ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಪರೇಷನ್’ಗೆ ಸರ್ಜರಿ, ತುರ್ತು ಚಿಕಿತ್ಸೆ!

ಶಾಸಕರ ಮಂತ್ರಿಗಿರಿಯ ನಿತ್ಯ ಜ್ವರಕ್ಕೆ ಮದ್ದು ಹುಡುಕದಿದ್ದರೆ ಇಡೀ ರಾಜಕೀಯ ವ್ಯವಸ್ಥೆ ಕುಸಿದುಹೋಗುವ ಅಪಾಯ ಇದೆ
Last Updated 18 ಫೆಬ್ರುವರಿ 2019, 9:41 IST
ಅಕ್ಷರ ಗಾತ್ರ

‘ಆಪರೇಷನ್‌ ಆಡಿಯೊ’ ಪ್ರಕರಣವನ್ನು ಎಸ್.ಐ.ಟಿ.ಗೆ ವಹಿಸುವ ವಿಚಾರವಾಗಿ ವಿಧಾನಸಭೆಯಲ್ಲಿ ದೊಡ್ಡ ಜಟಾಪಟಿಯೇ ನಡೆದಿದೆ. ಇಂಥ ತನಿಖೆಯ ಭಯವಾದರೂ ಶಾಸಕರ ನಿರ್ಲಜ್ಜ ಸಗಟು, ಚಿಲ್ಲರೆ ಮಾರಾಟ- ಖರೀದಿಯ ಕಪ್ಪು ಮಾರುಕಟ್ಟೆಯನ್ನು ನಿಯಂತ್ರಿಸಬಹುದು, ಈ ತನಿಖೆಯಿಂದಲಾದರೂ ನಾಚಿಕೆಗೇಡಿ ಆಪರೇಷನ್ ರಾಜಕಾರಣಕ್ಕೆ ಸಣ್ಣ ಸರ್ಜರಿಯಾಗ
ಬಹುದು ಎಂಬ ಜನರ ನಿರೀಕ್ಷೆ ಹುಸಿಯಾಗುವ ಮುನ್ನ ತನಿಖೆ ಆರಂಭವಾಗಬೇಕಾಗಿದೆ.

ದಿನನಿತ್ಯದ ಈ ಆಪರೇಷನ್ ಕಾಯಿಲೆಗೆ ತಕ್ಷಣದ ಮದ್ದು ಹುಡುಕದಿರುವುದರಿಂದ ಕರ್ನಾಟಕದ ರಾಜಕೀಯ ಹಾಗೂ ನಿತ್ಯದ ಆಡಳಿತಗಳೆರಡೂ ದಿಕ್ಕೆಟ್ಟು ಹೋಗಿವೆ. ಇವತ್ತು ಬಿಕರಿಗೆ ಸಿದ್ಧವಾಗಿರುವ ಶಾಸಕರ ‘ಅತೃಪ್ತಿ’ಗಳಿಗೆ ಯಾವ ಘನವಾದ ತಾತ್ವಿಕ ಕಾರಣವೂ ಇಲ್ಲ ಹಾಗೂ ಈ ಕಳ್ಳಮುನಿಸುಗಳಿಗೆ ಮಂತ್ರಿಗಿರಿ ಹಾಗೂ ಇನ್ನಿತರ ಅಧಿಕಾರಗಳ ದುರಾಸೆಯೇ ಕಾರಣ ಎನ್ನುವುದು ಎಲ್ಲರಿಗೂ ಗೊತ್ತಿದೆ.

ಈ ವಾಸ್ತವವನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಪ್ರಥಮ ಚಿಕಿತ್ಸೆಯನ್ನಾದರೂ ನೀಡದಿದ್ದರೆ, ಶಾಸಕರು ದಿನನಿತ್ಯ ‘ಆಸ್ಪತ್ರೆ’ ಸೇರುವುದು ಹಾಗೂ ವಿರೋಧಪಕ್ಷಗಳ ಸ್ಪೆಷಲಿಸ್ಟುಗಳು ಅವರಿಗೆ ‘ಆಪರೇಷನ್’ ಮಾಡುವುದು- ಈ ಕಳ್ಳಾಟಗಳು ನಡೆಯುತ್ತಲೇ ಇರುತ್ತವೆ! ಈ ಮಳ್ಳಾಟಗಳಿಗೆ ಒಂದು ಮಟ್ಟದಲ್ಲಾದರೂ ಕೊನೆ ಹಾಡಲು ಎಲ್ಲ ರಾಜಕೀಯ ಪಕ್ಷಗಳೂ ಪ್ರಜಾಸತ್ತಾತ್ಮಕವಾದ ಕೆಲವು ವಾಸ್ತವಿಕ ಕ್ರಮಗಳನ್ನು ಕೈಗೊಳ್ಳಬೇಕು:

1. ಒಟ್ಟು ಸಚಿವ ಸ್ಥಾನಗಳಲ್ಲಿ ಕೊನೆಯಪಕ್ಷ 20 ಸ್ಥಾನಗಳಾದರೂ ರೊಟೇಶನ್ ಪದ್ಧತಿಯಡಿ ಬರಬೇಕು.

2. ಈಗಾಗಲೇ ಹಲವು ಸಲ ಮಂತ್ರಿಯಾದವರ ಬದಲಿಗೆ, ನಾಲ್ಕು, ಮೂರು, ಎರಡು ಹಾಗೂ ಮೊದಲ ಸಲ ಆಯ್ಕೆಯಾದ ಶಾಸಕರು ಈ ಅನುಕ್ರಮದಲ್ಲಿ ಹಂತಹಂತವಾಗಿ ಮಂತ್ರಿಗಳಾಗಬಹುದಾದ ವ್ಯವಸ್ಥಿತ ನಿಯಮವನ್ನು ಜಾರಿಗೊಳಿಸಬೇಕು.

3. ಯಾವುದೇ ಇಲಾಖೆಗೆ ಅನಿವಾರ್ಯವಾದ ತಜ್ಞತೆಯಿರುವ ಮಂತ್ರಿಯಿದ್ದರೆ ಮಾತ್ರ ಅಂಥವರನ್ನು ಇರಿಸಿಕೊಳ್ಳಬೇಕು. ಉದಾಹರಣೆಗೆ, ವೈದ್ಯರೊಬ್ಬರು ಶಾಸಕರಾದರೆ, ವೈದ್ಯಕೀಯ ಶಿಕ್ಷಣಕ್ಕೆ ಅವರನ್ನು ಮತ್ತೆ ಸಚಿವರನ್ನಾಗಿಸಬಹುದು.

4. ಕೊನೆಯಪಕ್ಷ ಎರಡು, ಎರಡೂವರೆ ವರ್ಷಕ್ಕೆ ಒಂದು ಸಲ ಮೂರನೇ ಒಂದು ಭಾಗದಷ್ಟು ಶಾಸಕರಾದರೂ ತಮ್ಮ ಸ್ಥಾನ ಬಿಟ್ಟು, ಉಳಿದವರು ಮಂತ್ರಿಗಳಾಗಲು ಅವಕಾಶ ಕೊಡಬೇಕು.

5.‌ ಕೆಲವೊಮ್ಮೆ ಹಿರಿಯ ಶಾಸಕರು ಕೂಡ ಮಂತ್ರಿಗಿರಿಗೆ ಒತ್ತಡ ಹಾಕುವುದನ್ನು ಕೈಬಿಟ್ಟು, ಕೊಂಚ ಕೆಳಗಿಳಿದು ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರಾಗಿ, ತಮ್ಮ ಅನುಭವವನ್ನು ಧಾರೆಯೆರೆದು ಅವನ್ನು ಉಪಯುಕ್ತವಾದ ಸಂಸ್ಥೆಗಳನ್ನಾಗಿಸಬೇಕು. ಉದಾಹರಣೆಗೆ, ಕೊಳೆಗೇರಿ ಅಭಿವೃದ್ಧಿ ಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿಗಳಂಥ ಸಂಸ್ಥೆಗಳಲ್ಲಿ ತಜ್ಞರ ಜೊತೆಗೂಡಿ ಅರ್ಥಪೂರ್ಣವಾಗಿ ಕೆಲಸ ಮಾಡಬಲ್ಲ ಅರ್ಹ ಹಿರಿಯ ಶಾಸಕರಿದ್ದರೆ ಇಂಥ ಮಂಡಳಿಗಳು ಕ್ರಾಂತಿಕಾರಕ ಕೆಲಸ ಮಾಡಬಲ್ಲವು. ಈ ಹುದ್ದೆಗಳು ಕೂಡ ಪರಿಣಾಮಕಾರಿ ಹಾಗೂ ಉಪಯುಕ್ತ ಎನ್ನುವುದನ್ನು ಗೂಟದ ಕಾರಿಗಾಗಿ, ಕುರ್ಚಿಯ ಗತ್ತಿಗಾಗಿ ಮಾತ್ರ ಈ ಹುದ್ದೆಗಳಿಗಾಗಿ ಹಪಹಪಿಸುವ ಕಿರಿಯ ಶಾಸಕರಿಗೆ ತೋರಿಸಿಕೊಡಬೇಕು.

6. ಮೂರಕ್ಕಿಂತ ಹೆಚ್ಚು ಸಲ ಸಚಿವರಾದವರು ಕಡ್ಡಾಯವಾಗಿ ಸಚಿವ ಸ್ಥಾನವನ್ನು ಒಂದು ಅವಧಿಗಾದರೂ ಕೈಬಿಡಬೇಕು; ತಾವು ನಿಭಾಯಿಸಿದ ಖಾತೆಗಳ ಅನುಭವಗಳನ್ನು ಹೊಸ ಸಚಿವರಿಗೆ ಧಾರೆಯೆರೆಯುವಂಥ ಮಾರ್ಗದರ್ಶಕ ಸಮಿತಿಯನ್ನು ಆಡಳಿತ ಪಕ್ಷಗಳು ರೂಪಿಸಿಕೊಳ್ಳಬೇಕು. ಉದಾಹರಣೆಗೆ, ಈಗ ಮಾಜಿಯಾಗಿರುವ ಕಾಗೋಡು ತಿಮ್ಮಪ್ಪನವರು ತಾವು ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿಈಗಲೂ ಶಿವಮೊಗ್ಗ, ಸಾಗರದ ಸರ್ಕಾರಿ ಕಚೇರಿಗಳಿಗೆ ಭೇಟಿ ಕೊಟ್ಟು ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ಅನುಭವ ಇಂದಿನ ಕಂದಾಯ ಸಚಿವರಿಗೆ ಉಪಯುಕ್ತವಾಗಬಲ್ಲದು.

7. ಗೆದ್ದವರು ಯಾವುದೇ ಕಾರಣಕ್ಕೆ ರಾಜೀನಾಮೆ ಕೊಟ್ಟರೆ, ಅವರು ಮುಂದಿನ ಸಾರ್ವತ್ರಿಕ ಚುನಾವಣೆಯವರೆಗೂ ಇನ್ನೊಂದು ಪಕ್ಷದಿಂದ ಸ್ಪರ್ಧಿಸಲು ಅವಕಾಶವಿರದಂತೆ ಪಕ್ಷಾಂತರ ಕಾಯ್ದೆಗೆ ತಿದ್ದುಪಡಿ ತರಬೇಕು; ಈ ತಿದ್ದುಪಡಿ ಕಳ್ಳ ಆಪರೇಷನ್ನುಗಳಿಗೆ ಕಡಿವಾಣ ಹಾಕಲು ಮಾತ್ರವಲ್ಲದೆ, ಎಲ್ಲ ಪಕ್ಷಗಳ ಉಳಿವಿನ ದೃಷ್ಟಿಯಿಂದಲೂ ಅತ್ಯಗತ್ಯ.

ಎಲ್ಲ ರಾಜಕೀಯ ಪಕ್ಷಗಳೂ ಮನಸ್ಸು ಮಾಡಿದರೆ ಜಾರಿಗೆ ತರಬಹುದಾದ ಇಂಥ ಪ್ರಜಾಪ್ರಭುತ್ವವಾದಿ-ಮರ್ಯಾದಸ್ಥ ಸೂತ್ರಗಳ ಬಗ್ಗೆ ವಿವೇಚನೆಯಿಂದ ಚರ್ಚಿಸಿ ವಿಶಾಲ ನಿಯಮ ರೂಪಿಸಿಕೊಳ್ಳಬೇಕು. ಮತದಾರರ ತೀರ್ಪನ್ನು ಮರ್ಯಾದೆಯಿಂದ ಪಾಲಿಸಿ ತಮ್ಮ ಸರದಿಗಾಗಿ ಕಾಯಬೇಕು. ಕಳೆದೊಂದು ದಶಕದಿಂದ ಕರ್ನಾಟಕದ ರಾಜಕಾರಣವನ್ನು ದೇಶದಾದ್ಯಂತ ನಗೆಪಾಟಲಾಗಿಸಿರುವ ಆಪರೇಷನ್ ಕಮಲವೆಂಬ ಕ್ಯಾನ್ಸರ್ ವ್ರಣವನ್ನು ಕತ್ತರಿಸುವುದರ ಜೊತೆಗೆ, ಶಾಸಕರ ಮಂತ್ರಿಗಿರಿಯ ನಿತ್ಯ ಜ್ವರಕ್ಕೂ ಮದ್ದು ಹುಡುಕದಿದ್ದರೆ ಇಡೀ ರಾಜಕೀಯ ವ್ಯವಸ್ಥೆ ಕುಸಿದುಹೋಗುತ್ತದೆ. ಈ ಎಚ್ಚರ ರಾಜಕಾರಣಿಗಳಿಗಿರಲಿ. ಇನ್ನೂ ಕೊಂಚ ಲಜ್ಜೆ ಉಳಿಸಿಕೊಂಡಿರುವ ಶಾಸಕರಾದರೂ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಸದನದಲ್ಲಿ ಸಂವಾದವನ್ನಾದರೂ ಆರಂಭಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT