ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿತ್ತಲ ಬಾಗಿಲಿನಿಂದ ಬಂದ ‘ತುರ್ತು ಪರಿಸ್ಥಿತಿ’

ಹಿಂಸೆಯನ್ನು ತಾತ್ವಿಕವಾಗಿ ಕೂಡ ತಿರಸ್ಕರಿಸುವ ಕಾಲ ಸನ್ನಿಹಿತವಾಗಿದೆ. ಈ ದೇಶದ ಬಡವರು ಗೌರವದ ಬಾಳುವೆ ಮಾಡಲು ಅಹಿಂಸಾತ್ಮಕತೆಯೇ ದಾರಿ
Last Updated 30 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಇಂದಿರಾಗಾಂಧಿಯವರು ನಾಲ್ಕು ದಶಕಗಳ ಹಿಂದೆ ಅಧಿಕೃತವಾಗಿ ಎಮರ್ಜೆನ್ಸಿ ಹೇರಿದಾಗ, ಕನಿಷ್ಠ ಪಕ್ಷ, ಅವರು ಒಂದು ಗಟ್ಟಿ ಕಾರಣ ನೀಡಿದ್ದರು. ತಾನು ಬಡವರ ಪರವಾಗಿ ಜಾರಿಗೊಳಿಸಲು ಯತ್ನಿಸುತ್ತಿರುವ ಇಪ್ಪತ್ತು ಅಂಶಗಳ ಕಾರ್ಯಕ್ರಮವನ್ನು ವಿರೋಧಿಗಳು ತಡೆಯುತ್ತಿದ್ದಾರೆ ಎಂದಿದ್ದರು. ಬಡವರನ್ನು ಹಿಡಿದು ಬಲವಂತದಿಂದ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಿದಾಗ, ಆಕೆಯ ಮಗ ಸಂಜಯ ಗಾಂಧಿ, ಜನಸಂಖ್ಯೆಯ ಆಸ್ಫೋಟ ತಡೆಯಲಿಕ್ಕೆ ಹಾಗೆ ಮಾಡುತ್ತಿದ್ದೇನೆ ಎಂದಿದ್ದ.ಆದರೆ ಈಗ, ಅಂಬಾನಿ ಅದಾನಿಗಳನ್ನು ಪೊರೆಯಲಿಕ್ಕಾಗಿ ಹಿತ್ತಲ ಬಾಗಿಲಿನಿಂದ ಅನಧಿಕೃತ ಎಮರ್ಜೆನ್ಸಿ ಜಾರಿಗೆ ತರಲಾಗಿದೆ. ದೇಶದ ವಿವಿಧೆಡೆಗಳಿಂದ ಲೇಖಕರು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸತೊಡಗಿದ್ದಾರೆ. ಹೀಗೆ ಮಾಡುವುದಕ್ಕೆ ಅವರು ಕೊಡುತ್ತಿರುವ ಅಧಿಕೃತ ಕಾರಣ, ಪ್ರಧಾನಿ ಮೋದಿಯವರ ಕೊಲೆಯ ಸಂಚು ನಡೆದಿದೆ ಎಂದು. ಈ ಬಗ್ಗೆ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿ ತಮಾಷೆಯಾಗಿದೆ. ಹಾಗೆಂದು ಈ ದೇಶದ ನ್ಯಾಯಾಲಯಗಳು ಹೇಳ ತೊಡಗಿವೆ. ಕತೆ ಹೀಗಿದೆ.

ಭೀಮಾ ಕೋರೆಗಾಂವ್ ಎಂದೇ ಪ್ರಖ್ಯಾತವಾಗಿರುವ ದಲಿತರ ಒಂದು ಚಳವಳಿ ನಡೆದಿದೆ. ಕೆಲವು ತಿಂಗಳ ಹಿಂದೆ ಚಳವಳಿಗಾರರು ಮೆರವಣಿಗೆಯಲ್ಲಿ ಕೋರೆಗಾಂವ್‌ಗೆ ಹೊರಟಿದ್ದರು. ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಯಿತು. ಕಲ್ಲು ತೂರಾಟ ನಡೆಸಿದವರು ಮರಾಠಾ ಸಮುದಾಯಕ್ಕೆ ಸೇರಿದ ಕೆಲವು ವ್ಯಕ್ತಿಗಳು. ಕಲ್ಲು ತೂರಾಟದಿಂದ ಗಲಭೆಯುಂಟಾಗಿ ಒಂದು ಸಾವು ಸಂಭವಿಸಿತು. ಕಲ್ಲು ತೂರಿದವರು ಈವರೆಗೂ ಧೈರ್ಯವಾಗಿ ತಿರುಗಾಡುತ್ತಿದ್ದಾರೆ. ಅವರ ಬಂಧನ ಆಗಿಲ್ಲ. ಆದರೆ ಮೆರವಣಿಗೆಯ ಬೆಂಬಲಕ್ಕಿದ್ದ ಕೆಲ ಪ್ರಮುಖ ಸಾಮಾಜಿಕ ಕಾರ್ಯಕರ್ತರನ್ನು ಅವರು ಪ್ರಚೋದಕಾರಿ ಭಾಷಣ ಮಾಡುತ್ತಿದ್ದರು ಎಂದು ಆರೋಪಿಸಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದರು. ಇದು ಮೊದಲ ಸುತ್ತಿನ ಬಂಧನ. ಈಗ ನಡೆದಿರುವುದು, ಮೊದಲ ಸುತ್ತಿನಿಂದ ಪ್ರೇರಣೆ ಪಡೆದ ಎರಡನೆಯ ಸುತ್ತಿನ ಬಂಧನ.

ಮೊದಲ ಸುತ್ತಿನಲ್ಲಿ ಬಂಧಿತನಾದ ಒಬ್ಬ ಕಾರ್ಯಕರ್ತನ ಬಳಿಯಲ್ಲಿ ಪೊಲೀಸರಿಗೆ ಒಂದು ಪತ್ರ ಸಿಕ್ಕಿದೆಯಂತೆ. ಆ ಪತ್ರದಲ್ಲಿ ಪ್ರಧಾನಿಯವರನ್ನು ಕೊಲೆ ಮಾಡುವ ಸಂಚು ಬರೆದಿಡಲಾಗಿದೆಯಂತೆ. ಸಂಚು ಮಾತ್ರವಲ್ಲ, ಸಂಚುಗಾರರ ಹೆಸರು, ವಿಳಾಸ ಎಲ್ಲವನ್ನೂ ಬರೆದಿಡಲಾಗಿದೆಯಂತೆ. ಇದರ ಆಧಾರದ ಮೇಲೆ, ಪೊಲೀಸರು ಹೆಸರಾಂತ ಮಾನವ ಹಕ್ಕುಗಳ ಕಾರ್ಯಕರ್ತರು ಹಾಗೂ ಲೇಖಕರನ್ನು ಬಂಧಿಸತೊಡಗಿದೆ.

ಭೀಮಾ ಕೋರೆಗಾಂವ್ ಚಳವಳಿಯು ಮಹಾರ್ ದಲಿತರ ಗೆಲುವಿನ ಚಳವಳಿ. ಮಹಾರ್ ದಲಿತರು ಬ್ರಿಟಿಷರ ಸೈನ್ಯದಲ್ಲಿ ಸೈನಿಕರಾಗಿದ್ದವರು. ಅವರು ಗೆದ್ದದ್ದು ಮರಾಠ ಆಳ್ವಿಕೆಯ ವಿರುದ್ಧವಾಗಿ. ಇತ್ತ ದಲಿತ ಜನಾಂಗ, ಅತ್ತ ಮರಾಠಿ ಜನಾಂಗ. ಸೂಕ್ಷ್ಮ ವಿಷಯ. ಯಾವುದೇ ಜಾಣ ಸರ್ಕಾರ ಮಧ್ಯಮ ಮಾರ್ಗ ಅನುಸರಿಸಿ ಸೂಕ್ಷ್ಮವಾಗಿ ಸಮಸ್ಯೆಯನ್ನು ನಿರ್ವಹಿಸುತ್ತಿತ್ತು. ಮಹಾರಾಷ್ಟ್ರ ಸರ್ಕಾರ ಸೂಕ್ಷ್ಮತೆ ಮೆರೆಯಲಿಲ್ಲ. ದಲಿತ ವಿರೋಧಿ ಎಂಬಂತೆ ಕಾಣಬಲ್ಲ ನಿಲುವು ತಳೆಯಿತು. ದಲಿತ ಪರ ಕಾರ್ಯಕರ್ತರು ಪ್ರಚೋದನಕಾರಿ ಭಾಷಣ ಮಾಡಿದ್ದು ನಿಜವೇ ಆಗಿದ್ದರೆ, ಮೆರವಣಿಗೆ ಹೊರಡುವ ಮೊದಲೇ ಅದನ್ನು ನಿಭಾಯಿಸಬೇಕಿತ್ತು. ಬದಲಿಗೆ, ಮರಾಠಿ ಕಲ್ಲು ತೂರಾಟಗಾರರ ಪರ ತಾನು ಎಂಬಂತೆ ತನ್ನನ್ನು ಬಿಂಬಿಸಿಕೊಂಡಿತು.

ಇನ್ನು ನಕ್ಸಲ್ ವಾದ. ತಾತ್ವಿಕವಾಗಿ ಹಿಂಸೆಯನ್ನು ಒಪ್ಪುವ ಬಡವರ ಪರವಾದ ವಾದವಿದು. ದುರಂತವೆಂದರೆ, ಮಾನ್ಯ ಪ್ರಧಾನಿಯವರು ನಕ್ಸಲ್‌ವಾದದ ತಾತ್ವಿಕ ಹಿಂಸೆಯನ್ನು ಬೀದಿ ಹಿಂಸೆ ಹಾಗೂ ಆಡಳಿತಾತ್ಮಕ ಹಿಂಸೆಗಳ ಜಂಟಿ ಕಾರ್ಯಾಚರಣೆಯ ಮೂಲಕ ನಿಭಾಯಿಸಲು ಹೊರಟಿದ್ದಾರೆ. ತನ್ನ ಹಿಂಬಾಲಕರ ಬೀದಿ ಹಿಂಸೆ, ಕಲ್ಲು ತೂರಾಟ ಇತ್ಯಾದಿ ಧಾರ್ಮಿಕ ಉಗ್ರವಾದವನ್ನೇ ನಿಗ್ರಹಿಸಲಾರದ ಪ್ರಧಾನಿಯವರು ಹಿಂಸೆಯ ತಾತ್ವಿಕ ಮಾನ್ಯತೆಯನ್ನು ನಿಗ್ರಹಿಸ ಹೊರಟಿರುವುದು ತಮಾಷೆಯ ಸಂಗತಿಯಾಗಿದೆ. ನಕ್ಸಲ್‌ ವಾದದ ತಾತ್ವಿಕ ಹಿಂಸೆಯ ಕಾರಣಕ್ಕಾಗಿ ಬಂಧಿತರಾಗಿರುವ ಐವರು ಮಹನೀಯರಲ್ಲಿ ನಾಲ್ವರ ಬಗ್ಗೆ ನಾನು ಓದಿ ಮಾತ್ರ ಬಲ್ಲೆ. ಒಬ್ಬರ ಬಗ್ಗೆ ಮಾತ್ರ ವೈಯಕ್ತಿಕವಾಗಿ ಬಲ್ಲೆ.

ಆತನ ಹೆಸರು ಗೌತಮ್ ನವ್‌ ಲಾಖ ಎಂದು. ದೆಹಲಿಯ ಒಂದು ಹೆಸರಾಂತ ಶ್ರೀಮಂತ ಮಾರವಾಡಿ ಕುಟುಂಬದಲ್ಲಿ ಜನಿಸಿದ ನವ್‌ ಲಾಖ, ಶ್ರೀಮಂತಿಕೆಯ ವಿರುದ್ಧ ಬಂಡೆದಿದ್ದಾರೆ. ಮಾನವ ಹಕ್ಕುಗಳು, ಬಡವರ ಹಕ್ಕುಗಳು ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಹೋರಾಡುತ್ತ ಬಂದಿದ್ದಾರೆ. ಈತನ ಬಂಧು ಬಳಗ ಎಲ್ಲರೂ ಮೋದೀಜಿಯವರ ಬೆಂಬಲಿಗರಾಗಿದ್ದರೆ ಆಶ್ಚರ್ಯಪಡಬೇಕಾದದ್ದಿಲ್ಲ.

ನಾಲ್ಕು ದಶಕಗಳಿಂದ ನಾನು ಗೌತಮ್ ನವ್ ಲಾಖ ಅವರನ್ನು ಬಲ್ಲೆ. ಹಿಂಸೆಯ ತಾತ್ವಿಕತೆಯನ್ನು ಕುರಿತು ನಾನವರ ಜೊತೆಗೆ ಗಂಟೆಗಟ್ಟಲೆ ಚರ್ಚಿಸಿದ್ದೇನೆ. ತಾತ್ವಿಕವಾಗಿ, ವಾಸ್ತವಿಕವಾಗಿ ಇತ್ಯಾದಿ ಎಲ್ಲಾ ರೀತಿಯಿಂದಲೂ ನಾನು ಹಿಂಸೆಯನ್ನು ತಿರಸ್ಕರಿಸುತ್ತೇನೆ ಎಂದು ಅವರಿಗೆ ಅರಿವಿದೆ. ನಮ್ಮ ಸ್ನೇಹಕ್ಕೆ ನಮ್ಮ ತಾತ್ವಿಕತೆ ಅಡ್ಡಿ ಬಂದಿಲ್ಲ. ಗೌತಮ್ ನವ್ ಲಾಖ ಪೊಲೀಸರು ಆಪಾದಿಸುತ್ತಿರುವ ಮೂರ್ಖ ಕೆಲಸ ಮಾಡಿಯಾರು ಎಂದು ನನಗನ್ನಿಸುತ್ತಿಲ್ಲ. ಅದೇನೇ ಇರಲಿ, ಗೌತಮ್ ನವ್‌ ಲಾಖ ತರಹದ ಮೇಧಾವಿಗಳು ಹಿಂಸೆಯನ್ನು ತಾತ್ವಿಕವಾಗಿ ಕೂಡ ತಿರಸ್ಕರಿಸುವ ಕಾಲ ಸನ್ನಿಹಿತವಾಗಿದೆ. ಈ ದೇಶವು ಅಖಂಡವಾಗಿ ಉಳಿಯಬೇಕೆಂದರೆ, ಈ ದೇಶದ ಬಡವರು ಗೌರವದ ಬಾಳುವೆ ಮಾಡಬೇಕೆಂದರೆ ಅಹಿಂಸಾತ್ಮಕವಾಗಿ ಮಾತ್ರವೇ ಸಾಧ್ಯ ಎಂದು ಎಲ್ಲರಿಗೂ ಅರಿವಾಗ ತೊಡಗಿದೆ. ಆದರೆ ಪ್ರಧಾನಿಯವರು ಹಾಗೂ ಅವರ ಹಿಂಬಾಲಕರು ತಮ್ಮ ಉಗ್ರವಾದಿ ಧಾರ್ಮಿಕ ರಾಜಕಾರಣದ ಮೂಲಕ ಈ ಪ್ರಕ್ರಿಯೆಗೆ ಅಡ್ಡಿ ಬರುತ್ತಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಘನತೆ ಬಂದದ್ದು, ಎಮರ್ಜೆನ್ಸಿಯ ವಿರುದ್ಧ ಹೋರಾಡಿದ ಫಲವಾಗಿ. ಸಂಘದ ಸದಸ್ಯರಿಗೆ ಈಚಿನ ಬೆಳವಣಿಗೆಗಳ ಬಗ್ಗೆ ಆತಂಕವಿದೆ ಎಂದು ನಾನು ಆಶಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT