ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸ್ನೇಹದ ಹಕ್ಕಿ ಚೀಂವ್‌ಗುಡುತ್ತಿದೆ

ತನ್ನವರನ್ನು ತಿದ್ದುತ್ತಾ ಸಾಗುವ ಹಕ್ಕು ದಕ್ಕುವುದು ಅಪ್ಪಟ ಗೆಳೆತನಕ್ಕಷ್ಟೇ
Last Updated 27 ಜುಲೈ 2020, 20:57 IST
ಅಕ್ಷರ ಗಾತ್ರ

ಮೂಲತಃ ಸಂಘಜೀವಿಯಾದ ಮನುಷ್ಯ ಆಧುನೀಕರಣಗೊಂಡಂತೆ, ಸಂಪರ್ಕ ಕ್ರಾಂತಿಯಿಂದ ಸಂಕುಚಿತಗೊಂಡ ತನ್ನ ಜಗತ್ತಿನಂತೆಯೇ ಉದಾತ್ತ ಮೌಲ್ಯಗಳನ್ನೂ ಮಿತಿಗೊಳಿಸಿಕೊಂಡ. ಪ್ರೀತಿ, ಸ್ನೇಹ, ನಂಬುಗೆಯ ಜಾಗದಲ್ಲಿ ಸ್ವಾರ್ಥ, ದುರಾಸೆ, ದ್ವೇಷ, ಅಸಹನೆಯನ್ನು ಬಿತ್ತಿ ಬೆಳೆದು ತನ್ನ ಬದುಕನ್ನೂ ಬದುಕುವ ಜಗತ್ತನ್ನೂ ಸಂಕೀರ್ಣಗೊಳಿಸಿಕೊಂಡ. ತನ್ನ ವಿಲಕ್ಷಣ ನಿಲುವು- ನಡವಳಿಕೆಗಳಿಂದ ತನಗೇ ತಾನೊಬ್ಬ ನಿಗೂಢನಂತೆ ಬದುಕುತ್ತಿರುವ ಮನುಷ್ಯನನ್ನು ಸರಿಹೊತ್ತಿನಲ್ಲಿ ಪೊರೆಯಬೇಕಾದದ್ದು ಅದೇ ಮನುಷ್ಯಪ್ರೀತಿ ಮತ್ತು ಗೆಳೆತನವೆಂಬ ನವಿರು ಭಾವ!

ಪರಸ್ಪರ ಅಪನಂಬಿಕೆಯಲ್ಲಿ ಅಪರಿಚಿತರಂತೆ ಅಸ್ಪೃಶ್ಯರಾಗಿ, ತಾವಷ್ಟೇ ಎಂಬಂತೆ ಬಾಳಹೊರಟಿರುವ ಜೀವಗಳಿಗೆ ತೋರಬೇಕಾದ ಸರಿದಾರಿ ಅದೇ. ಎದೆಗಳ ನಡುವಿನ ಕದವನು ತೆರೆದು ಹೃದಯಸಂವಾದಕ್ಕೆ ಮುಂದಾದರೆ ಎದುರಿನ ಸಂಕಟಕ್ಕೂ ಸಂಕಷ್ಟಕ್ಕೂ ಮದ್ದು ಸಿಗಲಿದೆ.
‘ಗೆಳೆತನದ ಸುವಿಶಾಲ ಆಲದಡಿ ಪಸರಿಪ ತಣ್ಣೆಳಲ ತಂಪಿನಲಿ ತಂಗಿರುವೆ ನಾನು...’ ಅಮೂಲ್ಯ ಸಂಬಂಧವೊಂದರ ಮಾಧುರ್ಯವನ್ನು ಸಾರುವ ಕುವೆಂಪು ಅವರ ಸಾಲುಗಳಿವು. ಗೆಳೆತನ ಎಂಬುದು ಎದೆಯೊಳಗೆ ಬೆಳೆಯುವ ಕಾತರ, ಉತ್ಸಾಹ, ಲವಲವಿಕೆ, ನಿರೀಕ್ಷೆಗಳ ಹೂದೋಟ. ಮನಸ್ಸಿನ ಭಾರವಿಳಿಸಿ, ತೇವಗೊಳಿಸುವ ಕಾರುಣ್ಯಕೊಳ. ಮಾತ್ರವಲ್ಲ ಒಳಧ್ವನಿಯನ್ನು ಬೆಂಬಲಿಸುವ, ಸಂತೈಸುವ ವೇದಿಕೆ. ಸಮಾನ ಮನಸ್ಕರನ್ನು ತೆಕ್ಕೆಗೆ ಸೆಳೆಯುವ ಅಯಸ್ಕಾಂತೀಯ ತೀವ್ರತೆ. ಅದಕ್ಕೇ ಸಮಾನ ದುಖಿಃಗಳು ಹತ್ತಿರವಾಗುವುದು ಸಾಮಾನ್ಯ.

ಕಮರಿದ ಮನಸ್ಸು ಗೆಳೆಯನದೊಂದು ಆಪ್ತನುಡಿಗೆ, ನೇವರಿಕೆಗೆ ಚಿಗುರಿಕೊಳ್ಳುತ್ತದೆ. ಹಾರುಹಕ್ಕಿ ತನ್ನ ರೆಕ್ಕೆಯನ್ನು ಬಿಚ್ಚಿಕೊಳ್ಳುತ್ತದೆ. ಅದು, ನೊಂದ ಮನಸ್ಸಿಗೆ ಜೀವನಪ್ರೀತಿಯನ್ನು ಹನಿಸುವ ಮುಂಗಾರು, ಅನಂತ ದಿಗಂತಯಾನದಲ್ಲಿ ದಣಿವರಿಯದೇ ಹಾರಿ ಗೂಡು ಸೇರಲು ಹಕ್ಕಿಯ ರೆಕ್ಕೆಗೆ ದಕ್ಕುವ ಬಲದ ಮೂಲ.

ಗೆಳೆತನವೆಂಬುದು ಸರ್ವವ್ಯಾಪಿ. ಅದು ನಿರ್ಗುಣ, ನಿರಾಕಾರ, ಎಳೆಯರಿಂದ ಹಿರಿಯರವರೆಗೆ ಎಲ್ಲ ವರ್ಗದ ಜನರಿಗೂ ಕಷ್ಟಕಾಲದಲ್ಲಿ ಕಣ್ಣೊರೆಸಲು ಒಂದು ಕರವಸ್ತ್ರ ಬೇಕು, ಒರಗಲು ಹೆಗಲು, ಮನಸ್ಸಿನ ಗೋಳು ಕೇಳುವ ಕಿವಿ, ಮಿಡಿಯುವ ಮನಸ್ಸು ಇರಬೇಕು ಎಂಬಂತಹ ಬೇಡಿಕೆಗಳು ಕೈಗೂಡುವುದು ಗೆಳೆತನದ ಪರಿಧಿಯಲ್ಲಿಯೇ. ಆತ್ಮೀಯರೊಂದಿಗಿನ ಹರಟೆ, ತಮಾಷೆ, ಒಡನಾಟಗಳಿಗೆ ಎಲ್ಲರ ದಿನಚರಿಯಲ್ಲೂ ಜಾಗವಿದೆ. ಆಪ್ತ ಸಂಬಂಧದಲ್ಲಿ ವಿನಿಮಯಗೊಳ್ಳುವ ಪ್ರೀತಿ, ಭಾವುಕತೆ, ನೋವು-ನಲಿವು, ಕನಸು, ನಿರ್ಧಾರಗಳಿಗೆಲ್ಲಾ ಅಲ್ಲೊಂದು ದಿಕ್ಸೂಚಿ ತೋರುತ್ತದೆ. ತಪ್ಪೊಪ್ಪಿಗೆ, ಬೇಸರ, ಪಶ್ಚಾತ್ತಾಪಗಳಿಗೂ ಸಾಂತ್ವನವಿದೆ, ಅಲ್ಲೊಂದು ನಿಲ್ದಾಣವಿದೆ.

ಗೆಳೆತನ ಎಂಬುದು ಬಾಳ್ವೆಯ ಜಡತ್ವಕ್ಕೆ ಒದಗುವ ಸಾವಯವ ಸಾರ. ‘ಸ್ನೇಹ ಅತಿ ಮಧುರ... ಸ್ನೇಹ ಅದು ಅಮರ...’ ಸಾಲುಗಳು ಕಾಲೇಜು ಹುಡುಗ-ಹುಡುಗಿಯರ ಆಟೊಗ್ರಾಫ್‍ನ ಪುಟವೊಂದನ್ನು ಅಲಂಕರಿಸಿರಲೇಬೇಕು ಅನ್ನುವುದು ಅಘೋಷಿತ ನಿಯಮ. ಕಾಡುವ ಆ ಸಾಲುಗಳಲ್ಲಿ ಸತ್ಯವಿದೆ, ಆರ್ದ್ರತೆಯಿದೆ. ಏಕೆಂದರೆ, ಗೆಳೆತನ ಜಗತ್ತಿನ ಎಲ್ಲಾ ಜಾತಿ, ಧರ್ಮ, ಆಸ್ತಿ, ಅಂತಸ್ತು, ವಯಸ್ಸು, ರೂಪ, ಬಣ್ಣ, ಲಿಂಗ, ಭಾಷೆ, ದೇಶ ಕಾಲವನ್ನೂ ಮೀರಿದ ಭಾವ. ಅದು ಜೀವ ಬೆಸೆಯುವ ಬಂಧ. ಕೆಲವೆಡೆ ಒಡಹುಟ್ಟಿದವರ ಸಂಬಂಧಕ್ಕಿಂತ ಒಡಮೂಡಿದವರ ಬಾಂಧವ್ಯವೇ ಲೇಸು ಅನ್ನಿಸುವುದಿದೆ.

ಯಾರು ಕೈಬಿಟ್ಟರೂ ಗೆಳೆಯನೊಬ್ಬನಿದ್ದಾನೆ ಎಂಬ ನಂಬುಗೆಯೇ ಯುವ ಮನಸ್ಸುಗಳ ಶಕ್ತಿ. ಆಪತ್ತಿಗಾಗುವವನೇ ನಿಜವಾದ ಗೆಳೆಯ. ಕೃಷ್ಣ-ಕುಚೇಲರು, ಕರ್ಣ-ಧುರ್ಯೋಧನರ ಗೆಳೆತನದ್ದು ಅಂಥದ್ದೇ ನಿದರ್ಶನ. ತನ್ನನ್ನು ತಿದ್ದಿಕೊಳ್ಳುತ್ತಾ, ತನ್ನವರನ್ನು ತಿದ್ದುತ್ತಾ ಸಾಗುವ ಹಕ್ಕು ದಕ್ಕುವುದು ಅಪ್ಪಟ ಗೆಳೆತನಕ್ಕಷ್ಟೇ.

ಬದುಕಿನ ಪ್ರಯಾಣದಲ್ಲಿ ತಾನು ಬೆಳೆಯುತ್ತ ಜೊತೆಗಾರನನ್ನೂ ಒಳಗೊಳ್ಳುತ್ತಾ ಬೆಳೆಸುತ್ತಾ ಸಾಗುವ ಸೊಬಗೇ ಚಂದ. ಅಳತೆಗೆ ನಿಲುಕದ, ಕಾಸಿಂದ ಕೊಳ್ಳಲಾಗದ ಮಧುಮಧುರ ಅನುಭೂತಿಯದು.

ಹಾಗಿದ್ದೂ ಗೆಳೆಯರ ಆಯ್ಕೆಯಲ್ಲಿ ಜಾಗರೂಕತೆ ಅವಶ್ಯಕ. ಒಬ್ಬಾತನ ಗೆಳೆಯರನ್ನು ನೋಡಿ ಆತನ ವ್ಯಕ್ತಿತ್ವವನ್ನು ಅಳೆಯಬಹುದಂತೆ. ಸನ್ನಡತೆ, ಸದಾಚಾರವು ಅಸಾಧ್ಯವನ್ನು ಸಾಧ್ಯ ಮಾಡಬಲ್ಲ ತಾಕತ್ತು, ಯಶಸ್ಸಿಗೆ ಪ್ರೇರಣೆಯಾಗಬಲ್ಲ ಸ್ಫೂರ್ತಿ ಹೊಂದಿರುವಂತೆಯೇ, ಸಹವಾಸ ದೋಷವು ಕೆಲವೊಮ್ಮೆ ದುಶ್ಚಟ, ದುರ್ವರ್ತನೆಗಳಿಗೂ ಕಾರಣವಾಗುವುದಿದೆ.

ಯುದ್ಧದಿಂದ ಗೆಲ್ಲಲಾಗದ್ದನ್ನು ಸ್ನೇಹಹಸ್ತ ಚಾಚಿ ಗೆದ್ದವರಿದ್ದಾರೆ. ದೇಶ-ಗಡಿ ವ್ಯಾಜ್ಯಗಳನ್ನೂ ನಂಬಿಕಸ್ತ ಗೆಳೆತನವೊಂದು ರಾಜತಾಂತ್ರಿಕವಾಗಿ ಗೆಲ್ಲಬಲ್ಲದು ಎಂಬುದಕ್ಕೆ ನಿದರ್ಶಗಳು ಚರಿತ್ರೆಯಲ್ಲಿ ಸಿಗುತ್ತವೆ.

ಇಥಿಯೋಪಿಯಾದ ಶಾಂತಿದೂತ ‘ಅಬಿ ಅಹಮದ್’ ಇತ್ತೀಚಿನ ಭರವಸೆಯಾಗಿ ಉಳಿದಿದ್ದಾರೆ. ಜಾತಿ-ಧರ್ಮ, ಅಸಹನೆ, ಆರ್ಥಿಕತೆ, ಅಹಂಕಾರ, ಭಯೋತ್ಪಾದನೆ, ಬೇಲಿ-ಗಡಿಗಳ ಗಲಾಟೆಯಲ್ಲಿ ಜಗತ್ತು ತಲ್ಲಣಗೊಳ್ಳುತ್ತಿರುವ ಸರಿಹೊತ್ತಿನಲ್ಲಿ ವೈಯಕ್ತಿಕ ನೆಲೆಯಲ್ಲೂ ದೇಶದೇಶಗಳ ನಡುವೆಯೂ ಸ್ನೇಹವೆಂಬುದು ಪರಸ್ಪರ ಚಿಕಿತ್ಸಕವಾಗಿ ಒಲಿಯಬೇಕಿದೆ. ಅದೇ ಆಶಯದಲ್ಲಿ ವಿಶ್ವಸಂಸ್ಥೆಯು ಪ್ರತೀ ವರ್ಷ ಜುಲೈ 30ನ್ನು ‘ವಿಶ್ವ ಗೆಳೆತನ ದಿನ’ವನ್ನಾಗಿ ಆಚರಿಸುತ್ತದೆ. ಜೀವ ಬೆಸೆಯುವ ಗೆಳೆತನದ ಘಮಲು ಸರ್ವರನ್ನೂ ಮುತ್ತಲಿ. ಕಾಲ, ದೇಶ ಮೀರಿ ನಿಲ್ಲುವ ವಿಶ್ವಪ್ರಜ್ಞೆ ಎಲ್ಲರೆದೆಗಳಲ್ಲಿ ಸದಾ ಹಸಿರಾಗಿರಲಿ, ಹಸಿಹಸಿಯಾಗಿಯೇ ಇರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT