ಬುಧವಾರ, ಮಾರ್ಚ್ 29, 2023
30 °C

ಸಂಗತ | ಹುಡುಗರಿಗೂ ಇರಲಿ ಮುಟ್ಟಿನ ಅರಿವು

ಸದಾಶಿವ್ ಸೊರಟೂರು Updated:

ಅಕ್ಷರ ಗಾತ್ರ : | |

ಶಾಲೆ, ಕಾಲೇಜುಗಳಲ್ಲಿ ಓದುವ ಹೆಣ್ಣುಮಕ್ಕಳಿಗೆ ಮುಟ್ಟಿನ ರಜೆಯನ್ನು ಕೊಡಬೇಕು ಎಂಬುದರ ಬಗ್ಗೆ ಇತ್ತೀಚೆಗೆ ಚರ್ಚೆಗಳಾಗುತ್ತಿವೆ. ಮೊನ್ನೆ ಶಾಲೆಯಲ್ಲಿ ನಮ್ಮ ನಡುವೆ ಯಾರೋ ಒಂದು ಪ್ರಶ್ನೆ ಎಸೆದರು. ‘ಅಲ್ಲಾ ಸರ್, ಆ ಹುಡುಗಿ ಮೂರು ದಿನ ಬಂದಿಲ್ಲ ಅಂದ್ರೆ ಅವಳು ಮುಟ್ಟಾಗಿದ್ದಾಳೆ ಅನ್ನೋದು ಇಡೀ ಶಾಲೆಗೆ ತಿಳಿಯಲ್ವ? ಪಾಪ ಅವಳಿಗೆ ಎಂತಹ ಮುಜುಗರ, ಶಾಲೆಯಲ್ಲಿ ಗಂಡುಮಕ್ಕಳು ಇರ್ತಾರೆ’ ಅಂದರು. ಪ್ರಶ್ನೆ ಕೇಳಿದವರ ಮನಃಸ್ಥಿತಿ ಬೆರಗು ಹುಟ್ಟಿಸಿತು. ಮುಟ್ಟು ಗುಟ್ಟಾಗಿರಬೇಕೆ? ಅದರಲ್ಲೂ ಗಂಡುಮಕ್ಕಳನ್ನು ಮುಟ್ಟಿನ ವಿಚಾರದಲ್ಲಿ ದೂರ ಇಟ್ಟೇ ಬೆಳೆಸಲಾಗುತ್ತಿದೆ. ಅದು ಅವರಿಗೆ ಸಂಬಂಧವಿರದ ವಿಷಯ ಎಂಬಂತೆ ಭಾವಿಸಲಾಗುತ್ತದೆ. ಇದು ಸರಿಯಲ್ಲ.

ಖಾಸಗಿ ಅಧ್ಯಯನ ಸಂಸ್ಥೆಯೊಂದು ಐದಾರು ವರ್ಷಗಳ ಹಿಂದೆ ದೇಶದ ಮೂರು ರಾಜ್ಯಗಳಲ್ಲಿ ನೂರಾರು ಗಂಡುಮಕ್ಕಳನ್ನು ಬಳಸಿಕೊಂಡು ಮಾಡಿದ ಅಧ್ಯಯನದಲ್ಲಿ ಕುತೂಹಲಕಾರಿ ಅಂಶಗಳು ಹೊರಬಂದಿವೆ. ಎಷ್ಟೋ ಗಂಡುಮಕ್ಕಳು ‘ಮುಟ್ಟು ಎಂದರೇನು? ಅದು ನಮಗೆ ಗೊತ್ತೇ ಇಲ್ಲ’ ಅಂದಿದ್ದಾರೆ. ಕೆಲವರು ಅದೊಂದು ಕಾಯಿಲೆ ಇರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಆ ಪದ ಕೇಳಿದ್ದೇವೆ, ಆದರೆ ಆ ಬಗ್ಗೆ ಹೆಚ್ಚು ಏನೂ ಗೊತ್ತಿಲ್ಲ ಎಂದಿದ್ದಾರೆ. ಕೆಲವರು ಮುಟ್ಟಿನ ಬಗ್ಗೆ ಅನುಕಂಪವನ್ನು ಮತ್ತೆ ಕೆಲವರು ಕುಹಕವನ್ನು ಹೊರಹಾಕಿದ್ದರು. ಈ ಗಂಡುಮಕ್ಕಳು ಮನೆಯಲ್ಲಿ ಸಹೋದರನ ಪಾತ್ರವನ್ನು, ನಾಳೆ ಗಂಡನ ಪಾತ್ರವನ್ನು ನಂತರ ಅಪ್ಪನ ಪಾತ್ರವನ್ನು ನಿರ್ವಹಿಸುವವರು. ಅವರಿಗೆ ಮುಟ್ಟಿನ ಬಗ್ಗೆ ಸ್ಪಷ್ಟ ತಿಳಿವಳಿಕೆ ನೀಡುವುದರಿಂದ ಅವರು ಅದನ್ನು ಒಂದು ಘನತೆಯಿಂದ ಕಾಣಬಲ್ಲರು ಮತ್ತು ಹೆಣ್ಣನ್ನು ಕಾಳಜಿ ಮಾಡಬಲ್ಲರು ಅಲ್ಲವೇ?

ನಮ್ಮ ಶಾಲೆಯಲ್ಲಿ ಈ ಮೊದಲು ಶುಚಿ ಪ್ಯಾಡ್ ಕೊಡುವಾಗ (ಈಗ ಕೊಡುವುದನ್ನು ನಿಲ್ಲಿಸಲಾಗಿದೆ) ಶಿಕ್ಷಕಿಯರು ಹುಡುಗರ ಗಮನಕ್ಕೆ ಬಾರದಂತೆ ತುಂಬಾ ಕಾಳಜಿ ವಹಿಸುತ್ತಿದ್ದರು. ಹುಡುಗರು ಆಟಕ್ಕೆ ಹೋದಾಗ ಬಾಲಕಿಯರನ್ನು ಕರೆದು ಪ್ಯಾಡ್‌ಗಳನ್ನು ಒಂದು ಹಳೆಯ ಕಾಗದದ ತುಣುಕಿನಲ್ಲಿ ಮುಚ್ಚಿ ಕೊಡುತ್ತಿದ್ದರು. ಪಾಪ, ಹುಡುಗಿಯರಂತೂ ತಾವು ಕಳ್ಳತನ ಮಾಡಿದ್ದೇವೇನೊ ಅನ್ನುವಂತೆ ಓಡಿಹೋಗಿ ಯಾರಿಗೂ ಕಾಣದಂತೆ ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಸಂಕೋಚದ ಮುದ್ದೆಯಾಗುತ್ತಿದ್ದರು. ಇಂತಹ ವಾತಾವರಣ ಸೃಷ್ಟಿಯಾದಾಗ, ಒಬ್ಬ ಹೆಣ್ಣುಮಗಳು ಶಾಲೆಯಲ್ಲಿ ಮುಟ್ಟಾದಾಗ ಅದನ್ನು ಒಂದು ಘನತೆಯಾಗಿ ಹೇಗೆ ತೆಗೆದುಕೊಂಡಾಳು? ತನಗೆ ಇದ್ಯಾವ ಶಾಪ ಎಂದು ಹಳಹಳಿಸಬಹುದು ಅಲ್ಲವೇ?

ನಾವು ಶಾಲಾ ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗೆ ಮುಟ್ಟಿನ ಬಗ್ಗೆ ತಿಳಿವಳಿಕೆ ನೀಡುವಾಗ ಹುಡುಗರಿಗೂ ಪ್ರತ್ಯೇಕವಾಗಿ ಅದರ ಬಗ್ಗೆ ಒಂದಿಷ್ಟಾದರೂ ಜ್ಞಾನ ನೀಡುವುದು ಅವಶ್ಯಕ. ಅವನು ಮುಟ್ಟನ್ನು ಗೌರವಿಸುವ, ಅದನ್ನೊಂದು ಹೆಣ್ಣಿನ ಘನತೆಯನ್ನಾಗಿ ನೋಡುವ ಮತ್ತು ಅವಳನ್ನು ಕಾಳಜಿ ಮಾಡುವ ಮನೋಭಾವ ಬೆಳೆಸಿಕೊಳ್ಳಬಹುದು.

‘ಪಾಪು, ಏಳು ನೀ ಮೊದ್ಲು ಸ್ನಾನ ಮಾಡು’ ಎಂದು ಅಮ್ಮ ಕರೆಯುತ್ತಾಳೆ. ‘ಅಕ್ಕ ಮೊದ್ಲು ರೆಡಿಯಾಗ್ಲಿ’ ಮಗನ ವರಾತ. ‘ಬೇಡ, ಅಕ್ಕ ಈ ದಿನ ಇನ್ನೂ ಸ್ವಲ್ಪ ಹೊತ್ತು ಮಲಗಲಿ’ ಅನ್ನುತ್ತಾಳೆ ಅಮ್ಮ. ‘ಓ... ಗೊತ್ತಾಯ್ತು, ಸರೀಮಾ’ ಎಂದು ಎದ್ದು ತಯಾರಾದ ಆ ಹುಡುಗನಿಗೆ ನಾಳೆ ತನ್ನ ಹೆಂಡತಿ, ಮಗಳ ಮುಟ್ಟಿನ ದಿನಗಳನ್ನು ಗೌರವಿಸುವಂತೆ ಅಮ್ಮ ಸೂಕ್ಷ್ಮ ತರಬೇತಿ ನೀಡಿದರು ಎಂದು ಈ ಪುಟ್ಟ ಕಥೆ ಮುಗಿಯುತ್ತದೆ. ವಸುಂಧರಾ ಕದಲೂರು ಅವರು ಬರೆದ ಈ ಕಥೆ ಗಂಡುಮಕ್ಕಳಿಗೆ ನಾವು ಕಲಿಸಬೇಕಾದ ಪಾಠದಂತಿದೆ.

ಮುಟ್ಟನ್ನು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ ವಿಷಯವಾಗಿ ನೋಡಲಾಗುತ್ತದೆ ಮತ್ತು ಅದು ಖಾಸಗಿಯಾಗಿ ಇರಿಸಬೇಕಾದದ್ದು ಹಾಗೂ ಚರ್ಚಿಸದೇ ಇರಬೇಕಾದದ್ದು ಎಂದು ಅರ್ಥೈಸಲಾಗಿದೆ.‌ ಅಲ್ಲದೆ ನಾವು ಅದನ್ನು ಎಂದಿನಿಂದಲೂ ಹಾಗೆಯೇ ನಡೆಸಿಕೊಂಡು ಬಂದಿದ್ದೇವೆ. ಗಂಡುಮಕ್ಕಳನ್ನು ಅದರ ನೆರಳು ಕೂಡ ತಾಕದಂತೆ ದೂರ ಇಟ್ಟಿದ್ದೇವೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ. ಅದನ್ನೊಂದು ಗೋಪ್ಯ ವಿಚಾರವಾಗಿ ಇಡುವುದರ ಪರಿಣಾಮವಾಗಿ, ಹುಡುಗಿಯರು ಮತ್ತು ಮಹಿಳೆಯರು ತಮ್ಮ ಅಗತ್ಯಗಳನ್ನು ವ್ಯಕ್ತಪಡಿಸಲಾಗುವುದಿಲ್ಲ. ಇದು ಗಂಡು ಮತ್ತು ಹೆಣ್ಣು ಭಾವನಾತ್ಮಕವಾಗಿ ಬೆರೆಯಲು ಅಡ್ಡಿಪಡಿಸುತ್ತದೆ.

ಹುಡುಗರಿಗೆ ಮುಟ್ಟಿನ ಬಗ್ಗೆ ತಿಳಿವಳಿಕೆ ನೀಡುವುದರಿಂದ ಶಾಲೆಯಲ್ಲಾಗಲಿ, ಮನೆಯಲ್ಲಾಗಲಿ ಹೆಣ್ಣುಮಗುವು ಮುಟ್ಟಾದ ದಿನಗಳಂದು ಯಾವುದೇ ಮುಜುಗರ ಇಲ್ಲದೆ ಆರಾಮಾಗಿರಬಹುದು. ಆ ಸಮಯದಲ್ಲಿ ಅವಳಲ್ಲಾಗುವ ಭಾವನೆಗಳ ಏರಿಳಿತ, ಸುಸ್ತು, ಕಿರಿಕಿರಿಯನ್ನು ಹುಡುಗರು ಅರ್ಥ ಮಾಡಿಕೊಂಡು ಅವಳನ್ನು ಗೌರವಿಸಬಹುದು. ಅವಳನ್ನು ಕಾಳಜಿ ಮಾಡಬಹುದು.‌

ಹೆಣ್ಣಿಗೆ ಭಾವನಾತ್ಮಕ ಬೆಂಬಲ ಸಿಕ್ಕಾಗ, ಮುಟ್ಟು ತನಗೊಂದು ಹಿಂಸೆ ಅಂದುಕೊಳ್ಳಲಾರಳು. ಒಂದು ಹುಡುಗಿ ಶಾಲೆಯಲ್ಲಿ ಮುಟ್ಟಾದರೆ ಕದ್ದುಮುಚ್ಚಿ ಶಿಕ್ಷಕಿಯರ ಬಳಿ ಬಂದು ಪಿಸುಮಾತಿನಲ್ಲಿ ಹೇಳದೆ ‘ನಾನು ಮುಟ್ಟಾಗಿದೀನಿ’ ಎಂದು ಘನತೆಯಿಂದ ಹೇಳಿಕೊಳ್ಳುವಂತೆ ಆಗಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು