6
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

‘ಬ್ಯಾಡ್‍ಬ್ಯಾಂಕ್’ ಎನ್ನುವ ‘ಈವಿಲ್’!

Published:
Updated:

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಸೂಲಾಗದ ಸಾಲ ಹತ್ತು ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ ಎಂದು ವರದಿಗಳು ಹೇಳುತ್ತಿವೆ. ಇತ್ತೀಚಿನ ದಿನಗಳಲ್ಲಿ ಇದು ಏರುತ್ತಲೇ ಇದೆ. ‘ಅನಿಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ’ ಎನ್ನುವಂತೆ ಇದಕ್ಕೆ ವಿಜಯ್ ಮಲ್ಯ, ನೀರವ್ ಮೋದಿ ಹೆಸರನ್ನು ಹೇಳುವುದು, ಮನಮೋಹನ್ ಸಿಂಗ್ ಸರ್ಕಾರವನ್ನು ದೂರುವುದನ್ನು ಮಾಡಲಾಗುತ್ತಿದೆ. ಇವು ಭಾಗಶಃ ಸತ್ಯವಾದರೂ ಸಮಸ್ಯೆಯ ಗಂಭೀರತೆಯನ್ನು ಅರ್ಥಮಾಡಿಕೊಂಡಂತೆ ಕಾಣುತ್ತಿಲ್ಲ.

ರಘುರಾಮ ರಾಜನ್ ಆರ್‌ಬಿಐ ಗವರ್ನರ್ ಆಗಿದ್ದ ಸಮಯದಲ್ಲಿ ಬ್ಯಾಂಕ್‌ಗಳಲ್ಲಿ ಬ್ಯಾಲನ್ಸ್‌ಶೀಟ್‍ಗಳನ್ನು ಚೊಕ್ಕಟಗೊಳಿಸುವ ಆದೇಶ ಹೊರಡಿಸಿದರು. ಅದರಂತೆ ವಸೂಲಾಗದ ಸಾಲಗಳನ್ನು ಪ್ರತ್ಯೇಕವಾಗಿ ನಮೂದಿಸಬೇಕಾಯಿತು. ಬ್ಯಾಲನ್ಸ್‌ಶೀಟ್ ಚೊಕ್ಕಟಗೊಳಿಸುವ ಪೂರ್ವದಲ್ಲಿ ವಸೂಲಾಗದ ಸಾಲ (ಎನ್‌ಪಿಎ) ಇರಲಿಲ್ಲವೆಂದಲ್ಲ. ಅದು ಗುಪ್ತಗಾಮಿಯಾಗಿತ್ತು. ಈ ಪ್ರಕ್ರಿಯೆಯಿಂದಾಗಿ ವಸೂಲಾಗದ ಸಾಲದ ಅಗಾಧತೆ ಬೆಳಕಿಗೆ ಬಂದಿತು.

ವಸೂಲಾಗದ ಸಾಲಗಳ ಹೊರೆಯಿಂದ ಬ್ಯಾಂಕ್‌ಗಳ ಸಾಲ ನೀಡುವ ಸಾಮರ್ಥ್ಯ ಕುಂದುತ್ತದೆ. ಬ್ಯಾಂಕ್‌ಗಳ ವರಮಾನವು ಸಾಲದ ಮೇಲಿನ ಬಡ್ಡಿಗಳಿಕೆಯನ್ನು ಅವಲಂಬಿಸಿದೆ. ವಿತರಿಸಿದ ಸಾಲ ಮತ್ತು ಅದರ ಮೇಲಿನ ಬಡ್ಡಿ ವಸೂಲಾಗದಿದ್ದಾಗ ವರಮಾನದಲ್ಲಿ ಕೊರತೆಯಾಗುತ್ತದೆ. ಮಾತ್ರವಲ್ಲ ಉದ್ಯಮಕ್ಕೆ ನೀಡುವ ಸಾಲವೂ ಕಮ್ಮಿಯಾಗುತ್ತದೆ. ಮನೆ, ವಾಹನ ಸಾಲಗಳ ಪ್ರಮಾಣವೂ ತಗ್ಗುತ್ತಾ ಹೋಗಿ ಆರ್ಥಿಕ ಚಟುವಟಿಕೆಗಳ ಮೇಲೆ ಗಾಢ ಪರಿಣಾಮ ಬೀರುತ್ತದೆ.

ಬ್ಯಾಂಕ್‌ಗಳು ಎನ್‌ಪಿಎಗಳನ್ನು ನಿಭಾಯಿಸಲು, ತಮ್ಮ ಲಾಭಾಂಶದಲ್ಲಿ ಹೆಚ್ಚಿನ ಮೊತ್ತ ತೆಗೆದು ಇರಿಸುತ್ತವೆ. ಇವು ಬ್ಯಾಂಕ್‌ಗಳ ವರಮಾನವನ್ನು ಕಬಳಿಸುತ್ತಿವೆ. ಈ ಕಾರಣದಿಂದಾಗಿ ಹಿಂದಿನ ವರ್ಷಗಳಲ್ಲಿ ಅತಿ ಹೆಚ್ಚಿನ ಲಾಭವನ್ನು ಘೋಷಿಸಿದ ಬ್ಯಾಂಕ್ ಕೂಡಾ ಈಚೆಗೆ ನಷ್ಟವನ್ನು ದಾಖಲಿಸುತ್ತಿದೆ. ಒಂದು ವರ್ಷದ ಅವಧಿಯಲ್ಲಿ, ಬ್ಯಾಂಕ್‍ಗಳ ನಷ್ಟದ ಪ್ರಮಾಣ ಹೆಚ್ಚಾಗಿರುವ ಸಂದರ್ಭದಲ್ಲಿಯೂ ₹ 1.20 ಲಕ್ಷ ಕೋಟಿ ಎನ್‍ಪಿಎ ವಜಾ ಮಾಡಲಾಗಿದೆ. ದಶಕದಲ್ಲಿಯೇ ಮೊದಲ ಬಾರಿ 
(ಪ್ರ.ವಾ., ಜೂನ್ 16) ಹೀಗಾಗಿದೆ.

ಸಾಲ ನೀಡಿಕೆಯ ಸಂದರ್ಭದಲ್ಲಿ ಬ್ಯಾಂಕ್‌ಗಳಿಗೆ ಸಲ್ಲಿಸಿರುವ ಆಸ್ತಿಗಳ ಮೌಲ್ಯವು ಕೊಟ್ಟ ಸಾಲದ ಮೌಲ್ಯಕ್ಕಿಂತ ಕಡಿಮೆ ಇದ್ದಿರಬಹುದು. ಇದು ಉದ್ದೇಶಪೂರ್ವಕವಾಗಿ ಆಗಿರಲೂ ಸಾಧ್ಯ. ಇದಲ್ಲದೆ ಕಾಲಕ್ರಮದಲ್ಲಿ ಸ್ಥಿರ, ಚರ ಆಸ್ತಿ ಮೌಲ್ಯದಲ್ಲಿ ಇಳಿಕೆಯಾಗುವುದು ಸಾಮಾನ್ಯ. ಇದು ಬ್ಯಾಂಕ್‍ಗಳು ಹೊಂದಿರುವ ಆಸ್ತಿ ಮತ್ತು ಋಣದ ಗುಣಮಟ್ಟದ ಮೇಲೆ ಪರಿಣಾಮ ಬೀರುವುದರಿಂದ ಬ್ಯಾಂಕ್‌ಗಳ ಬಂಡವಾಳದಲ್ಲಿ ಕೊರತೆಯುಂಟಾಗುವ ಸಂಭವವಿರುತ್ತದೆ. ಇದರಿಂದ ಬ್ಯಾಂಕ್‍ಗಳು ದಿವಾಳಿಯಂಚಿಗೆ ಸರಿಯಬಹುದು.

ಆರ್‌ಬಿಐ ಗವರ್ನರ್‌ ಉರ್ಜಿತ್ ಪಟೇಲ್ ಅವರು, ಹಣಕಾಸಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಗೆ ಸಲ್ಲಿಸಿದ ಲಿಖಿತ ಉತ್ತರದಲ್ಲಿ ‘ಸರ್ಕಾರಿ ಬ್ಯಾಂಕ್‌ಗಳ ಕಾರ್ಯನಿರ್ವಹಣೆ ಮೇಲೆ ನಿಗಾ ಇರಿಸಲು ಕೇಂದ್ರೀಯ ಬ್ಯಾಂಕ್‍ಗೆ ಹೆಚ್ಚಿನ ಅಧಿಕಾರ ನೀಡಬೇಕು’ ಎಂದು ಹೇಳಿದ್ದಾರೆ. ಸಮಸ್ಯೆಯ ತೀವ್ರತೆಯನ್ನು ಆರ್‌ಬಿಐ ಮನಗಂಡಿದೆ ಎನ್ನುವುದನ್ನು ಇದು ಸೂಚಿಸುತ್ತದೆ. ಈ ಹೇಳಿಕೆಗೆ ಇನ್ನೊಂದು ಕಾರಣವೂ ಇರಬಹುದು. ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ (ಐಬಿಸಿ) ಜಾರಿಗೆ ಬಂದ 
ನಂತರ ಅದರ ಅನುಷ್ಠಾನದಲ್ಲಿ ರಿಸರ್ವ್‌ ಬ್ಯಾಂಕ್ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಇದರಿಂದ ವಸೂಲಾಗದ ಸಾಲದ ಪ್ರಮಾಣದಲ್ಲಿ ಸುಧಾರಣೆ ಕಂಡುಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಐಬಿಸಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಕೇಂದ್ರೀಯ ಬ್ಯಾಂಕ್, ಸಾಲವನ್ನು ಮರುಪಾವತಿಸಲಾಗದ ಕಂಪನಿಗಳಿಗೆ ಮಾರ್ಚ್ ಒಂದರಿಂದ ಆರು ತಿಂಗಳ ಗಡುವು ನೀಡಿದೆ. ಅದರೊಳಗಾಗಿ ಅವು ಸಂಬಂಧಪಟ್ಟ ಬ್ಯಾಂಕ್‌ಗಳ ಜತೆ ಸಾಲ ಪಾವತಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬಹುದು. ತಪ್ಪಿದಲ್ಲಿ ಅಕ್ಟೋಬರ್ ಒಂದರಿಂದ ಸಾಲ ಉಳಿಸಿಕೊಂಡ ಕಂಪನಿಗಳಿಗೆ ದಿವಾಳಿ ಸಂಹಿತೆ ಅನ್ವಯವಾಗುತ್ತದೆ. ಆರ್‌ಬಿಐ ಈ ಬಗ್ಗೆ ಬ್ಯಾಂಕ್‌ಗಳಿಗೆ ಕಟ್ಟುನಿಟ್ಟಿನ ನಿರ್ದೇಶನವನ್ನೂ ನೀಡಿದೆ.

ಸರ್ಕಾರಕ್ಕೆ ಈ ನಿರ್ದೇಶನ ತಲೆನೋವು ತಂದಿಟ್ಟಂತೆ ಕಾಣುತ್ತದೆ. ವಸೂಲಾಗದ ಸಾಲಗಳಲ್ಲಿ ಬಹುದೊಡ್ಡ ಮೊತ್ತದ ಸಾಲವನ್ನು ಉಳಿಸಿಕೊಂಡಿರುವುದು ವಿದ್ಯುತ್‌ ಉತ್ಪಾದನೆ ಮಾಡುವ ಕಂಪನಿಗಳು. ದೇಶದ ಗಣ್ಯ ಉದ್ದಿಮೆದಾರರ ವಶದಲ್ಲಿರುವ ಈ ಕಂಪನಿಗಳು ಪಡೆದಿರುವ ಸಾಲ ಎರಡೂವರೆ ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಮಿಗಿಲು. ಈ ಉದ್ಯಮಪತಿಗಳ ಮಾಲೀಕತ್ವದಲ್ಲಿ ಹಲವು ದೊಡ್ಡ ಕಂಪನಿಗಳಿವೆ. ಅವುಗಳಲ್ಲಿ ಲಾಭದಾಯಕ ಉದ್ದಿಮೆಗಳೂ ಇವೆ. ಒಂದು ಕಂಪನಿಗೆ ನಷ್ಟ ಮತ್ತು ದಿವಾಳಿ ಸಂಹಿತೆ ಅನ್ವಯಿಸಿದರೆ ಅದರ ಪರಿಣಾಮವು ಸೋದರ ಕಂಪನಿಗಳ ಮೇಲೂ ಆಗುತ್ತದೆ. ಆಯ್ದ ಉದ್ಯಮಿಗಳಿಗೆ ಸರ್ಕಾರದ ಜತೆಗಿರುವ ಬಾಂಧವ್ಯವನ್ನು ಪರಿಗಣಿಸಿದಾಗ ಇಂತಹ ತೀಕ್ಷ್ಣ ಕ್ರಮಕ್ಕೆ ಸರ್ಕಾರ ಹಸಿರು ನಿಶಾನೆ ತೋರುವುದು ಅನುಮಾನ.

ನೀತಿ ಆಯೋಗದ ಉಪಾಧ್ಯಕ್ಷರಾಗಿದ್ದ ಅರವಿಂದ ಪನಗರಿಯಾ ಅವರು, ಆಸ್ತಿ ಮರು ನಿರ್ಮಾಣ (ಅಸೆಟ್ ರಿಕನ್‌ಸ್ಟ್ರಕ್ಷನ್) ಸಂಸ್ಥೆಯ ರೀತಿಯಲ್ಲಿ ‘ಬ್ಯಾಡ್ ಬ್ಯಾಂಕ್’ ಸ್ಥಾಪಿಸುವ ಕುರಿತು ವರ್ಷದ ಹಿಂದೆ ಪ್ರಸ್ತಾಪ ಮಾಡಿದ್ದರು. ವಿತ್ತಖಾತೆಯನ್ನು ತತ್ಕಾಲಕ್ಕೆ ವಹಿಸಿಕೊಂಡಿರುವ ಪೀಯೂಷ್ ಗೋಯಲ್ ಈಗ ಅದಕ್ಕೆ ಚಾಲನೆ ನೀಡಿದ್ದಾರೆ. ಪರಿಶೀಲನೆಗೆ ಸಮಿತಿಯೊಂದನ್ನು ರಚಿಸುವ ಇಂಗಿತವನ್ನು ಅವರು ವ್ಯಕ್ತ ಪಡಿಸಿರುವುದನ್ನು ಗಮನಿಸಿದಾಗ ‘ಐಬಿಸಿ’ಗೆ ಪರ್ಯಾಯವೊಂದನ್ನು ಹುಡುಕಿ ಉದ್ಯ
ಮಿಗಳನ್ನು ಪಾರು ಮಾಡಲು ಸರ್ಕಾರ ಹೊರಟಂತಿದೆ.

‘ಬ್ಯಾಡ್ ಬ್ಯಾಂಕ್’ ಸ್ಥಾಪನೆಯ ಉದ್ದೇಶ ವಸೂಲಾಗದ ಸಾಲಗಳನ್ನು ವಹಿಸಿಕೊಳ್ಳುವುದು. ಸಾಲ ಪಡೆದವರು ಒದಗಿಸಿದ ಆಸ್ತಿ ಮತ್ತಿತರ ಸ್ಥಿರ, ಚರ ಸೊತ್ತುಗಳು ಬ್ಯಾಡ್ ಬ್ಯಾಂಕ್‍ನ ವಶಕ್ಕೆ ಹೋಗುತ್ತವೆ. ಅದರಿಂದ ಆಸ್ತಿ ಅಮೌಲ್ಯೀಕರಣದಿಂದಾಗುವ ನಷ್ಟ ತಪ್ಪುತ್ತದೆ. ಈಗಿನ ಖಾಸಗಿ ಆಸ್ತಿ ಮರು ನಿರ್ಮಾಣ ಸಂಸ್ಥೆಗಳು ಅಡಮಾನದ ಸೊತ್ತನ್ನು ತಮಗೆ ಸೂಕ್ತ ಕಂಡ ಬೆಲೆಯಲ್ಲಿ ಖರೀದಿಸುತ್ತಿದ್ದವು. ಸಾಲದ ಉಳಿಕೆ ಭಾಗವು ವಸೂಲಾಗದ ಸಾಲ ಎಂದೇ ಪರಿಗಣಿಸಲಾಗುತ್ತಿತ್ತು.

ವಸೂಲಾಗದ ಸಾಲಗಳನ್ನು ಕೊಂಡುಕೊಳ್ಳಲು ಬ್ಯಾಡ್ ಬ್ಯಾಂಕ್‍ಗೆ ಅವಶ್ಯವಾದ ಮೂಲ ಧನವನ್ನು ಹೊಂದಿಸುವುದು ಸುಲಭವಲ್ಲ. ಇದರಲ್ಲಿ ಆರ್‌ಬಿಐ ದೊಡ್ಡ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕೆಂದು ಅರವಿಂದ ಪನಗರಿಯಾ ಹೇಳಿದ್ದರು. ಆದರೆ ಇದು ಅಸಾಧ್ಯದ ಮಾತು. ಮರಳಿಬಾರದ ಹಣಕ್ಕೆ ಹೆಗಲು ಕೊಡಲು ಹೂಡಿಕೆದಾರರೂ ಸಿದ್ಧರಿರುವುದಿಲ್ಲ. ಅಂತಿಮವಾಗಿ ಬ್ಯಾಡ್ ಬ್ಯಾಂಕ್ ರಚನೆಯ ಯೋಜನೆ ಕಾರ್ಯಗತವಾದರೆ ಕೇಂದ್ರ ಸರ್ಕಾರ ಅದರ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ.

ಕೋಟ್ಯಂತರ ರೂಪಾಯಿ ವಸೂಲಾಗದ ಸಾಲಗಳನ್ನು ವಹಿಸಿಕೊಳ್ಳುವುದು ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ. ವಿತ್ತಮಂತ್ರಿಸರ್ಕಾರದ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆಂದು ರೈತರ ಸಾಲ ಮನ್ನಾ ಮಾಡುವುದನ್ನು ಖಡಾಖಂಡಿತವಾಗಿ ಒಪ್ಪಲಿಲ್ಲ. ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರುತ್ತಿದೆ. ವಿತ್ತೀಯ ಕೊರತೆಯಿಂದ ವಿದೇಶಿ ವಿನಿಮಯದ ಮೇಲೆ ಪರಿಣಾಮ ಬೀಳುವ ಲಕ್ಷಣಗಳು ಕಾಣಿಸುತ್ತಿವೆ. ಇಂತಹ ಸಂದರ್ಭದಲ್ಲಿ ಬ್ಯಾಡ್‍ಬ್ಯಾಂಕ್ ಒಂದು ‘ಈವಿಲ್’ ಆಗಿ ಪರಿಣಮಿಸುವ ಸಂಭವವೇ ಹೆಚ್ಚು.

ಬ್ಯಾಂಕ್‍ಗಳಿಗೇನೋ ಬ್ಯಾಡ್ ಬ್ಯಾಂಕ್ ರಚನೆಯಿಂದ ಅನುಕೂಲವಿದೆ. ವಸೂಲಾಗದ ಸಾಲಗಳು ಬ್ಯಾಡ್ ಬ್ಯಾಂಕ್‍ನ ವಶಕ್ಕೆ ಹೋಗುವುದರಿಂದ ಬ್ಯಾಂಕ್‍ಗಳ ವರಮಾನದಲ್ಲಿ ವಜಾಮಾಡುವ ಅಗತ್ಯವಿಲ್ಲ. ಇದರಿಂದ ಲಾಭಾಂಶದಲ್ಲಿ ಏರಿಕೆ ದಾಖಲಿಸಬಹುದು.

ಬ್ಯಾಂಕ್‍ಗಳಿಗಿಂತ ಹೆಚ್ಚಿನ ಅನುಕೂಲ ಉದ್ಯಮಿಗಳಿಗೆ ಆಗಲಿದೆ. ನಷ್ಟ ಮತ್ತು ದಿವಾಳಿ ಸಂಹಿತೆಯಿಂದ ಅವರು ಪಾರಾಗುತ್ತಾರೆ. ಬ್ಯಾಡ್ ಬ್ಯಾಂಕ್ ಸರ್ಕಾರದ ಅಧೀನ ಸಂಸ್ಥೆಯಾದ್ದರಿಂದ ಪಾವತಿ ಪ್ರಕ್ರಿಯೆ ಅನುಕೂಲಕರವಾಗಿರುತ್ತದೆ. ಸಾಲ ಮಾಡಿ ತುಪ್ಪ ತಿಂದವರು ನಿಶ್ಚಿಂತೆಯಿಂದ ಅರಗಿಸಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !