ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಆರ್ಡರ್‌ ಕ್ಯಾನ್ಸಲ್‌ ಮಾಡುವ ಮುನ್ನ...

ಸಣ್ಣ ಮಟ್ಟಿಗಿನ ಸ್ವಾವಲಂಬನೆಗೆ ದಾರಿ ಮಾಡಿಕೊಂಡಿರುವ ಡೆಲಿವರಿ ಬಾಯ್‌ಗಳ ಜೀವಹಾನಿಯಾಗದಂತೆ ನೋಡಿಕೊಳ್ಳಬೇಕಾದದ್ದು ಎಲ್ಲರ ಜವಾಬ್ದಾರಿ
Last Updated 17 ಮೇ 2022, 19:45 IST
ಅಕ್ಷರ ಗಾತ್ರ

ಸಣ್ಣ ಮಟ್ಟಿಗಿನ ಸ್ವಾವಲಂಬನೆಗೆ ದಾರಿ ಮಾಡಿಕೊಂಡಿರುವ ಡೆಲಿವರಿ ಬಾಯ್‌ಗಳ ಜೀವಹಾನಿಯಾಗದಂತೆ ನೋಡಿಕೊಳ್ಳಬೇಕಾದದ್ದು ಎಲ್ಲರ ಜವಾಬ್ದಾರಿ...

ಈ ವರ್ಷದ ಜನವರಿಯಲ್ಲಿ ದೆಹಲಿಯಲ್ಲಿ 36 ವರ್ಷದ ಸಲೀಲ್ ತ್ರಿಪಾಠಿ ಫುಡ್ ಡೆಲಿವರಿ ಮಾಡುವಾಗ ಅಪಘಾತವಾಗಿ ಪ್ರಾಣ ಕಳೆದುಕೊಂಡರು. ಜೋರು ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಅವರು ಕೆಲಸಕ್ಕೆ ಹೋಗಿದ್ದರು. ಹೋಟೆಲ್‍ನಲ್ಲಿ ಮ್ಯಾನೇಜರ್ ಆಗಿ ತಿಂಗಳಿಗೆ ₹ 60 ಸಾವಿರ ದುಡಿಯುತ್ತಿದ್ದ ಸಲೀಲ್‌, ಕೋವಿಡ್ ಮೊದಲ ಅಲೆಯಲ್ಲಿ ಆ ಹೋಟೆಲ್ ಮುಚ್ಚಿದ ಕಾರಣ ಕೆಲಸ ಕಳೆದುಕೊಂಡಿದ್ದರು. ಎರಡನೇ ಅಲೆಯಲ್ಲಿ ಮತ್ತೊಂದು ಕೆಲಸವನ್ನೂ ಕಳೆದು ಕೊಂಡರು. ಕೋವಿಡ್‍ನಿಂದ ತಂದೆ ತೀರಿಕೊಳ್ಳುವ ಮೊದಲು ವೆಂಟಿಲೇಟರ್‌ನಲ್ಲಿ ತಿಂಗಳುಗಟ್ಟಲೆ ಇದ್ದ ಕಾರಣ ಆಸ್ಪತ್ರೆಯ ಬಿಲ್ ಮುಗಿಲು ಮುಟ್ಟಿತ್ತು. ಶಾಲೆಯ ಫೀಸ್ ಎಂಟು ಸಾವಿರ ರೂಪಾಯಿ ಕಟ್ಟಲಾಗದೆ ಮಗ ಶಾಲೆಯಿಂದ ಹೊರಹಾಕಲ್ಪಟ್ಟ. ಅದಾದ ಮೇಲೆ ಸಲೀಲ್‌ ಅನಿವಾರ್ಯವಾಗಿ ಡೆಲಿವರಿ ಬಾಯ್ ಕೆಲಸ ಮಾಡಲಾರಂಭಿಸಿದರು.

ತಿಂಗಳಿಗೆ ₹ 10 ಸಾವಿರ ಸಂಬಳದಲ್ಲೇ ಕುಟುಂಬ ನಿರ್ವಹಿಸಬೇಕಾದ ದುಃಸ್ಥಿತಿ. ಕಂಪನಿ ಪರಿಹಾರವನ್ನೇನೋ ನೀಡಿದೆ. ಜನರೂ ಕ್ರೌಡ್ ಫಂಡಿಂಗ್ ಮೂಲಕ ಸಹಾಯ ಮಾಡಿದ್ದಾರೆ. ಆದರೆ ಹತ್ತು ವರ್ಷದ ಅವರ ಮಗನಿಗೆ ತಂದೆಯನ್ನು, ವೃದ್ಧ ತಾಯಿಗೆ ಮಗನನ್ನು, ಹೆಂಡತಿಗೆ ಗಂಡನನ್ನು ತಂದುಕೊಡುವವರು ಯಾರು? ಆ ಖಾಲಿತನವನ್ನು ತುಂಬುವವರು ಯಾರು?

ಆರ್ಡರ್ ಮಾಡಿದ ಕೇವಲ ಹತ್ತು ನಿಮಿಷದಲ್ಲಿ ಮನೆಬಾಗಿಲಿಗೆ ಆಹಾರ ತಲುಪಿಸುವುದಾಗಿ ಕಂಪನಿ ಯೊಂದು ಇತ್ತೀಚೆಗೆ ಹೇಳಿದ್ದನ್ನು ನೋಡಿ ಸಲೀಲ್‌ ಪ್ರಕರಣ ನೆನಪಾಯಿತು. ಮಾಡಿದ ಆಹಾರ ಬಿಸಿ ಮಾಡಿಕೊಳ್ಳಲಿಕ್ಕೇ ನಮಗೆ ಹತ್ತು ನಿಮಿಷ ಬೇಕು. ಇನ್ನು ಫೋನ್ ಕರೆ ಸ್ವೀಕರಿಸಿ, ಆಹಾರ ಪ್ಯಾಕ್ ಮಾಡಿ, ಎಷ್ಟೇ ಹತ್ತಿರವಾದರೂ ಹತ್ತು ನಿಮಿಷದಲ್ಲಿ ತಲುಪಿಸುವುದೆಂದರೆ, ಡೆಲಿವರಿ ಹುಡುಗರ ಮೇಲೆ ಇರಬಹುದಾದ ಒತ್ತಡವನ್ನು ಅಂದಾಜಿಸಬಹುದು. ಅಪರಾತ್ರಿಯಲ್ಲೂ ಈ ಕೆಲಸ ನಡೆದೇ ಇರುತ್ತದೆ.

ಕೆಲವು ಗ್ರಾಹಕರೂ ಅಷ್ಟೆ, ಹತ್ತು ನಿಮಿಷ ತಡವಾದರೂ ನೆಗೆಟಿವ್ ರೇಟಿಂಗ್ ಕೊಡುವುದು, ಆರ್ಡರ್‌ ಕ್ಯಾನ್ಸಲ್ ಮಾಡುವುದು ಮಾಡುತ್ತಿರುತ್ತಾರೆ. ಹತ್ತು ನಿಮಿಷ ನಾವು ತಿನ್ನುವುದು ತಡವಾದರೂ ಪರವಾಗಿಲ್ಲ, ಮಿತಿಮೀರಿದ ವೇಗದಿಂದ ಜೀವ ವೊಂದು ಹೋಗಬಾರದು ಎಂದು ಯೋಚಿಸುವ ಬದಲು ಈ ಕಂಪನಿ ಹತ್ತು ನಿಮಿಷದಲ್ಲಿ ಕೊಡಲಿಲ್ಲ, ಮತ್ತೊಂದು ಕಂಪನಿಯಿಂದ ಆರ್ಡರ್ ಮಾಡೋಣ ಎನ್ನುವವರೂ ಇದ್ದಾರೆ. ಇದು ಕಂಪನಿಗಳ ನಡುವೆ ಅನಾರೋಗ್ಯಕರ ಪೈಪೋಟಿಗೆ ಕಾರಣವಾಗುತ್ತದೆ. ಗ್ರಾಹಕರು ಮತ್ತು ಕಂಪನಿಗಳ ನಡುವೆ ಸಿಕ್ಕಿ ನರಳು ವುದು ಮಾತ್ರ ಎಂಟೋ ಹತ್ತೋ ಸಾವಿರ ರೂಪಾಯಿಗೆ ದುಡಿಯಲು ಬರುವ ಈ ಹುಡುಗರು! ಮುನ್ನೂರು ರೂಪಾಯಿಗೆ ಪ್ರತಿದಿನ ಜೀವ ಕೈಲಿ ಹಿಡಿದುಕೊಂಡು ತಮ್ಮ ಗಮ್ಯ ತಲುಪಬೇಕಿರುವ ಈ ಹುಡುಗರಿಗಾಗಿ ನಮ್ಮ ಮನಸ್ಸು ಅರೆಕ್ಷಣವಾದರೂ ಮಿಡಿಯದಿದ್ದರೆ ನಾವೆಂಥ ಮನುಷ್ಯರು?!

ಇಂತಹ ಅಪಘಾತಗಳು ಬೇಡುವ ಪ್ರತೀ ಬಲಿಯ ಹಿಂದೆಯೂ ಒಂದು ಬಡ ಕುಟುಂಬದ ಕಥೆಯಿರುತ್ತದೆ. ಬಹುತೇಕ ಸಾಯುವವರು ಹದಿನೆಂಟರಿಂದ ಮೂವತ್ತರ ಒಳಗಿನವರು. ಅವರಲ್ಲಿ ಸಂಜೆ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಯಿರುತ್ತಾನೆ, ಕಾಯಿಲೆಯಿಂದ ಹಾಸಿಗೆ ಹಿಡಿದಿರುವ ಅಮ್ಮನ ಔಷಧಿ ಖರ್ಚಿಗೆ ಅನಿವಾರ್ಯವಾಗಿ ದುಡಿಯಲು ಹೋದ ಹುಡುಗನಿರುತ್ತಾನೆ, ಸಣ್ಣ ಸಂಬಳದ ಅಪ್ಪನಿಗೆ ಹೊರೆಯಾಗುವುದು ಬೇಡ ಎಂದು ಈ ಕೆಲಸ ಮಾಡುತ್ತಿರುವವರಿರುತ್ತಾರೆ. ಇನ್ನು ಡೆಲಿವರಿ ಬಾಯ್ ಎಂದರೆ ಅದು ಥ್ಯಾಂಕ್‍ಲೆಸ್ ಜಾಬ್! ಸಾಮಾನ್ಯ ದಿನವಿರಲಿ, ಹಬ್ಬವಿರಲಿ, ರಜೆಯಿರಲಿ ಬೆನ್ನಿಗೋ ಗಾಡಿಗೋ ಭಾರವಾದ ಬ್ಯಾಗ್ ಹಾಕಿಕೊಂಡು ಕಚೇರಿ, ಮನೆಗಳಿಗೆ ಆಹಾರ ಒದಗಿಸುವ ಈ ಹುಡುಗರು ಪ್ರತೀ ಮಹಾನಗರದ ಅವಿಭಾಜ್ಯ ಅಂಗವೇ ಆಗಿದ್ದಾರೆ. ಗಿಜಿಗುಡುವ ಟ್ರಾಫಿಕ್ಕಿನಲ್ಲಿ, ಯಾವುದೋ ಮೂಲೆಯಲ್ಲಿರುವ ಲೊಕೇಶನ್ ಹುಡುಕುತ್ತ, ಸಮಯ ಆಗಿಹೋಯಿತು ಎಂದು ಪರಿತಪಿಸುವ ಈ ಹುಡುಗರಿಗೆ ಸಂಬಳವೂ ಕೆಲಸಕ್ಕೆ ತಕ್ಕಂತೆ ಸಿಗುವುದಿಲ್ಲ.

ಒಂದೆರಡು ವರ್ಷಗಳ ಹಿಂದೆ, ಮಳೆಯಿಂದ ಸಮಯಕ್ಕೆ ಸರಿಯಾಗಿ ಡೆಲಿವರಿ ಕೊಡಲಾಗದೆ, ಗ್ರಾಹಕ ಆಹಾರ ಪಡೆಯಲು ನಿರಾಕರಿಸಿದ್ದರಿಂದ ಆ ಹಣವನ್ನು ತಾನೇ ಭರಿಸಬೇಕು ಎಂದು ಪಾಕಿಸ್ತಾನದ ಡೆಲಿವರಿ ಬಾಯ್ ಒಬ್ಬ ಅಳುತ್ತ ನಿಂತಿದ್ದ ಚಿತ್ರ ವೈರಲ್ ಆಗಿತ್ತು! ಹತ್ತು ನಿಮಿಷದಲ್ಲಿ ಡೆಲಿವರಿ ನೀಡಲೇ ಬೇಕೆಂದು ತಮ್ಮ ಹುಡುಗರನ್ನು ಒತ್ತಾಯಿಸುವ ಈ ಕಂಪನಿಗಳು, ರಸ್ತೆ ಸುರಕ್ಷತೆಯ ಬಗ್ಗೆ ಅವರಿಗೆ ಮಾಹಿತಿ ನೀಡುತ್ತೇವೆ, ಜೀವವಿಮೆಯನ್ನೂ ನೀಡುತ್ತೇವೆ, ತಡವಾದರೆ ದಂಡ ಹಾಕುವುದಿಲ್ಲ ಎಂದು ಹೇಳುವುದು ತಮಾಷೆಯೆನಿಸುತ್ತದೆ.

ನಿಜ, ಎಷ್ಟೋ ಹುಡುಗರಿಗೆ ಈ ಡೆಲಿವರಿ ಬಾಯ್ ಕೆಲಸ ಸಣ್ಣ ಮಟ್ಟಿಗಿನ ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟಿದೆ. ಆದರೆ ಜೀವಹಾನಿಯಾಗದಂತೆ ನೋಡಿಕೊಳ್ಳಬೇಕಾದದ್ದು ಎಲ್ಲರ ಜವಾಬ್ದಾರಿ. ಹತ್ತು ನಿಮಿಷಕ್ಕೆ ಆಹಾರ ತಲುಪಿಸುವ ಸಾಹಸದ ಕೆಲಸಕ್ಕೆ ಕೈಹಾಕದಿರುವುದೇ ಒಳಿತು. ಕಂಪನಿಗಳೂ ಮಾನವೀಯತೆಯಿಂದ ವರ್ತಿಸಬೇಕು. ನಾವೂ ಅಷ್ಟೆ, ತಡವಾದರೆ ಮುಖ ಕೆಂಪಗೆ ಮಾಡುವ ಮುನ್ನ ಕೊಂಚ ಯೋಚಿಸಬೇಕು. ಟಿಪ್ಸ್ ಕೊಡದಿದ್ದರೂ ಪರವಾಗಿಲ್ಲ, ಆರ್ಡರ್ ಕ್ಯಾನ್ಸಲ್ ಮಾಡದಿದ್ದರಾಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT