಟೆಲಿನಲ್ಲಿ ವಾರ್ಡನ್ ‘ವಿದ್ಯಾರ್ಥಿಗಳೇ, ನಾಳೆಯಿಂದ ನಿಮ್ಮ ನಿಮ್ಮ ಕೊಠಡಿ ನಿರ್ವಹಿಸಲು ನೀವು ಸ್ವತಂತ್ರರು. ನನ್ನ ನಿಗಾ, ತಪಾಸಣೆ ಇರದು’ ಎನ್ನುತ್ತಾರೆ. ಮೂರು ದಿನಗಳ ಬಳಿಕ ಅವರು ಗಮನಿಸಿದ್ದು ನಿರೀಕ್ಷೆಗೆ ವ್ಯತಿರಿಕ್ತವಾಗಿತ್ತು. ಎಲ್ಲರನ್ನೂ ಕರೆದು ನೋವಿನಿಂದ ಹೇಳಿದ್ದರು: ‘ಮಕ್ಕಳೇ, ಸ್ವಚ್ಛತೆ ಕಾಪಾಡುವ ಮಾತು ಒತ್ತಟ್ಟಿಗಿರಲಿ, ನೀರು ಕೂಡ ಸಿಗುತ್ತಿಲ್ಲ ಅಂತ ದೂರುಗಳು ನಿಮ್ಮಿಂದಲೇ ಬಂದಿವೆ. ಪೊರಕೆಗಳು ಎಷ್ಟಿಟ್ಟರೂ ನಾಪತ್ತೆ. ಕೆಲವರದೋ ಅಕ್ಕಪಕ್ಕದವರು ಕೇಳುವಷ್ಟು ಜೋರಾದ ಮೊಬೈಲ್ ಸೌಂಡ್. ನೀವು ಆಲೋಚಿಸಿ ವರ್ತಿಸಬೇಕಲ್ಲವೆ?’ ಒಬ್ಬ ವ್ಯಕ್ತಿಯ ಸ್ವಾತಂತ್ರ್ಯ ಮತ್ತೊಬ್ಬರ ಸ್ವಾತಂತ್ರ್ಯವನ್ನು ಮಿತಗೊಳಿಸಿದರೆ ಆಗುವ ಎಡವಟ್ಟಿದು.
ನಮ್ಮ ಸ್ವಾತಂತ್ರ್ಯಕ್ಕೆ ಇತಿಮಿತಿಗಳಿವೆ. ಸ್ವಾತಂತ್ರ್ಯದ ಅನುಭೂತಿ ಸ್ವಯಂ ನಿಯಂತ್ರಣದಿಂದಲೇ ಆರಂಭ. ನಿಜ, ಸ್ವಾತಂತ್ರ್ಯ ಎಂದರೆ ಸ್ವಯಂ ನಿಯಂತ್ರಣ, ಸ್ವಯಂ ನಿರ್ವಹಣೆ. ಒಂದು ದೇಶದ ಸ್ವಾತಂತ್ರ್ಯಕ್ಕೆ ಸ್ವಾವಲಂಬನೆಯೇ ರಾಜಮಾರ್ಗ. ಸ್ವಾತಂತ್ರ್ಯ ಎಂದರೆ ಬಿಡುಬೀಸಾಗಿ ವರ್ತಿಸಲು ಸಿಕ್ಕ ಪರವಾನಗಿ ಅಂತ ಭಾವಿಸಬಾರದು. ಅದರೊಳಗೆ ಜವಾಬ್ದಾರಿಯೂ ಸೇರಿಕೊಂಡಿರುತ್ತದೆ. ಅದು ವಹಿಸುವ ಹೊಣೆಗಾರಿಕೆಯೇ ಒಂದು ಹೆಮ್ಮೆಯ ಉಡುಗೊರೆ. ಯಾವುದೇ ದೇಶದ ಅಸ್ಮಿತೆ ಸ್ಥಾಪಿತವಾಗುವುದು ಭೌಗೋಳಿಕ ವಿವರದಿಂದಲ್ಲ, ಅದರ ಪ್ರಜೆಗಳಿಂದ. ಹಾಗಾಗಿ ದೇಶದ ಸ್ವಾತಂತ್ರ್ಯ ಎಂದರೆ ಅದು ಅಲ್ಲಿನ ಪ್ರಜೆಗಳ ಸ್ವಾತಂತ್ರ್ಯ.
ಸರ್ವರಿಗೂ ಸಮಪಾಲು, ಸಮಬಾಳು ಪರಿಕಲ್ಪನೆ ನಮ್ಮದು. ಇದರ ಸಾಕಾರಕ್ಕೆ ಭಾರತ ‘ಬಡವರಿರುವ ಶ್ರೀಮಂತ ದೇಶ’ ಎಂಬ ಅಪಖ್ಯಾತಿಯಿಂದ ಮುಕ್ತವಾಗಬೇಕಿದೆ. ಇದಕ್ಕೆ ಒಂದೇ ಉಪಾಯ ಸರ್ವರೂ ಶಾರೀರಿಕ ದುಡಿಮೆಯಲ್ಲಿ ತೊಡಗಿಕೊಳ್ಳುವುದು. ಮಕ್ಕಳ ಶಿಕ್ಷಣ ಕ್ರಮದಲ್ಲಿ ಕುಂಬಾರಿಕೆ, ಮರಗೆಲಸ, ಕಟ್ಟಡ ಕೆಲಸ, ಟೈಲರಿಂಗ್, ಬುಕ್ ಬೈಂಡಿಂಗ್... ಹೀಗೆ ಒಂದಲ್ಲೊಂದು ಬಗೆಯ ಕಲಿಕೆ ಕಡ್ಡಾಯವಾಗಿರಬೇಕೆಂದು ಮಹಾತ್ಮ ಗಾಂಧಿ ಹಂಬಲಿಸಿದರು. ಇದರಿಂದ ವಿದ್ಯಾರ್ಥಿ ದೆಸೆಯಲ್ಲೇ ಮಕ್ಕಳಿಗೆ ದುಡಿಮೆ ಮತ್ತು ಗಳಿಕೆಯ ಮಹತ್ವದ ಬಗೆಗೆ ತಿಳಿವಳಿಕೆ ಉಂಟಾ ಗುವುದು. ಅವರಿಗೆ ಕಿಂಚಿತ್ತಾದರೂ ಹಣಕಾಸಿನ ಆಯವ್ಯಯದ ಅರಿವು ಮೂಡುವುದು.
ಮನುಷ್ಯನಿಗೆ ಮನುಷ್ಯನೇ ಆಳಾಗುವುದು ವಿಪರ್ಯಾಸ. ಇದನ್ನೇ ಬಸವಣ್ಣನವರು ಮಾರ್ಮಿಕವಾಗಿ ‘ಎನಗಿಂತ ಕಿರಿಯರಿಲ್ಲ’ ಎಂದಿದ್ದು. ಯಾರೊಬ್ಬರೂ ಇನ್ನೊಬ್ಬರಿಗೆ ಯಜಮಾನರಾಗುವಷ್ಟು ದೊಡ್ಡವರಲ್ಲ.
ಪ್ರಾಜ್ಞರ ಧೀಮಂತಿಕೆ ಸರ್ವರ ಧೀಮಂತಿಕೆಯಾಗಬೇಕು, ದೇಶ ಸರ್ವರ ದೇಶವಾಗಬೇಕು. ಇದುವೆ ಪ್ರಜಾಸತ್ತೆಯ ಸ್ವಾತಂತ್ರ್ಯ. ಶಾಲೆಗೆ ಮಕ್ಕಳು ದಿನನಿತ್ಯ ಏಳೆಂಟು ಕಿ.ಮೀ. ಹೋಗಿ ಬರುವ, ಚಿಕಿತ್ಸೆಗೆ ರೋಗಿಯನ್ನು ದುಪ್ಪಟ್ಟಾದಲ್ಲಿ ಸುತ್ತಿ ಹೊತ್ತೊಯ್ಯುವ, ಆಸ್ಪತ್ರೆಯಲ್ಲಿ ಒಂದೇ ದೂಡುಗಾಡಿಯಲ್ಲಿ ನಾಲ್ಕೈದು ಮಂದಿ ಗರ್ಭಿಣಿಯರನ್ನು ಹೆರಿಗೆ ಕೊಠಡಿಗೆ ಸ್ಥಳಾಂತರಿಸುವ, ಬೈಕಿನಲ್ಲಿ ಶವ ಸಾಗಿಸುವ ಸಂದರ್ಭಗಳು ವರದಿಯಾಗುತ್ತಿರುತ್ತವೆ. ಕರುಳು ಹಿಂಡುವ ಚಿತ್ರಣಗಳಿವು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರವನ್ನು ಹಲವು ಮಡಿಗೊಳಿಸಲು ಇಂತಹ ನ್ಯೂನತೆಗಳು ಹಂತ ಹಂತವಾಗಿಯಾದರೂ ನಿರ್ಮೂಲವಾಗಬೇಕಿದೆ. ಇಲ್ಲವಾದರೆ ‘75’ ಕೇವಲ ಒಂದು ಕ್ರಮಸಂಖ್ಯೆಯಾಗುತ್ತದೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳು ತಮ್ಮ ನೋವು, ಅನನುಕೂಲಗಳನ್ನು ಪ್ರಭುತ್ವದ ಗಮನಕ್ಕೆ ತರಲಡ್ಡಿಯಿಲ್ಲ. ಆದರೆ ಆ ವಿಧಾನ ಹಿಂಸಾರೂಪ ತಳೆದರೆ ದೇಶಕ್ಕೆ ಬಹುಮುಖ ಹಿನ್ನಡೆ ಕಟ್ಟಿಟ್ಟ ಬುತ್ತಿ. ನಮ್ಮದು ಒಕ್ಕೂಟ ವ್ಯವಸ್ಥೆ. ನಮ್ಮ ಸಾಮಾಜಿಕ ಜವಾಬ್ದಾರಿ ನಿರ್ವಹಿಸಲು ರಾಜ್ಯ, ಕೇಂದ್ರದಲ್ಲಿ ಯಾವ ಪಕ್ಷದ ನೇತೃತ್ವದ ಸರ್ಕಾರ ಇದೆ ಎಂಬುದು ಮುಖ್ಯವಲ್ಲ.
ಸ್ಥಾವರಗಳಿಗಿಂತ ಜಂಗಮಗಳಾದ ಗ್ರಂಥಾಲಯಗಳು, ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ನೆಲೆಗೊಳ್ಳುವುದು ಯುಕ್ತ. ಮಳೆ ಬರಲು ಯಜ್ಞ, ಮಳೆ ಹೆಚ್ಚಾಯಿತೆಂದೂ ಯಜ್ಞ, ಚಿತ್ರ ವಿಚಿತ್ರ ಆಚರಣೆಗಳು!
ಆರಾಧನೆ, ಪುನಸ್ಕಾರ ಅವರವರ ನಂಬಿಕೆ ಸರಿ. ಆದರೆ ಅವು ಸಾಂಕೇತಿಕವಾಗಿರಬೇಕು. ಪೂಜೆಯ ಹೆಸರಲ್ಲಿ ಪ್ರಾಣಿಬಲಿ, ಆಹಾರ ಮತ್ತು ಹಣ್ಣು ಹಂಪಲುಗಳ ಪೋಲು, ಸ್ವಹಿಂಸೆ, ವಸ್ತ್ರಗಳ ದಹನ ಸರ್ವತ್ರ ಅಸಮರ್ಥನೀಯ. ಮಳೆ ಇಲ್ಲ, ಬೆಳೆ ಬರಲಿಲ್ಲ, ಬೆಲೆ ಸಿಗಲಿಲ್ಲ ಎನ್ನುವುದೇನು? ಚೀಲಗಟ್ಟಲೆ ಇಡುಗಾಯಿ ಒಡೆಯುವುದೇನು? ಅತಿರೇಕವು ಸ್ವಾತಂತ್ರ್ಯದ ಅಕ್ಷಮ್ಯ ಅಣಕ. ಪ್ರಬುದ್ಧತೆಯೇ ನಮಗೆ ಸ್ವಾತಂತ್ರ್ಯದ ಸಂಪನ್ನ ಅನುಭೋಗವನ್ನು ಕಲಿಸುವುದು.
ನಮ್ಮ ಚರಾಚರ ಸಂಪತ್ತುಗಳ ಕುರಿತು ನಾವು ಕಡಿಮೆ ಯೋಚಿಸುವುದರಿಂದ ಅಹಮಿಕೆ ನೀಗುತ್ತದೆ. ವ್ಯಕ್ತಿಗತ ಆರ್ಥಿಕ ಸ್ವಾತಂತ್ರ್ಯ ನಾವು ಭಾವಿಸುವುದಕ್ಕಿಂತಲೂ ಸುಲಭವೆ. ನಾವು ಅಪ್ರಾಮಾಣಿಕರಾಗಬೇಕೆಂದಲ್ಲ, ಬದುಕನ್ನು ಸರಳಗೊಳಿಸಿಕೊಂಡರಾಯಿತು. ವ್ಯಕ್ತಿ ವ್ಯಕ್ತಿಯೂ ಸಾಲವ್ಯಸನದಿಂದ ಮುಕ್ತನಾದರೆ ಇಡೀ ರಾಷ್ಟ್ರಕ್ಕೆ ತಾನಾಗಿ ಆರ್ಥಿಕ ಸ್ವಾತಂತ್ರ್ಯ ಪ್ರಾಪ್ತವಾಗುವುದು. ಸಮಯವಿಲ್ಲ ಎನ್ನುವ ಆರೋಪವೇ ಒಂದು ವ್ಯಸನ. ಬದುಕಿನ ಶೈಲಿಯಲ್ಲಿ ಸಮಯದ ಸಮರ್ಥ ನಿರ್ವಹಣೆಯ ಕೌಶಲ ಮೆರೆಯಬೇಕಿದೆ. ನಮ್ಮ ರೂವಾರಿ ನಾವೇ. ನಮ್ಮನ್ನು ನಾವು ವಂಚಿಸಿಕೊಳ್ಳುವಷ್ಟು ಬೇರ್‍ಯಾರೂ ವಂಚಿಸಲಾರರು!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.