ಸಾಕ್ಷರರಾಗೋಣ ನಾವು...

7

ಸಾಕ್ಷರರಾಗೋಣ ನಾವು...

Published:
Updated:
Deccan Herald

ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನದ ಹಿನ್ನೆಲೆ ರೋಚಕವಾಗಿದೆ. ಖಾಸಿಂ ರಜ್ವಿಯ ದಬ್ಬಾಳಿಕೆ, ಅಲ್ಲಿಯ ಜನರ ಕೆಚ್ಚೆದೆಯ ಹೋರಾಟ, ಅದೇ ಸಮಯಕ್ಕೆ ವಲ್ಲಭಭಾಯಿ ಪಟೇಲ್‌ ಅವರ ಸಾರಥ್ಯದಲ್ಲಿ ನಿಜಾಮ್‌ ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸಿದ್ದು, ಎಲ್ಲವೂ ರೋಮಾಂಚಕ ಕಥೆ.

ಈ ನೆಲದಲ್ಲಿ ‘ಪರದಾ’ ಪದ್ಧತಿ ಸಾಮಾನ್ಯವಾಗಿತ್ತು. ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ವಿಶೇಷವೆಂಬಂತೆ ಇತ್ತು. 90ರ ದಶಕದಲ್ಲಿ ರಾಯಚೂರಿನ ಸಾಕ್ಷರತಾ ಪ್ರಮಾಣ ಒಂದಂಕಿಯಲ್ಲಿತ್ತು. ರಾಷ್ಟ್ರೀಯ ಸಾಕ್ಷರತಾ ಮಿಷನ್‌ ಆರಂಭವಾದಾಗ ನಾನು ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದೆ. ಇಡೀ ಮಿಷನ್‌ ತೀರ ಅನೌಪಚಾರಿಕವಾಗಿತ್ತು. ಈ ಮಿಷನ್‌ ಅಡಿ ರಾಯಚೂರು ಜಿಲ್ಲೆ ಆಯ್ಕೆಯಾಗಲು ಕಾರಣ, ಅಲ್ಲಿಯ ಸಾಕ್ಷರತಾ ಪ್ರಮಾಣ. ಅಲ್ಲಿಯ ಮಹಿಳಾ ಸಾಕ್ಷರತೆ ಪ್ರಮಾಣ ಆಗ ಕೇವಲ ಶೇ 1ರಷ್ಟಿತ್ತು. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಂತೂ ದೇಶದಲ್ಲಿಯೇ ಕಡಿಮೆ ಸಾಕ್ಷರತಾ ಪ್ರಮಾಣ ಇರುವ ತಾಲ್ಲೂಕುಗಳಲ್ಲಿ ಎರಡನೆಯ ಸ್ಥಾನದಲ್ಲಿತ್ತು.

ರಾಷ್ಟ್ರೀಯ ಸಾಕ್ಷರತಾ ಮಿಷನ್‌ನ ಇಡೀ ಕಾರ್ಯವೈಖರಿ ಆಡಳಿತ ಯಂತ್ರದ ಸಾಂಪ್ರದಾಯಿಕ ಶೈಲಿಯನ್ನೇ ಬದಲಿಸಿತ್ತು. ಅಲ್ಲಿಯವರೆಗೂ ಬ್ರಿಟಿಷರ ಪಾಳೆಗಾರಿಕೆ ಸಂಸ್ಕೃತಿಯ ಪ್ರತಿಕೃತಿಯಂತೆ ಇದ್ದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿತು. ರಾಷ್ಟ್ರೀಯ ಸಾಕ್ಷರತಾ ಮಿಷನ್‌ನಲ್ಲಿ ಎಲ್ಲರೂ ಸಮಾನರಾಗಿದ್ದೆವು. ಜಿಲ್ಲಾಧಿಕಾರಿಯಾಗಿದ್ದರೇನು, ಸಂಯೋಜಕರಾಗಿದ್ದರೇನು– ಕಲಿಕಾ ಕೇಂದ್ರಕ್ಕೆ ಹೋದಾಗ ಎಲ್ಲರೊಡನೆ ನೆಲದ ಮೇಲೆ ಕೂರಬೇಕಾಗಿತ್ತು. ಅಲ್ಲಿಯವರೆಗೂ ಶ್ರೇಣೀಕೃತ ವ್ಯವಸ್ಥೆಯಲ್ಲಿ ಕೆಲಸ ಮಾಡಿದವರಿಗೆ, ಜಿಲ್ಲಾಧಿಕಾರಿ ಅಥವಾ ತಮ್ಮ ಮೇಲಧಿಕಾರಿ ನೆಲದ ಮೇಲೆ ಕೂರುವುದು ಅಪಥ್ಯವಾಗಿತ್ತು. ಆದರೆ ಆ ಕೆಲಸವೇ ಹಾಗಿತ್ತು. ಕಲಿಕಾ ಕೇಂದ್ರಗಳನ್ನು ಗುರುತಿಸಲು ಹೋಗಬೇಕೆಂದರೆ ಜನರ ನಡುವೆಯೇ ಹೋಗಬೇಕಿತ್ತು. ಜನರಿದ್ದಲ್ಲಿಯೇ ಕಚೇರಿ ತೆರೆಯಬೇಕಾಗಿತ್ತು. ದೇವಸ್ಥಾನದ ಪ್ರಾಂಗಣ, ಮರದಡಿಯ ಹರಟೆ ಕಟ್ಟೆಗಳು, ಶಾಲೆಯ ಆವರಣಗಳು ಹೀಗೆ ಎಲ್ಲೆಂದರಲ್ಲಿ ನಾವು ನೆಲೆಕಾಣಬೇಕಾಗಿತ್ತು. ಅನಕ್ಷರಸ್ಥರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿತ್ತು. ಅವರನ್ನು ಸಾಕ್ಷರತಾ ಕೇಂದ್ರಗಳತ್ತ ಸೆಳೆಯಬೇಕೆಂದರೆ ಅವರ ಬಿಡುವಿನ ಸಮಯ ನೋಡಿಕೊಂಡು ಹೋಗಬೇಕಿತ್ತು.

ಮಧ್ಯಾಹ್ನ, ಇಳಿ ಸಂಜೆ. ಆಗಿನ್ನೂ ಟಿ.ವಿ.ಯ ಭರಾಟೆ ಇಷ್ಟಿರಲಿಲ್ಲ. ಸಂಜೆಯ ಹರಟೆಕಟ್ಟೆಗಳು ಜೀವಂತವಿದ್ದ ಕಾಲವದು. ಆ ಸಮಯದಲ್ಲಿ ಒಂದಷ್ಟು ಹಾಡುಗಳು, ಬೀದಿನಾಟಕಗಳು, ಈಗಿನ ಫ್ಲಾಷ್‌ಮಾಬ್‌ನಂತೆಯೇ ಗುಂಪಿನಲ್ಲಿಯೇ ನಾಟಕಗಳನ್ನು ಆಡಿಸುತ್ತಿದ್ದೆವು. ಹಾಡುತ್ತಿದ್ದೆವು. ಜಿಲ್ಲಾಧಿಕಾರಿ ಬರ್ತಾರೆ, ತಹಸೀಲ್ದಾರ್‌ ಬರ್ತಾರೆ ಎನ್ನುವುದೇ ಜನರಿಗೆ ಒಂದು ಸಂಭ್ರಮವಾಗಿತ್ತು. ಅವರವರ ದೂರುಗಳನ್ನು ಹೇಳುವಾಗ ಬರೆದು ಕೊಡಲು ಕೇಳುತ್ತಿದ್ದೆವು. ಅಕ್ಷರ ಅನಿವಾರ್ಯ ಸೃಷ್ಟಿಯಾಗಿದ್ದು ಹಾಗೆ. ನಂತರದ ಸ್ತ್ರೀಶಕ್ತಿ ಕೇಂದ್ರ, ರಾತ್ರಿ ಶಾಲೆ, ವಯಸ್ಕರ ಶಿಕ್ಷಣ ಕೇಂದ್ರ, ಅವರ ಹೆಸರು ಬರೆಸುವುದು, ಬೆರಳೊತ್ತುವ ಬದಲು ಸಹಿಹಾಕುವ ಮಹತ್ವ... ಹೀಗೆ ಹತ್ತು ಹಲವಾರು ಘೋಷಣೆಗಳನ್ನು ಕೂಗುತ್ತ ಜನರನ್ನು ಸೆಳೆಯುತ್ತಿದ್ದೆವು.

ಶಾಲಾ, ಕಾಲೇಜುಗಳಲ್ಲಿ ಸಾಕ್ಷರತೆಯ ಮಹತ್ವ ಸಾರುವ ಅನೇಕ ಸ್ಪರ್ಧೆಗಳನ್ನು ಹಮ್ಮಿಕೊಂಡೆವು. ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳೆಲ್ಲ ಅಹರ್ನಿಷಿ ದುಡಿದರು. ಓದಲು, ಬರೆಯಲು ಮನವೊಲಿಸುವುದೇ ಸವಾಲಾಗಿತ್ತು. ‘ಜೀವನ ತನ್ನ ಪಾಡಿಗೆ ತಾನು ಸಾಗುತ್ತಿರಬೇಕಾದರೆ, ಅಕ್ಷರ ಕಲಿತು ಏನಾಗಬೇಕಿದೆ’ ಎಂಬ ಉಡಾಫೆ– ಅಸಡ್ಡೆ ಅಲ್ಲಿಯ ಮಹಿಳೆಯರಲ್ಲಿ ಮನೆಮಾಡಿತ್ತು. ಮಹಿಳೆಯರಲ್ಲಿ ಮಾತ್ರವಲ್ಲ, ಸಮಾಜವೇ ಆ ರೀತಿ ಯೋಚಿಸುತ್ತಿತ್ತು.

ಅಂಥ ಸಂದರ್ಭದಲ್ಲಿ ಒಂದಷ್ಟು ಜನ ಹೆಣ್ಣುಮಕ್ಕಳಿಗೆ ಅಕ್ಷರ ಕಲಿಯುವುದರಿಂದಾಗುವ ಲಾಭಗಳನ್ನು ಮನವರಿಕೆ ಮಾಡಿಕೊಟ್ಟೆವು. ತಾವೂ ಕಲಿಯಬೇಕೆಂಬ ಹುಕಿಯನ್ನು ಅವರಲ್ಲಿ ಹುಟ್ಟಿಸಿದೆವು. ಅವರೆಲ್ಲ ಸಚೇತಕಿಯರಾಗಿ ಮುಂದೆ ಬಂದರು. ಅವರಿಗೆ ಸೈಕಲ್‌ ನೀಡಿದೆವು. ಮನೆಯಿಂದಾಚೆ ಕಾಲಿಡದ ಹೆಣ್ಮಕ್ಕಳು ಸೈಕಲ್‌ ಕಲಿತು, ಸೈಕಲ್‌ ಜಾಥಾ ಮೂಲಕ ಜಾಗೃತಿ ಆರಂಭಿಸಿದರು. ಮಹಿಳೆಯರ ನಡುವೆ ಕೆಲದಿನಗಳ ಮೊದಲು ಗುಂಪಿನಲ್ಲಿ ಒಬ್ಬರಾಗಿದ್ದವರು ಇದೀಗ ಗುಂಪಿನ ನಾಯಕರಾಗಿದ್ದರು. ಈ ಬೆಳವಣಿಗೆ ನಮ್ಮ ನಿರೀಕ್ಷೆಗೂ ಮೀರಿ ಸ್ಫೂರ್ತಿದಾಯಕವಾಯಿತು. ಈ ಜಾಗೃತಿ, ಅಕ್ಷರಪ್ರೀತಿ ಮೂಡಿಸಿತು. ಅಷ್ಟೇ ಅಲ್ಲ, ಸಾಮಾಜಿಕವಾಗಿ ಮಹಿಳೆಯರ ಸ್ಥಾನಮಾನದಲ್ಲಿ ಗಮನೀಯ ಬದಲಾವಣೆ ತಂದಿತು. ಅವರಲ್ಲಿ ನ್ಯಾಯ, ಅನ್ಯಾಯದ ಪರಿಜ್ಞಾನ ಹುಟ್ಟಿತು. ಸ್ವಾವಲಂಬಿಯಾಗುವುದರ ಮಹತ್ವ ತಿಳಿಸಿಕೊಟ್ಟಿತು. ರಾಯಚೂರು ಜಿಲ್ಲೆಯಲ್ಲಿದ್ದ ದೇವದಾಸಿಯರ ಜೀವನದ ದಿಕ್ಕು ಬದಲಾಯಿತು. ಹತ್ತು ವರ್ಷಗಳ ನಂತರ ಅಲ್ಲಿಯ ಸಾಕ್ಷರ ಪ್ರಮಾಣ ಶೇ 85
ಕ್ಕೇರಿದೆ. ಆನಂತರ ಸಾಕ್ಷರತೆ ಮತ್ತು ಅಭಿವೃದ್ಧಿಪರ ಜಿಲ್ಲೆ ಎಂಬ ಹೆಗ್ಗಳಿಕೆಗೂ ರಾಯಚೂರು ಪಾತ್ರವಾಯಿತು.

ಎರಡನೆಯ ಹಂತದ ಕಾರ್ಯಾಚರಣೆ ಆರಂಭವಾದಾಗ ಬೀದರ್‌ ಜಿಲ್ಲೆ ಆಯ್ಕೆಯಾಗಿತ್ತು. ಆಗ ಬೀದರ್‌ ಜಿಲ್ಲಾಧಿಕಾರಿಯಾಗಿದ್ದೆ. ರಾಯಚೂರಿನ ಸವಾಲು ಒಂದು ತೆರನಾಗಿದ್ದರೆ, ಬೀದರ್‌ನದು ಇನ್ನೊಂದು ಬಗೆಯದ್ದಾಗಿತ್ತು. ಇಲ್ಲಿ ಪರದಾ ಆಚರಣೆಯಲ್ಲಿತ್ತು. ಇನ್ನು ನಮ್ಮ ಗುಂಪು ಆ ಓಣಿಗಳಲ್ಲಿ, ಅವರ ಪರಿಸರದಲ್ಲಿ ಹೋಗಿ, ಅಕ್ಷರ ದೀವಿಗೆ ಹಚ್ಚುವುದಾದರೂ ಹೇಗೆ? ಅಲ್ಲಿ ತಸ್ಲೀಮ್‌ ಸುಲ್ತಾನಾ ಎಂಬ ಮಹಿಳೆ ಮುಂದೆ ಬಂದಳು. ಇದಲ್ಲದೆ ಬೀದರ್‌ನಲ್ಲಿ ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿದ್ದ ಹಲವರು ಮುಂದೆ ಬಂದರು. ವಿಶಾಲಾಕ್ಷಿ ಕರಡ್ಡಿ, ಭಾರತಿ ವಸ್ತ್ರದ್‌, ಗುರಮ್ಮ ಸಿದ್ದಾರೆಡ್ಡಿ ಮುಂತಾದವರೆಲ್ಲ ಈ ಅಭಿಯಾನವನ್ನು ಬಲಗೊಳಿಸಿದರು. ತಸ್ಲೀಮ್‌ ಸುಲ್ತಾನಾ ಮುಂದೆ ಬಂದಿದ್ದರಿಂದ ಪರದಾ ಇದ್ದಲ್ಲಿಯೂ ಹೋಗಿ ಕಲಿಸುವುದು ಸಾಧ್ಯವಾಯಿತು. ಮಹಿಳೆಯರನ್ನು ಮುಂಚೂಣಿಗೆ ತರಲು ಬೀದರ್‌ನಲ್ಲಿ ಮಹಿಳಾ ಕ್ರಿಕೆಟ್‌ ಪಂದ್ಯಾವಳಿ ಏರ್ಪಡಿಸಿದೆವು. ನಮ್ಮ ಕರೆಗೆ ಓಗೊಟ್ಟು ಕ್ರಿಕೆಟ್‌ ಪಟು ಶಾಂತಾ ರಂಗಸ್ವಾಮಿ ಬೀದರ್‌ವರೆಗೂ ಬಂದರು.

ಮಹಿಳಾ ಆದ್ಯತೆ ನೀಡುವ ಕ್ರಿಯಾಯೋಜನೆ ಆಯೋಜಿಸಿದೆವು. ಒಂದು ವರ್ಷ ಇಡೀ ಮಹಿಳೆಯರಿಗೆ ಸಂಬಂಧಿಸಿದ ಕ್ರಿಯಾಯೋಜನೆ ಮಾಡಲು ಜಿಲ್ಲಾಪಂಚಾಯಿತಿಗೆ ಸೂಚಿಸಿದೆ. ಅದಕ್ಕಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೆ. ಬೀದರ್‌ನಲ್ಲಿ ಸಹಾಯಕ ಆಯುಕ್ತಳಾಗಿ ಕಾರ್ಯನಿರ್ವಹಿಸಿದ್ದರಿಂದ ಅಲ್ಲಿ, ಕಳ್ಳುಬಳ್ಳಿ ಸಂಬಂಧವೇ ಸ್ಥಾಪನೆಯಾಗಿತ್ತು. ಅಲ್ಲಿ ಯಾವುದಕ್ಕೂ ಅಡೆತಡೆಗಳು ಕಾಣಿಸಲಿಲ್ಲ. ಹಾಗಾಗಿ ಸಾಕ್ಷರತಾ ಯೋಜನೆ ಇಲ್ಲಿ ಸಫಲವಾಯಿತು. ಶೇ 3ರಷ್ಟು ಇದ್ದ ಸಾಕ್ಷರ ಪ್ರಮಾಣ ಇಲ್ಲಿಯೂ ಶೇ 86ಕ್ಕೆ ಏರಿತು.

ಜನರ ಪಾಲ್ಗೊಳ್ಳುವಿಕೆ, ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ, ಸಾಮುದಾಯಿಕ ಪ್ರಜ್ಞೆ ಇವೆಲ್ಲವೂ ಒಂದು ಅಭಿಯಾನವನ್ನು ಸಫಲಗೊಳಿಸಿದವು. ಈ ಅಭಿಯಾನದಿಂದಲೇ ಅಧಿಕಾರಿ ಮತ್ತು ಜನರ ನಡುವಿನ ಕಂದಕ ಕಡಿಮೆಯಾಯಿತು. ಹೆಣ್ಣು ಮಕ್ಕಳು ಸ್ವಾವಲಂಬಿಗಳಾದರು. ಅಚ್ಚರಿಯ ವಿಷಯವೆಂದರೆ ಅಲ್ಲಿ ಶ್ರಾವಣದಲ್ಲಿ ಹಾಡುವ ‘ಭುಲಾಯಿ’ ಪದಗಳಲ್ಲಿ ನನ್ನ ಹೆಸರನ್ನು ಸೇರ್ಪಡೆಗೊಳಿಸಿದರು. ಈಚೆಗೆ ಬೀದರ್‌ಗೆ ಹೋದಾಗ ಹೆಣ್ಣುಮಕ್ಕಳ ಗುಂಪೊಂದು ಆ ಹಾಡುಗಳನ್ನೂ ಪ್ರಸ್ತುತಪಡಿಸಿದರು. ಒಬ್ಬ ಅಧಿಕಾರಿಗೆ ಇದಕ್ಕೂ ಮಿಗಿಲಾದ ಪ್ರಶಸ್ತಿ ಬೇಕೇ?

(ಭುಲಾಯಿ ಎಂಬ ಪದ ಮರಾಠಿ ಮೂಲದ್ದು. ಶ್ರಾವಣ ಮಾಸದಲ್ಲಿ ಹೈದರಾಬಾದ್‌ ಕರ್ನಾಟಕದ ಮಹಿಳೆಯರು ಬೀಹು ನೃತ್ಯದಂತೆ ಅರೆವರ್ತುಲಾಕಾರದಲ್ಲಿ ನಿಂತು, ಪರಸ್ಪರ ಕೈ ಹಿಡಿದುಕೊಂಡು, ಕಾಸಿಂ ರಜ್ವಿಯ ದಾಳಿಯ ಹಾಡುಗಳು, ಏಕೀಕರಣದ ಹಾಡುಗಳು, ಶರಣರ, ಸಂತರ ಪದಗಳಿಂದ ಪ್ರೇರಿತವಾದ ಹಾಡುಗಳನ್ನು ಹಾಡುತ್ತ ನರ್ತಿಸುತ್ತಾರೆ. ಶ್ರಾವಣ ಸಂಜೆಯ ಈ ಕಾರ್ಯಕ್ರಮಕ್ಕೆ ಭುಲಾಯಿ ಹಾಕುವುದು ಎಂದು ಕರೆಯುತ್ತಾರೆ).

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !