ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಪುಸ್ತಕ: ಕೈ ಸುಟ್ಟೀತು!

ಓದುಗರಿಲ್ಲ, ಪುಸ್ತಕ ಕೊಳ್ಳುವವರಿಲ್ಲ ಅನ್ನುವ ಕಳವಳ ವ್ಯಕ್ತವಾಗುವ ಈ ಹೊತ್ತಿನಲ್ಲಿ, ಪುಸ್ತಕದ ದುಬಾರಿ ಬೆಲೆ ಅದಕ್ಕೆ ಕುಮ್ಮಕ್ಕು ನೀಡುವಂತೆ ಆಗಬಾರದು
Last Updated 18 ಆಗಸ್ಟ್ 2022, 21:24 IST
ಅಕ್ಷರ ಗಾತ್ರ

ಇತ್ತೀಚೆಗೆ ಬಿಡುಗಡೆಯಾದ ಪುಸ್ತಕವೊಂದನ್ನುಖರೀದಿಸಲು ಹೋಗಿದ್ದ ಗೆಳೆಯನೊಬ್ಬ ಅಂಗಡಿಯಿಂದಲೇ ಫೋನ್ ಮಾಡಿ, ‘ಏನ್ ಗುರು, ಪ್ರತೀ ಪುಟದಲ್ಲಿ ದೊಡ್ಡ ಚಿತ್ರ, ಕೆಲವೇ ಸಾಲು ಅಷ್ಟೆ. ಪುಟ ಜಾಸ್ತಿ ಮಾಡಿ ಮುನ್ನೂರುಗಟ್ಟಲೆ ಬೆಲೆ ಇಟ್ಟರೆ ಹೇಗೆ ಕೊಳ್ಳೋದು? ದುಡ್ಡಿಗೇನು ಬೆಲೆ ಇಲ್ವ?’ ಅಂದ.

ಓದಲು ಪುಸ್ತಕ ಎತ್ತಿಕೊಳ್ಳುವ ಓದುಗ, ಈ ಪುಸ್ತಕದಿಂದ ಬರಹಗಾರನಿಗೆ ಎಷ್ಟು ದಕ್ಕಿದೆ, ಪ್ರಕಾಶಕ‌ನ ಲಾಭ ಎಷ್ಟು, ಮಾರಾಟಗಾರನ ಬಂಡವಾಳಕ್ಕೆ ಮೋಸವಾದೀತೇ ಎಂದೆಲ್ಲ ಯೋಚಿಸುವುದಿಲ್ಲ. ಅವನು ಪುಸ್ತಕದ ವಿಷಯವನ್ನು ನೋಡುತ್ತಾನೆ, ಜೊತೆಗೆ ಅದರ ಬೆಲೆಯನ್ನು! ತುಂಬಾ ದುಬಾರಿ ಎನಿಸಿದರೆ ಚೇಳು ಕಡಿದಂತೆ ಕೈಎಳೆದುಕೊಳ್ಳುತ್ತಾನೆ.

‘ಓದುಗನನ್ನು ಓದುಗ ದೊರೆ ಅಂತೀರಿ, ಓದುಗ ಪ್ರಭು ಅಂತೀರಿ. ಆದರೆ ದೊರೆ ಪುಸ್ತಕ ಕೊಳ್ಳಲಾಗ ದಷ್ಟು ದರ ಹೇರುವುದು ಸರಿಯೇ’ ಎಂದು ಲೇಖಕರೊಬ್ಬರನ್ನು ಕೇಳಿದೆ. ‘ಇಲ್ಲಿ ಯಾವ ಸಾಹಿತಿ ಬರವಣಿಗೆಯಿಂದ ಬಂದ ದುಡ್ಡಿನಲ್ಲಿ ಜೀವಿಸುತ್ತಿದ್ದಾನೆ ಹೇಳಿ?’ ಎಂದು ಮರುಪ್ರಶ್ನೆ ಹಾಕಿದರು. ‘ನಮಗೆ‌ ಕೊಡುವುದು ಗೌರವ ಸಂಭಾವನೆ ಅಷ್ಟೆ, ವೇತನ ಅಲ್ಲ’ ಎಂದು ಮಾರ್ಮಿಕವಾಗಿ ಹೇಳಿದರು.

ಪ್ರಕಾಶಕರನ್ನು ಕೇಳಿ ನೋಡಿದೆ. ‘ಸರ್, ಲೇಖಕರಿಗೆ ಕೊಡುವ ಗೌರವಧನದಲ್ಲೂ 18 ಪರ್ಸೆಂಟ್‌ ಜಿಎಸ್‌ಟಿ ಇದೆ. ಅಲ್ಲದೆ ಪ್ರತ್ಯೇಕ ತೆರಿಗೆ ಬೇರೆ. ಮುದ್ರಣ ಪರಿಕರಗಳ ಮೇಲೆ ಮತ್ತಷ್ಟು ತೆರಿಗೆ ಹೇರಲಾಗಿದೆ. ಮಳಿಗೆ, ಸಾರಿಗೆ ಹೀಗೆ ಹತ್ತೆಂಟು ಖರ್ಚುಗಳಿವೆ. ನೆನಪಿರಲಿ ಸರ್, ಬಹುತೇಕ ಪ್ರಕಾಶಕರು ಪುಸ್ತಕ ಪ್ರಕಟಣೆಯನ್ನು ‘ಪುಸ್ತಕ ಸಂಸ್ಕೃತಿ’ ಹೆಸರಲ್ಲಿ ನೋಡುತ್ತಾರೆಯೇ ವಿನಾ ‘ಪುಸ್ತಕ ಉದ್ಯಮ’ವಾಗಿ ಮಾಡಿಕೊಂಡಿಲ್ಲ. ಅದು ಇನ್ನೂ ಕನ್ನಡದ ಪಾಲಿಗೆ ಒಂದು ಪುಣ್ಯ. ಎಷ್ಟೋ ಬಾರಿ ಹಾಕಿದ ಬಂಡವಾಳವೂ ಬರದೆ ಒದ್ದಾಡುವಂತಾಗುತ್ತೆ’ ಎಂದು ತಮ್ಮ ಸೋಲಿನ ಕಥೆ ಹೇಳಿದರು.

‘ಎಲ್ಲ ಪ್ರಕಾಶಕರು, ವಿತರಕರು ಮತ್ತು ಪುಸ್ತಕ ವ್ಯಾಪಾರಿಗಳು ಸಿರಿವಂತರಾಗಿರುತ್ತ, ಲೇಖಕರು ಮಾತ್ರ ಬಡವರಾಗಿದ್ದಾರೆ...’ ಎಂದು ಲೇಖಕ ಗಾರ್ಸಿಯ ಮಾರ್ಕ್ವೆಜ್‌ ಬರೆಯುತ್ತಾರೆ. ಲೇಖಕರು ಮಾತ್ರವಲ್ಲ ನಮ್ಮಲ್ಲಿ ಬಹುಪಾಲು ಓದುಗರು ಕೂಡ ಬಡವರೆ. ಓದು ಒಂದು ಅತೀ ಅಗತ್ಯವಲ್ಲದ್ದು ಎಂದು ಭಾವಿಸಿರುವ ಭಾರತದಂತಹ ದೇಶದಲ್ಲಿ ಪುಸ್ತಕದ ವ್ಯಾಪಾರ ಅತಿ ದೊಡ್ಡ ಸವಾಲು.

ಗ್ರಂಥಾಲಯದಲ್ಲಿ ಅಂತಹ ಒಳ್ಳೆ ಪುಸ್ತಕಗಳಿಲ್ಲ ಅನ್ನುವುದು ಬಹುತೇಕರ ಅನುಭವದ ಮಾತು. ಒಂದು ಒಳ್ಳೆಯ ಪುಸ್ತಕವು ಗ್ರಂಥಾಲಯದ ಕಪಾಟಿನಲ್ಲಿ ಬಂದು ಕೂರುವುದರೊಳಗೆ ಎಷ್ಟೋ ವರ್ಷಗಳು ಕಳೆದು ಅದು ಜನರ ಮನಸ್ಸಿನಿಂದ ಮಾಸಿ ಹೋಗಿರುತ್ತದೆ. ಬಜೆಟ್‌ನಲ್ಲಿ ಗ್ರಂಥಾಲಯ ಇಲಾಖೆಗೆ ಹಣ ಹಂಚಿಕೆಯಾಗುತ್ತದೆ. ಅದಕ್ಕಾಗಿ ಕಾದು‌ ಕೂತ ಗ್ರಂಥಾ ಲಯಸ್ನೇಹಿ ಪ್ರಕಾಶಕರು, ಬರಹಗಾರರಿದ್ದಾರೆ. ಅವರ ಪುಸ್ತಕಗಳನ್ನು ಜನ ಕೊಳ್ಳುವುದಿಲ್ಲ, ಗ್ರಂಥಾಲಯ ಕೊಳ್ಳುತ್ತದೆ. ಸಾಮಾನ್ಯ ಓದುಗನಿಗೆ ಸರ್ಕಾರದ ಹಣ ಸಹಾಯಕ್ಕೆ ಬರುವುದಿಲ್ಲ.

ಈಗಿನ ಪುಸ್ತಕ ಮಾರುಕಟ್ಟೆಗೆ ‘ಅಂಚೆ ವೆಚ್ಚ’ ಒಂದು ಸವಾಲು. ಎಷ್ಟೋ ಬಾರಿ ಪುಸ್ತಕದ ಬೆಲೆ ಮತ್ತು ಅದರ ಅಂಚೆ ವೆಚ್ಚ ಸಮನಾಗಿರುವ ಉದಾಹರಣೆಗಳಿವೆ. ಪ್ರಕಾಶಕರು ಅದನ್ನು ಓದುಗರ ಮೇಲೆ ಹಾಕುವುದರಿಂದ ಒಂದೂವರೆ ಪಟ್ಟಿನಷ್ಟು ಬೆಲೆ ತೆತ್ತು ಪುಸ್ತಕ ಕೊಳ್ಳಲು ಓದುಗ ಮನಸ್ಸು ಮಾಡುವುದಿಲ್ಲ. ಓದು ನೇಪಥ್ಯಕ್ಕೆ ಸರಿಯುತ್ತಿರುವ ಈ ಕಾಲದಲ್ಲಿ, ಓದುಗರಿಲ್ಲ, ಕೊಳ್ಳುವವರಿಲ್ಲ ಅನ್ನುವ ಕಳವಳ ವ್ಯಕ್ತವಾಗುವ ಈ ಹೊತ್ತಿನಲ್ಲಿ ಪುಸ್ತಕದ ಬೆಲೆ ಅದಕ್ಕೆ ಮತ್ತಷ್ಟು‌ ಕುಮ್ಮಕ್ಕು ನೀಡುವಂತಾಗಬಾರದು.

ಒಬ್ಬಿಬ್ಬ ಪ್ರಸಿದ್ಧ ಲೇಖಕರ ಪುಸ್ತಕಗಳು ಬಿಸಿ ದೋಸೆಯಂತೆ ಖಾಲಿಯಾದ ಉದಾಹರಣೆಗಳನ್ನು ಇಟ್ಟುಕೊಂಡು, ಪುಸ್ತಕ ಓದುವವರಿದ್ದಾರೆ, ಕೊಳ್ಳುವ ಅಪಾರ ಓದುವ ವರ್ಗವಿದೆ ಎಂದು ತೀರ್ಮಾನಕ್ಕೆ ಬರಬಾರದು.

ಓದು ತೊರೆದ ನಾಡು ಬೆಳೆಯುವುದಿಲ್ಲ.‌ ಜನರ ಕೈಗೆ ಪುಸ್ತಕ ಇಟ್ಟು ಓದನ್ನು ಪ್ರೋತ್ಸಾಹಿಸಬೇಕಾದದ್ದು ಸರ್ಕಾರದ ಕರ್ತವ್ಯಗಳಲ್ಲೊಂದು. ಹೊರಲಾಗದ ತೆರಿಗೆ ಹೇರಿ ಜನ ಪುಸ್ತಕಗಳಿಂದ ದೂರ ಸರಿಯುವಂತಾಗಬಾರದು. ಗ್ರಂಥಾಲಯಕ್ಕೆ ಹರಿಯುವ ಹಣ ಓದುಗರು ಬಯಸುವ ಪುಸ್ತಕಕ್ಕೆ ಅನುಕೂಲವಾಗು ವಂತೆ ಬಳಕೆಯಾಗಬೇಕೆ ವಿನಾ ಕೆಲವು ಪ್ರಕಾಶಕರಿಗೆ, ಬರಹಗಾರರಿಗಲ್ಲ.

ಅದಕ್ಕೆ ಏನಾದರೂ ಒಂದು ನ್ಯಾಯಯುತವಾದ ದಾರಿ ಕಂಡುಕೊಳ್ಳಬೇಕಿದೆ. ಒಳ್ಳೆಯ ಸಿನಿಮಾಕ್ಕೆ ಸರ್ಕಾರ ಸಬ್ಸಿಡಿ ನೀಡುವಂತೆ ಓದುಗ ಬಯಸುವ ಪುಸ್ತಕಗಳಿಗೆ ಯಾಕೆ ಸಬ್ಸಿಡಿ ನೀಡಬಾರದು? ಸರ್ಕಾರವೇ ಹೊಸ ಪುಸ್ತಕಗಳನ್ನು ಖರೀದಿಸಿ ಸರ್ಕಾರಿ ಪುಸ್ತಕ ಅಂಗಡಿಗಳನ್ನು ತೆರೆದು ಕಡಿಮೆ ಬೆಲೆಗೆ ಯಾಕೆ ಮಾರಬಾರದು?

ಪುಸ್ತಕ ಮಾರಾಟವನ್ನು ಪ್ರೋತ್ಸಾಹಿಸಲು ಅಂಚೆ ಇಲಾಖೆ ಯಾಕೆ ಪುಸ್ತಕದ ಅಂಚೆ ವೆಚ್ಚವನ್ನು ಅತೀ ಕನಿಷ್ಠ ಮಟ್ಟಕ್ಕೆ ಇಳಿಸಬಾರದು ಅಥವಾ ಪೂರ್ತಿ ತೆಗೆದು ಹಾಕಿದರೆ ಸರ್ಕಾರಕ್ಕೆ ಆಗುವ ನಷ್ಟವೇನು?

ಪುಸ್ತಕ ಓದುವ ಗೀಳಿನವರು ತುಂಬಾ ಜನರಿದ್ದಾರೆ.‌ ಅವರ ಕೈಗೆ ಪುಸ್ತಕ ಸಿಗಬೇಕಷ್ಟೆ. ಬರಹಗಾರ, ಪ್ರಕಾಶಕ, ಸರ್ಕಾರ ಇವರ ಸಹಕಾರವಿದ್ದರೆ ಅದೇನೂ ಕಷ್ಟವಲ್ಲ. ಪುಸ್ತಕ ಓದಿದರೆ ಅದರ ಪರಿಣಾಮವನ್ನು ನಾಳೆ ನಾವು ಸಮಾಜದಲ್ಲಿ ಕಾಣಬಹುದು. ಅದೆಂದೂ ವ್ಯರ್ಥವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT